27 ನೇ ವಾರ್ಷಿಕೋತ್ಸವದಲ್ಲಿ ಚೇತನಾ ಹಾಸ್ಟಿಟಲ್ – ಎನ್ ಎ ಬಿ ಹೆಚ್ ಪ್ರಮಾಣ ಪತ್ರ ಹಸ್ತಾಂತರ ಕಾರ್ಯಕ್ರಮ

0

ಆಸ್ಪತ್ರೆಗೆ ಸಹಕರಿಸಿದವರಿಗೆ, ಸಿಬ್ಬಂದಿಗಳಿಗೆ ಗೌರವ – ಸಿಬ್ಬಂದಿಗಳಿಂದ ವೈದ್ಯರಿಗೆ ಸನ್ಮಾನ

ಎನ್‌ಎಬಿಹೆಚ್ ರೋಗಿಗೆ ಗುಣಮಟ್ಟ, ಸುರಕ್ಷತೆಯನ್ನು ಕೊಡುತ್ತದೆ- ಡಾ. ದೀಪಕ್ ಕುಮಾರ್ ರೈ
ಚೇತನ ಆಸ್ಪತ್ರೆಯ ಸಾಧನೆಯ ಸರಮಾಲೆಯಲ್ಲಿ ಇನ್ನೊಂದು ಹೂವು ಸೇರಿದೆ – ಬಲರಾಮ ಆಚಾರ್ಯ
ಡಾ.ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಕುಟುಂಬದ ವೈದ್ಯರಂತೆ – ಡಾ.ಯು.ಪಿ.ಶಿವಾನಂದ
ಚೇತನಾ ಆಸ್ಪತ್ರೆಯಿಂದ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ – ಜೋನ್ ಕುಟ್ಹೀನಾ
ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ – ಡಾ. ಎಂ.ಕೆ.ಪ್ರಸಾದ್
ಚೇತನ ಆಸ್ಪತ್ರೆ ನನ್ನ ತವರು – ಡಾ. ಪೂರ್ಣ ಸಿ ರಾವ್
ಎಷ್ಟೆ ರಾತ್ರಿಯಾದರೂ ತುರ್ತು ಸಂದರ್ಭದಲ್ಲಿ ಸೇವೆ ನೀಡಿದವರು – ಡಾ.ಶ್ರೀಕುಮಾರ್
ಆಸ್ಪತ್ರೆಯ ಮಾನ್ಯತೆ, ರೋಗಿಗಳಿಗೆ ಉತ್ತಮ ಸೌಲಭ್ಯ ನೀಡುವ ಉದ್ದೇಶ – ಡಾ. ಜೆ.ಸಿ.ಅಡಿಗ
ಶಿವಾನಂದರ ಸಪೋರ್ಟ್‌ನಿಂದ ಉತ್ತಮ ಪಂಚಾಗ ಸಿಕ್ಕಿತು – ಡಾ. ಶ್ರೀಕಾಂತ್ ರಾವ್

ಪುತ್ತೂರು: 27 ವರ್ಷಗಳ ಹಿಂದೆಯೇ ಪುತ್ತೂರಿನಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಿದ ಸಹಿತ ಹಲವು ಪ್ರಥಮಗಳಿಗೆ ಕಾರಣವಾಗಿರುವ ಪುತ್ತೂರಿನ ಚೇತನಾ ಆಸ್ಪತ್ರೆಯು 27 ನೇ ವರ್ಷದ ಸಂಭ್ರಮದಲ್ಲಿ ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಗಮನಿಸಿಕೊಂಡು ನೀಡುವ ‘ಎನ್.ಎ.ಬಿ.ಎಚ್’ ಪ್ರಮಾಣಪತ್ರಕ್ಕೆ ಹಸ್ತಾಂತರ ಕಾರ್ಯಕ್ರಮ ಜ.26 ರಂದು ಸಂಜೆ ಆಸ್ಪತ್ರೆಯ ವಠಾರದಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಎನ್.ಎ.ಬಿ.ಎಚ್ ಪ್ರಮಾಣ ಪತ್ರವನ್ನು ಆಸ್ಪತ್ರೆಯ ಆಡಳಿತ ಪಾಲುದಾರ ವೈದ್ಯರಾದ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರಿಗೆ ಹಸ್ತಾಂತರಿಸಿದರು.


