ವಿಟ್ಲ ಜಾತ್ರೆ ಪ್ರಯುಕ್ತ ಮಳಿಗೆ ಹಾಕಿದ್ದ ವ್ಯಕ್ತಿಗೆ ತಂಡದಿಂದ ಹಲ್ಲೆ – ಬಿಡಿಸಲು ಬಂದ ಪತ್ನಿಯ ಮಾನಭಂಗಕ್ಕೆ ಯತ್ನ ಆರೋಪ- ಪ್ರಕರಣ ದಾಖಲು

0

ವಿಟ್ಲ: ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಹಾಕಲಾಗಿದ್ದ ಫ್ಯಾನ್ಸಿ ಅಂಗಡಿಯೊಂದರ ಬಳಿ ಬಂದ ತಂಡವೊಂದು ಅಂಗಡಿ ಮಾಲಕರಿಗೆ ಹಲ್ಲೆ ನಡೆಸಿ, ತಡೆಯಲು ಬಂದ ಅವರ ಪತ್ನಿಯ ಮೈಗೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಆರೋಪದ ಘಟನೆಗೆ ಸಂಬಂಧಿಸಿ ಆರು ಮಂದಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ನೇರ್ಲಾಜೆ ನಿವಾಸಿ ಸುರೇಶ್ ದಾಸ್ ರವರು ದೂರದಾರರಾಗಿದ್ದಾರೆ. “ನಾನು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ತೆರೆದು ವ್ಯವಹಾರ ನಡೆಸುತ್ತಿದ್ದು, ಜ.19 ರಂದು ರಾತ್ರಿ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುತ್ತಿದ್ದ ವೇಳೆ ಗಣೇಶ್ ಕಡಂಬು, ಮಂಜುನಾಥ ಹಾಗೂ ಇತರ ನಾಲ್ವರು ಮಳಿಗೆ ಬಳಿಗೆ ಬಂದು ಮಳಿಗೆ ಮುಚ್ಚುತ್ತಿರುವುದನ್ನು ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ನನ್ನ ಪತ್ನಿ ಓಡಿ ಜಗಳ ಬಿಡಿಸಲೆತ್ನಿಸಿದಾಗ ಆಕೆಗೂ ಹಲ್ಲೆ ನಡೆಸಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಜನಸೇರುತ್ತಿದ್ದಂತೆ ನನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿ ತಂಡವು ಅಲ್ಲಿಂದ ಪರಾರಿಯಾಗಿದೆ” ಎಂದು ಸುರೇಶ್ ದಾಸ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳಿಬ್ಬರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here