ಹಲವು ವಿಶೇಷತೆಗಳೊಂದಿಗೆ ಅದ್ದೂರಿಯಾಗಿ ಆರಂಭಗೊಂಡಿರುವ…. 30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ

0

  • ಧಾರ್ಮಿಕ, ಕಂಬಳ, ಕ್ರೀಡಾ, ಓಟಗಾರರಿಗೆ ಸನ್ಮಾನ
  • ಮಿಂಚಿನ ಓಟದ ಕೋಣ `’ಚೆನ್ನ’ ನಿಗೆ ಸನ್ಮಾನ
  • ಜೋಡುಕರೆ ಸ್ಮರಣ ಸಂಚಿಕೆ ಬಿಡುಗಡೆ
  • ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ
  • ಕೋಣಗಳಿಗೆ ಸುಸಜ್ಜಿತ ಟ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ
  • ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ
  •  ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ
  • ರಥಬೀದಿಯುದಕ್ಕೂ ಅಲಂಕಾರಿಕ ವಿದ್ಯುತ್ ದೀಪಗಳು
  • 163 ಜೊತೆ ಕೋಣಗಳು
ಜೋಡು ಕರೆ ಸ್ಮರಣ ಸಂಚಿಕೆ ಬಿಡುಗಡೆ

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ೩೦ನೇ ವರ್ಷದ ಐತಿಹಾಸಿಕ ಕೋಟಿ ಚೆನ್ನಯ ಜೋಡುಕರೆ ಕಂಬಳ ಜ.೨೮ರಂದು ಬೆಳಿಗ್ಗೆ ಆರಂಭಗೊಂಡಿದೆ.ಅದ್ದೂರಿಯಾಗಿ ನಡೆಯುತ್ತಿರುವ ಕಂಬಳ ಕೂಟ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಕಂಬಳ ವೀಕ್ಷಣೆಗೆ ಆಗಮಿಸಿದ್ದಾರೆ.
ಹಲವು ಆತಂಕ, ನಿಷೇಧದ ಭೀತಿಯ ನಡುವೆಯೇ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕಂಬಳ ಕೂಟ ನಿರಾತಂಕವಾಗಿ ಆಯೋಜನೆಯಾಗುತ್ತಿದೆ.ಪ್ರತಿಯೊಂದು ಕಡೆ ನಡೆಯುತ್ತಿರುವ ಪ್ರೀತಿಯ ಕೋಣಗಳ ಓಟದ ಕಂಬಳದ ಮೇಲೆ ಪ್ರಾಣಿದಯಾ ಸಂಘ ಪೇಟಾ ಕಣ್ಣಿಟ್ಟಿದ್ದು, ಕಂಬಳದಲ್ಲಿ ಕೋಣಗಳ ಮೇಲೆ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ದೂರು ನೀಡಿದೆಯಾದರೂ ಮಿಂಚಿನ ಓಟದ ಕೋಣಕ್ಕೆ ಸನ್ಮಾನ ಮಾಡಿ ಮೂಕ ಪ್ರಾಣಿಯ ಮೇಲಿನ ಪ್ರೀತಿಗೆ ಪುತ್ತೂರಿನ ಇತಿಹಾಸ ಪ್ರಸಿದ್ಧ ೩೦ನೇ ವರ್ಷದ ಹೊನಲು ಬೆಳಕಿನ ಕೋಟಿಚೆನ್ನಯ ಜೋಡುಕರೆ ಕಂಬಳ ಸಾಕ್ಷ್ಷಿಯಾಗಿದೆ.

 

ಮಿಂಚಿನ ಓಟದ ಕೋಣ `ಚೆನ್ನ’ ನಿಗೆ ಸನ್ಮಾನ


ಕಂಬಳ ಕೋಣಗಳ ಮಾಲಕರಿಗೆ, ಕೋಣ ಓಡಿಸುವವರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು ಸಹಜ.ಆದರೆ ಇಲ್ಲಿ ಓಟದ ಕೋಣಕ್ಕೂ ಸನ್ಮಾನ ಮಾಡುವ ಮೂಲಕ ಕೋಣಗಳ ಮೇಲಿನ ಪ್ರೀತಿಯನ್ನು ತೋರ್ಪಡಿಸಿದೆ.ಜ.೨೮ಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೋಣದ ಮಾಲಕರಿಗೆ, ಕೋಣ ಓಡಿಸುವ ಹಿರಿಯರಿಗೆ ಮತ್ತು ವೇಗದ ಕೋಣ `ಚೆನ್ನ’ನಿಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ೩೦ನೇ ವರ್ಷದ ಕಂಬಳದ ನೆನಪಿನಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಸ್ಮರಣ ಸಂಚಿಕೆ ಬಿಡುಗಡೆ: ಕೋಟಿ ಚೆನ್ನಯರ ಹೆಸರಿನಲ್ಲಿ ೩೦ನೇ ವರ್ಷದ ಕಂಬಳದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಡಾ| ಎಂ..ಎನ್.ರಾಜೇಂದ್ರ ಕುಮಾರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.ಕಂಬಳ ಕೂಟಕ್ಕೆ ಮೂರನೇ ತೀರ್ಪುಗಾರರಾಗಿ ಸೆನ್ಸಾರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಅವರನ್ನು ಇದೇ ಸಂದರ್ಭದಲ್ಲಿ ಕಂಬಳ ಸಮಿತಿಯಿಂದ ಸನ್ಮಾನಿಸಲಾಯಿತು.

ಕಾನತ್ತೂರು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಮಾಧವ ನಾಯರ್ ಅವರು ಮಾತನಾಡುತ್ತಿರುವುದು

ಜನಪದ ವೀರ ಕ್ರೀಡೆ ಶಾಶ್ವತವಾಗಿ ಉಳಿಯಬೇಕು:ಸೊರಕೆ: ಮಾಜಿ ನಗರಾಭಿವೃದ್ಧಿ ಸಚಿವರಾಗಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ ಕಂಬಳ ಒಂದು ಜನಪದ ವೀರ ಕ್ರೀಡೆಯಾಗಿದೆ.ಜಯಂತ್ ರೈ ಅವರಿಂದ ಹಿಡಿದು ದಿ.ಮುತ್ತಪ್ಪ ರೈ ಅವರ ಕಾಲದಲ್ಲೂ ಯಶಸ್ವಿಯಾಗಿ ಕಂಬಳ ನಡೆದಿದೆ.ಕಾಂತಾರ ಚಿತ್ರದ ಮೂಲಕ ನಮ್ಮ ಕಲೆ, ಸಂಸ್ಕೃತಿ, ಕಂಬಳ ಕ್ರೀಡೆ ಜಗತ್ತಿಗೆ ಆಕರ್ಷಣೆಯಾಗುವ ಕೆಲಸ ಆಗಿದೆ.ಕಂಬಳಕ್ಕೆ ಆಪತ್ತು ಬರುವ ಸಂದರ್ಭ ಇದ್ದರೂ ಕೂಡಾ ೩೬೫ ದಿನ ಕೋಣಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಿರುವ ಕಂಬಳದ ಮಾಲಕರ ಶ್ರಮ ಬಹಳ ದೊಡ್ಡದಾಗಿದೆ.

ಕಠಿಣ ಪ್ರಾಣಿಗೆ ಬುದ್ದಿ ಕಲಿಸುವ ಮೂಲಕ ಮಾಲಕರ ಸ್ವಾಭಿಮಾನವನ್ನು ಉಳಿಸುವ ದೊಡ್ಡ ಜಾನಪದ ಕ್ರೀಡೆಯಾಗಿ ಮೂಡಿ ಬಂದಿದೆ.ವೀರ ಕ್ರೀಡೆಯಲ್ಲಿ ಬೇರೆ ಬೇರೆ ಧರ್ಮ,ಜಾತಿ, ಭಾಷೆ ಇದ್ದರೂ ಸಮಾಜ ಒಂದು ಕುಟುಂಬವಾಗಿ ಅವಿಭಜಿತ ಜಿಲ್ಲೆಯಲ್ಲಿ ಉತ್ತಮವಾಗಿ ಮೂಡಿ ಬರುತ್ತಿದೆ. ಹೊಸ ಹೊಸ ಸಂಶೋಧನೆ ಇದರಲ್ಲಿ ನಡೆದಿದೆ. ನಂದಿಕೂರಿನಲ್ಲಿ ಪ್ರಥಮವಾಗಿ ಹೊನಲು ಬೆಳಕಿನ ಕ್ರೀಡೆ ಆರಂಭವಾಯಿತು.ಬಳಿಕ ಸೆನ್ಸಾರ್ ಮೂಲಕ ತೀರ್ಪು ನೀಡುವ ಕಾರ್ಯವೂ ನಡೆಯಿತು. ಕೃಷಿಗೆ ಸಂಬಂಧಿಸಿ ಕಂಬಳ ಕ್ರೀಡೆಗೆ ಸಹಕಾರ ಕ್ಷೇತ್ರದಲ್ಲೂ ಹೆಚ್ಚು ಒತ್ತು ಸಿಕ್ಕಿದೆ.ಸರಕಾರವು ಕಣ್ಣು ಬಿಡುವ ಅವಕಾಶವಾಗಿದೆ.ಈ ಕ್ರೀಡೆ ನಿರಂತರವಾಗಿ ನಡೆಯಬೇಕು. ಶಾಶ್ವತವಾಗಿ ಉಳಿಯಬೇಕು.ರೈತರ ಸ್ವಾಭಿಮಾನದ ಕ್ರೀಡೆಯಾಗಿ ಮುಂದುವರಿಯಬೇಕು ಎಂದು ಹೇಳಿ,ಪುತ್ತೂರಿನ ಕಂಬಳಕ್ಕೆ ಹೆಸರು ಬರಲು ಕಾರಣ ಅಭಿಮಾನಿಗಳ ಪ್ರೋತ್ಸಾಹ ಎಂದರು.