ಎನ್‌ಎಬಿಹೆಚ್ ರೋಗಿಗೆ ಗುಣಮಟ್ಟ, ಸುರಕ್ಷತೆಯನ್ನು ಕೊಡುತ್ತದೆ:
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಕುಮಾರ್ ರೈ ಅವರು ಮಾತನಾಡಿ ಎನ್.ಎ.ಬಿ.ಹೆಚ್ ಪಡೆಯಲು ಒಂದಷ್ಟು ಮಾರ್ಗಸೂಚಿ ಇದೆ. ಆದರೆ ಇದು ರೋಗಿಗೆ ಗುಣಮಟ್ಟ ಮತ್ತು ಸುರಕ್ಷತೆಯನ್ನ ಕೊಡುವಲ್ಲಿ ಸಹಕಾರಿಯಾಗಲಿದೆ. ಇದರ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪ್ರಯೋಜನವಿದೆ. ಯಾಕೆಂದರೆ ಕಾಲಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅಪ್‌ಗ್ರೇಡ್ ಆಗುತ್ತಿರಬೇಕು. ಗುಣಮಟ್ಟದ ಸೇವೆ ಇಂಟರ್ ನ್ಯಾಷನಲ್ ಮಾದರಿಯಲ್ಲಿ ಇರಬೇಕಾಗುವುದು ಮುಖ್ಯ ಎಂದರು. ಪ್ರಸ್ತುತ ದಿನದಲ್ಲಿ ಇದು ಕೇವಲ ಖಾಸಗಿ ಆಸ್ಪತ್ರೆ ಮಾತ್ರವಲ್ಲ ಸರಕಾರಿ ಆಸ್ಪತ್ರೆಯಲ್ಲೂ ಕಾಯಕಲ್ಪ ಕಾರ್ಯಕ್ರಮ ಅಳವಡಿಸಲಾಗಿದೆ. ಇವತ್ತು ನಮಗೆ ಎನ್‌ಎಬಿಹೆಚ್ ಪ್ರಮಾಣ ಪತ್ರ ಸಿಕ್ಕಿದೆ ಎಂದು ಸುಮ್ಮನೆ ಇರಬಾರದು. ಇದನ್ನು ಮೈಂಟೆನೆನ್ಸ್ ಮಾಡಿಕೊಂಡು ಹೋಗಬೇಕು ಎಂದ ಅವರು ಆಸ್ಪತ್ರೆ ಮತ್ತು ವೈದ್ಯರು ಪ್ರೀತಿಯಿಂದ ಚಿಕಿತ್ಸೆ ನೀಡಬೇಕು. ಉದ್ದೇಶ ಇಟ್ಟುಕೊಂಡು ಕರ್ತವ್ಯ ಮಾಡಬಾರದು ಎಂದರು. ಸರಕಾರಿ ಆಸ್ಪತ್ರೆಯ ಕಾರ್ಯಕ್ರಮದಲ್ಲೂ ಖಾಸಗಿ ವೈದ್ಯರು ಸಹಕರಿಸುವಂತೆ ವಿನಂತಿಸಿದ ಅವರು ಈಗಾಗಲೇ ಸರಕಾರಿ ವ್ಯವಸ್ಥೆಯ ಅಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ಜೆ.ಸಿ. ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಕರೆದಾಗ ಬಂದು ಉತ್ತಮ ಮಾಹಿತಿ ನೀಡುತ್ತಾರೆ. ಇವತ್ತಿನ ದಿನದಲ್ಲಿ ಸರಕಾರಿ ಆಸ್ಪತ್ರೆಯು ಬಹಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸ್ವಂತ ಆಕ್ಸಿಜನ್ ಉತ್ಪಾದನೆ ಘಟಕವಿದೆ. ಐಸಿಯು ಇದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ನಮ್ಮ ಸರಕಾರಿ ಆಸ್ಪತ್ರೆಯ ಜೊತೆ ಕೈ ಜೋಡಿಸುವಂತೆ ವಿನಂತಿಸಿದರು.

ಚೇತನ ಆಸ್ಪತ್ರೆಯ ಸಾಧನೆಯ ಸರಮಾಲೆಯಲ್ಲಿ ಇನ್ನೊಂದು ಹೂವು ಸೇರಿದೆ:
ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಮಾತನಾಡಿ ಚಿಕ್ಕ ಬ್ಲಡ್ ಬ್ಯಾಂಕ್‌ನ್ನು ಮಾಡಬೇಕಾದರೆ ಅದರ ಅನುಷ್ಠಾನಕ್ಕೆ ಎಷ್ಟು ಕಷ್ಟ ಇದೆ ಎಂದು ನಾನು ಸ್ವತಃ ಕಂಡು ಕೊಂಡಿದ್ದೆನೆ. ಹಾಗಿರುವಾಗ ಒಂದು ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ನೋಡಿ ಪ್ರಮಾಣ ಪತ್ರ ಕೊಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದನ್ನು ಸಾಧಿಸಿದ ಚೇತನ ಆಸ್ಪತ್ರಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಹಾಗೆ ರೋಗಿಗಳ ಪೈಕಿ ಓರ್ವ ರೋಗಿಗೆ ತೊಂದರೆ ಆದರೆ ಅದು ಕೂಡಾ ವೈದ್ಯರ ತಪ್ಪು ಆಗದೇ ಇದ್ದರೂ ಅಲ್ಲಿ ರೋಗಿಯ ಸಂಬಂಧಿಕರ ಪ್ರಶ್ನೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಆದರೆ 27 ವರ್ಷದಲ್ಲಿ ಚೇತನಾ ಆಸ್ಪತ್ರೆ ತನ್ನ ಜನಪ್ರಿಯತೆಯನ್ನು ಹೆಚ್ಚು ಹೆಚ್ಚು ಮಾಡಿಕೊಂಡು ಹೋಗಿದೆ. ಅದು ಇದರ ದೊಡ್ಡ ಸಾಧನೆ. ಈ ಸಾಧನೆಯ ಸರಮಾಲೆಯಲ್ಲಿ ಎನ್‌ಎಬಿಎಹೆಚ್ ಪ್ರಮಾಣ ಲಭಿಸಿರುವುದು ಇನ್ನೊಂದು ಹೂವು ಸೇರಿದಂತಾಗಿದೆ ಎಂದರು. ಆರೋಗ್ಯ ವಿಮೆಯ ಮೂಲಕವೇ ಇವತ್ತಿನ ಆರೋಗ್ಯ ಸುಧಾರಿಕೆ ಆಗುತ್ತಿದೆ. ಇಂತಹ ಸೌಲಭ್ಯ ಪಡೆಯಲು ಆಸ್ಪತ್ರೆಗಳು ಎನ್‌ಎಬಿಹೆಚ್ ಪ್ರಮಾಣ ಪತ್ರ ಪಡೆಯುವುದು ಬಹಳ ಮುಖ್ಯ ಎಂದರು.


