Saturday, February 4, 2023
Homeಚಿತ್ರ ವರದಿಕುಂಬ್ರ ಮೆಸ್ಕಾಂ ಜನ ಸಂಪರ್ಕ ಸಭೆ, ಗ್ರಾಹಕರಿಂದ ಅರ್ಜಿ ಸ್ವೀಕಾರ

ಕುಂಬ್ರ ಮೆಸ್ಕಾಂ ಜನ ಸಂಪರ್ಕ ಸಭೆ, ಗ್ರಾಹಕರಿಂದ ಅರ್ಜಿ ಸ್ವೀಕಾರ

ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು: ಕಿಶೋರ್ ಬೊಟ್ಯಾಡಿ

ಪುತ್ತೂರು: ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ವಿದ್ಯುತ್ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮೆಸ್ಕಾಂ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ವಿದ್ಯುತ್ ಬಳಕೆದಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜನ ಸಂಪರ್ಕ ಸಭೆಗಳನ್ನು ಮಾಡಲಾಗುವುದು. ಆ ಮೂಲಕ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡಲಾಗುವುದು. ಇದಲ್ಲದೆ ವಿದ್ಯುತ್ ಬಳಕೆಯ ಬಗ್ಗೆ ಗ್ರಾಹಕರು ಕೂಡ ಜಾಗೃತರಾಗಬೇಕು ಎಂದು ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿಯವರು ಹೇಳಿದರು.

ಅವರು ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಗ್ರಾಮೀಣ ಉಪ ವಿಭಾಗ ಕುಂಬ್ರ ಇದರ ವತಿಯಿಂದ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಮೆಸ್ಕಾಂಗೆ ಸಂಬಂಧಿಸಿದ ದೂರುಗಳು, ಸಮಸ್ಯೆಗಳ ಪರಿಹರಿಸಲು ಕುಂಬ್ರ ರೈತ ಸಭಾ ಭವನದಲ್ಲಿ ಜ.19 ರಂದು ನಡೆದ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರಿಗೆ ಸರಕಾರ ಉಚಿತ ವಿದ್ಯುತ್ ನೀಡುತ್ತಿದೆ ಹಾಗಂತ ಬೇಕಾಬಿಟ್ಟಿಯಾಗಿ ವಿದ್ಯುತ್ ಉಪಯೋಗಿಸುವುದು ಸರಿಯಲ್ಲ ಎಂದ ಅವರು ನಾವುಗಳು ಸಮಸ್ಯೆಗಳನ್ನು ಹುಟ್ಟಿಸುವವರು ಆಗದೆ ಸಮಸ್ಯೆಗಳ ನಿವಾರಣೆಗೆ ಪರಿಹಾರ ಕಂಡುಹುಡುಕುವವರು ಆಗಬೇಕು ಎಂದರು. ಜನ ಸಂಪರ್ಕ ಸಭೆಯಲ್ಲಿ ಬಹಳಷ್ಟು ಅರ್ಜಿಗಳು ಬಂದಿದ್ದು ಇವುಗಳನ್ನು ಪರಿಶೀಲನೆ ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ವಿದ್ಯುತ್ ಬಗ್ಗೆ ಸಾರ್ವಜನಿಕರಿಗೆ ಇರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಇಂತಹ ಜನ ಸಂಪರ್ಕ ಸಭೆಗಳು ಆಗಾಗ ನಡೆಯುತ್ತಿದ್ದರೆ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರರವರು, ಮೆಸ್ಕಾಂ ಬಗ್ಗೆ ಮಾಹಿತಿ ನೀಡಿದರು. ಗ್ರಾಹಕರು ವಿದ್ಯುತ್ ಬಳಕೆಯ ವೇಳೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಹಾಗೂ ಇಲಾಖೆಯ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಸಾರ್ವಜನಿಕರಿಂದ ಬಂದ ಅರ್ಜಿಗಳ ಬಗ್ಗೆ ಸ್ಥಳದಲ್ಲೇ ಪರಿಶೀಲನೆ ಮಾಡಿ ಅರ್ಜಿದಾರರಿಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಕುಂಬ್ರ ಜೆಇ ರವೀಂದ್ರ, ಬೆಟ್ಟಂಪಾಡಿ ಜೆಇ ಪುತ್ತು, ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಸಂತ ಕುಮಾರ್ ಉಪಸ್ಥಿತರಿದ್ದರು. ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಅಶ್ರಫ್ ಉಜಿರೋಡಿ, ಪ್ರದೀಪ್, ಚಿತ್ರಾ, ಶಾರದಾ, ನಳಿನಾಕ್ಷಿ, ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ ಹಾಗೂ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾಪಂ ಸಿಬ್ಬಂದಿಗಳು ಸಹಕರಿಸಿದ್ದರು.

