ಜನರಿಗೆ ತೊಂದರೆ ಕೊಡುವ ಉದ್ದೇಶ ಅಲ್ಲ: ಕೋರಂ ಕೊರತೆಯಿಂದ ಸಭೆ ಮುಂದಕ್ಕೆ-ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುವುದು ಬಿಡಲಿ- ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಸ್ಪಷ್ಟನೆ

0

 

ಉಪ್ಪಿನಂಗಡಿ: ಜನಪ್ರತಿನಿಧಿಗಳಾಗಿ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದನೆ ನೀಡಬೇಕೆನ್ನುವುದು ನಮಗೆ ಗೊತ್ತು. ಸಾಮಾನ್ಯ ಸಭೆಯಲ್ಲಿ ಸಭಾ ತ್ಯಾಗ ಮಾಡುವ ಉದ್ದೇಶ ಇರಲಿಲ್ಲ. ಆದರೆ ಕೋರಂ ಇಲ್ಲದ್ದಕ್ಕೆ ನಾನು ಸಭೆಯನ್ನು ಮುಂದೂಡಿದ್ದೇನೆ. ಇದರ ಹಿಂದೆ ಜನಸಾಮಾನ್ಯರಿಗೆ ಕಷ್ಟ ಕೊಡುವ ಉದ್ದೇಶ ಇರಲಿಲ್ಲ. ಆದರೆ ಇಂತಹ ಸಣ್ಣ ಸಣ್ಣ ವಿಚಾರವನ್ನು ಹಿಡಿದುಕೊಂಡು ಕಾಂಗ್ರೆಸ್‌ನವರು ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ತಿಳಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಗುವೊಂದರ ಚಿಕಿತ್ಸಾ ವೆಚ್ಚಕ್ಕಾಗಿ ಗೆಳೆಯರ ಬಳಗವೊಂದು ಕಬಡ್ಡಿ ಪಂದ್ಯಾಟ ಆಯೋಜಿಸಿ, ಅದರ ಬ್ಯಾನರ್ ಅಳವಡಿಸಲು ಗ್ರಾ.ಪಂ.ಗೆ ಪರವಾನಿಗೆಗಾಗಿ ಬಂದಿತ್ತು. ಅವರ ಅರ್ಜಿಯನ್ನು ನಾನು ಸಿಬ್ಬಂದಿಗೆ ನೀಡಿ, ಮಾನವೀಯತೆಯ ದೃಷ್ಟಿಯಿಂದ ಇದಕ್ಕೆ ಶುಲ್ಕ ಬೇಡ ಎಂದಿದ್ದೆ. ಶುಲ್ಕ ಕಟ್ಟಬೇಕಾಗಿದ್ದರೂ ನಾನೇ ಕಟ್ಟುತ್ತೇನೆ ಅಂತ ಹೇಳಿದ್ದೆ. ಇದೆಲ್ಲಾ ಗೊತ್ತಿದ್ದರೂ ಪಿಡಿಒ ಹೇಳಿದರೆಂದು ನನ್ನಲ್ಲಿ ಒಂದು ಮಾತು ಹೇಳದೇ ಸಿಬ್ಬಂದಿ ತೆರವಿಗೆ ಅಲ್ಲಿಗೆ ಹೋಗಿದ್ದಾಗ, ಸಾರ್ವಜನಿಕರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಪಿಡಿಒ ಅವರು ಕೂಡಾ ಅಲ್ಲಿಗೆ ಹೋಗಿದ್ದು, ಸಾರ್ವಜನಿಕರ ವಿರುದ್ಧವೇ ಏರಿ ಹೋಗಿದ್ದಾರೆ. ನಾನು ಸ್ಥಳಕ್ಕೆ ತೆರಳಿ ನಾನೇ ಶುಲ್ಕ ಕಟ್ಟುತ್ತೇನೆ ಎಂದರೂ, ಅವರು ಕಿವಿಗೆ ಹಾಕಿಕೊಳ್ಳದೇ ಅಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಲು ಕಾರಣರಾದರು. ಆಗ ಅಲ್ಲಿದ್ದ ಅಲ್ಲಿನ ವಾರ್ಡ್ ಸದಸ್ಯ ಕೂಡಾ ಪಿಡಿಒ ಅವರ ಅತಿರೇಕದ ವರ್ತನೆಯನ್ನು ವಿರೋಧಿಸಿದರಲ್ಲದೆ, ಸಾರ್ವಜನಿಕರ ಪರವಾಗಿ ಮಾತನಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಪಿಡಿಒ ಅವರು ಸುರೇಶ್ ಅತ್ರೆಮಜಲು ಸೇರಿದಂತೆ ಇನ್ನಿಬ್ಬರ ಅಮಾಯಕ ಸಾರ್ವಜನಿಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಓರ್ವ ಜನಪ್ರತಿನಿಧಿಗೆ ಈ ರೀತಿಯಾದರೆ ಇನ್ನು ಜನಸಾಮಾನ್ಯನ ಗತಿಯೇನು? ಅಧಿಕಾರಿಗಳ ಇಂತಹ ದುರ್ವತನೆಯನ್ನು ಖಂಡಿಸಿ, ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ. ಆದ ಕಾರಣ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಾವು ಖಂಡನಾ ನಿರ್ಣಯ ದಾಖಲಿಸಲು ನಾನು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ನಿರ್ಧರಿಸಿದ್ದೆವು. ಇಲ್ಲಿ ಸುರೇಶ್ ಅವರು ನಮ್ಮ ಪಕ್ಷದವರು ಅಂತ ಅಲ್ಲ. ಯಾವುದೇ ಸದಸ್ಯನಿಗೂ ಈ ರೀತಿ ಅನ್ಯಾಯವಾದಾಗಲೂ ನಾವು ಅದನ್ನು ಖಂಡಿಸಲು ಬದ್ಧರೇ ಆಗಿರುತ್ತಿದ್ದೆವು. ಆದರೆ ಇಲ್ಲಿ ನಮ್ಮ ಖಂಡನಾ ನಿರ್ಣಯವನ್ನು ಕೆಲವು ಸದಸ್ಯರು ಒಪ್ಪದೇ ಪಿಡಿಒ ಪರವಾಗಿಯೇ ಮಾತನಾಡಿದರು. ಸಭೆಯಲ್ಲಿ ಕೆಲವರು ಅನ್ಯಾಯವನ್ನು ಬೆಂಬಲಿಸುವುದನ್ನು ನೋಡಿ ಆಕ್ರೋಶ ಭರಿತರಾಗಿದ್ದ ನಮ್ಮ ಕೆಲ ಸದಸ್ಯರು ಸಭೆಯಿಂದ ಹೊರ ನಡೆದರು. ಅವರನ್ನು ಮತ್ತೆ ದೂರವಾಣಿ ಕರೆ ಮಾಡಿ ಕರೆದಾಗಲೂ ಇಲ್ಲಿನ ನಡೆಯನ್ನು ನೋಡಿ ಬೇಸತ್ತ ಅವರು ವಾಪಸ್ ಬರಲಿಲ್ಲ. ಆಗ ಸಭೆಯಲ್ಲಿ ಕೋರಂ ಕೊರತೆಯಿಂದಾಗಿ ಅನಿವಾರ್ಯ ಕಾರಣದಿಂದ ಸಭೆಯನ್ನು ಮುಂದೂಡಬೇಕಾಯಿತು. ಇದರಲ್ಲಿ ಜನಸಾಮಾನ್ಯರಿಗೆ ಕಷ್ಟ ಕೊಡುವ ಉದ್ದೇಶ ಇರಲಿಲ್ಲ ಎಂದರು.