ಕಂಬಳ ಜನಪದ ಕ್ರೀಡೆ ಮಾತ್ರವಲ್ಲ ರೈತಾಪಿ ವರ್ಗದ ಸಂಭ್ರಮ ದೇವಿಪ್ರಸಾದ್ ಶೆಟ್ಟಿ: ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಮಾತನಾಡಿ ಕಂಬಳ ಯಾವುದೇ ಅಡೆತಡೆ ಇಲ್ಲದೆ ಮುಂದುವರಿದಿದೆ ಎಂದಾದರೆ ಅದರಲ್ಲಿ ಅನೇಕ ಜನರ ಶ್ರಮದ ಪಾಲು ಇದೆ. ಪುತ್ತೂರಿನ ಕಂಬಳದ ವಿಜ್ರಂಭಣೆಗೆ ಕಾರಣರಾದವರನ್ನು ನಾವು ಸ್ಮರಿಸಬೇಕು. ಕಂಬಳ ಜನಪದ ಕ್ರೀಡೆ ಮಾತ್ರವಲ್ಲ. ರೈತಾಪಿ ವರ್ಗದ ಸಂಭ್ರಮ. ಆದರೆ ಪೇಟದವರಿಂದ ಕಾನೂನಿನ ಮೂಲಕ ತೊಂದರೆಯಾಗುವ ಸಂದರ್ಭದಲ್ಲಿ ಕಂಬಳ ನಿಂತು ಹೋಗುತ್ತದೆ ಎಂದು ನಿರ್ಧಾರ ಬರುವ ಸಂದರ್ಭದಲ್ಲಿ ಎಲ್ಲಾ ರೈತಾಪಿ ವರ್ಗದವರು ಒಂದಾಗಿ ಮಂಗಳೂರಿನಲ್ಲಿ ನಡೆಸಿದ ದೊಡ್ಡ ಚಳುವಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವು ಬಗ್ಗಿ ಕಂಬಳಕ್ಕೆ ಸಹಕಾರ ನೀಡಿ ರಾಷ್ಟ್ರಪತಿ ಅಂಕಿತದೊಂದಿಗೆ ಕಂಬಳ ಕೂಟ ಸೂರ್ಯ ಚಂದ್ರರಿರುವ ತನಕ ನಡೆಯಬೇಕೆಂಬ ನಿರ್ಧಾರ ಮಾಡುವ ವ್ಯವಸ್ಥೆ ಆಗಿದೆ.ಈ ವ್ಯವಸ್ಥೆ ತುಳುನಾಡಿನ ಪರಶುರಾಮ ಸೃಷ್ಟಿಯ ಸ್ಥಳದಲ್ಲಿ ಮಾತ್ರ ಆಗಿದೆ ಎಂದರು. ಫೆ. ೪ಕ್ಕೆ ಐಕಳ ಕಂಬಳ ನಡೆಯಲಿದೆ. ಅಲ್ಲಿಗೂ ರೈತಾಪಿ ವರ್ಗದವರ ಸಹಕಾರ ಇರಲಿ ಎಂದು ವಿನಂತಿಸಿದರು.

 

೫೦ ವರ್ಷವೂ ಚಂದ್ರಹಾಸ ಶೆಟ್ಟಿಯವರ ನೇತೃತ್ವದಲ್ಲೇ ಕಂಬಳ ನಡೆಯಲಿ-ಶಕುಂತಳಾ ಶೆಟ್ಟಿ: ಕಂಬಳ ಸಮಿತಿ ಗೌರವ ಸಲಹೆಗಾರರಾಗಿರುವ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಮಾತನಾಡಿ ೩೦ ವರ್ಷದ ಇತಿಹಾಸದಲ್ಲಿ ದಕ್ಷಿಣ ಕನ್ನಡದಲ್ಲಿ ಒಬ್ಬ ಮಹಿಳೆಯನ್ನು ಗೌರವ ಉಪಸ್ಥಿತಿಯಲ್ಲಿ ಸಹಸಂಚಾಲಕಿಯಾಗಿ ಕಂಬಳ ಸಮಿತಿಯಲ್ಲಿ ಇರುವುದು ಇದು ಪ್ರಥಮ ಕಂಬಳ ಎಂದು ಕಾಣುತ್ತಿದೆ. ಅದಕ್ಕಾಗಿ ನಾನು ವಿನಯ ಕುಮಾರ್ ಸೊರಕೆ ಮತ್ತು ಚಂದ್ರಹಾಸ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಇಲ್ಲಿ ಕೂತವರು ಶಾಶ್ವತ ಕೂತುಕೊಳ್ಳುವಂತೆ ಮಾಡಿದ್ದಾರೆ. ಹಾಗಾಗಿ ಇಲ್ಲಿ ಕೂತವರಿಗೆ ಸ್ವಲ್ಪ ಡೇಂಜರ್ ಹಾಗೆಂದು ನನಗೂ ಮತ್ತು ವಿನಯ ಕುಮಾರ್ ಸೊರಕೆಗೆ ಯಾವಾಗಲೂ ಒಳ್ಳೆಯದಿದೆ ಎಂದು ಅಶೋಕ್ ಕುಮಾರ್ ರೈ ಅವರಿಗೆ ಹೇಳಿದರು.