ಡಾ.ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಕುಟುಂಬದ ವೈದ್ಯರಂತೆ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಇವತ್ತು ಡಾ.ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರ ಹೆಸರು ದ.ಕ.ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ. ಯಾಕೆಂದರೆ ಅವರ ವೈದ್ಯಕೀಯ ಸೇವೆ ಮತ್ತು ನಿಲುವು ಇವತ್ತಿಗೂ ಅವರ ಜೊತೆ ಇದೆ. ಒಬ್ಬ ವ್ಯಕ್ತಿಯಾಗಿ, ವೈದ್ಯರಾಗಿ, ಆಸ್ಪತ್ರೆಯಲ್ಲಿ ಜನರ ಮನಸ್ಸಿನಲ್ಲಿರುವುದು ಕಷ್ಟ. ಆದರೆ ಡಾ. ಅಡಿಗ ಮತ್ತು ಡಾ.ಶ್ರೀಕಾಂತ್ ಅವರು ಅದನ್ನು ಸಾಧಿಸಿದ್ದಾರೆ ಎಂದರು. ಸುಳ್ಯದಲ್ಲಿ ನಾನು ವೈದ್ಯನಾಗಿದ್ದ ಸಂದರ್ಭದಲ್ಲಿ ಅವರನ್ನು ನಮ್ಮ ಆಸ್ಪತ್ರೆಗೆ ಬರಮಾಡಿಕೊಂಡೆ. ಆಗ ಅವರ ಹೆಸರಿನಲ್ಲಿ ನಮ್ಮ ಆಸ್ಪತ್ರೆಗೆ ರೋಗಿಗಳು ಬರಲು ಆರಂಭಿಸಿದ್ದರು. ಹಾಗೆ ಮುಂದೆ ಡಾ.ಶ್ರೀಕಾಂತ್ ಅವರು ಕೂಡಾ ಜೊತೆಗೆ ಸೇರಿದರು. ಇವರಿಬ್ಬರು ಕೂಡಾ ಪುತ್ತೂರು, ಸುಳ್ಯ, ಈಶ್ವರಮಂಗಲ, ವಿಟ್ಲ ಪರಿಸರದಲ್ಲಿ ಸೇವೆಯ ಮೂಲಕ ಜನರನ್ನು ತಲುಪುವ ಕೆಲಸ ಮಾಡಿದರು. ಅದೇಷ್ಟೋ ಮಂದಿ ಚಿಕಿತ್ಸೆಗೆ ಮಂಗಳೂರಿಗೆ ಹೋಗುತ್ತಿದ್ದವರು ತಜ್ಞ ವೈದ್ಯರಾದ ಡಾ. ಅಡಿಗ ಮತ್ತು ಶ್ರೀಕಾಂತ್ ಅವರು ಪುತ್ತೂರಿನಲ್ಲೇ ಇದ್ದಾರೆಂದು ತಿಳಿದ ಬಳಿಕ ಮಂಗಳೂರಿಗೆ ಹೋಗುವುದನ್ನು ನಿಲ್ಲಿಸಿದರು. ಇವರು ರೋಗಿಯ ಖಾಯಿಲೆಯ ಜೊತೆ ಯಾರು ಎಂಬುದನ್ನು ಗುರುತಿಸುತ್ತಿದ್ದರು. ಅದು ಬಹಳ ದೊಡ್ಡ ಸಾಧನೆ. ಇದು ವೈದ್ಯರ ದುಡ್ಡಿನ ಚಿಕಿತ್ಸೆಯಲ್ಲ. ಬದಲಾಗಿ ಮಾನವೀಯತೆ ಮತ್ತು ಸಂಬಂಧಗಳು. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಡಾ. ಜೆ.ಸಿ ಅಡಿಗರು ಮತ್ತು ಡಾ. ಶ್ರೀಕಾಂತರು ಒಬ್ಬ ಕುಟುಂಬದ ವೈದ್ಯರಂತೆ. ಯಾಕೆಂದರೆ ಅವರಿಗೆ ಕುಟುಂಬ ರೋಗಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ.
ವೈದ್ಯಕೀಯ ವೃತ್ತಿಯಲ್ಲಿ ಚಾಲಕೀತನ ಅದು ಬೇರೆಯೇ ಆಗಿರುತ್ತದೆ. ಆದರೆ ಆತ್ಮೀಯತೆ, ನಂಬಿಕೆ ವಿಶ್ವಾಸ ಇದು ಅಡಿಗರು ಮತ್ತು ಶ್ರೀಕಾಂತರಲ್ಲಿದೆ ಎಂದ ಅವರು ಇದು ಆಸ್ಪತ್ರೆಗೂ ಏನೋ ತೊಂದರೆ ಆದಾಗಲೂ ಜನರು ವೈದ್ಯರನ್ನು ಒಳ್ಳೆಯವರೆಂದೇ ಗುರುತಿಸುತ್ತಾರೆ. ಇದು ಸಂಬಂಧವನ್ನು ವೃದ್ಧಿಸುತ್ತದೆ ಎಂದರು.