ಬ್ಯಾನರ್ ತೆರವು ಕಾರ್ಯಾಚರಣೆ ಸದಸ್ಯರ ಮೇಲಿದ್ದ ವೈಯಕ್ತಿಕ ದ್ವೇಷ ತೀರಿಸಲು: ಅನಧಿಕೃತ ಬ್ಯಾನರ್‌ಗಳನ್ನು ತೆಗೆಯಲು ನಿರ್ಣಯ ಆಗಿದೆ ನಿಜ. ಆದರೆ ಉಪ್ಪಿನಂಗಡಿಯಲ್ಲಿ ಅದೆಷ್ಟೋ ಅನಧಿಕೃತ ಬ್ಯಾನರ್‌ಗಳು ಇರುವಾಗ ಅವರಿಗೆ ಕಂಡಿದ್ದು ಉಪ್ಪಿನಂಗಡಿಯ ಹೊರಗಿರುವ ನೆಡ್ಚಿಲ್‌ನ ಬ್ಯಾನರ್ ಮಾತ್ರನಾ? ಅಂದು ಇಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆ ನಡೆದದ್ದು ಸಾಮಾಜಿಕ ಕಳಕಳಿಯಿಂದಲ್ಲ. ಬದಲಾಗಿ ವಾರ್ಡ್ ಸದಸ್ಯರ ಮೇಲಿದ್ದ ವೈಯಕ್ತಿಕ ದ್ವೇಷ ತೀರಿಸಲು ಎಂದು ಹೇಳಿದ ಅಧ್ಯಕ್ಷರು, ಗ್ರಾ.ಪಂ. ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಅಷ್ಟು ಕಾಳಜಿವಹಿಸುವ ಅಧಿಕಾರಿ ಅವರಾದ್ರೆ ಯಾಕೆ ಉಳಿದ ನಿರ್ಣಯಗಳನ್ನು ಅನುಷ್ಠಾನಕ್ಕೆ ಮುಂದಾಗಿಲ್ಲ. ಪೇಟೆಯೊಳಗೆ ಸಾರ್ವಜನಿಕರಿಗೆ ತೊಂದರೆ ಆಗುವ ಹಾಗೆ ರಸ್ತೆ ಬದಿ ವಾಹನಗಳನ್ನಿಟ್ಟು ಹಣ್ಣು – ಹಂಪಲು ಮಾರಾಟ ಮಾಡುವವರನ್ನು ಯಾಕೆ ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಜನವಿರೋಧಿ ಆಡಳಿತ ಇದ್ದದ್ದು ಯಾವಾಗ-ಜನರಲ್ಲೇ ಕೇಳಲಿ: ಇವತ್ತು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರು ಬಿಜೆಪಿಯ ಜನವಿರೋಧಿ ಆಡಳಿತ, ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಜನವಿರೋಧಿ ಆಡಳಿತ ಇದ್ದಿದ್ದು ಅಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಗ್ರಾ.ಪಂ.ನ ಆಡಳಿತ ನಡೆಸುತ್ತಿದ್ದಾಗನೋ? ಅಥವಾ ಈಗಲೋ ಎಂದು ಅವರು ಗ್ರಾಮದ ಜನರಲ್ಲಿ ಕೇಳಲಿ. ಈಗಾದರೆ ಎಲ್ಲಿ ಎಂಬುದನ್ನು ಅವರು ಸಾಬೀತುಪಡಿಸಲಿ ಎಂದು ಹೇಳಿದ ಉಷಾ ಮುಳಿಯ, ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುವ ಅವರು ಯಾವ ಸತ್ಯದ ಜಾಗದಲ್ಲಿ ನಿಂತು ಅದನ್ನು ಸಾಬೀತುಪಡಿಸುತ್ತಾರೆ. ನಾನು ಭ್ರಷ್ಟಾಚಾರ ನಡೆಸಿಲ್ಲ ಅಂತ ಎಲ್ಲಿ ಬೇಕಾದರೂ ಆಣೆ ಹಾಕಲು ಸಿದ್ಧಳಿದ್ದೇನೆ ಅದಕ್ಕೆ ಅವರು ಸಿದ್ಧರಿದ್ದಾರಾ ಎಂದು ಸವಾಲೆಸೆದರು.
