ಕಲಾಪ ತಿಂದ ಬ್ಯಾನರ್ ವಿಚಾರ: ಸಭೆ ರದ್ದು; ಉಪ್ಪಿನಂಗಡಿ ಸಾಮಾನ್ಯ ಸಭೆಯಲ್ಲಿ ಆರೋಪ – ಪ್ರತ್ಯಾರೋಪ

0

ಉಪ್ಪಿನಂಗಡಿ: ಬ್ಯಾನರ್ ವಿಷಯಕ್ಕೆ ಸಂಬಂಧಿಸಿ ಗ್ರಾ.ಪಂ. ಸದಸ್ಯರೋರ್ವರ ಮೇಲೆ ಪಿಡಿಒ ಸುಳ್ಳು ದೂರು ನೀಡಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳದ ಹೊರತು ನಾವು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಡಳಿತ ಮಂಡಳಿಯ ಪರ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಎದ್ದು ಹೋದ ಘಟನೆ ಮಂಗಳವಾರ ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದ್ದು, ಕೊನೆಗೇ ಗ್ರಾ.ಪಂ. ಅಧ್ಯಕ್ಷರೂ ಕೂಡಾ ಕೋರಂ ಕೊರತೆಯ ಕಾರಣವನ್ನು ನೀಡಿ ಸಭೆಯನ್ನು ಮುಂದೂಡುವಂತೆ ತಿಳಿಸಿ, ಸಭೆಯಿಂದ ನಿರ್ಗಮಿಸಿದ್ದು, ಹೀಗಾಗಿ ಗ್ರಾ.ಪಂ. ಸಾಮಾನ್ಯ ಸಭೆ ರದ್ದುಗೊಳ್ಳುವಂತಾಯಿತು.

ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ಲಿಖಿತ ಮನವಿ ಸಲ್ಲಿಸಿ ವಿಚಾರ ಪ್ರಸ್ತಾಪಿಸಿದ ಪಂಚಾಯತ್ ಸದಸ್ಯ ಲೋಕೇಶ್ ಬೆತ್ತೋಡಿ, ಅನಾರೋಗ್ಯ ಪೀಡಿತ ಮಗುವೊಂದಕ್ಕೆ ಧನ ಸಹಾಯ ಮಾಡಲು ನೆಡ್ಚಿಲ್‌ನಲ್ಲಿ ಆಯೋಜಿಸಿದ ಕಬಡ್ಡಿ ಪಂದ್ಯಾಟಕ್ಕೆ ಶುಭ ಕೋರುವ ಬ್ಯಾನರ್ ಅಳವಡಿಸಲು ಆಯೋಜಕರು ಗ್ರಾ.ಪಂ.ಗೆ ಪರವಾನಿಗೆಗೆ ಬಂದಾಗ ಗ್ರಾ.ಪಂ. ಅಧ್ಯಕ್ಷರು, ಮಾನವೀಯ ನೆಲೆಯಲ್ಲಿ ಪರವಾನಿಗೆ ಬೇಡ ಎಂದು ತಿಳಿಸಿದ್ದರು. ಆದರೆ ಅಧ್ಯಕ್ಷರ ಮಾತಿಗೆ ಬೆಲೆ ಕೊಡದ ಪಿಡಿಒ ಅವರು ಅನಧಿಕೃತ ಬ್ಯಾನರ್ ಎಂದು ಅದನ್ನು ತೆರವುಗೊಳಿಸಲು ಮುಂದಾದಾಗ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶ ಕೇಳಿಬಂದಿತ್ತು. ಆಗ ಆ ವಾರ್ಡ್‌ನ ಸದಸ್ಯ ಸುರೇಶ್ ಅತ್ರೆಮಜಲು ಕೂಡಾ ಬ್ಯಾನರ್ ತೆಗೆಯುವುದನ್ನು ವಿರೋಧಿಸಿ, ಸಾರ್ವಜನಿಕರ ಪರ ನಿಂತು ಮಾತನಾಡಿದ್ದರು. ಅದನ್ನೇ ಮುಂದಿಟ್ಟುಕೊಂಡು ಪಿಡಿಒ ಅವರು ಸುರೇಶ್‌ರ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದು ನಾಳೆ ಜನಪ್ರತಿನಿಧಿಗಳಾದ ನಮ್ಮ ಮೇಲೆಯೂ ಆಗಬಹುದು. ಆದ್ದರಿಂದ ಮೊದಲು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಪಿಡಿಒ ಮೇಲೆ ಖಂಡನಾ ನಿರ್ಣಯ ಕೈಗೊಳ್ಳಬೇಕು. ಬಳಿಕ ಸಭೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು. ಆಗ ಗ್ರಾ.ಪಂ. ಸದಸ್ಯ ಯು.ಟಿ. ತೌಸೀಫ್ ಮಾತನಾಡಿ, ಸುರೇಶರ ಮೇಲೆ ಈ ರೀತಿ ಮಾಡಿದ್ದಕ್ಕೆ ನಮಗೂ ಬೇಜಾರಿದೆ. ನಾವು ಕೂಡಾ ಅವರದ್ದೇ ಸಪೋರ್ಟ್. ಆದರೆ ಆ ಬಗ್ಗೆ ಇಲ್ಲಿ ಚರ್ಚೆ ಬೇಡ ಎಂದರು. ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಮಾತನಾಡಿ, ಈ ರೀತಿ ಆಗಬಾರದಿತ್ತು. ಅದರೆ ಆಗಿ ಹೋಗಿದೆ. ಇದನ್ನು ಬೇರೆಡೆ ಕೂತು ಪರಸ್ಪರ ಮಾತನಾಡಿ ಬಗೆಹರಿಸುವ ಪ್ರಯತ್ನ ಮಾಡೋಣ. ಈಗ ಸಭೆ ಮುಂದುವರಿಸೋಣ ಎಂದರು.‌