ಚೇತನಾ ಆಸ್ಪತ್ರೆಯಿಂದ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ:
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟ್ಹೀನಾ ಅವರು ಮಾತನಾಡಿ ಆರೋಗ್ಯಕ್ಕೆ ಸಂಬಂಧಿಸಿ ದೂರಾಲೋಚನೆಯೊಂದಿಗೆ ಡಾ. ಜೆ.ಸಿ ಅಡಿಗ, ಡಾ. ಶ್ರೀಕಾಂತ್ ಅವರು ಆರಂಭಿಸಿದ ಆಸ್ಪತ್ರೆಯಿಂದ ಇವತ್ತು ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಹೆಸರು ಮಾಡಲು ಸುಲಭವಿಲ್ಲ. ಆಸ್ಪತ್ರೆ ಮಾಡಿದ ಮೇಲೆ ಅಲ್ಲಿ ರೋಗಿಗೆ ಸಿಗುವ ಚಿಕಿತ್ಸಾ ಸೌಲಭ್ಯ ಉತ್ತಮವಾಗಿರಬೇಕು. ಇದನ್ನು ಇತರರಿಗೆ ನಾವು ಹೇಳಬೇಕು. ಆದರೆ ಅಲ್ಲಿ ಏನಾದರು ಸ್ವಲ್ಪ ಹೆಚ್ಚು ಕಡಿಮೆ ಆದರೆ ಹೇಳಬಾರದು. ಅದನ್ನು ಪರಾಂಬಿರಿಸಿ ನೋಡಬೇಕು. ಆಗ ನಾವು ಉತ್ತಮ ಕೆಲಸ ಮಾಡಿದಂತೆ. ಈ ಇಬ್ಬರು ಯುವಕರು 25 ವರ್ಷ ಹಿಂದೆ ನಿರ್ಮಾಣ ಮಾಡಿದ ಆಸ್ಪತ್ರೆ ಜನಮೆಚ್ಚುಗೆ ಪಡೆದಿದೆ. ಇವತ್ತು ಪುತ್ತೂರಿನ ಮಟ್ಟಿಗೆ ವೈದ್ಯರು ಉತ್ತಮ ಸೇವೆ ಕೊಡುವಂತಹವರಾಗಿದ್ದಾರೆ ಎಂದ ಅವರು ವೈದ್ಯರ ಕುರಿತು ಕವನ ಹಾಡಿದರು.

ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ :
ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರು ಮಾತನಾಡಿ ಅಡಿಗರು, ಶ್ರೀಕಾಂತದ್ವಯರು ಮೋಸ್ಟ್ ಇಂಟಲಿಜಂಟ್ ಮ್ಯಾನ್, ಮೋಸ್ಟ್ ಎನ್‌ಸೈಕ್ಲೋಪಿಡಿಯಾ. ನಮಗೇನಾದರೂ ಸಂಶಯ ಬಂದಾಗ ನಾವು ಕೇಳುವುದು ಅಡಿಗರನ್ನೇ ಎಂದ ಅವರು ಇಬ್ಬರು ವೈದ್ಯರು ಊರಿಗೆ ಒಳ್ಳೆಯ ಸೇವೆ ಮಾಡಿದ್ದಾರೆ. ಇವತ್ತು ಅನೇಕ ಸಂದರ್ಭದಲ್ಲಿ ನಮಗೆಲ್ಲರಿಗೂ ತೊಂದರೆ ಆಗಿದೆ. ವೈದ್ಯರಿಗೂ ಆಪತ್ತು ಬರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯಕೀಯದಲ್ಲಿ ಸಂಕಟ ಬಂದಾಗ ನಾವೆಲ್ಲ ಒಂದಾಗಿದ್ದೇವೆ ಎಂದರು.


ಚೇತನ ಆಸ್ಪತ್ರೆ ನನ್ನ ತವರು:
ಡಾ.ಪೂರ್ಣಾ ಸಿ ರಾವ್ ಅವರು ಮಾತನಾಡಿ ಹಿಂದೆ ಯಾವ ಕೇಸು ತೆಗೆಯುವಾಗ ಭಯವಿರಲಿಲ್ಲ. ರೋಗಿಯನ್ನು ಬದುಕಿಸುವ ಚಿಂತನೆ ನಮ್ಮ ಮುಂದಿತ್ತು. ಇವತ್ತು ನಾವು ಕೇಸು ತೆಗೆದು ಕೊಳ್ಳುವ ಮುಂಚೆ ಇದರಿಂದ ನಮಗೆನಾದರೂ ಪೆಟ್ಟು ಬೀಳುತ್ತದೆಯೋ ಎಂದು ಚಿಂತನೆ ಮಾಡುವ ಪರಿಸ್ಥಿತಿ ವೈದ್ಯ ಸಮೂಹದ ಮುಂದಿರುವ ಪ್ರಶ್ನೆಯಾಗಿದೆ. ಆದ್ದರಿಂದ ಇಂತಹ ಪರಿಸ್ಥಿತಿಗೆ ಗಟ್ಟಿಯಾದ ಕಾನೂನು ಬೇಕು ಎಂದರು. ಇವತ್ತು ಮಂಗಳೂರಿಗೆ ಗೈನಕಾಲೋಜಿಸ್ಟ್‌ಗೆ ಕಂಪೇರ್ ಮಾಡಿದರೆ ನಾವು ಆರ್ಥಿಕವಾಗಿ ಹಿಂದುಳಿದ್ದಿದ್ದರೂ ಆದರೆ ರೋಗಿಯ ಪ್ರೀತಿಯಲ್ಲಿ ನಾವು ತುಂಬಾ ಎತ್ತರದಲ್ಲಿದ್ದೇವೆ. ಹಾಗಾಗಿ ಪುತ್ತೂರಿನ ಜನತೆಗೆ ನನ್ನ ಹೃತ್ಪೂರ್ವಕ ವಂದನೆ ಎಂದ ಅವರು ನಾನು ಈಗ ಪೂರ್ಣಚಂದ್ರ ಕ್ಲೀನಿಕ್ ಮಾಡಿದ್ದರೂ ನನ್ನ ತವರು ಚೇತನ ಆಸ್ಪತ್ರೆಯೇ ಆಗಿದೆ ಎಂದರು.

