ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟ : ಆಲಂಕಾರು ನಿವಾಸಿ ರಾಜೇಶ್ ಪೂಜಾರಿ ಮೃತ್ಯು

0

ಉಪ್ಪಿನಂಗಡಿ: ವಾಹನಗಳ ಚಕ್ರಗಳನ್ನು ರಿಸೋಲ್ ಮಾಡುವ ಅಂಗಡಿಯೊಂದರಲ್ಲಿ ರಿಸೋಲ್‌ನ ಚೇಂಬರ್ ಸಿಡಿದು ಅದರ ಮುಚ್ಚಳಗಳು ಹೊರಗೆ ಎಸೆಯಲ್ಪಟ್ಟಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟು, ಅಂಗಡಿಗೆ ಹಾನಿಯಾದ ಘಟನೆ ಉಪ್ಪಿನಂಗಡಿ ಬಳಿಯ ಗಾಂಧಿಪಾರ್ಕ್‌ನ ಇಂಡಿಯನ್ ಟಯರ್ ಅಂಗಡಿಯಲ್ಲಿ ಜ.18 ರಂದು ಮಧ್ಯಾಹ್ನ ನಡೆದಿದೆ.

ರಾಜೇಶ್‌ ಪೂಜಾರಿ

ಅಂಗಡಿಯ ಪಾಲುದಾರ ಆಲಂಕಾರು ಕೊಂಡಾಡಿಯ ರಾಜೇಶ್ ಪೂಜಾರಿ (43 ವ.) ಮೃತಪಟ್ಟವರು. ಇವರು ಹಳೆಯ ಟಯರೊಂದನ್ನು ರಿಸೋಲ್ ಮಾಡುವ ಕೆಲಸದಲ್ಲಿದ್ದಾಗ ಈ ದುರ್ಘಟನೆ ನಡೆದಿದೆ. ಟಯರ್‌ಗಳನ್ನು ರಿಸೋಲ್ ಮಾಡುವಾಗ ರಿಸೋಲ್ ಮೆಷಿನ್‌ನ ಚೇಂಬರ್‌ನೊಳಗೆ ಟಯರನ್ನಿಟ್ಟು ಅದರೊಳಗೆ ಗಾಳಿ ಹಾಗೂ ಬಿಸಿ ಸ್ಟೀಮ್ (ಆವಿ)ಅನ್ನು ತುಂಬಿಸಲಾಗುತ್ತದೆ. ಈ ರೀತಿ ಮಾಡಿದಾಗ ಒತ್ತಡ ಹೆಚ್ಚಾಗಿ ಚೇಂಬರ್ ಸಿಡಿದಿದ್ದು, ಆಗ ತಲಾ ಸುಮಾರು 30 ಕೆ.ಜಿ.ಯಷ್ಟು ತೂಕವಿರುವ ಅದರ ಎರಡೂ ಮುಚ್ಚಳಗಳು ರಭಸದಿಂದ ಹೊರದಬ್ಬಲ್ಪಟ್ಟಿವೆ. ಒಂದು ಮುಚ್ಚಳ ಅಂಗಡಿಯ ಎದುರು ಭಾಗದ ಗೋಡೆಗೆ ಬಡಿದರೆ, ಇನ್ನೊಂದು ಮುಚ್ಚಳ ಕೆಲಸದಲ್ಲಿ ನಿರತರಾಗಿದ್ದ ರಾಜೇಶ್ ಅವರ ಮೇಲೆ ಬಡಿದಿದೆ. ಇದರಿಂದ ತಲೆಗೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅಲ್ಲಿಗೆ ತಲುಪುತ್ತಿದ್ದಂತೆ ಅವರು ಮೃತಪಟ್ಟಿದ್ದಾರೆ. ಘಟನೆಯಿಂದ, ಇಂಟರ್‌ಲಾಕ್‌ಗಳಿಂದ ಮಾಡಿದ ಅಂಗಡಿಯ ಎದುರು ಭಾಗದ ಗೋಡೆ ಮಗುಚಿ ಬಿದ್ದಿದೆ.

ಮಂಗಳೂರು ಮೂಲದ ಹುಸೈನ್ ಹಾಗೂ ರಾಜೇಶ್‌ರವರು ಈ ಅಂಗಡಿಯನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದು, ಇವರಿಬ್ಬರೇ ಇಲ್ಲಿ ದುಡಿಯುತ್ತಿದ್ದರು. ಘಟನೆಯ ಸಂದರ್ಭ ಹುಸೈನ್ ಅವರು ಅಲ್ಲಿಯೇ ಒಳ ಕೋಣೆ ಟಯರ್ ಬಫಿಂಗ್ ಕೆಲಸ ಮಾಡುತ್ತಿದ್ದರು. ರಾಜೇಶ್‌ರವರು ಹೊರಗಡೆ ಟಯರ್ ಮೌಲ್ ಡಿಸ್ಕ್ ಬಳಿ ಕೆಲಸ ಮಾಡಿಕೊಂಡಿದ್ದ ವೇಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹುಸೇನ್‌ರವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ತಾಗಿಕೊಂಡೇ ಟಯರ್ ಪಂಕ್ಚರ್ ಅಂಗಡಿಯಿದ್ದು, ಅಲ್ಲಿದ್ದ ದಿನೇಶ್ ಅವರು ಕೂಡಾ ಅಪಾಯದಿಂದ ಪಾರಾಗಿದ್ದಾರೆ. ಮೃತ ರಾಜೇಶ್ ಅವರು ಪತ್ನಿ ಸವಿತಾ ಹಾಗೂ ಪುತ್ರರಾದ ಆರು ವರ್ಷದ ಗೌರವ್ ಹಾಗೂ ನಾಲ್ಕು ವರ್ಷದ ಗೌಮಿತ್‌ನನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿಪೊಲೀಸರು ಆಗಮಿಸಿದ್ದು, ವಳಾಲು ಅರ್ಬಿ ನಿವಾಸಿ ಜಯಂತ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಯ ಆಧಾರ ಸ್ತಂಭ:
ರಾಜೇಶ್ ಅವರ ಕುಟುಂಬಕ್ಕೆ ಅವರ ದುಡಿಮೆಯೇ ಆಧಾರ ಸ್ತಂಭವಾಗಿತ್ತು. ಮನೆಯಲ್ಲಿ ಸ್ವಲ್ಪ ಮಟ್ಟಿನ ಕೃಷಿ ಬಿಟ್ಟರೆ ಕುಟುಂಬದ ಎಲ್ಲಾ ಖರ್ಚು-ವೆಚ್ಚಗಳು ಇವರ ದುಡಿಮೆಯಿಂದಲೇ ಸಾಗಬೇಕಿತ್ತು. ಆದರೆ ಅವರ ಈ ಅಕಾಲಿಕ ಮರಣದಿಂದಾಗಿ ಇಬ್ಬರು ಸಣ್ಣ ಮಕ್ಕಳನ್ನು ಹೊಂದಿರುವ ಇವರ ಕುಟುಂಬದ ಆಧಾರ ಸ್ತಂಭವೇ ಕಳಚಿ ಬಿದ್ದಂತಾಗಿದೆ.

LEAVE A REPLY

Please enter your comment!
Please enter your name here