ಆದರೆ ಪಟ್ಟು ಬಿಡದ ಲೊಕೇಶ್ ಬೆತ್ತೋಡಿ, ಅಧಿಕಾರಿಗಳಾದವರು ಗ್ರಾಮದ ಸ್ವಾಸ್ಥ್ಯ ಕಾಪಾಡಬೇಕು. ಗ್ರಾಮಸ್ಥರು ಆಕ್ರೋಶದಲ್ಲಿರುವಾಗ ‘ನನ್ನ ಮೇಲೆ ಹಲ್ಲೆ ಮಾಡುತ್ತೀರಾ….? ಮಾಡಿ’ ಎಂದು ಅಧಿಕಾರಿಗಳು ಅವರ ಮೇಲೆಯೇ ಏರಿ ಹೋಗುವುದಲ್ಲ. ಅವರನ್ನು ಸಮಾಧಾನಿಸಲು ಪ್ರಯತ್ನಿಸಬೇಕು ಎಂದರಲ್ಲದೆ, ಅವರು ಕಬಡ್ಡಿ ಪಂದ್ಯಾಟ ಆಯೋಜಿಸಿದ್ದದ್ದು ಯಾವುದೇ ವ್ಯಾಪಾರದ ದೃಷ್ಟಿಯಿಂದಲ್ಲ. ಬದಲಾಗಿ ಒಂದು ಮಗುವಿನ ಚಿಕಿತ್ಸೆಗಾಗಿ. ಅಧ್ಯಕ್ಷರು ಪರವಾನಿಗೆ ಬೇಡ ಎಂದು ಹೇಳಿದ್ದರೂ, ಅದನ್ನು ಕಡೆಗಣಿಸಿ ಪಿಡಿಒ ಅವರು ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದು ಸರಿಯಲ್ಲ ಎಂದರು. ಇದಕ್ಕೆ ಆಡಳಿತ ಮಂಡಳಿಯ ಪರವಿರುವ ಸದಸ್ಯ ಧನಂಜಯ ನಟ್ಟಿಬೈಲ್ ಕೂಡಾ ಧ್ವನಿಗೂಡಿಸಿದರು.