ಸಂಸ್ಕಾರ, ಸಂಸ್ಕೃತಿಯ ಕಂಬಳ ನೋಡುವುದಕ್ಕೆ ನಾವೆಲ್ಲ ಧನ್ಯರು-ದಿವ್ಯಪ್ರಭಾ: ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಮಾತನಾಡಿ ಕಂಬಳ ಜನಪದ ಕ್ರೀಡೆಯಾಗಿ ಮೂಡಿ ಬಂದು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೆನಪಿಸಿದೆ.ಇದನ್ನು ನೋಡುವುದಕ್ಕೆ ನಾವೆಲ್ಲ ಧನ್ಯರು ಎಂದರು.


ನನ್ನ ಕೈಗೆ ಶಕ್ತಿ ಕೊಟ್ಟರೆ ಕಂಬಳಕ್ಕೆ ತಲಾ ರೂ. ೫ ಲಕ್ಷ ಅನುದಾನ-ಅಶೋಕ್ ಕುಮಾರ್ ರೈ: ಕಳೆದ ವರ್ಷ ಸರಕಾರದಿಂದ ಒಂದು ಬಾರಿ ಕಂಬಳಕ್ಕೆ ತಲಾ ರೂ.೫ ಲಕ್ಷ ಬಂದಿತ್ತು.ಆದರೆ ಕಂಬಳ ಮಾಡುವವರಿಗೆ ಎಷ್ಟು ಒತ್ತಡ ಇದ್ದರೂ ಸರಕಾರದಿಂದ ಅದಕ್ಕೆ ತಕ್ಕಂತೆ ವ್ಯವಸ್ಥೆ ಆಗಿಲ್ಲ.ಕಳೆದ ವರ್ಷ ರೂ.೧ ಕೋಟಿ ಸರಕಾರದಿಂದ ಬಂದಿದ್ದರೂ ೨ ಕಂಬಳದವರು ಮಾತ್ರ ಅದರ ಪ್ರಯೋಜನ ಪಡೆದಿದ್ದಾರೆ.ಕಂಬಳ ನಿಲ್ಲಿಸುವ ಕೆಲಸವೂ ಆಗಿತ್ತು. ಆಗ ಕಾಂಗ್ರೆಸ್ ಸರಕಾರ ಅದನ್ನು ಉಳಿಸುವ ಕೆಲಸ ಮಾಡಿತ್ತು. ಇವತ್ತು ಕಂಬಳ ಉಳಿಯಲು ಪ್ರಥಮವಾಗಿ ಸಹಕಾರ ನೀಡಿದ್ದು ಮಾಧ್ಯಮ ಮಿತ್ರರು ಎಂದು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷರಾಗಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಹೇಳಿದರು.

