ರಾಜ್ಯ ಅತ್ಯುತ್ತಮ ಸಂಘ ಪ್ರಶಸ್ತಿಗೆ ನರಿಮೊಗರಿನ ಪ್ರಖ್ಯಾತಿ ಯುವತಿ ಮಂಡಲ ಆಯ್ಕೆ

0

ನರಿಮೊಗರು : ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ ರಾಜ್ಯ ಅತ್ಯುತ್ತಮ ಸಂಘ ಪ್ರಶಸ್ತಿಗೆ ನರಿಮೊಗರಿನ ಪ್ರಖ್ಯಾತಿ ಯುವತಿ ಮಂಡಲ ಆಯ್ಕೆಯಾಗಿದ್ದು, ಜ.18ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ.ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ವತಿಯಿಂದ ವ್ಯವಸ್ಥಾಪನಾ ಸಮಿತಿ ,ಕುಕ್ಕೇ ಶ್ರೀಸುಬ್ರಹ್ಮಣ್ಯ ದೇವಸ್ಥಾನ ಇದರ ಸಹಕಾರದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ.ನಾಗೇಶ್,ಅಂಗಾರ,ಸುನೀಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

14 ವರ್ಷಗಳ ಹಿಂದೆ ಪ್ರಾರಂಭಗೊಂಡ ಪ್ರಖ್ಯಾತಿ ಯುವತಿ ಮಂಡಲ ಪುರುಷರಕಟ್ಟೆ ನರಿಮೊಗರು- ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. 10 ರಿಂದ 12 ಸಮಾನಮನಸ್ಕ ಯುವತಿಯರ ಜೊತೆಗೂಡಿ- ಯುವಕ ಮಂಡಲ ನರಿಮೊಗರು(ರಿ), ಇವರ ಸಹಕಾರದೊಂದಿಗೆ ಈ ಯುವತಿ ಮಂಡಲದ ಸ್ಥಾಪನೆಯನ್ನು ಗುರುಪ್ರಿಯ ನಾಯಕ್ ಇವರು 2008 -09ರಲ್ಲಿ ಮಾಡಿದರು.

ಕರ್ನಾಟಕ ಸರಕಾರ, ಯುವ ಸಬಲೀಕರಣ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುವ ಯುವಜನಮೇಳ, ಯುವಜನೋತ್ಸವಗಳಂತಹ ಸ್ಪರ್ದೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಬಹುಮಾನವನ್ನು ಪಡೆದಿದ್ದಾರೆ.

ಕೂಡಿಗೆ, ಮಂಡ್ಯ, ಮೈಸೂರು, ಕೀಲಾರ, ಚಿಕ್ಕಮಗಳೂರು, ಮೂಡಬಿದ್ರೆ ಚಾಮರಾಜನಗರ ಮುಂತಾದೆಡೆ ನಡೆದ ಮೈಸೂರು ವಿಭಾಗ ಮಟ್ಟದ ಯುವಜನಮೇಳ ಮತ್ತು ಗದಗ, ಗಜೇಂದ್ರಗಡ, ಮಡಿಕೇರಿ, ರಾಮನಗರ, ವಿಟ್ಲ, ಮಂಗಳೂರು, ಪುತ್ತೂರು ಸುದಾನದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ದೆಗಳಲ್ಲಿಯೂ ವೈಯಕ್ತಿಕ ಮತ್ತು ಗುಂಪು ಸ್ಪರ್ದೆಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ಬಹುಮಾನ ಪಡೆದು ಸಮಗ್ರ ಬಹುಮಾನ ಪಡೆಯುವಲ್ಲಿ ಕಾರಣಕರ್ತರಾಗಿದ್ದಾರೆ.

ಗುಂಪು ಸ್ಪರ್ದೆಗಳಾದ ಜನಪದಗೀತೆ, ಗೀಗೀಪದ, ರಾಗಿಬೀಸುವ ಪದ, ಶೋಭಾನೆ, ಜನಪದನೃತ್ಯ, ಕೋಲಾಟ ಗಳಲ್ಲಿ ಬಹುಮಾನ ಪಡೆದಿದ್ದು, ತಂಡದ ಅಧ್ಯಕ್ಷೆ ಗುರುಪ್ರಿಯ ನಾಯಕ್ ಭಾವಗೀತೆ, ಲಾವಣಿ, ಏಕಪಾತ್ರಾಭಿನಯ, ರಂಗಗೀತೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸತತವಾಗಿ ಬಹುಮಾನ ಪಡೆದುಕೊಂಡಿರುತ್ತಾರೆ. ಹಾಗೆಯೇ ತಂಡದ ಸದಸ್ಯರಾದ ಅಕ್ಷಿತಾ ಮತ್ತು ಸಮೃದ್ದಿ ಶೆಣೈ ಏಕಪಾತ್ರಾಭಿನಯಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ.