ಎಷ್ಟೆ ರಾತ್ರಿಯಾದರೂ ತುರ್ತು ಸಂದರ್ಭದಲ್ಲಿ ಸೇವೆ ನೀಡಿದವರು:
ಡಾ. ಶ್ರೀಕುಮಾರ್ ಅವರು ಮಾತನಾಡಿ ಹಣ ಮಾಡಲು ಚಿಕಿತ್ಸೆ ಮಾಡಬೇಡಿ, ಗುಣ ಮಾಡಲು ಚಿಕಿತ್ಸೆ ಮಾಡಿ, ಆಗ ಹಣ ತನ್ನಿಂದ ತಾನೆ ಬರುತ್ತದೆ ಈ ಮಾತು ಬಹಳ ಸತ್ಯದ ಮಾತು. ಇದಕ್ಕೆ ಪೂರಕವಾಗಿ ಡಾ. ಜೆ.ಸಿ.ಅಡಿಗ ಮತ್ತು ಡಾ. ಶ್ರೀಕಾಂತ್ ಅವರು ಉತ್ತಮ ಸೇವೆ ಮಾಡಿದ್ದಾರೆ. ಎಷ್ಟೇ ರಾತ್ರಿಯಾದರೂ ತಕ್ಷಣ ತುರ್ತು ಸಂದರ್ಭದಲ್ಲಿ ಬಂದು ರೋಗಿಯನ್ನು ಗುಣಪಡಿಸಿದ್ದಾರೆ ಎಂದರು.

ಆಸ್ಪತ್ರೆಯ ಮಾನ್ಯತೆ, ರೋಗಿಗಳಿಗೆ ಉತ್ತಮ ಸೌಲಭ್ಯ ನೀಡುವ ಉದ್ದೇಶ:
ಚೇತನಾ ಆಸ್ಪತ್ರೆಯ ಪಾಲುದಾರ ಡಾ.ಜೆ ಸಿ ಅಡಿಗ ಅವರು ಸ್ವಾಗತಿಸಿ ಮಾತನಾಡಿ ಕೇವಲ 25 ಬೆಡ್ ನ ಆಸ್ಪತ್ರೆಯಿಂದ ಪೂರ್ಣ ಪ್ರಮಾಣದ 50 ಬೆಡ್ ಅನ್ನು ಆಸ್ಪತ್ರೆಯಲ್ಲಿ ಹೊಂದಿದ್ದೇವೆ. 27 ವರ್ಷಗಳ ಹಿಂದೆಯೇ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ತುರ್ತು ಚಿಕಿತ್ಸಾ ಘಟಕ, ನವಜಾತ ಶಿಶುಗಳ ಪಾಲನಾ ಘಟಕ, ಸೆಂಟರ್ ಆಕ್ಸಿಜನ್ ವ್ಯವಸ್ಥೆ, 24 ಗಂಟೆ ಕಾರ್ಯಾಚರಣೆ ಮಾಡುವ ಎಕ್ಸ್-ರೇ ಘಟಕ, ಪ್ರಯೋಗಾಲಯ, ಔಷಧಿ ವಿಭಾಗ, ರೋಗಿಗಳ ತುರ್ತು ಅನುಕೂಲಕ್ಕಾಗಿ ರಾತ್ರಿ ಪಾಳಿ ವೈದ್ಯರ ಸೇವೆ. ಹೀಗೆ ಹಲವು ಸೌಲಭ್ಯಗಳನ್ನು ರೋಗಿಗಳ ಅನುಕೂಲತೆಗಾಗಿ ಮಾಡಿದ್ದೆವು. ಎನ್‌ಎಬಿಹೆಚ್ ಪಡೆಯುವುದು ಬಹಳ ಕ್ಲಿಷ್ಟಕರವಾದ ಕೆಲಸ. ಕೋವಿಡ್ ಸಂದರ್ಭದಲ್ಲಿ ಈ ಕಾರ್ಯಕ್ಕೆ ಕೈ ಹಾಕಿದ್ದೆವು. ಅದು ಇವತ್ತು ಫಲ ಕೊಟ್ಟಿದೆ. ಆಸ್ಪತ್ರೆಯ ಮಾನ್ಯತೆ ಮತ್ತು ರೋಗಿಗಳಿಗೆ ಇದರಿಂದ ಉತ್ತಮ ಸೌಲಭ್ಯ ದೊರೆಯಲಿದೆ ಎಂದ ಅವರು ಮುಂದೆ 2 ವರ್ಷದ ಬಳಿಕ ಎನ್‌ಎಬಿಹೆಚ್ ನಿಂದ ಪುನರ್ ಪರಿಶೀಲನೆ ನಡೆಯುತ್ತದೆ. ಎಲ್ಲಾ ವ್ಯವಸ್ಥೆಗಳ ಅಡಿಯಲ್ಲಿ ನಮ್ಮ ಆಸ್ಪತ್ರೆಗೆ ಪಾರ್ಕಿಂಗ್ ಸೌಲಭ್ಯ ನೀಡಲು ಆಗಲಿಲ್ಲ. 25 ವರ್ಷದ ಹಿಂದೆ ನಮಗೆ ಪಾರ್ಕಿಂಗ್ ವ್ಯವಸ್ಥೆಗೆ ಸಲಹೆಯೂ ಸಿಗಲಿಲ್ಲ. ಸೀತಾರಾಮ ಶೆಟ್ಟಿಯವರ ಮಕ್ಕಳು ಪ್ರಸ್ತುತ ಕಾಲದಲ್ಲಿ ನಮಗೆ ಪಾರ್ಕಿಂಗ್‌ಗೆ ಸಹಕಾರ ನೀಡಿದ್ದಾರೆ ಎಂದ ಅವರು ಆಸ್ಪತ್ರೆ ನಿರ್ಮಾಣದ ವೇಳೆ ಸಹಕರಿಸಿದವರನ್ನು ನೆನಪಿಸಿದರು.