ಕಂಬಳಕ್ಕೆ ಮತ್ತು ಯಕ್ಷಗಾನಕ್ಕೆ ಬರುವ ಅನುದಾನವನ್ನು ಪಡೆಯುವ ಶಕ್ತಿ ಕೊಡುವ ಕೆಲಸ ಆಗಬೇಕಾಗಿದೆ ಎಂದ ಅವರು, ಇವತ್ತು ಕಂಬಳ ನಿಲ್ಲಿಸಬೇಕೆಂದು ಪ್ರಾಣಿ ದಯಾ ಸಂಘದವರು ಅಲ್ಲಲ್ಲಿ ನೇತಾಡಿಕೊಂಡಿರುತ್ತಾರೆ.ಕರಾವಳಿ ಭಾಗದ ಕ್ರೀಡೆಯಾದ ಇದಕ್ಕೆ ದೈವ ದೇವರ ಆಶೀರ್ವಾದ, ನಿಮ್ಮೆಲ್ಲರ ಸಹಕಾರ ಇದ್ದದ್ದರಿಂದ ಇವತ್ತಿನ ತನಕ ಯಾರಿಗೂ ಕಂಬಳ ನಿಲ್ಲಿಸಲು ಆಗಿಲ್ಲ. ಇವತ್ತು ಕಂಬಳ ಸಮಿತಿಯವರು ವಾದ ಮಾಡದಿದ್ದರೂ ನಮ್ಮ ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳದ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿzವೆ.ಇವತ್ತಿನ ತನಕ ಹೋರಾಟ ಮಾಡಿ ಕಂಬಳದ ಅಂತಿಮ ತೀರ್ಪುಗೆ ಸಿದ್ದವಾಗಿದೆ. ತೀರ್ಪು ಬರುತ್ತದೆ ಎಂದು ಕೋಣಗಳಿಗೆ ಹೊಡೆಯುವುದಲ್ಲ.ಇದು ಮತ್ತೆ ಸಮಸ್ಯೆಗೆ ಕಾರಣ ಆಗುತ್ತದೆ. ಸರಕಾರವು ಕೂಡಾ ಒಂದು ಸಾರಿ ಮಾತ್ರ ಕಂಬಳಕ್ಕೆ ಅನುದಾನ ನೀಡಿದೆ ಮತ್ತೆ ಒಂದೇ ಒಂದು ಅನುದಾನ ನೀಡಿಲ್ಲ. ಮುಂದಿನ ದಿನ ನನ್ನ ಕೈಗೆ ಶಕ್ತಿ ಕೊಟ್ಟರೆ ಖಂಡಿತವಾಗಿಯೂ ಕರಾವಳಿ ಭಾಗದ ಪ್ರತಿ ಕಂಬಳಕ್ಕೆ ಕನಿಷ್ಠ ರೂ.೫ ಲಕ್ಷ ಅನುದಾನ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಪೇಟೆಯ ಮಧ್ಯೆ ಇರುವ ಏಕೈಕ ಕಂಬಳ ಪುತ್ತೂರು-ರಮಾನಾಥ ರೈ: ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ ಕಂಬಳ ಸಾಮಾನ್ಯವಾಗಿ ಹಳ್ಳಿ ಪ್ರದೇಶದಲ್ಲಿ ನಡೆಯುತ್ತದೆ.ಆದರೆ ಪೇಟೆಯ ಮಧ್ಯದಲ್ಲಿ ನಡೆಯುವ ಕಂಬಳ ಎಂದರೆ ಅದು ಪುತ್ತೂರಿನ ಕೋಟಿ ಚೆನ್ನಯ ಕಂಬಳ. ಹಾಗಾಗಿ ಇದು ಬಹಳ ಆಕರ್ಷಣೆಯಾಗಿದೆ.ಅನುವಂಶಿಕವಾಗಿ ಹಿರಿಯರು ಸಂಪ್ರದಾಯ ಬದ್ಧವಾಗಿ ಗದ್ದೆಯಲ್ಲಿ ಪೂಕರೆ ವ್ಯವಸ್ಥೆ ಇತ್ತು.ಕಾಲಕ್ರಮೇಣ ಜನರ ಆಸಕ್ತಿಯಿಂದ ಕಂಬಳ ಜನಪದ ಕ್ರೀಡೆಯಾಗಿ ಪರಿವರ್ತನೆ ಆಯಿತು. ಇವತ್ತು ಕಂಬಳ ಕೂಟವನ್ನು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ.ಆದರೆ ನಮ್ಮ ಸರಕಾರ ಇರುವಾಗ ಕಂಬಳ ಕೂಟ ನಿಲ್ಲದಂತೆ ಸಹಕಾರ ಮಾಡಲಾಯಿತು.ಇವತ್ತು ಕಂಬಳ ಕೂಟ ಪೈಪೋಟಿಯ ರೀತಿಯಲ್ಲಿ ನಡೆಯುತ್ತಿದೆ. ಕಂಬಳ ಸೂರ್ಯ ಚಂದ್ರ ಇರುವ ತನಕ ನಿರಂತರ ನಡೆಯಬೇಕೆಂಬ ಆಸೆಯಿಂದ ಇರುವವರಲ್ಲೊಬ್ಬ ನಾನು.ನನಗೆ ಕಂಬಳ ಕೂಟಕ್ಕೆ ಬರಲು ಬಹಳ ಸಂತೋಷ ಇದೆ ಎಂದರು.


ಜಿಲ್ಲೆಗೆ ಪ್ರವಾಸಿಗರ ಆಗಮನಕ್ಕೆ ನಮ್ಮ ಸಂಸ್ಕೃತಿ ಕಾರಣ ಯು ಟಿ ಖಾದರ್: ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ ಇವತ್ತು ಜಿಲ್ಲೆಯ ಸಂಸ್ಕೃತಿಯನ್ನು, ಅಚಾರ ವಿಚಾರವನ್ನು ಬಿಂಬಿಸುವ ಚಿತ್ರಗಳಿಂದಾಗಿ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲೂ ಕಂಬಳದಂತಹ ಜನಪದ ಕ್ರೀಡೆಗೆ ಮಹತ್ವ ಬಂದಿದೆ.ಈ ನಿಟ್ಟಿನಲ್ಲಿ ಈಗಾಗಲೇ ಉಳ್ಳಾಲ ಕ್ಷೇತ್ರದಲ್ಲೂ ಅತ್ಯುತ್ತಮದಾವ ಕಂಬಳವನ್ನು ಸಿದ್ದಗೊಳಿಸಿzವೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.


