ಉಪ್ಪಿನಂಗಡಿ: ತಿಂಗಳಾಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಎರಡನೇ ಶಾಖೆ ಉಪ್ಪಿನಂಗಡಿಯ ಕಾಮತ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಜ.16ರಂದು ಶುಭಾರಂಭಗೊಂಡಿತು.
ಕಚೇರಿ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಒಬ್ಬರಿಗೊಬ್ಬರು ಅವಲಂಬಿಸಿ ಆರ್ಥಿಕ ಸಬಲತೆಯೆಡೇ ಸಾಗುವುದೇ ಸಹಕಾರಿ ತತ್ತ್ವದ ಮೂಲ ಉದ್ದೇಶ. ಇದರಿಂದಾಗಿ ಹಲವರು ಇಂದು ತಮ್ಮ ಕಾಲ ಮೇಲೆ ತಾವು ನಿಲ್ಲುವ ಹಾಗೆ ಆಗಿದೆ. ಹಲವು ಸಹಕಾರಿ ಸಂಘ- ಸಂಸ್ಥೆಗಳು ಉಪ್ಪಿನಂಗಡಿಯಲ್ಲಿದ್ದು, ಉಪ್ಪಿನಂಗಡಿ ದಕ್ಷಿಣ ಕಾಶಿ ಹೇಗೆಯೋ ಅದೇ ರೀತಿ ಇಂದು ಸಹಕಾರಿ ಕಾಶಿ ಕೂಡಾ ಆಗಿದೆ. ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘವು ಈ ಊರಿಗೂ ತನ್ನ ಸೇವೆಯನ್ನು ವಿಸ್ತರಿಸಿದ್ದು, ಇಲ್ಲಿನ ಜನರಿಗೂ ಉತ್ತಮ ಸೇವೆಯನ್ನು ನೀಡಲಿ. ಸಂಘದ ಅಭಿವೃದ್ಧಿಯೊಂದಿಗೆ ಊರಿನ ಅಭಿವೃದ್ಧಿಯೂ ಆಗಲಿ ಎಂದು ಶುಭಹಾರೈಸಿದರು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಮುಖ್ಯ ಅರ್ಚಕ ವೇ.ಮೂ. ರಾಮಕೃಷ್ಣ ಅಸ್ರಣ್ಣರು ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ, ಇದರ ಕೀರ್ತಿ ನಾಡಿನಾದ್ಯಂತ ಹಬ್ಬಲಿ ಎಂದು ಶುಭ ಹಾರೈಸಿದರು.
ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಭದ್ರತಾ ಕೋಶ ಉದ್ಘಾಟಿಸಿದರು. ಪುತ್ತೂರು ಶಿವಳ್ಳಿ ಸಂಪದದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕೊಳತ್ತಾಯ ಠೇವಣಿ ಪ್ರಮಾಣ ಪತ್ರ ಬಿಡುಗಡೆಗೊಳಿಸಿದರು. ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ ಆವರ್ತನ ಖಾತೆ ಪುಸ್ತಕ ಬಿಡುಗಡೆಗೊಳಿಸಿದರು. ಕಟ್ಟಡದ ಮಾಲಕ ಸಂದೀಪ್ ಕಾಮತ್ ಪಿಗ್ಮಿ ಮಿಶಿನ್ ಹಸ್ತಾಂತರಿಸಿದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಸಂಘದ ಸಲಹಾ ಸಮಿತಿಯ ಸದಸ್ಯ ವೇ.ಮೂ. ಹರೀಶ ಉಪಾಧ್ಯಾಯ ಗಣಕಯಂತ್ರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆನಂದ ಉಡುಪ, ಉಪಾಧ್ಯಕ್ಷ ಹರೀಶ ಪುತ್ತೂರಾಯ, ನಿರ್ದೇಶಕರಾದ ಜಯರಾಮ ಕೆದಿಲಾಯ, ಡಾ. ಸುರೇಶ ಪುತ್ತೂರಾಯ, ಶ್ರೀಧರ ಬೈಪಡಿತ್ತಾಯ, ಸುರೇಶ ಕಣ್ಣಾರಾಯ, ಬಾಲಕೃಷ್ಣ ಎಡಪಡಿತ್ತಾಯ, ವತ್ಸಲಾ ರಾಜ್ಞಿ, ವಿಷ್ಣುಮೂರ್ತಿ ಎಂ., ರಾಜೇಂದ್ರ ಪ್ರಸಾದ್ ಯು., ಸಲಹಾ ಸಮಿತಿ ಸದಸ್ಯರಾದ ಉಮೇಶ್ ಪಡ್ಡಿಲ್ಲಾಯ, ಗುರುಪ್ರಸಾದ್ ರಾಮಕುಂಜ, ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಷ್ಮಾ ಭಟ್, ಸಿಬ್ಬಂದಿಗಳು, ಹಿತೈಷಿಗಳು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಪ್ರಭಾರ ಅಧ್ಯಕ್ಷ, ಸಲಹಾ ಸಮಿತಿಯ ಅಧ್ಯಕ್ಷ ಹರೀಶ ಪುತ್ತೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಲಹಾ ಸಮಿತಿ ಸದಸ್ಯ ಬಾಲಕೃಷ್ಣ ಖಿಜಾನ ವಂದಿಸಿದರು.