ಎಲ್ಲೂ ಅಧಿಕಾರ ದುರುಪಯೋಗ ಮಾಡಿಲ್ಲ: ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದರ‍್ರಹ್ಮಾನ್ ಅವರು ಭ್ರಷ್ಟಾಚಾರದ ಆರೋಪ ಮಾಡಿರುವುದಕ್ಕೆ ಸ್ಪಷ್ಟನೆ ನೀಡಿದ ಉಷಾ ಮುಳಿಯ, ಅಧ್ಯಕ್ಷೆಯಾಗಿರುವ ನಾನು ಎಲ್ಲೂ ನನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ. ಗ್ರಾ.ಪಂ.ನ ವಾಣಿಜ್ಯ ಸಂಕೀರ್ಣದಲ್ಲಿ ಕುಮಾರ್ ಅವರು ಪಡೆದುಕೊಂಡಿದ್ದ ಕೊಠಡಿಯನ್ನು ಅವರಿಗೆ ನಡೆಸಲು ಅಸಾಧ್ಯವಾದ ಕಾರಣ ಅದನ್ನು ಸಾಮಾನ್ಯ ಸಭೆಯಲ್ಲಿ ಅರ್ಜಿಯಿಟ್ಟು ಎಲ್ಲರ ಒಪ್ಪಿಗೆಯ ಮೇರೆಗೆ ಅವರಿಗೆ ಸಿಕ್ಕಿರುವ ಆ ಕೊಠಡಿಯ ಅನುಭೋಗದ ಹಕ್ಕು ಇರುವವರೆಗೆ ಹಾಗೂ ಅವರು ಗ್ರಾ.ಪಂ.ಗೆ ಒಪ್ಪಂದದಂತೆ ಕಟ್ಟಬೇಕಾಗಿರುವ ಶುಲ್ಕವನ್ನು ಕಟ್ಟಲು ಬದ್ಧಳಾಗಿ ಅವರ ಅನುಮತಿಯ ಮೇರೆಗೆ ಕಾನೂನು ಬದ್ಧವಾಗಿ ನನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದೇನೆ. ಇಲ್ಲಿ ಎಲ್ಲೂ ಅಧಿಕಾರದ ದುರುಪಯೋಗ ನಡೆದಿಲ್ಲ. ಇದು ಗ್ರಾ.ಪಂ.ನ ಹಿತಾಸಕ್ತಿಗೆ ಅನುಗುಣವಾಗಿಯೇ ಇದೆ ಎಂದರಲ್ಲದೆ, ಗ್ರಾ.ಪಂ.ಗೆ ಹಣವನ್ನು ಪಾವತಿಸಲು ಬಾಕಿಯಿರುವುದರಿಂದ ಶಿವಪ್ರಸಾದ್ ಅವರ ಅಂಗಡಿ ಕೋಣೆಗೆ ಕಾನೂನು ಪ್ರಕಾರವಾಗಿಯೇ ಈಗಾಗಲೇ 2 ಬಾರಿ ಬೀಗ ಹಾಕಲಾಗಿದೆ. ಮತ್ತೆ ಅವರು ಕಾಲಾವಕಾಶ ಕೇಳಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಸಾಮಾನ್ಯ ಸಭೆಯಲ್ಲಿಟ್ಟಾಗ ಎಲ್ಲಾ ಸದಸ್ಯರು ಅವರಿಗೆ ಕಾಲಾವಕಾಶ ನೀಡಲು ಒಪ್ಪಿಗೆ ನೀಡಿದ್ದಾರೆ. ಅದರಂತೆ ಕಾಲಾವಕಾಶ ನೀಡಲಾಗಿದೆ. ಇದರಲ್ಲಿ ನಮ್ಮದೇನೂ ಹಸ್ತಕ್ಷೇಪವಿಲ್ಲ. ಇನ್ನು ಮುಂದೆಯೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದರು. ಉಪ್ಪಿನಂಗಡಿಯಲ್ಲಿ ಹಳೆಯ ಅಂಗಡಿಕೋಣೆಗಳನ್ನು