ಅಲ್ಲಿ ಏನಾಗಿದೆ ಎಂದು ನಾವು ನೋಡಿಲ್ಲ. ಆದ್ದರಿಂದ ಅಲ್ಲಿನ ಬಗ್ಗೆ ವಿಡಿಯೋ ಇದ್ದರೆ ತೋರಿಸಿ, ಆಗ ಅಲ್ಲಿ ತೆರವಿಗೆ ಹೋಗಿದ್ದ ಸಿಬ್ಬಂದಿಯೇ ಆ ಬಗ್ಗೆ ಹೇಳಲಿ ಎಂದು ಅಬ್ದುರ್ರಹ್ಮಾನ್ ಕೆ. ತಿಳಿಸಿದರು. ಆಗ ಸಿಬ್ಬಂದಿ ಶ್ರೀನಿವಾಸ್ ಮಾತನಾಡಿ, ಪಿಡಿಒ ಅವರ ಸೂಚನೆಯಂತೆ ಬ್ಯಾನರ್ ತೆಗೆಯಲಿಕ್ಕೆ ಹೋಗಿದ್ದೆ. ಅದಕ್ಕೂ ಮೊದಲು ತೆರವು ಮಾಡುವ ಕುರಿತು ಅದರ ಸಂಘಟಕರೋರ್ವರಿಗೆ ಫೋನ್ ಮಾಡಿ ತಿಳಿಸಿದ್ದೇನೆ. ಹಾಗಾಗಿ ಈ ವಿಷಯ ಅಧ್ಯಕ್ಷರಿಗೆ ಹೇಳಿಲ್ಲ ಎಂದರು. ಅದಕ್ಕೆ ಅಬ್ದುರ್ರಹ್ಮಾನ್ ಅವರು ನೀವು ಅಧ್ಯಕ್ಷರಿಗೆ ಒಂದು ಮಾತು ಹೇಳಬೇಕಿತ್ತು ಎಂದರು. ಪಿಡಿಒ ವಿಲ್ರೆಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ಅನಧಿಕೃತ ಬ್ಯಾನರ್‌ಗಳನ್ನು ತೆರವು ಮಾಡುವ ಕುರಿತು ಈ ಆಡಳಿತ ಮಂಡಳಿಯೇ ನಿರ್ಣಯ ಕೈಗೊಂಡಿದೆ. ಅದರ ಅನುಷ್ಠಾನಕ್ಕೆ ನಾನು ಮುಂದಾಗಿದ್ದೇನೆ. ಮತ್ತೆ ಅವರ ಅರ್ಜಿಯಲ್ಲಿ ಸರಿಯಾದ ವಿಳಾಸವೂ ಇರಲಿಲ್ಲ. ಸರಿಯಾದ ಮಾಹಿತಿಯೂ ಇರಲಿಲ್ಲ ಎಂದರು. ಆಗ ಅಧ್ಯಕ್ಷರು ಮಾತನಾಡಿ ಸಾರ್ವಜನಿಕರಿಗೆ ಎಲ್ಲಾ ಗೊತ್ತಿರುವುದಿಲ್ಲ. ಅವರು ಕೊಟ್ಟ ಅರ್ಜಿ ಸಮರ್ಪಕವಾಗಿದ್ದರೆ ಅದನ್ನು ತೆಗೆದುಕೊಳ್ಳುವ ಮೊದಲು ಅದನ್ನು ಯಾವ ರೀತಿ ಆಗಬೇಕು ಎಂಬ ಮಾಹಿತಿ ನೀವು ನೀಡಬೇಕು. ಅದು ನಿಮ್ಮ ಕರ್ತವ್ಯ. ಅರ್ಜಿಯಲ್ಲಿ ತಪ್ಪಿದೆ ಅಂತ ಇದ್ದರೂ, ಅದನ್ನು ತೆಗೆದುಕೊಳ್ಳುವುದಲ್ಲ ಎಂದರಲ್ಲದೆ, ಇಲ್ಲಿ ಬೇಕಾದಷ್ಟು ನಿರ್ಣಯಗಳು ಆಗಿದೆ. ಅದು ಎಷ್ಟು ಅನುಷ್ಠಾನ ಮಾಡಿದ್ದೀರಿ? ನಿಮಗೆ ಅನಧಿಕೃತ ಅಂತ ಅಲ್ಲಿನ ಬ್ಯಾನರ್ ಮಾತ್ರ ಕಂಡಿದ್ದಾ? ಪೇಟೆಯಲ್ಲಿರುವ ಅನಧಿಕೃತ ಬ್ಯಾನರ್ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪಿಡಿಒ ನಡೆ ಖಂಡನೀಯ ಎಂದರು.