ಶಿವಾನಂದರ ಸಪೋರ್ಟ್‌ನಿಂದ ಉತ್ತಮ ಪಂಚಾಗ ಸಿಕ್ಕಿತು:
ಚೇತನಾ ಆಸ್ಪತ್ರೆಯ ಪಾಲುದಾರ ಡಾ. ಶ್ರೀಕಾಂತ್ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಾನು ಬಾಂಬೆಯಲ್ಲಿ ಸುಮಾರು 3 ವರ್ಷ ಕೆಲಸ ಮಾಡಿ ಪುತ್ತೂರು ಸರ್ವೆ ಮಾಡಲು ಬಂದಿದ್ದೆವು. ಹಾಗೆ ಬಂದಾಗ ಡಾ. ಅಡಿಗರು ಸಿಕ್ಕಿದ್ದರು. ಆ ಸಮದಯಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿಗೆ ಯಾರು ಕೂಡಾ ಮಕ್ಕಳ ವೈದ್ಯರು ಇರಲಿಲ್ಲ. ಈ ಕುರಿತು ಅವರು ಪ್ರಸ್ತಾವನೆ ಇಟ್ಟಿದ್ದರು. ಹಾಗೆ ಡಾ. ಯು.ಪಿ ಶಿವಾನಂದ ಅವರ ಪರಿಚಯ ಮಾಡಿದರು. ಡಾ. ಯು.ಪಿ ಶಿವಾನಂದ ಅವರು ನಮಗೆ ಅವರ ಪದ್ಮಯ್ಯ ಗೌಡ ಕ್ಲೀನಿಕ್‌ನಲ್ಲಿ ಒಂದೆ ಒಂದು ಹಣ ಪಡೆಯಲಿಲ್ಲ. 10 ವರ್ಷ ನಾವು ಅಲ್ಲೇ ನಮ್ಮ ಕರ್ತವ್ಯ ಮಾಡಿದ್ದೆವು. ಹಾಗಾಗಿ ಶಿವಾನಂದರ ಸಪೋರ್ಟ್ ನಿಂದ ಉತ್ತಮ ಪಂಚಾಗ ಸಿಕ್ಕಿತು. ಇದರಿಂದಾಗಿ ಪ್ರತಿ ಮನೆ ಮನೆಗೂ ಸೇವೆ ಕೊಡುವ ಅವಕಾಶ ಸಿಕ್ಕಿತು. ಆ ಬಳಿಕ ಸ್ವಂತ ಆಸ್ಪತ್ರೆ ನಿರ್ಮಾಣ ಮಾಡಿದ್ದೆವು. ಈ ಸಂದರ್ಭ ಹಲವಾರು ಮಂದಿ ಸಹಕಾರ ನೀಡಿದರು. ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆ ಕಲ್ಪಿಸಿದೆವು. ಉತ್ತಮ ವೈದ್ಯರು ನಮ್ಮ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.


