ಉಪ್ಪಿನಂಗಡಿ: ಬಿಜೆಪಿ ಪರ ಅಪಪ್ರಚಾರದಲ್ಲಿ ನಿರತವಾಗಿರುವ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು, ಮನಮೋಹನ್ ಸಿಂಗ್ ಆಡಳಿತದಲ್ಲಿ ಆಕಾಶ, ಭೂಮಿ ಹಾಗೂ ಪಾತಾಳದಲ್ಲೂ ಲಕ್ಷ ಕೋಟಿಗಳಷ್ಟು ಭ್ರಷ್ಟಾಚಾರವನ್ನು ಕಾಂಗ್ರೆಸ್ ನಡೆಸಿರೋದು ಜನಸಾಮಾನ್ಯರಿಗೂ ಗೊತ್ತಿದೆ. ಆದ್ದರಿಂದ ಕಾಂಗ್ರೆಸ್ ಎಷ್ಟೇ ಅಪಪ್ರಚಾರ ನಡೆಸಿದರೂ ಪ್ರಜ್ಞಾವಂತ ಜನತೆ ಅದಕ್ಕೆ ಕಿವಿಕೊಡಲು ಸಾಧ್ಯವಿಲ್ಲ. ಬಿಜೆಪಿಯು ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮುಂಬರುವ ಚುನಾವಣೆ ಎದುರಿಸಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಬಿಜೆಪಿಯು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ನಡೆಸುವ ‘ವಿಜಯ ಸಂಕಲ್ಪ ಅಭಿಯಾನ’ಕ್ಕೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸರ್ದಾರ್ ವಲ್ಲಭಭಾಯ್ ಪಟೇಲರಂತೆ ಉಕ್ಕಿನ ಮನುಷ್ಯನಾಗಿರುವ ಪ್ರಧಾನಿಯವರು ನಮ್ಮ ದೇಶಕ್ಕೆ ಸಿಕ್ಕಿದ್ದಾರೆ. ನರೇಂದ್ರ ಮೋದಿಯವರದ್ದು ಡಬಲ್ ಎಂಜಿನ್ ಸರಕಾರವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ನ ರಬ್ಬರ್ ಸ್ಟ್ಯಾಂಪ್ ಆಗಿದ್ದು, ಕಾಂಗ್ರೆಸ್ ಈಗ ಎಂಜಿನೇ ಇಲ್ಲದ ಸ್ಥಿತಿಯಲ್ಲಿದೆ. ಆದ್ದರಿಂದ ಡಬಲ್ ಎಂಜಿನ್‌ನ ವಾಹನ ಹಾಗೂ ಎಂಜಿನೇ ಇಲ್ಲದ ವಾಹನ ರಸ್ತೆಗಿಳಿದರೆ ಯಾವುದು ಗುರಿಮುಟ್ಟಬಹುದು ಎಂಬುದನ್ನು ಸಾಮಾನ್ಯ ಜನರೂ ಅರ್ಥಮಾಡಿಕೊಳ್ಳುವ ಕಾಲ ಈಗ ಬಂದಿದೆ ಎಂದ ಅವರು, ನರೇಂದ್ರ ಮೋದಿಯವರ ನಾಯಕತ್ವವನ್ನು ಜಗತ್ತೇ ತಿರುಗಿ ನೋಡುವಂತಾಗಿದ್ದು, ಜಿ-20 ರಾಷ್ಟ್ರಗಳು ಮೋದಿಯವರಿಗೆ ನಾಯಕತ್ವ ಕೊಟ್ಟಿವೆ. ಮುಂದಿನ ದಿನಗಳಲ್ಲಿ ಮೋದಿಯವರನ್ನು ಜಗತ್ತಿನ ನಾಯಕನನ್ನಾಗಿಸಲು ಇತರೆ ರಾಷ್ಟ್ರಗಳು ಆಸಕ್ತಿ ವಹಿಸಿವೆ. ದೇಶದ ಕಟ್ಟಕಡೆಯ ವ್ಯಕ್ತಿ ಕೂಡಾ ಸ್ವಾವಲಂಬನೆಯ ದಾರಿಯನ್ನು ಕಂಡು ಕೊಳ್ಳಬೇಕೆಂದು ‘ಆತ್ಮ ನಿರ್ಭರ ಭಾರತ’ದಂತಹ ಹತ್ತು ಹಲವು ಜನಪರ ಯೋಜನೆಗಳನ್ನು ನರೇಂದ್ರ ಮೋದಿಯವರ ಆಡಳಿತದಲ್ಲಿ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಕಾರ್ಯಕರ್ತರು ಇದನ್ನು ಮನೆ-ಮನೆಗೆ ಮುಟ್ಟಿಸುವ ಕಾರ್ಯ ಮಾಡಬೇಕೆಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನ್ನೀವಾಸ ರಾವ್ ಮಾತನಾಡಿ, ಕಳೆದ ಬಾರಿ ಸದಸ್ಯತ್ವ ಅಭಿಯಾನದಲ್ಲಿ ನಾವು ದಾಖಲೆಯನ್ನು ಮಾಡಿದ್ದೆವು. ಈ ಬಾರಿಯೂ ಸದಸ್ಯತ್ವ ಅಭಿಯಾನ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವದ ನೋಂದಣಿಯನ್ನು ಮಾಡಬೇಕು. ವಿಜಯ ಸಂಕಲ್ಪ ಅಭಿಯಾನದ ಮೂಲಕ ಪ್ರತಿ ಬೂತ್ ಮಟ್ಟದ ಮನೆಗಳನ್ನು ನಾವು ಸಂಪರ್ಕಿಸಬೇಕು. ಅವರಿಗೆ ಸರಕಾರದ ಸಾಧನೆಗಳನ್ನು