ನಿಮ್ಗೆ ಪ್ರೀತಿಯಿಲ್ಲ, ನಾಟಕ!: ಗ್ರಾ.ಪಂ. ಸದಸ್ಯ ಯು.ಟಿ. ತೌಸೀಫ್ ಮಾತನಾಡಿ, ಆಡಳಿತ ಮಂಡಳಿಯ ಪರ ಸದಸ್ಯರಾಗಿರುವ ಸುರೇಶ್ ಅವರ ಮೇಲೆ ಆಡಳಿತ ಮಂಡಳಿಯ ಸದಸ್ಯರೇ ಆಗಿರುವ ನಿಮಗೆ ನೈಜ ಪ್ರೀತಿಯಿಲ್ಲ. ನೀವು ಮಾಡುತ್ತಿರುವುದು ಪ್ರೀತಿಯ ನಾಟಕ. ಅದು ಇದ್ದಿದ್ದರೇ ಇದಕ್ಕಿಂತ ಮೊದಲೇ ಅದನ್ನು ಮುಗಿಸಲು ಪ್ರಯತ್ನ ಪಡುತ್ತಿದ್ರಿ. ಈಗ ಈ ಘಟನೆಯಾಗಿ 20 ದಿನ ಕಳೆಯಿತು. ಅದನ್ನು ಸಾಮಾನ್ಯ ಸಭೆಗೆ ಎಳೆದು ತಂದಿದ್ದು ಸರಿಯಲ್ಲ. ಈ ವಿಷಯವನ್ನು ಇತ್ಯರ್ಥಗೊಳಿಸುವ ಇರಾದೆ ನಮಗೂ ಇದೆ. ಇದಕ್ಕಿಂತ ಮೊದಲೇ ನಾನು ಹೇಳಿದ್ದೇನೆ. ಇದನ್ನು ಕೂತು ಮಾತನಾಡಿ ಮುಗಿಸಿ ಅಂತ. ಆದರೆ ನೀವ್ಯಾರೂ ಮುಂದುವರೀಲಿಲ್ಲ. ಸುರೇಶರಿಗೆ ಆ ರೀತಿ ಆಗಿದ್ದು ನಮಗೂ ಬೇಜಾರಿದೆ. ಅವರನ್ನು ನಾವು ಯಾವತ್ತೂ ಕೈ ಬಿಡುವುದಿಲ್ಲ. ನಮ್ಮದು ಅವರ ಮೇಲಿನ ನೈಜ ಪ್ರೀತಿ ಎಂದರು.‌

ಶಾಸಕರಿಗೆ ತಮ್ಮ ಪಕ್ಷದ ಕಾರ್ಯಕರ್ತನ ಹಿಂದೆ ನಿಲ್ಲಲಿಕ್ಕೆ ಯಾಕೆ ಆಗಲಿಲ್ಲ?: ಪೊಲೀಸ್ ಠಾಣೆಯಲ್ಲಿ ಅರ್ಧ ಗಂಟೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ಮಾಡಲಾಗಿದೆ. ಬೇರೆ ಪ್ರಕರಣಗಳನ್ನು ದಾಖಲಿಸಿಕೊಳ್ಳುವಾಗ ಇಲ್ಲದ ಆಸಕ್ತಿ ಇದಕ್ಕೆ ಪೊಲೀಸರು ತೋರಿದ್ದಾರೆ ಎಂದು ಆಡಳಿತ ಮಂಡಳಿ ಪರ ಸದಸ್ಯರು ಆರೋಪಿಸಿದರು. ಆಗ ಸದಸ್ಯ ತೌಸೀಫ್ ಮಾತನಾಡಿ, ನೀವು ಬೆಂಬಲಿಸುವ ಪಕ್ಷದವರೇ ಶಾಸಕರು ಇದ್ದಾರೆ. ಅವರಲ್ಲಿ ವಿಷಯ ಹೇಳಿ ಠಾಣೆಗೆ ಒಂದು ಫೋನ್ ಮಾಡಬಹುದಿತ್ತಲ್ವಾ? ಪ್ರಕರಣ ದಾಖಲಿಸಿಕೊಳ್ಳಲು ಆತುರ ಮಾಡಬೇಡಿ. ಸಮಯ ನೀಡಿ ಎಂದು. ಆಗ ನಿಮಗೆ ಅವರಿಬ್ಬರನ್ನು ಸಂಧಾನ ಮಾಡಿ ಪ್ರಕರಣ ಬಗೆಹರಿಸಿಕೊಳ್ಳಬಹುದಲ್ವಾ? ಬೆಳ್ತಂಗಡಿ ಶಾಸಕರು ಅವರ ಜನವನ್ನು ಠಾಣೆಯೊಳಗೆ ಇದ್ದರೂ ಕರೆದುಕೊಂಡು ಹೋಗುತ್ತಾರೆ. ಹಾಗಿದ್ದಾಗ ಇಲ್ಲಿನ ಶಾಸಕರಿಗೆ ತಮ್ಮ ಪಕ್ಷದ ಕಾರ್ಯಕರ್ತನ ಹಿಂದೆ ನಿಲ್ಲಲಿಕ್ಕೆ ಯಾಕೆ ಆಗಲಿಲ್ಲ? ಸುರೇಶರ ಮೇಲೆ ಈ ರೀತಿ ಆಗುವುದು ಎಲ್ಲರಿಗೂ ಬೇಕಿತ್ತು. ಆದ್ರೆ ಈಗ ಮಾತ್ರ ಅನ್ಯಾಯವಾಗಿದೆ ಎಂದು ನಾಟಕ ಮಾಡುತ್ತಿದ್ದೀರಿ ನೀವೆಲ್ಲಾ ಎಂದು ಆಕ್ರೋಶಭರಿತವಾಗಿ ನುಡಿದರು.