ಕುಡಿಯುವ ನೀರಿಗೆ ಉಚಿತ ವಿದ್ಯುತ್ ಕೊಡಿ-ಆಗ್ರಹ

ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಮಾತನಾಡಿ, ಸರಕಾರ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿದೆ ಅದೇ ರೀತಿ ಕುಡಿಯುವ ನೀರಿಗೆ ಉಚಿತ ವಿದ್ಯುತ್ ಯಾಕೆ ಕೊಡಬಾರದು? ಎಂದು ಪ್ರಶ್ನಿಸಿದರು. ಕುಡಿಯುವ ನೀರು ಅತೀ ಮುಖ್ಯ ಆದ್ದರಿಂದ ಪಂಚಾಯತ್‌ಗೆ ಕುಡಿಯುವ ನೀರಿಗೆ ಉಚಿತ ವಿದ್ಯುತ್ ಕೊಡಬೇಕು. ಇಂದು ಕುಡಿಯುವ ನೀರು ಸರಬರಾಜಿಗೆ ಪಂಚಾಯತ್ ಮೆಸ್ಕಾಂಗೆ ಬಹಳಷ್ಟು ಹಣ ಕಟ್ಟುತ್ತಿದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆ ಆದ್ದರಿಂದ ಕುಡಿಯವ ನೀರು ಸರಬರಾಜಿಗೆ ಸರಕಾರ ಉಚಿತ ವಿದ್ಯುತ್ ನೀಡಬೇಕು. ಈ ಸರಕಾರಕ್ಕೆ ಬರೆಯಬೇಕು ಎಂದು ರಾಜೇಶ್ ರೈ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಪಂ ಸದಸ್ಯ ಮಹೇಶ್ ರೈ ಕೇರಿಯವರು, ಕೃಷಿಕರಿಗೆ ಉಚಿತ ವಿದ್ಯುತ್ ನೀಡಿ ಕೆಲವು ಮಂದಿ ಬೇಕಾಬಿಟ್ಟಿಯಾಗಿ ವಿದ್ಯುತ್ ಉಪಯೋಗಿಸುತ್ತಿದ್ದಾರೆ. ಅದರ ಬದಲು ಕೃಷಿಕರಿಗೆ 400 ಅಥವಾ 500 ಯುನಿಟ್ ವಿದ್ಯುತ್ ಉಚಿತ ಎಂದು ಮಾಡಬೇಕು ಹಾಗೂ ಪ್ರತಿ ಬಿಪಿಎಲ್ ಕಾರ್ಡ್‌ದಾರ ಕುಟುಂಬದಕ್ಕೆ 50 ಯುನಿಟ್ ಉಚಿತ ವಿದ್ಯುತ್ ಕೊಡಬೇಕು. ಈ ಬಗ್ಗೆ ಸರಕಾರಕ್ಕೆ ಬರೆಯಬೇಕು ಎಂದು ಆಗ್ರಹಿಸಿದರು.

ಕುಂಬ್ರ ಪೇಟೆಗೆ ಪ್ರತ್ಯೇಕ ಟೌನ್ ಫೀಡರ್ ಬೇಕು

ಪುತ್ತೂರು ಪೇಟೆ ಬಿಟ್ಟರೆ ಕುಂಬ್ರ ಅತೀ ದೊಡ್ಡ ಪೇಟೆಯಾಗಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಪ್ರತ್ಯೇಕ ಟೌನ್ ಫೀಡರ್‌ನ ಅವಶ್ಯಕತೆ ಇದೆ. ಈ ಬಗ್ಗೆ ಹಲವು ವರ್ಷಗಳಿಂದ ಮೆಸ್ಕಾಂಗೆ ಬೇಡಿಕೆ ಇಡುತ್ತಲೇ ಬಂದಿದ್ದೇವೆ ಎಂದು ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಹೇಳಿದರು. ಪ್ರತ್ಯೇಕ ಫೀಡರ್ ಇಲ್ಲದೆ ಬಹಳಷ್ಟು ಸಮಸ್ಯೆಯಾಗುತ್ತದೆ. ಬೆಟ್ಟಂಪಾಡಿ ಮತ್ತು ಕಾವು ಫೀಡರ್‌ನಲ್ಲಿರುವುದರಿಂದ ರಸ್ತೆ ಕಾಮಗಾರಿ ಅಥವಾ ಇನ್ನಿತರ ಕೆಲಸ ನಡೆಯುತ್ತಿರುವ ವೇಳೆ ಫೀಡರ್ ಆಫ್ ಮಾಡಿದರೆ ಪೇಟೆಗೆ ವಿದ್ಯುತ್ ಇರುವುದಿಲ್ಲ. ಆದ್ದರಿಂದ ಕುಂಬ್ರ ಪೇಟೆಗೆ ಪ್ರತ್ಯೇಕ ಟೌನ್ ಫೀಡರ್ ಮಾಡಿದರೆ ಒಳ್ಳೆಯದು ಎಂದು ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ತಿಳಿಸಿದರು. ವರ್ತಕ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿ, ವರ್ತಕರ ಸಂಘವು ನಿರಂತರವಾಗಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಲೇ ಬಂದಿದ್ದು ಮೆಸ್ಕಾಂ ಕೂಡ ಸಂಘಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದೆ. ಮೆಸ್ಕಾಂ ಅಧಿಕಾರಿಗಳು ಹಾಗೆ ನಿತ್ಯಾನಂದ ತೆಂಡೂಲ್ಕರ್ ಮತ್ತು ಈಗಿನ ಜೆಇ ರವೀಂದ್ರರವರು ಕೂಡ ಸಂಘದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕುಂಬ್ರಕ್ಕೆ ಟೌನ್ ಫೀಡರ್ ಬೇಕು ಎಂಬುದು ನಮ್ಮ ಹಲವು ವರ್ಷಗಳ ಬೇಡಿಕೆಯಾಗಿದೆ ಎಂದರು..