ನಾವು ತೆಗೆದ ಬಾವಿಗೆ ನಾವೇ ಬೀಳುವುದು ಬೇಡ: ಗುಣಪಾಲ ಕಡಂಬ: ಕಂಬಳ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಅವರು ಮಾತನಾಡಿ ಕಂಬಳ ಎಲ್ಲಾ ವರ್ಗದವರ ವೇದಿಕೆಯಾಗಿದೆ. ಇಲ್ಲಿ ಪಾಲು ಪಡೆಯುವುದು ಭಾಗ್ಯ ಎನ್ನುವಷ್ಟರ ಮಟ್ಟಿಗೆ ಕಂಬಳ ಬೆಳೆದಿದೆ. ಆದರೆ ಇನ್ನೂ ಕಂಬಳದ ಅಂತಿಮ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಬಂದಿಲ್ಲ ಎಂದು ಗಮನದಲ್ಲಿರಬೇಕು. ಈ ನಿಟ್ಟಿನಲ್ಲಿ ಕೋಣಗಳಿಗೆ ಹೊಡೆಯಬೇಡಿ. ಇವತ್ತು ಈ ಮಾತನ್ನು ಎಷ್ಟು ಹೇಳಿದರೂ ಕೇಳುವವರಿಲ್ಲ. ಸೋತರೂ ಹೊಡೆಯುವುದು, ಗೆದ್ದರೂ ಹೊಡೆಯುವುದು ಯಾಕೆ ಎಂದು ಪ್ರಶ್ನಿಸಿದರು ಹಿಂಸೆ ಮಾಡಿದರೆ ಮತ್ತೆ ತೊಂದರೆ ಎದುರಿಸಬೇಕಾಗುತ್ತದೆ. ಪ್ರಾಣಿ ದಯಾ ಸಂಘದವರು ಅಲ್ಲಲ್ಲಿ ನಿಂತು ಪೊಟೋ ತೆಗೆದು ಕಳುಹಿಸುತ್ತಾರೆ ನಾವು ತೆಗೆದ ಬಾವಿಗೆ ನಾವೆ ಬೀಳುವುದು ಬೇಡ ಎಂದರು.


ಗ್ರಾಮ ಸಾಮರಸ್ಯದ ಕ್ರೀಡೆಯಿದು:ತಮ್ಮಣ್ಣ ಶೆಟ್ಟಿ: ಹಿರಿಯರಾದ ದೈವಾರಾಧಕರಾಗಿರುವ ತಮ್ಮಣ್ಣ ಶೆಟ್ಟಿಯವರು ಮಾತನಾಡಿ ಕಂಬಳ ರೈತ ಸಂಬಂಧಿ, ಗ್ರಾಮ ಸಾಮರಸ್ಯದ ಕ್ರೀಡೆ ಎಂದರು. ಗೋವಿನ ಹಾಗೆ ಕೋಣಗಳಿಗೂ ಮಹತ್ವವಿದೆ. ಕುಲ್ಕುಂದ ಜಾತ್ರೆ ತುಳುನಾಡಿನ ಪ್ರಸಿದ್ಧಿ. ಆದರೆ ಅದನ್ನು ನಿಲ್ಲಿಸಿದ ಬಳಿಕ ಜನಪದಕ್ಕೆ ಕೊರತೆ ಬಂದಿದೆ. ತುಳುನಾಡಿನ ಮಹತ್ವವನ್ನು ಉಳಿಸುವ ಕೆಲಸ ಆಗಬೇಕೆಂದರು.


ಜಾತಿ ಧರ್ಮಗಳ ಭೇದವಿಲ್ಲದೆ ನಡೆಯುವ ಕಂಬಳ:ಚಂದ್ರಹಾಸ ಶೆಟ್ಟಿ: ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಹೊಸತನದ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂಬ ಹೆಸರನ್ನು ಪಡೆದಿರುವ ಪುತ್ತೂರಿನ ಕಂಬಳ ಜಾತಿ, ಧರ್ಮಗಳ ಭೇದವಿಲ್ಲದೆ ಲಕ್ಷಾಂತರ ಜನರು ಭಾಗವಹಿಸುವ ಏಕೈಕ ಕ್ರೀಡೆ ಪುತ್ತೂರು ಕಂಬಳ ಎಂದ ಅವರು ಪುತ್ತೂರಿನ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಕೂಡಾ ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ತಂದಿದೆ ಎಂದರು.

163 ಜೊತೆ ಕೋಣಗಳು: ಕಂಬಳದಲ್ಲಿ ಕನೆಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ನೇಗಿಲು ಕಿರಿಯ ಸಹಿತ ಒಟ್ಟು ೧೬೩ ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದೆ ಎಂದು ಕಂಬಳ ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ತಿಳಿಸಿದ್ದಾರೆ.

ಶಕುಂತಳಾ ಶೆಟ್ಟಿ ಕಂಬಳಕ್ಕೆ ಬಂದ ಕಾರಣ ಟಿಕೇಟ್ ತಪ್ಪಿತ್ತು !
ಶಕುಂತಳಾ ಶೆಟ್ಟಿಯವರು ಶಾಸಕಿಯಾಗಿದ್ದ ಸಂದರ್ಭದಲ್ಲಿ ಕಂಬಳಕ್ಕೆ ಬಂದಿದ್ದರಿಂದ ಅವರಿಗೆ ಟಿಕೇಟ್ ತಪ್ಪಿ ಹೋಗಿತ್ತು. ಆದರೆ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯುವ ಬಹಳ ಉತ್ತಮ ಜನಪದ ಕ್ರೀಡೆ ಕಂಬಳ ಎಂದು ಅವರು ನಮಗೆ ಪೂರ್ಣ ಸಹಕಾರ ನೀಡಿದರು. ಹಾಗಾಗಿ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಅವರಿಗೆ ಮತ್ತೊಮ್ಮೆ ಶಾಸಕರಾಗುವ ಅವಕಾಶ ಸಿಕ್ಕಿತ್ತು.
ವಿನಯಕುಮಾರ್ ಸೊರಕೆ , ಗೌರವಾಧ್ಯಕ್ಷರು ಕಂಬಳ ಸಮಿತಿ