ನ್ಯಾಯ ಸಮಾನವಾಗಿರಲಿ: ಜನಪ್ರತಿನಿಧಿಗಳು ಅನುದಾನ ಕೊಟ್ಟಾಗ ಅವರಿಗೆ ಶುಭಾಶಯ ಕೋರಿ ಗ್ರಾ.ಪಂ. ಸದಸ್ಯರು ಬ್ಯಾನರ್ ಹಾಕುವಾಗ ಯಾವ ಪರವಾನಿಗೆಯನ್ನು ಪಡೆಯೋದಿಲ್ಲ ಕೆಲ ಸದಸ್ಯರಿಂದ ಮಾತು ಬಂದಾಗ ಅವರು ಊರಿಗಾಗಿ ಅನುದಾನ ನೀಡಿದ್ದು. ಅದಕ್ಕೆ ಶುಭ ಕೋರಲೇ ಬೇಕು ಎಂದು ಅಬ್ದುಲ್ ರಹಿಮಾನ್ ಹೇಳಿದರು. ಆಗ ತೌಸೀಫ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶನೇ ಇದೆ. ಅನುದಾನ ಕೊಟ್ಟಿರುವುದರಲ್ಲಿ ಜನಪ್ರತಿನಿಧಿ ತನ್ನ ಹೆಸರು ಹಾಕಿ ಬ್ಯಾನರ್ ಹಾಕಬಾರದು ಎಂದು. ಹಾಗಾದರೆ ನೀವು ಕಾನೂನಿಗೆ ಗೌರವ ಕೊಡುವುದಿಲ್ವಾ ಎಂದರಲ್ಲದೆ, ಇಲ್ಲಿ ಜನಪ್ರತಿನಿಧಿಗಳಿಗೆ ಒಂದು ನ್ಯಾಯ, ಜನರಿಗೆ ಒಂದು ನ್ಯಾಯ ಯಾಕೆ ಎಂದರು.