ಕೊಯಿಲತ್ತಡ್ಕ, ಬರಮೇಲು ಪ್ರದೇಶಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇದೆ. ರಾತ್ರಿ ಸಮಯದಲ್ಲಿ ವೋಲ್ಟೆಜ್ ಇರುವುದಿಲ್ಲ ಆದ್ದರಿಂದ ಹೆಚ್ಚುವರಿ ಟಿಸಿ ಬೇಕು ಎಂದು ರಮೇಶ್, ಬಶೀರ್, ಗಣೇಶ್‌ರವರು ಬೇಡಿಕೆ ಇಟ್ಟರು. ಅಪಾಯದ ಸ್ಥಳಗಳಲ್ಲಿ ಹಾದು ಹೋಗುವ ಹೆಚ್‌ಟಿ ಲೈನ್ ಅನ್ನು ತೆರವು ಮಾಡಬೇಕು, ವಿದ್ಯುತ್ ಮೀಟರ್ ಸಿಗುತ್ತಿಲ್ಲ, ಬೆಟ್ಟಂಪಾಡಿ ಜೆಇಯವರು ಗ್ರಾಮಸಭೆಗೆ ಬರುತ್ತಿಲ್ಲ ಎಂದು ಮಹೇಶ್ ರೈ ಹೇಳಿದರು. ದರ್ಬೆತ್ತಡ್ಕ ಶಾಲಾ ಬಳಿಯಲ್ಲಿ ವಿದ್ಯುತ್ ಲೈನ್‌ಗೆ ತಾಗಿಕೊಂಡು ಅಪಾಯಕಾರಿ ಮರಗಳಿವೆ. ಆದ್ದರಿಂದ ವಿದ್ಯುತ್ ಕಂಬಗಳನ್ನು ತೆರವು ಮಾಡಬೇಕು ಎಂದು ಬಾಬುರವರು ಬೇಡಿಕೆ ಇಟ್ಟರು. ಇದಲ್ಲದೆ ಹಲವು ಬೇಡಿಕೆ, ಸಮಸ್ಯೆಗಳ ಬಗ್ಗೆ ಗ್ರಾಹಕರು ಅರ್ಜಿ ಸಲ್ಲಿಸಿದರು.

ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿಯವರ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. 20 ಕ್ಕೂ ಅಧಿಕ ಅರ್ಜಿಗಳು ಬಂದಿದ್ದು ಇದಲ್ಲದೆ ಹಲವು ಮಂದಿ ತಮ್ಮ ಸಮಸ್ಯೆಗಳನ್ನು ಮೌಖಿಕವಾಗಿ ಹೇಳಿಕೊಂಡರು. ಸಭೆಗೆ ಬಂದ ಎಲ್ಲಾ ಅರ್ಜಿಗಳನ್ನು ಎಇಇ ರಾಮಚಂದ್ರರವರು ಓದಿ ಹೇಳುವ ಮೂಲಕ ಅರ್ಜಿದಾರರಿಗೆ ಮಾಹಿತಿ ನೀಡಿದರು.

ವೈಯುಕ್ತಿಕವಾಗಿ ಕಂಬಗಳನ್ನು ಮೆಸ್ಕಾಂ ತೆರವು ಮಾಡಲ್ಲ

ರಸ್ತೆ ನಿರ್ಮಾಣ, ಮನೆ ನಿರ್ಮಾಣ ಸೇರಿದಂತೆ ಇನ್ನಿತರ ವೈಯುಕ್ತಿಕ ಕೆಲಸದ ವೇಳೆ ವಿದ್ಯುತ್ ಕಂಬಗಳನ್ನು ತೆರವು ಮಾಡಬೇಕು ಎಂದು ಹೇಳಿದರೆ ಅದನ್ನು ಮೆಸ್ಕಾಂ ಮಾಡುವುದಿಲ್ಲ. ಇಂತಹ ಸಮಯದಲ್ಲಿ ಅದಕ್ಕೆ ತಗಲುವ ಖರ್ಚನ್ನು ವ್ಯಕ್ತಿಗಳೇ ಭರಿಸಬೇಕಾಗುತ್ತದೆ ಎಂದು ಎಇಇ ರಾಮಚಂದ್ರರವರು ಸಭೆಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

Must Read

spot_img
error: Content is protected !!