ಶಕುಂತಳಾ ಶೆಟ್ಟಿಯವರು ಕಂಬಳ ವೇದಿಕೆಯಲ್ಲಿ ಕೂತ ಬಳಿಕ ಶಾಸಕರಾದರು !
ವೇದಿಕೆಯಲ್ಲಿ ಕೂತವರನ್ನು ತುಳಿಯುತ್ತಾರೆ ಎಂದು ಶಕುಂತಳಾ ಶೆಟ್ಟಿಯವರು ಹೇಳಿದರು. ಆದರೆ ಶಕುಂತಳಾ ಶೆಟ್ಟಿಯವರು ವೇದಿಕೆಯಲ್ಲಿ ಕೂತ ಬಳಿಕವೂ ಶಾಸಕರಾಗಿದ್ದಾರೆ ಎಂಬುದು ಎಲ್ಲರಿಗೂ ನೆನಪಿದೆ. ಹಾಗಾಗಿ ತುಳಿಯುವ ಕೆಲಸ ಏನೂ ಇಲ್ಲ. ವಿನಯ ಕುಮಾರ್ ಹೇಳಿದಂತೆ ಎಲ್ಲಾ ಕಂಬಳ ನಮ್ಮದಾಗಿದೆ. ಇನ್ನು ಉಪ್ಪಿನಂಗಡಿ ಮಾತ್ರ ಬಾಕಿ. ಎಂದಿದ್ದಾರೆ. ಆದರೆ ಇದೀಗ ಉಪ್ಪಿನಂಗಡಿ ಕಂಬಳವೂ ನಮ್ಮದೇ ಆಗಿದೆ-ಅಶೋಕ್ ಕುಮಾರ್ ರೈ

ಅಖಿಲ ಭಾರತ ಇಂಟಕ್ ಕಾರ್ಯದರ್ಶಿ ರಾಕೇಶ್ ಮಲ್ಲಿ, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ನೇಸರ ಕಂಪ ಡಾ ರವಿಶೆಟ್ಟಿ ಮೂಡಂಬೈಲು,ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಉಪ್ಪಿನಂಗಡಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದಾಲಿ, ಮಾಜಿ ತಾಪಂ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಉದ್ಯಮಿ ಉಮೇಶ್ ನಾಡಾಜೆ, ಭರತ್ ಕುಮಾರ್ ಆರಿಗ ಪಟ್ಟೆ ಗುತ್ತು, ಇಂಟರ್ ನ್ಯಾಷನಲ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೌದಿ ಅರೇಬಿಯಾದ ಜಿ. ಮಹಮ್ಮದ್ ಕುಕ್ಕುವಳ್ಳಿ, ಮೆಸ್ಕಾಂ ಇಇ ರಾಮಚಂದ್ರ, ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಪ್ರಮೋದ್, ಸುಳ್ಯ ಬ್ಲಾಕ್ ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಜಿ, ಬಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಪದ್ಮಶ್ರೀ ಗ್ರೂಪ್ಸ್‌ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಉದ್ಯಮಿ ಶಿವರಾಮ ಆಳ್ವ, ಜಿ.ಪಂ ಮಾಜಿ ಉಪಾಧ್ಯಕ್ಷ ಎಮ್.ಎಸ್.ಮೊಹಮ್ಮದ್, ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಜೆ.ಕೆ ಕನ್‌ಸ್ಟಕ್ಷನ್‌ನ ಜಯಕುಮಾರ್ ನಾಯರ್, ಎಪಿಎಂಸಿ ಮಾಜಿ ನಿರ್ದೇಶಕ ಶಕೂರ್ ಹಾಜಿ, ಮಲ್ಲಿಕಾ ಪಕ್ಕಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‌ನ ಸುಧೀರ್ ಕುಮಾರ್ ಶೆಟ್ಟಿ, ಉದ್ಯಮಿ ಹಮೀದ್, ಪಾಲ್ತಾಡಿ ವಿಜೇತ್ ರೈ, ಪಿಡಬ್ಲ್ಯುಡಿ ಗುತ್ತಿಗೆದಾರ ರಾಧಾಕೃಷ್ಣ ನಾಕ್, ಇಸ್ಮಾಯಿಲ್, ಜಿಲ್ಲಾ ಕಂಬ ಸಮಿತಿಯ ಬೆಳುವಾಯಿ ಸದಾನಂದ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್‌ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ, ಕೇಶವ ಭಟ್, ಹುಸೈನ್ ಕೆಬಿಕೆ, ಜಯಪ್ರಕಾಶ್ ತುಂಬೆ, ಬ್ಯಾಂಕ್ ಆಫ್ ಬರೋಡದ ರೀಜಿನಲ್ ಮೆನೇಜರ್ ವಿದ್ಯಾಧರ ಶೆಟ್ಟಿ, ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ಎ.ಕೆ.ಜಯರಾಮ ರೈ, ನಝೀರ್ ಮಠ, ಸುಜಿತ್ ಕುಮಾರ್ ಶೆಟ್ಟಿ, ನಿಹಾಲ್ ಶೆಟ್ಟಿ, ಉದಯ ಶೆಟ್ಟಿ, ಪ್ರಿಯಾನ್ ರೊಡ್ರಿಗಸ್, ಜಗನ್ನಾಥ ರೈ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ, ಡಾ. ರಘು ಬೆಳ್ಳಿಪ್ಪಾಡಿ, ಸತೀಶ್ ಭಂಡಾರಿ, ಡಾ. ರವಿನಾರಾಯಣ್, ವಲೇರಿಯನ್ ಡಿಸೋಜ, ಶರೀಧರ್ ಮಾರೋಡಿ, ರಾಜ್ಯ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್ ಸಹಿತ ಹಲವಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಬಳ ಸಮಿತಿ ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಆಕರ್ಷಕ ಸಿಡಿಮದ್ದು : ರಾತ್ರಿ ನಡೆದ ಸಭಾ ಕಾರ್ಯಕ್ರಮದ ನಡುವೆ ಆಕರ್ಷಕ ಸಿಡಿಮದ್ದು ಪ್ರದರ್ಶನವೂ ನಡೆಯಿತು.