ಅದರ ಅನುಭೋಗದ ಅವಧಿ ಮುಗಿದ ಬಳಿಕ ಏಲಂ ಮಾಡುವ ಪದ್ಧತಿ ನನ್ನ ಮೇಲೆ ಆರೋಪ ಮಾಡುತ್ತಿರುವ ಮಾಜಿ ಅಧ್ಯಕ್ಷರ ಅವಽಯಲ್ಲಿಂದಲೇ ಇಲ್ಲ. ಪರ್ಸಂಟೇಜ್ ಜಾಸ್ತಿ ಮಾಡಿ ಅವರಿಗೆ ಅದನ್ನು ನೀಡುವುದು ನಡೆದುಕೊಂಡು ಬಂದಿದೆ. ಈಗ ನನ್ನ ಅವಧಿಯಲ್ಲಿ ಹಾಗೆ ಮಾಡಿದ್ದು ಭ್ರಷ್ಟಾಚಾರವಾದರೆ, ಅವರ ಅವಽಯಲ್ಲಿ ನಡೆದಿರುವುದು ಕೂಡಾ ಭ್ರಷ್ಟಾಚಾರವಲ್ಲವೇ? ಎಂದು ಉಷಾ ಮುಳಿಯ ಪ್ರಶ್ನಿಸಿದರು. ಮಠದಲ್ಲಿ ಗೋಮಾಳ ಹಾಗೂ ಅರಣ್ಯ ಇಲಾಖೆಯ ಜಾಗದಲ್ಲಿ ಅಬ್ದುರ‍್ರಹ್ಮಾನ್ ಅವರು ಒಂದೇ ಸಮುದಾಯದವರ 38 ಮಂದಿಗೆ 94ಸಿಗೆ ಮನೆ ಕಟ್ಟಲು ಅವಕಾಶ ಮಾಡಿಕೊಟ್ಟಿದ್ದರು. ಅಲ್ಲಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರು. ಆದರೆ ಅಲ್ಲೇ ಪಕ್ಕದಲ್ಲಿರುವ ನಾಲ್ಕು ಮಂದಿ ಎಸ್‌ಸಿ ಸಮುದಾಯದವರು ಕೂಡಾ 94ಸಿಯಲ್ಲಿ ಅವಕಾಶ ಪಡೆದಿದ್ದು, ಅವರ ಮನೆಗೆ ಈಗಲೂ ರಸ್ತೆ, ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಅವರು ಕಲ್ಪಿಸಿಲ್ಲ. ಗೋಮಾಳ ಜಾಗವನ್ನು 94ಸಿಯಡಿ ಕಬಳಿಸಲು ಮುಂದಾಗಿದ್ದ ಕಾರಣ ನಾನು ಇದಕ್ಕೆ ಆಕ್ಷೇಪಿಸಿದ್ದೇನೆ. ಹೀಗಾಗಿ ಅಬ್ದರ‍್ರಹ್ಮಾನ್ ಅವರ ಆರೋಪ ಸತ್ಯಕ್ಕೆ ದೂರವಾದುದ್ದು. ಈಗ ರದ್ದಾಗಿರುವ ಸಭೆಯನ್ನು ಮುಂದಿನ ವಾರವೇ ಕರೆದು ಜನ ಸಾಮಾನ್ಯರ ಅರ್ಜಿಗಳನ್ನು ವಿಲೇ ಮಾಡಲಾಗುವುದು ಎಂದರು.
ಸದಸ್ಯ ಲೊಕೇಶ್ ಬೆತ್ತೋಡಿ ಮಾತನಾಡಿ, ಉಪ್ಪಿನಂಗಡಿಯಲ್ಲಿ ಅನಽಕೃತ ಅಂಗಡಿಗಳ ತೆರವಿಗೆ ನಿರ್ಣಯಗಳು ಆಗಿದೆ. ಆದರೆ ಅದನ್ನು ತೆಗೆಯಲು ಪಿಡಿಒ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸದಸ್ಯರಾದ ಧನಂಜಯ ನಟ್ಟಿಬೈಲು, ವನಿತಾ ಆರ್ತಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here