ಗೌರವ, ಸನ್ಮಾನ:
ಆಸ್ಪತ್ರೆಯ ನಿರ್ಮಾಣದಿಂದ ಹಿಡಿದು ಇಲ್ಲಿನ ತನಕ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳನ್ನು ಮತ್ತು ಮಿತ್ರರುಗಳನ್ನು ಡಾ. ಜೆ.ಸಿ. ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರು ಗೌರವಿಸಿದರು. ಎನ್‌ಎಬಿಹೆಚ್ ಪರೀಕ್ಷಾ ಕಾರ್ಯಕ್ರಮ ನಡೆಯುತಿದ್ದಾಗ ಸಹಕರಿಸಿದ ವೈದ್ಯರನ್ನು ಗೌರವಿಸಲಾಯಿತು. ಆಸ್ಪತ್ರೆಯ ಹಿರಿಯ ಸಿಬ್ಬಂದಿಗಳು ಮತ್ತು ಉತ್ತಮ ಸೇವೆ ನೀಡುತ್ತಿರುವ ಸಿಬ್ಬಂದಿಗಳನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಗಳು ಸೇರಿಕೊಂಡು ಡಾ. ಜೆ.ಸಿ ಅಡಿಗ ಮತ್ತು ಡಾ. ಶ್ರೀಕಾಂತ್ ರಾವ್ ಅವರನ್ನು ಸನ್ಮಾನಿಸಿದರು. ನಮನ, ದಿವ್ಯಶ್ರೀ ಪ್ರಾರ್ಥಿಸಿದರು. ಡಾ. ಜೆ ಸಿ ಅಡಿಗ ಸ್ವಾಗತಿಸಿದರು. ಸಿಬ್ಬಂದಿ ಹರಿಣಾಕ್ಷಿ ವಂದಿಸಿದರು. ಡಾ. ಚಂದ್ರಶೇಖರ್, ಡಾ.ಪೂರ್ಣ ಸಿ ರಾವ್ ಅತಿಥಿಗಳನ್ನು ಗೌರವಿಸಿದರು. ನಿವೃತ್ತ ಮುಖ್ಯಗುರು ಸುರೇಶ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.25 ವರ್ಷಗಳ ಸೇವೆ ಸಲ್ಲಿಸಿ ಕೆಲವು ದಿನದ ಹಿಂದೆ ನಿಧನರಾದ ಕೃಷ್ಣಯ್ಯ ಶೆಟ್ಟಿಯವರಿಗೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಕಾರ್ಯಕ್ರಮ ನಡುವೆ ಮಾಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪುತ್ತೂರಿಗೆ ನಾವಿಬ್ಬರು ಬರಲು ಮುಖ್ಯ ಕಾರಣ ಡಾ. ಯು.ಪಿ.ಶಿವಾನಂದ
1983 ರಲ್ಲಿ ಸುಳ್ಯದಲ್ಲಿ ಸರಕಾರಿ ಆಸ್ಪತ್ರೆಯಲ್ಲಿದ್ದ ವೇಳೆ ಡಾ.ಯು.ಪಿ.ಶಿವಾನಂದ ಅವರು ಗಾಯತ್ರಿ ನರ್ಸಿಂಗ್ ಹೋಮ್ ಮಾಡಿದ್ದರು. ಅಲ್ಲಿಗೆ ನಾನು ಹೋಗುತ್ತಿದ್ದೆ. ನನ್ನ ಪದವಿಗೆ ತಕ್ಕಂತೆ ಆ ಸಮಯದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸಲಕರಣೆ ಇಲ್ಲದ ಹಿನ್ನೆಲೆಯಲ್ಲಿ. ಖಾಸಗಿಯಾಗಿ ಪ್ರ್ಯಾಕ್ಟಿಸ್ ಮಾಡಲು ಹೊರಟ್ಟಿದ್ದೆ. ಆಗ ಡಾ.ಯು.ಪಿ.ಶಿವಾನಂದ ಅವರು ಪುತ್ತೂರಿಗೆ ಬರಲು ಸಲಹೆ ನೀಡಿದರು. ಅವರ ಸಲಹೆಯಂತೆ ಅವರ ಪುತ್ತೂರಿನ ಪದ್ಮಯ್ಯ ಗೌಡ ಕ್ಲೀನಿಕ್‌ನಲ್ಲಿ ನಾನು ಮತ್ತು ಪುತ್ತೂರಿನ ಪ್ರಥಮ ಮಕ್ಕಳ ತಜ್ಞ ಶ್ರೀಕಾಂತ್ ರಾವ್ ಅವರು ಜೊತೆಯಾಗಿ ವೈದ್ಯಕೀಯ ಸೇವೆ ಆರಂಭಿಸಿದ್ದೆವು. ಪುತ್ತೂರು, ಈಶ್ವರಮಂಗಲ, ವಿಟ್ಲ, ಕಲ್ಲಡ್ಕದಲಿ ಮೆಡಿಕಲ್ ಕ್ಯಾಂಪ್ ಮಾಡಿ ಕೆಲವು ವರ್ಷದ ನಂತರ ಪುತ್ತೂರಿನಲ್ಲಿ ಆಸ್ಪತ್ರೆ ತೆರೆಯುವ ಚಿಂತನೆ ಮಾಡಿ ಅದನ್ನು ಸಾಕಾರಗೊಳಿಸಿದೆವು. ಹಾಗಾಗಿ ಪುತ್ತೂರಿಗೆ ನಾನು ಮತ್ತು ಶ್ರೀಕಾಂತ್ ಬರಲು ಮುಖ್ಯ ಕಾರಣ ಡಾ. ಯು.ಪಿ.ಶಿವಾನಂದರು.
ಡಾ. ಜೆ.ಸಿ. ಅಡಿಗ

