- ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಗಾಗಿ ಪ್ರಶಸ್ತಿ
ರಾಜ್ಯದ 2೦ ಮಂದಿ ಸೇರಿ 901 ಸಿಬ್ಬಂದಿ ಪ್ರಶಸ್ತಿಗೆ ಆಯ್ಕೆ
ಕಡಬ:ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ರಾಜ್ಯದ ೨೦ ಮಂದಿ ಪೊಲೀಸ್ ಸಿಬ್ಬಂದಿಗಳನ್ನು, ೭೪ನೇ ಗಣರಾಜ್ಯೋತ್ಸವ ದಿನದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಬೆಂಗಳೂರು ನಗರದಲ್ಲಿ ಲೋಕಾಯುಕ್ತ ಡಿವೈಎಸ್ಪಿಯಾಗಿರುವ ಕಡಬ ಬೆದ್ರಾಜೆಯ ಪ್ರಮೋದ್ ಕುಮಾರ್ ಬಿ.ಅವರೂ ಇವರಲ್ಲಿ ಓರ್ವರಾಗಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಬಿ.ಪ್ರಮೋದ್ ಕುಮಾರ್ ಸೇರಿದಂತೆ ರಾಜ್ಯದ ೨೦ ಮಂದಿ ಪೊಲೀಸ್ ಸಿಬ್ಬಂದಿಗಳನ್ನು ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಇವರಲ್ಲಿ ಪ್ರಮೋದ್ ಕುಮಾರ್ ಬಿ.ಸಹಿತ ೧೮ ಮಂದಿಯನ್ನು ರಾಷ್ಟ್ರಪತಿಯವರ `ಶ್ಲಾಘನೀಯ ಸೇವಾ ಪದಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಒಟ್ಟು ೯೦೧ ಪೊಲೀಸ್ ಸಿಬ್ಬಂದಿಗಳನ್ನು ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಗಣರಾಜ್ಯೋತ್ಸವ ದಿನದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ.
ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿಯಾಗಿರುವ ಪ್ರಮೋದ್ ಕುಮಾರ್ ಬಿ.ರವರು ಪ್ರಸ್ತುತ ಬೆಂಗಳೂರು ನಗರದಲ್ಲಿ ಲೋಕಾಯುಕ್ತ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕಡಬದಲ್ಲಿ ಪೂರ್ತಿಗೊಳಿಸಿದ್ದ ಇವರು ಪಿಯುಸಿ, ಪದವಿಯನ್ನು ಸಿದ್ಧವನ ಗುರುಕುಲದ ವಿದ್ಯಾರ್ಥಿಯಾಗಿದ್ದುಕೊಂಡು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು.೨೦೦೧ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಳ್ಳುವ ಮೂಲಕ ಪೊಲೀಸ್ ಇಲಾಖೆಗೆ ಸೇರಿದ್ದರು.ಮೈಸೂರಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆಗಾಗಿ ಆಗಿನ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಂದ ಔಟ್ ಸ್ಟ್ಯಾಂಡಿಂಗ್ ಪರ್‌ಫಾರ್ಮರ್ ಅವಾರ್ಡ್ ಪಡೆದುಕೊಂಡಿದ್ದರು.ಪಿಎಸ್‌ಐ ಆಗಿ ಅವರು ನಂಜನಗೂಡು, ಅರಕಲಗೂಡು, ಮಡಿಕೇರಿ ಮತ್ತಿತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.೨೦೦೮ರಲ್ಲಿ ವೃತ್ತ ನಿರೀಕ್ಷಕರಾಗಿ ಭಡ್ತಿ ಹೊಂದಿದ್ದ ಇವರು ಚಿಕ್ಕಬಳ್ಳಾಪುರ,ನಂಜನಗೂಡು, ಬೆಂಗಳೂರು ನಗರ,ಗುಂಡ್ಲುಪೇಟೆಂ, ಸಿಐಡಿ ಹಾಗೂ ಹೈಕೋರ್ಟ್, ಅಂಕೋಲ ಮತ್ತಿತರ ಕಡೆಗಳಲ್ಲಿ ವೃತ್ತಿ ನಿರ್ವಹಿಸಿದ್ದರು.ವೃತ್ತಿಯಲ್ಲಿನ ದಕ್ಷತೆ ಮತ್ತು ಕರ್ತವ್ಯ ನಿಷ್ಠೆಗಾಗಿ ೨೦೧೬ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿದ್ದರು.೨೦೨೧ರಲ್ಲಿ ಡಿವೈಎಸ್ಪಿಯಾಗಿ ಭಡ್ತಿ ಹೊಂದಿದ್ದ ಅವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದಾದ ಬಳಿಕ ಪ್ರಸ್ತುತ ಅವರು ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಕೋಡಿಂಬಾಳ ಗ್ರಾಮದ ಬೆದ್ರಾಜೆ ರವಿರಾಜ ಆರಿಗ-ಭಾಗ್ಯವತಿ ದಂಪತಿಯ ಪುತ್ರ.