ಉಪ್ಪಿನಂಗಡಿ: ಪುರುಷರ ಅಖಿಲ ಭಾರತ ಅಂತರ್ ವಿವಿ ಬಾಲ್‌ಬ್ಯಾಡ್ಮಿಂಟನ್ ; ತಮಿಳುನಾಡು ಎಸ್‌ಆರ್‌ಎಂ ಚಾಂಪಿಯನ್, ಮಂಗಳೂರು ವಿವಿ ರನ್ನರ್ ಅಪ್

0

ಉಪ್ಪಿನಂಗಡಿ:ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐದು ದಿನಗಳ ಕಾಲ ನಡೆದ ಪುರುಷರ ಅಖಿಲ ಭಾರತ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ತಮಿಳುನಾಡಿನ ಎಸ್‌ಆರ್‌ಎಂ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ತಂಡ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದು ಮಂಗಳೂರು ವಿವಿ ತಂಡವು ರನ್ನರ‍್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.


ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ರೋಚಕ ಕಾದಾಟದಲ್ಲಿ ಅತಿಥೇಯ ಮಂಗಳೂರು ವಿವಿ ತಂಡವನ್ನು ಮಣಿಸಿದ ಹಾಲಿ ಚಾಂಪಿಯನ್ ತಮಿಳುನಾಡಿನ ಎಸ್‌ಆರ್‌ಎಂ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ತಂಡವು ಚಾಂಪಿಯನ್‌ಶಿಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಮಂಗಳೂರು ವಿವಿ ತಂಡವು ರನ್ನರ‍್ಸ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯಾಟದಲ್ಲಿ ಆಂಧ್ರ ವಿವಿ ತೃತೀಯ ಸ್ಥಾನ ಹಾಗೂ ಅಣ್ಣಾ ವಿವಿಯು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ಎಸ್‌ಆರ್‌ಎಂ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ತಂಡ ಹಾಗೂ ಮಂಗಳೂರು ವಿವಿ ತಂಡದ ನಡುವೆ ನಡೆದ ಫೈನಲ್ ಪಂದ್ಯಾಟದಲ್ಲಿ 22-35, 35-33, 35-28 ಅಂಕಗಳನ್ನು ಗಳಿಸಿ ಈ ಬಾರಿಯ ಚಾಂಪಿಯನ್‌ಶಿಪ್ ಅನ್ನು ತನ್ನದಾಗಿಸಿಕೊಂಡಿದೆ. ಎಸ್‌ಆರ್‌ಎಂ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ತಂಡವು ಕಳೆದ ಬಾರಿ ಕೂಡಾ ಚಾಂಪಿಯನ್ ಆಗಿತ್ತು. ಈ ಬಾರಿ ರನ್ನರ‍್ಸ್ ಅಪ್ ಪ್ರಶಸ್ತಿಯನ್ನು ಪಡೆದ ಮಂಗಳೂರು ವಿವಿ ತಂಡವು ಕಳೆದ ಬಾರಿ ತೃತೀಯ ಸ್ಥಾನ ಪಡೆದಿತ್ತು. ಆಂಧ್ರ ಪ್ರದೇಶ ವಿವಿ ಹಾಗೂ ಅಣ್ಣಾ ವಿವಿ ನಡುವೆ ನಡೆದ ಪಂದ್ಯಾಟದಲ್ಲಿ 22-35, 35-33, 35-23 ಅಂಕಗಳನ್ನು ಗಳಿಸಿ ಆಂಧ್ರ ವಿವಿಯು ತೃತೀಯ ಸ್ಥಾನ ಪಡೆದುಕೊಂಡಿತು. ಅಣ್ಣಾ ವಿವಿಯು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಉತ್ತಮ ದಾಳಿಗಾರನಾಗಿ ಆಂಧ್ರ ವಿವಿಯ ಸಾಂಬಶಿವ, ಉತ್ತಮ ರಕ್ಷಣಾಕಾರನಾಗಿ ಮಂಗಳೂರು ವಿವಿಯ ಚೇತನ್, ಆಲ್‌ರೌಂಡರ್ ಪ್ರಶಸ್ತಿಯನ್ನು ಎಸ್‌ಆರ್‌ಎಂ ವಿವಿಯ ರಂಜಿತ್ ಕುಮಾರ್ ಪಡೆದುಕೊಂಡರು.

ಸಮಾರೋಪ ಸಮಾರಂಭ: ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಅಂತರ್ರಾಷ್ಟ್ರೀಯ ಮಾನ್ಯತೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಿವಿಗಳು ಒಂದಾಗಿ ಈ ಕ್ರೀಡೆಯನ್ನು ಬೆಳೆಸಲು ಮುಂದಾಗಬೇಕು.ಆಗ ಮಾತ್ರ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಉತ್ತಮ ಭವಿಷ್ಯ ಸಿಗಲು ಸಾಧ್ಯ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಶನ್‌ನ ಆಡಳಿತ ನಿರ್ದೇಶಕ ವಿವೇಕ್ ಆಳ್ವ ತಿಳಿಸಿದರು. ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕ್ರೀಡೆಯಿಂದ ಒಗ್ಗಟ್ಟು ಸಾಧ್ಯವಿದ್ದು, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಒಗ್ಗಟ್ಟು ಬೇಕಾಗಿದೆ ಎಂದ ಅವರು, ಮನಸ್ಸು ಮಾಡಿದರೆ ಸರಕಾರಿ ಶಾಲೆಗಳು ಕೂಡಾ ಅಚ್ಚುಕಟ್ಟಾಗಿ, ಸುಂದರವಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಆಯೋಜಿಸಬಹುದು ಎಂಬುದಕ್ಕೆ ಇಲ್ಲಿ ನಡೆದ ಕ್ರೀಡಾ ಕೂಟವೇ ಸಾಕ್ಷಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ, ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಹಳ್ಳಿಯ ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಬಹುದು ಎಂಬುದಕ್ಕೆ ಈ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟವೇ ಉತ್ತಮ ಉದಾಹರಣೆ. ಗ್ರಾಮೀಣ ಭಾಗದ, ಮಣ್ಣಿನ ಮಕ್ಕಳ ಕ್ರೀಡಾಕೂಟಕ್ಕೆ ಹಿಂದಿನಿಂದಲೂ ಈ ಕಾಲೇಜು ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಈ ಬಾರಿ ಕೂಡಾ ಯಶಸ್ವಿಯಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ನಡೆಸಿದ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ.ಈ ಯಶಸ್ಸಿನ ಹಿಂದೆ ಹತ್ತಾರು ಕೈಗಳು ಒಂದುಗೂಡಿ ಮಾಡಿದ ಶ್ರಮ ಇದೆ ಎಂದರು.

ಮಂಗಳೂರು ವಿವಿಯ ರಿಜಿಸ್ಟ್ರಾರ್ ಡಾ|ಕಿಶೋರ್ ಕುಮಾರ್ ಸಿ.ಕೆ., ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಜಿ.ಬಿ.ನಾಗರಾಜ್ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭ ಈ ಭಾಗದ ಕ್ರೀಡಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ|ಜೆರಾಲ್ಡ್ ಎಸ್.ಡಿಸೋಜ ಸ್ವಾಗತಿಸಿದರು.ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ|ಸುಬ್ಬಪ್ಪ ಕೈಕಂಬ ವಂದಿಸಿದರು.ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮುತ್ತು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here