ಪುತ್ತೂರು: ಮುಂಡೂರು ಗ್ರಾಮದ ಕಂಪ ಬದಿಯಡ್ಕ ಎಂಬಲ್ಲಿನ ದಿ.ಗುರುವ ಎಂಬವರ ಪುತ್ರಿ ಜಯಶ್ರೀ (23ವ) ಅವರನ್ನು ಜ.17ರಂದು ಬೆಳಿಗ್ಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿ ಸುಳ್ಯ ತಾಲೂಕಿನ ಕನಕಮಜಲಿನ ಉಮೇಶ್ ಎಂಬಾತನನ್ನು ಜ.18ರಂದು ಬಂಧಿಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆತ ಕೊಲೆ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಸ್ಕೂಟರ್ ವಶಕ್ಕೆ ಪಡೆದು ಕೊಂಡಿದ್ದಾರೆ.
ಕನಕಮಜಲು ಗ್ರಾಮದ ಅಂಗಾರ ಎಂಬವರ ಪುತ್ರ ಉಮೇಶ್ (24ವ) ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಕೊಲೆ ಮಾಡಿದ ಸ್ಥಳಕ್ಕೆ ಬರಲು ಬಳಸಿದ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ:
ಜಯಶ್ರೀ(23 ವರ್ಷ) ಎಂಬವರು ಜ.17ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ಕಂಪದಲ್ಲಿರುವ ತನ್ನ ಮನೆಯಲ್ಲಿದ್ದಾಗ ಯಾರೋ ಅಪರಿಚಿತರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗಿದ್ದ ಜಯಶ್ರೀಯನ್ನು ಯಾವುದೋ ಆಯುಧದಿಂದ ತಿವಿದು ಕೊಲೆ ಮಾಡಿದ್ದರು. ಜಯಶ್ರೀಯನ್ನು ಕನಕಮಜಲಿನ ಉಮೇಶ ಎಂಬವನು ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತನು ಆಗಾಗ್ಗೆ ಜಯಶ್ರೀಯ ಮನೆಗೂ ಬರುತ್ತಿದ್ದನು. ಆದರೆ ಇತ್ತೀಚೆಗೆ ಅವನ ಗುಣ ನಡತೆ ಜಯಶ್ರೀಗೆ ಇಷ್ಟವಾಗದ ಕಾರಣ 2022ನೇ ನವೆಂಬರ್ ವೇಳೆಗೆ ಜಯಶ್ರೀಯು ಉಮೇಶನನ್ನು ದೂರ ಮಾಡಿದ್ದ ವಿಷಯದಲ್ಲಿ ಉಮೇಶನು ಅಸಮಾಧಾನದಿಂದ ಇದ್ದು ಈ ಕೃತ್ಯವನ್ನು ಮಾಡಿರುವ ಸಾಧ್ಯತೆ ಇದೆ ಎಂಬುದಾಗಿ ಜಯಶ್ರೀಯವರ ತಾಯಿ ಗಿರಿಜಾ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎನ್.ಎಮ್, ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ.ವೀರಯ್ಯ ಹಿರೇಮಠ್ ರವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್ ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕ ಉದಯರವಿ ಎಮ್. ವೈ., ಎ.ಎಸ್.ಐ ಮುರುಗೇಶ್, ಪೊಲೀಸ್ ಸಿಬ್ಬಂದಿಯವರಾದ, ಪ್ರವೀಣ ರೈ, ಹರೀಶ್ ಜಿ.ಎನ್., ಅದ್ರಾಮ, ಧರ್ಣಪ್ಪ, ಸಲೀಂ, ಶಿವಾನಂದ, ದೇವರಾಜ್, ಸತೀಶ್, ವರ್ಗೀಸ್, ಹರ್ಷಿತ್, ಗಿರೀಶ್ ರೈ, ಸದ್ದಾಂ, ಹರೀಶ್ ನಾಯ್ಕ್, ಬಿ., ನಿತಿನ್‍ಕುಮಾರ್, ಅಡಿವೆಪ್ಪ ಸಂಗೊಳ್ಳಿ, ಲೋಕೇಶ್, ಗಾಯತ್ರಿ ಇವರನ್ನೊಳಗೊಂಡ ತಂಡ ಆರೋಪಿ ಉಮೇಶ್ ನನ್ನು ಬಂಧಿಸಿದ್ದರು.