ಸ್ಪರ್ದೆಗಳಲ್ಲಿ ಭಾಗವಹಿಸುವುದರ ಜೊತೆಜೊತೆಗೆ ಪ್ರಖ್ಯಾತಿ ತಂಡವು ಶಾಲೆಗಳಲ್ಲಿ- ಅದರಲ್ಲೂ ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ಜಾನಪದ ಸಂಸ್ಕ್ರತಿಯ ಉಳಿವಿಗಾಗಿ ಹಾಗೆಯೇ ತಿಳುವಳಿಕೆ ಈಗಿನ ಮಕ್ಕಳಿಗೆ ನೀಡುವ ಉದ್ದೇಶದಿಂದ ತರಬೇತಿಯನ್ನೂ ನೀಡುತ್ತಾ ಬಂದಿದ್ದಾರೆ. ಹಲವಾರು ಜನಪದ ಶೈಲಿಯ ಗೀತೆ ನೃತ್ಯಗಳ ತರಬೇತಿ ಶಿಬಿರ, ಬೇಸಿಗೆ ಶಿಬಿರಗಳು ನಡೆಸಿಕೊಂಡು ಬಂದಿರುತ್ತಾರೆ.

ಸ್ವಚ್ಛ ಭಾರತ ಆಂದೋಲನದ ಸಂದರ್ಭ ಗ್ರಾಮದಾದ್ಯಂತ ವಿನೂತನ ಕಾರ್ಯಕ್ರಮಗಳ ಆಯೋಜನೆ ಮಾಡುವುದರ ಮೂಲಕ ನರಿಮೊಗರು ಗ್ರಾಮದಾದ್ಯಂತ ಉತ್ತಮ ಪ್ರಶಂಸೆಯನ್ನ ಜನರಿಂದ ಪಡೆದುಕೊಂಡಿರುತ್ತಾರೆ. ಮಡಿಕೇರಿಯಲ್ಲಿ ಪ್ರವಾಹದ ಸಂದರ್ಭ ಮನೆ ಕಳೆದುಕೊಂಡಿರುವ ಎರಡು ಕುಟುಂಬಗಳಿಗೆ ಯುವತಿಯರೇ ಮನೆಮನೆಗೆ ತೆರಳಿ ಸಂಗ್ರಹಿಸಿದ ಹಣವನ್ನು ನೀಡಿ ಸಹಕರಿಸಲಾಗಿತ್ತು.

ರಾಷ್ಟ್ರೀಯ ಹಬ್ಬಗಳ ಆಚರಣೆ, ಕೌಶಲ್ಯ ತರಬೇತಿ , ಆರೋಗ್ಯ ಶಿಬಿರಗಳ ಆಯೋಜನೆ, ಸ್ವಚ್ಛ ಭಾರತ ಶ್ರಮದಾನ, ಮನೆಮನೆಗೆ ತೆರಳಿ ಆರೋಗ್ಯ, ಸ್ವಚ್ಚತೆಯ ಕರಪತ್ರಗಳ ಹಂಚಿಕೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತಾರೆ.

ತಂಡದ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಕರ್ನಾಟಕ ಸರಕಾರ ಯುವ ಸಬಲೀಕರಣ – ಕ್ರೀಡಾ ಇಲಾಖೆ ಜಿಲ್ಲಾ ಸಾಂಕ ಪ್ರಶಸ್ತಿ-2018 ಮತ್ತು ಭಾರತ ಸರಕಾರದ ನೆಹರು ಯುವಕೇಂದ್ರ ಮಂಗಳೂರು ಇವರಿಂದ ಜಿಲ್ಲಾ ಸಾಂಕ ಪ್ರಶಸ್ತಿ-2019 ನೀಡಿ ಗುರುತಿಸಿ ಗೌರವಿಸಿದೆ.

ಈ ತಂಡದ ಅಧ್ಯಕ್ಷೆ ಗುರುಪ್ರಿಯ ನಾಯಕ್ ಇವರಿಗೆ ದ.ಕ ಜಿಲ್ಲಾಡಳಿತ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2022-23 ವನ್ನು ಸಂಗೀತ ಕ್ಷೇತ್ರದ ಸಾಧನೆಗೆ ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here