ಈ ವಿಷಯವನ್ನು ಬೇರೆಡೆ ಕೂತು ಪರಸ್ಪರ ಚರ್ಚಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯೋಣ. ಅದರೆ ಸಾಮಾನ್ಯ ಸಭೆ ನಡೆಸಲು ಬಿಡಿ. ಸಭೆ ನಡೆಯದಿದ್ದಲ್ಲಿ ಗ್ರಾಮದ ಅಭಿವೃದ್ಧಿಗೆ ತೊಡಕಾಗಲಿದೆ. ಗ್ರಾ.ಪಂ.ಗೆ ಎಷ್ಟೋ ಮಂದಿ ಡೋರ್ ನಂಬರ್, ಅಂಗಡಿ ಪರವಾನಿಗೆಗೆ ಅರ್ಜಿ ಕೊಟ್ಟಿರುತ್ತಾರೆ. ಸಾಮಾನ್ಯ ಸಭೆಯಲ್ಲಿ ಅದನ್ನು ಇತ್ಯರ್ಥ ಮಾಡಬೇಕು. ಸಭೆ ರದ್ದುಗೊಂಡರೆ ಅವರು ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಭೆಯನ್ನು ಮುಂದುವರಿಸಿ, ಅಜೆಂಡಾದಂತೆ ಸಭೆ ಮುಂದೆ ಸಾಗಲಿ ಎಂದು ಅಬ್ದುಲ್ ರಹಿಮಾನ್ ವಿನಂತಿಸಿದರು. ಆಗ ಅಧ್ಯಕ್ಷರು ಇಲ್ಲಿ ಉಪಸಮಿತಿಗಳನ್ನೂ ಮಾಡಲಾಗಿದೆ. ಅರ್ಜಿಗಳ ವಿಲೇವಾರಿಯನ್ನು ಅಲ್ಲಿ ನಡೆಸಬಹುದೆಂದು ಹೇಳಿದರು. ಅದಕ್ಕೆ ತೌಸೀಫ್ ಅದಕ್ಕೆ ನಮ್ಮ ಸಹಮತವಿಲ್ಲ ಎಂದರಲ್ಲದೆ, ಸಾಮಾನ್ಯ ಸಭೆಯನ್ನು ಮುಂದುವರಿಸಿ ಎಂದರು. ಆದರೂ ಕೇಳದ ಆಡಳಿತ ಮಂಡಳಿ ಪರ ಇರುವ ಸದಸ್ಯರಾದ ಲೊಕೇಶ್ ಬೆತ್ತೋಡಿ, ಧನಂಜಯ ನಟ್ಟಿಬೈಲ್, ಜಯಂತಿ ರಂಗಾಜೆ, ವನಿತಾ, ಶೋಭಾ, ಉಷಾ ನಾಯ್ಕ ಈ ಪ್ರಕರಣ ಇತ್ಯರ್ಥವಾಗಿ ನಮಗೆ ನ್ಯಾಯ ಸಿಗದ ಹೊರತು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಬಳಿಕ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಸಣ್ಣಣ್ಣ ಯಾನೆ ಸಂಜೀವ ಮಡಿವಾಳ ಸಭೆಯಿಂದ ನಿರ್ಗಮಿಸಿದರು. ಕೊನೆಗೆ ಕೋರಂ ಕೊರತೆಯನ್ನು ಮುಂದಿರಿಸಿ, ಸಭೆಯನ್ನು ಮುಂದೂಡುವಂತೆ ಹೇಳಿ ಅಧ್ಯಕ್ಷರು ಕೂಡಾ ಸಭೆಯಿಂದ ಹೊರನಡೆದರು. ಸಭೆ ರದ್ದುಗೊಂಡ ಬಳಿಕ ಗ್ರಾ.ಪಂ. ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ನೆಬಿಸಾ, ವಿದ್ಯಾಲಕ್ಷ್ಮಿ ಪ್ರಭು, ತೌಸೀ- ಯು.ಟಿ., ಅಬ್ದುರ್ರಹ್ಮಾನ್ ಕೆ., ಮೈಸೀದ್ ಇಬ್ರಾಹಿಂ, ಯು.ಕೆ. ಇಬ್ರಾಹಿಂ, ಲಲಿತಾ ಕೂಡಾ ಸಭೆಯಿಂದ ನಿರ್ಗಮಿಸಿದರು.

ಸಭೆಯ ಬಳಿಕ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅಧ್ಯಕ್ಷೆ ಉಷಾ ಮುಳಿಯ, ಪಿಡಿಒ ಅವರು ನಿರ್ಣಯ ಅನುಷ್ಠಾನಗೊಳಿಸಲು ತಾರತಮ್ಯ ನಡೆಸುತ್ತಿದ್ದಾರೆ. ಉಪ್ಪಿನಂಗಡಿಯಲ್ಲಿ ಸಾಕಷ್ಟು ಅನಧಿಕೃತ ಬ್ಯಾನರ್‌ಗಳಿರುವಾಗ ಅವರಿಗೆ ತೆರವು ಮಾಡ್ಲಿಕ್ಕೆ ಕಂಡಿದ್ದು ನೆಡ್ಚಿಲ್‌ನಲ್ಲಿ ಹಾಕಿದ ಬ್ಯಾನರ್ ಮಾತ್ರನಾ? ಪೇಟೆಯೊಳಗೆ ರಸ್ತೆ ಬದಿ ಟೆಂಪೋಗಳಲ್ಲಿ ಹಣ್ಣು ಹಂಪಲುಗಳನ್ನು ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಗಳಾಗುತ್ತಿವೆ. ಇದರ ತೆರವಿಗೂ ನಿರ್ಣಯಗಳಾಗಿವೆ. ಆದರೆ ಅದನ್ನು ಅನುಷ್ಠಾನಿಸಲು ಪಿಡಿಒ ಯಾಕೆ ಮುಂದಾಗುತ್ತಿಲ್ಲ. ಇಂತಹ ಅನೇಕ ನಿರ್ಣಯಗಳು ಆಗಿದೆ ಅದನ್ನೆಲ್ಲಾ ಯಾಕೆ ಅವರು ಅನುಷ್ಠಾನಕ್ಕೆ ತರುವುದಿಲ್ಲ ಎಂದು ಪ್ರಶ್ನಿಸಿದರು.

