ಪುತ್ತೂರು: ಜ.22ರಂದು ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜರುಗಲಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆ, ಗ್ರಂಥಲೋಕಾರ್ಪಣೆ, ಗುರುವಂದನೆ, ರಜತ ತಲಾಭಾರ ಕಾರ್ಯಕ್ರಮದ ಸಿದ್ದತೆಗಾಗಿ ಈಗಾಗಲೇ ಭರದ ಸಿದ್ಥತೆ ನಡೆಯುತ್ತಿದ್ದು, ಸುಮಾರು 86 ಸಾವಿರ ಚದರ ಅಡಿಗೂ ಮಿಕ್ಕಿ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದೆ.
ದೇವಳದ ಗದ್ದೆಯ ತುದಿಯಲ್ಲಿರುವ ಧ್ಯಾನರೂಢ ಶಿವನ ಪ್ರತಿಮೆಯ ಬಳಿಯಿಂದ ಹಿಡಿದು ದೇವಳದ ಬಳಿಯ ಶ್ರೀ ಅಯ್ಯಪ್ಪ ಸನ್ನಿಧಿಯ ತನಕ ಶೀಟ್ ಹಾಸು ಮತ್ತು ಪೆಂಡಾಲ್ ಅಳವಡಿಸಲಾಗುತ್ತಿದೆ. ಸುಮಾರು 120 ಚದರಅಡಿ ಅಗಲ ಮತ್ತು 40 ಚ.ಅಡಿ ಉದ್ದದ ವೇದಿಕೆ ನಿರ್ಮಾಣಗೊಂಡಿದೆ. ಅಲ್ಲಿಂದ 400 ಮೀಟರ್ ಉದ್ದಕ್ಕೂ 300ಮೀಟರ್ ಅಗಲದ ಶೀಟ್ ಅಳವಡಿಕೆಯ ಪೆಂಡಾಲ್, ಬಳಿಕ ದೇವಳದ ಬಳಿಯ ತನಕವೂ ಶಾಮೀಯಾನದ ಪೆಂಡಾಲ್ ಅಳವಡಿಸಲಾಗಿದೆ. ಪೆಂಡಾಲ್ ಪೂರ್ಣ ನೆಲಕ್ಕೆ ಧೂಳು ಬಾರದಂತೆ ನೈಲಾನ್ ಶೇಡ್ ನೆಟ್‌ನ ಹೊದಿಕೆ ಹಾಕಲಾಗಿದೆ. ಈ ಹಿಂದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ ಪಾಕಶಾಲೆ ಮಾಡುತ್ತಿದ್ದ ಸ್ಥಳದಲ್ಲೇ ಪಾಕಶಾಲೆ ನಿರ್ಮಾಣ ಮಾಡಲಾಗಿದೆ.