 

          

ಚಲನ ಚಿತ್ರ ನಟ, ನಿರ್ದೇಶಕರ ಡಯಲಾಗ್‌ಗೆ ಅಭಿಮಾನಿಗಳು ಪಿಧಾ !

ಕೇಳೆ ಚೆಲುವೆ ಹಾಡನ್ನು ಹಾಡಿದ ಅನೂಪ್ ಭಂಡಾರಿ:
ಆಸ್ಕರ್ ಪ್ರಶಸ್ತಿಗೆ ಶಿಫಾರಸ್ಸುಗೊಂಡಿರುವ ಚಲನ ಚಿತ್ರವಾದ ರಂಗಿತರಂಗ, ವಿಕ್ರಾಂತ್ ರೋಣ ಮೂಲಕ ಜನಪ್ರಿಯರಾದ ಪುತ್ತೂರಿನ ಅನೂಪ್ ಭಂಡಾರಿ ಅವರು ಮಾತನಾಡಿ ನಾನು ಅತಿಥಿಯಾಗಿ ಬಂದಿಲ್ಲ. ಪುತ್ತೂರು ಮಗನಾಗಿ ಬಂದಿzನೆ ಎಂದರಲ್ಲದೆ ತುಳುನಾಡಿನ ವೈಶಿಷ್ಟ್ಯ, ಕಲೆ ಸಂಸ್ಕೃತಿಯನ್ನು ಮರೆತಿಲ್ಲ ಮತ್ತು ಬಿಡುವುದಿಲ್ಲ. ಈ ಕ್ರೀಡೆಗೆ ಸಾವಿಲ್ಲ. ಅದಕ್ಕೆ ಸಾಕ್ಷಿ ನೀವೆಲ್ಲ.ನನ್ನ ಸಿನೇಮಾಕ್ಕೆ ಸ್ಪೂರ್ತಿ ತುಳುನಾಡು ಎಂದು ರಂಗಿತರಂಗ ಚಿತ್ರದ ’ಕೇಳೆ ಚೆಲುವೆ’ ಎಂಬ ಹಾಡನ್ನು ಹಾಡಿ ರಂಜಿಸಿದರು.ಇದರೊಂದಿಗೆ ನಮ್ಮೂರ ವಿನಯ ಕುಮಾರ್ ಸೊರಕೆ, ಆರೆನ್ ಗೆಂದಾಲೆ ಎಂಬ ತಂದೆ ರಚಿಸಿದ ಹಾಡನ್ನು ಹಾಡಿದರು.


ಪ್ರತಿಫಲ ಬಯಸದೆ ಇರುವ ಕ್ರೀಡೆ ಕಂಬಳ:
ವಿಶೇಷ ಆಹ್ವಾನಿತರಾದ ಡಾಯ್ಜಿ ವರ್ಲ್ಡ್‌ನ ವಾಲ್ಟರ್ ನಂದಳಿಕೆ ಅವರು ಮಾತನಾಡಿ ಬಾಲ್ಯದಲ್ಲಿ ಕಂಬಳ ನೋಡುತ್ತಿದ್ದೆ ಆದರೆ ಅದರ ಹಿಂದಿನ ಕಷ್ಟ ಅರಿತಿಲ್ಲ. ಕಂಬಳದ ಕುರಿತು ಪ್ರೈವೆಟ್ ಚಾಲೆಂಜ್ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಕಂಬಳದ ಹಿಂದಿನ ಕಷ್ಟ ಅರಿವಾಯಿತು. ಲೋಕದಲ್ಲಿ ಪ್ರತಿಫಲ ಬಯಸದೆ ಇರುವ ಕ್ರೀಡೆಯೇ ಕಂಬಳ. ಇದು ತುಳುನಾಡಿನ ಹೆಮ್ಮೆಯ ಕ್ರೀಡೆ ಎಂದರು.


ಸಂಸ್ಕೃತಿಗೆ ಧನ್ಯವಾದ:
ಪುತ್ತೂರು ