ವಾರೀಸುದಾರರಿಲ್ಲದ ಪುತ್ತೂರು ಪತ್ರಿಕಾ ಭವನದಲ್ಲಿ ಎಲ್ಲ ಪತ್ರಕರ್ತರಿಗೂ ಅವಕಾಶ ಸಿಗಬೇಕು – ಪ್ರೆಸ್‌ಕ್ಲಬ್‌ನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ತಡೆ ಹಾಕಲು ಆಗ್ರಹ 

0

ಈಗ ನಡೆಯುತ್ತಿರುವ ದಂಧೆ ತಡೆಯಲು ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ-ಡಾ.ಯು.ಪಿ.ಶಿವಾನಂದ

ಪುತ್ತೂರು:ಸರಕಾರಿ ಕಟ್ಟಡವಾಗಿರುವ ಪತ್ರಿಕಾ ಭವನ ಯಾರ ಸೊತ್ತೂ ಅಲ್ಲ.ಯಾರೂ ವಾರಸುದಾರರು ಇಲ್ಲದೇ ಇರುವ ಪತ್ರಿಕಾ ಭವನದಲ್ಲಿ ಎಲ್ಲಾ ಪತ್ರಕರ್ತರಿಗೂ ಅವಕಾಶ ದೊರೆಯಬೇಕು. ಪ್ರಸ್ತುತ ಇಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಸಂಬಂಧಿಸಿದವರು ಕೂಡಲೇ ತಡೆಯದೇ ಇದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಹೇಳಿದ್ದಾರೆ.

ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಭವನದ ಮುಂಭಾಗದಲ್ಲಿ ಜ.16ರಂದು ಸುದ್ದಿ ಬಳಗದ ವತಿಯಿಂದ ನಡೆದ ಸಾಂಕೇತಿಕ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಪತ್ರಿಕಾ ಭವನವನ್ನು ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ. ಹಗಲು, ರಾತ್ರಿ ಪತ್ರಿಕಾ ಭವನದಲ್ಲಿ ಅವ್ಯವಹಾರ ನಡೆಯುತ್ತಿದೆ, ಕುಡಿದು ಮಲಗಲು ಉಪಯೋಗಿಸಲಾಗುತ್ತಿದೆ. ಸ್ಯಾಂಟ್ರೋ ರವಿಯಂತಹ ವ್ಯಕ್ತಿಗಳು ದಂಧೆ ನಡೆಸುತ್ತಿದ್ದಾರೆ. ಇದನ್ನು ತಡೆಯಲು ಶಾಸಕರು ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿರುವ ಡಾ.ಯು.ಪಿ.ಶಿವಾನಂದರವರು ಪತ್ರಿಕಾ ಭವನದಲ್ಲಿ ಕುಳಿತು ಮಾಡುತ್ತಿರುವ ಬ್ಲ್ಯಾಕ್ ಮೇಲ್ ದಂಧೆಯನ್ನು ತಡೆಯದೇ ಇದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾ ಭವನ ಸರಕಾರದ ಅಧೀನದಲ್ಲಿದೆ. ಪತ್ರಿಕಾ ಭವನವನ್ನು ನಿರ್ವಹಣೆ ಮಾಡುತ್ತಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘವೇ ಇದೀಗ ಅಸ್ತಿತ್ವದಲ್ಲಿ ಇಲ್ಲ. ಹಾಗಾಗಿ ವಾರೀಸುದಾರರೇ ಇಲ್ಲದ ಕಟ್ಟಡದಲ್ಲಿ ಕೆಲವರಿಂದ ಅವ್ಯವಹಾರ ನಡೆಯುತ್ತಿದೆ. ಸರಕಾರಿ ಕಟ್ಟಡ ಸಂಜೆ ವೇಳೆಗೆ ಬಂದ್ ಆಗಬೇಕಿದ್ದರೂ ರಾತ್ರಿಯೂ ಇಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಇದನ್ನೆಲ್ಲಾ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ, ಈ ಪತ್ರಕರ್ತರು ತನ್ನ ಬಗ್ಗೆ ಏನಾದರೂ ಬರೆಯಬಹುದು ಎಂಬ ಕಾರಣದಿಂದ ಹಿಂಜರಿದಿದ್ದಾರೆ. ಜನತೆಗೂ ಇವರ ಭಯ. ಜನರನ್ನು ಟಾರ್ಗೆಟ್ ಮಾಡುವ ವಸೂಲಾತಿ ದಂಧೆ ನಡೆಸುವ ಕೇಂದ್ರ ಇದಾಗಬಾರದು. ಜನರಲ್ಲಿ ಭೀತಿ ಹುಟ್ಟಿಸುವ ಪತ್ರಕರ್ತರಿಂದ ಜನರಿಗೆ ರಕ್ಷಣೆ ಕೊಡಲು ನಾವು ಬದ್ಧರಾಗಿದ್ದು, ಎಲ್ಲಾ ಪತ್ರಕರ್ತರಿಗೂ ಉತ್ತಮ ಸೇವೆ ನೀಡಲು ಆಶ್ರಯ ಕೊಡುವ ಪತ್ರಿಕಾಭವನ ಇದಾಗಬೇಕು ಎಂಬ ಆಶಯದಿಂದ ಈ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯುವುದಕ್ಕಾಗಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಮುಂದೆಯೂ ಅವ್ಯವಹಾರ, ದಂಧೆ ಮುಂದುವರಿದಲ್ಲಿ ದಂಧೆಯನ್ನು ತಡೆಯಲಿಕ್ಕಾಗಿ ಹಾಗೂ ಪತ್ರಿಕಾ ಭವನದಿಂದ ದಂಧೆಕೋರರನ್ನು ಹೊರಹಾಕಲು ತೀವ್ರ ಹೋರಾಟ ನಡೆಸಲಾಗುವುದು ಎಂದು ಡಾ.ಶಿವಾನಂದ ಅವರು ಹೇಳಿದರು.

ಸರಕಾರದ ಅನುದಾನ ಪಡೆಯುವ ಕಟ್ಟಡದಲ್ಲಿ ಎಲ್ಲಾ ಪತ್ರಕರ್ತರಿಗೂ ಸಮಾನ ಅವಕಾಶ ನೀಡಬೇಕು-ಸಂತೋಷ್:

ಪುತ್ತೂರಿನ ಪತ್ರಿಕಾ ಭವನಕ್ಕೆ ಸರಕಾರದಿಂದ ಅನುದಾನ ದೊರೆತಿದೆ. ಸಂಸದರ, ಶಾಸಕರ ಅನುದಾನ ಪಡೆದುಕೊಳ್ಳಲಾಗಿದೆ. ಇಂತಹ ಸರಕಾರಿ ಕಟ್ಟಡದಲ್ಲಿ ಎಲ್ಲಾ ಪತ್ರಕರ್ತರಿಗೆ, ಎಲ್ಲಾ ಪತ್ರಕರ್ತರ ಸಂಘದವರಿಗೆ ಸಮಾನ ಅವಕಾಶ ನೀಡಬೇಕು ಎಂದು ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಸ್ವಾಗತಿಸಿ, ಮಾತನಾಡಿದ ಸಂತೋಷ್ ಅವರು ಪತ್ರಿಕಾ ಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜನಜಾಗೃತಿ ರೂಪಿಸಿ ಹೋರಾಟ ರೂಪಿಸಲಾಗುವುದು ಎಂದರು. ಸುದ್ದಿ ಬಿಡುಗಡೆಯ ಸಿಇಓ ಸೃಜನ್ ಊರುಬೈಲು ಮತ್ತು ಪುತ್ತೂರು ಹಾಗೂ ಸುಳ್ಯ ಸುದ್ದಿ ಬಿಡುಗಡೆಯ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here