ಫ್ಯಾಮಿಲಿ ವೈದ್ಯರ ಸಲಹೆ ಪಡೆದೇ ಹೆಚ್ಚಿನ ಚಿಕಿತ್ಸೆಗೆ ತೆರಳಿ
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯಾರೂ ಬೆಂಗಳೂರಿಗೆ ಹೋಗುವುದಾದರೆ ಪುತ್ತೂರಿನ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ. ಯಾವತ್ತು ಫ್ಯಾಮಿಲಿ ವೈದ್ಯರ ಸಲಹೆ ಮುಖ್ಯ. ಸ್ಪೆಷಾಲಿಟಿ ವೈದ್ಯರಿಗೆ ನಿಮ್ಮ ಕುಟುಂಬದ  ವಿಚಾರ ಗೊತ್ತಿಲ್ಲ. ಆದರೆ ಕುಟುಂಬದ ಸಂಬಂಧವನ್ನು ಇರಿಕೊಂಡಿರುವ ವೈದ್ಯರ ಸಂಪ್ರದಾಯ ಪುತ್ತೂರಿನಲ್ಲಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಎಲ್ಲಾ ಆಸ್ಪತ್ರೆಗಳು ಉತ್ತಮ ಸೇವೆ ನೀಡುತ್ತವೆ.
ಡಾ. ಯು.ಪಿ.ಶಿವಾನಂದ

ಚೇತನಾ ಅಸ್ಪತ್ರೆಯಲ್ಲಿ ಲಭ್ಯವಿರುವ ವಿಶೇಷ ಸೇವೆಗಳು:
24 ಗಂಟೆ ಕಾರ್ಯಾಚರಿಸುವ ವೈದ್ಯಕೀಯ ಸೇವೆಗಳಲ್ಲಿ ಮುಖ್ಯವಾದವುಗಳೆಂದರೆ, ಥೈರೋಕೇರ್ ಡಯಾಗ್ನಾಸ್ಟಿಕ್ನ ಸಹಯೋಗದೊಂದಿಗೆ ಕಂಪ್ಯೂಟರಿಕೃತ ಲ್ಯಾಬೊರೇಟರಿ, ಎಕ್ಸ್-ರೇ 300 ಎಂ.ಎ., ಎಕ್ಸ್-ರೇ ಯುನಿಟ್ ಮತ್ತು ಸಿ ಆರ್ಮ್ ಡಿಜಿಟಲ್ ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಕಲರ್ ಡಾಪ್ಲರ್, ಡಾಪ್ಲರ್ ಸ್ಕ್ಯಾನ್, ಫಾರ್ಮಸಿ ವಿಭಾಗ, ಅನುಭವಿ ತಜ್ಞ ವೈದ್ಯೆಯರ ಲಭ್ಯತೆಯೊಂದಿಗೆ ಸುಸಜ್ಜಿತ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ, ಇಂಕ್ಯುಬೇಟರ್, ಫೊಟೋಥೆರಪಿ ಮತ್ತು ವೆಂಟಿಲೇಟರ್ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ತೀವ್ರ ನಿಗಾ ವಿಭಾಗ, ಹೃದಯ ಸ್ಕ್ಯಾನಿಂಗ್ಗೆ ಇಕೋಕಾರ್ಡಿಯಗ್ರಾಫಿ, ಅಸ್ತಮಾ ಚಿಕಿತ್ಸೆಗೆ ಸ್ಪೇರೋಮೀಟರ್, ವಿಡಿಯೋ ಎಂಡೋಸ್ಕೋಪಿ, ಕೋಲೊನೋಸ್ಕೋಪಿ, ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಮೂತ್ರ ಜನಕಾಂಗದ ಶಸ್ತ್ರಚಿಕಿತ್ಸೆಗಾಗಿ ಕ್ರಯೋಸರ್ಜರಿ, ಫೇಕೋ ಶಸ್ತ್ರಚಿಕಿತ್ಸೆ ಸೌಲಭ್ಯದೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಇವೆಲ್ಲದರ ಜೊತೆಯಲ್ಲಿ ೨೪ ಗಂಟೆ ಕಾರ್ಯನಿರ್ವಹಿಸುವ ಆಂಬುಲೆನ್ಸ್ ಸೇವೆ ಹಾಗೂ ಇಲೆಕ್ಟ್ರೋಕನ್ವಲ್ಸಿವ್ ಥೆರಪಿ ಸೌಲಭ್ಯವೂ ಇಲ್ಲಿದೆ. ಇನ್ನು ಮಲ್ಟಿಪ್ಯಾರಾ ಮಾನಿಟರ್ ಸೌಲಭ್ಯದೊಂದಿಗೆ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿ.. ಹೀಗೆ ನಗರದ ಪ್ರಮುಖ ಭಾಗದಲ್ಲಿ ಸ್ಥಾಪನೆಗೊಂಡಿರುವ ಚೇತನಾ, ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು, ನುರಿತ ತಜ್ಞವೈದ್ಯರು, ರೋಗಿಗಳಿಗೆ ಆಪ್ತಪಾಲನೆಯನ್ನು ಒದಗಿಸುವ ಸಿಬ್ಬಂದಿವರ್ಗ, ಇವರೆಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿ ‘ಚೇತನಾ’ 25 ಸಂವತ್ಸರಗಳ ಬಳಿಕವೂ ರೋಗಿಗಳ ಪಾಲಿಗೆ ಆಪ್ತಚೇತನಾಗಿ, ಆರೋಗ್ಯ ಚೇತರಿಕೆಯ ಹೆಗ್ಗುರುತಾಗಿ ಇಲ್ಲಿನವರ ಮನದಲ್ಲಿ ನೆಲೆಯಾಗಿದೆ ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here