ತಿಳಿಸಿ, ಮತ್ತೊಮ್ಮೆ ಬಿಜೆಪಿ ಆಡಳಿತಕ್ಕೆ ಬರುವಂತೆ ಮಾಡಬೇಕು ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯ ಸಂಕಲ್ಪ ಅಭಿಯಾನದೊಂದಿಗೆ ಸದಸ್ಯತ್ವ ನೋಂದಣಿಗೂ ಚಾಲನೆ ನೀಡಲಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ 40 ಸಾವಿರದಷ್ಟು ಸದಸ್ಯರನ್ನು ಮಾಡಿದ್ದೇವೆ. ಈ ಅಭಿಯಾನದ ಮೂಲಕ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್‌ನ ಮನೆಗಳಿಗೂ ಭೇಟಿ ನೀಡಿ ಹೆಚ್ಚುವರಿ 15 ಸಾವಿರ ಸದಸ್ಯರನ್ನು ಸೇರ್ಪಡೆ ಮಾಡುವುದರೊಂದಿಗೆ ಈ ಹಿಂದಿನ ಸದಸ್ಯರ ನವೀಕರಣ ಮಾಡಲಿದ್ದೇವೆ ಹಾಗೂ ಸರಕಾರದ ಸಾಧನೆಗಳನ್ನು ಜನರ ಮುಂದಿಡಲಿದ್ದೇವೆ. ಈ ಅಭಿಯಾನದ ಸಮಾರೋಪ ಸಮಾರಂಭವು ಜ.29ರಂದು ವಿಟ್ಲದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಉಪ್ಪಿನಂಗಡಿ ಬೂತ್‌ನ ಯಶವಂತ ಪೈ ಅವರಿಗೆ ಪಕ್ಷದ ಧ್ವಜ ನೀಡುವುದರೊಂದಿಗೆ ಅಭಿಯಾನದ ಮನೆ ಮನೆ ಭೇಟಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ, ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸದಸ್ಯೆ ಶಯನಾ ಜಯಾನಂದ್, ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ಅಭಿಯಾನದ ಸಂಚಾಲಕ ನಿತೀಶ್ ಶಾಂತಿವನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ವಿಭಾಗ ಸಹ ಸಂಚಾಲಕ ಗೋಪಾಲಕೃಷ್ಣ ಹೇರಳೆ, ವಿವಿಧ ಬಾಷಿಕರ ಪ್ರಕೋಷ್ಟದ ಸಂಚಾಲಕ ಸಂತೋಷ್ ಕುಮಾರ್ ಪಂರ್ದಾಜೆ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್, ಬಿಜೆಪಿ ಮುಖಂಡರಾದ ಎನ್. ಉಮೇಶ್ ಶೆಣೈ, ರಾಮಚಂದ್ರ ಮಣಿಯಾಣಿ, ಸುಜಾತಕೃಷ್ಣ, ಉಷಾ ಮುಳಿಯ, ಹರೀಶ್ ಭಿಜತ್ರೆ, ಯುವರಾಜ್, ಹರಿಪ್ರಸಾದ್ ಯಾದವ್, ಯತೀಂದ್ರ ಕೊಚ್ಚಿ, ಪ್ರವೀಣ್, ಸ್ವಪ್ನಾ ಜೀವನ್, ಪ್ರೇಮಾ, ದಯಾನಂದ ಸರೋಳಿ, ನಿತಿನ್ ತಾರಿತ್ತಡಿ, ಧನಂಜಯ ನಟ್ಟಿಬೈಲ್, ನವೀನ್ ಪದೆಬರಿ, ಧರ್ನಪ್ಪ ನಾಯ್ಕ, ಸದಾನಂದ ನೆಕ್ಕಿಲಾಡಿ, ಸುಜಾತ ರೈ ಅಲಿಮಾರ್, ಜಯಂತ ಪೊರೋಳಿ, ವಿಶ್ವನಾಥ ಶೆಟ್ಟಿ ಕಂಗ್ವೆ, ಜಗದೀಶ್ ಶೆಟ್ಟಿ, ಯಶವಂತ ಗುಂಡ್ಯ, ಆನಂದ ಕುಂಟಿನಿ, ಪ್ರಸಾದ್ ಬಂಡಾರಿ, ಲಕ್ಷ್ಮಣ ಗೌಡ ಕೋಡಿಂಬಾಡಿ, ಕೆ. ರಾಮಚಂದ್ರ ಪೂಜಾರಿ, ವಿಜಯಕುಮಾರ್, ಪ್ರಶಾಂತ್ ಕುಮಾರ್ ಪೆರಿಯಡ್ಕ, ಸಂಜೀವ ಮಡಿವಾಳ, ಯತೀಶ್ ಶೆಟ್ಟಿ ಸುವ್ಯ, ಗಂಗಾಧರ ಟೈಲರ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯ ಸಂಕಲ್ಪ ಅಭಿಯಾನದ ಸಹ ಸಂಚಾಲಕ ಸುನೀಲ್ ಕುಮಾರ್ ದಡ್ಡು ಸ್ವಾಗತಿಸಿ, ವಂದಿಸಿದರು. ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ಅತ್ರೆಮಜಲು ಕಾರ್ಯಕ್ರಮ ನಿರೂಪಿಸಿದರು.