ಬ್ಯಾನರ್ ವಿಷಯವಾಗಿ ನಡೆದ ಆರೋಪ – ಪ್ರತ್ಯಾರೋಪದಿಂದ ಬೇಸತ್ತ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಸಣ್ಣಣ್ಣ ಯಾನೆ ಸಂಜೀವ ಮಡಿವಾಳ ಅವರು ಎಂತ ಇದು ಸುಮ್ಮನೆ. ಒಂದೋ ರಾಜಿ ಮಾಡಲು ಪ್ರಯತ್ನಿಸಿ. ಕಲಾಪ ಹಾಳು ಮಾಡೋದು ಬೇಡ. ಹೀಗೆ ಇದ್ದರೆ ಪಂಚಾಯತ್‌ಗೆ ನಾನು ಬರಲ್ಲ. ನನಗೆ ಅಂಗಡಿ ಇದೆ. ದುಡಿಯಲೂ ಗೊತ್ತಿದೆ. ‘ಕಚ್ಡಾ’ ಎಂದು ಆಕ್ರೋಶಭರಿತವಾಗಿ ನುಡಿದರು.

ಕೇಸಿನ ಬಗ್ಗೆ ಸಭೆಯಲ್ಲಿ ಪ್ರತಿಕ್ರಿಯಿಸುವುದಿಲ್ಲ : ಪಿಡಿಒ

ತಾನು ನೀಡಿದ ದೂರಿನ ಬಗ್ಗೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ ಮೂಡಿದಾಗ , ಮಾಜಿ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ರವರು ಪಿಡಿಒ ರವರಲ್ಲಿ ನೀವು ಕಿರಿಯ ವಯಸ್ಸಿನವರು, ಪಂಚಾಯತ್ ನಲ್ಲಿನ ಹಿರಿಯ ವಯಸ್ಸಿನ ಸದಸ್ಯರ ವಿರುದ್ದ ಅತೀ ಎಣಿಸುವಂತೆ ಕಠಿಣವಾಗಿ ವರ್ತಿಸಬೇಡಿ. ನಡೆದ ಘಟನೆ ಬಗ್ಗೆ ಎಲ್ಲರೂ ಒಟ್ಟಾಗಿ ಕೂತು ಚರ್ಚಿಸುವ. ಪ್ರಕರಣವನ್ನು ಬಗೆಹರಿಸುವ ಬಗ್ಗೆ ಪ್ರಯತ್ನಿಸೋಣ ಎಂದು ವಿನಂತಿಸಿದರು. ಈ ವೇಳೆ ಪೊಲೀಸ್ ಕೇಸಿನ ಬಗ್ಗೆ ನಾನು ಸಾಮಾನ್ಯ ಸಭೆಯಲ್ಲಿ ಏನನ್ನೂ ಹೇಳುವಂತಿಲ್ಲ. ಎಲ್ಲಾ ಅನಧಿಕೃತ ಬ್ಯಾನರ್ ಗಳನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಪಂಚಾಯತ್ ಸದಸ್ಯರೇ ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದಾರೆ. ಅನಧಿಕೃತ ಅಂಗಡಿಗಳ ವಿರುದ್ದ ಕ್ರಮ ಜರುಗಿಸಲು ಒತ್ತಾಯಿಸುತ್ತಾರೆ. ಪಂಚಾಯತ್ ಪರವಾನಿಗೆ ಇಲ್ಲದ ಎಲ್ಲಾ ಅಂಗಡಿಗಳೂ ಅನಧಿಕೃತ ಅಂಗಡಿಗಳೇ ಆಗಿದ್ದು, ಜಗಲಿಯಲ್ಲಿ ಹೂವಿನ ವ್ಯಾಪಾರ ನಡೆಸುವ ವ್ಯಾಪಾರಿಗಳ ವಿರುದ್ದ ಕ್ರಮ ಜರುಗಿಸಲು ಅವಕಾಶ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here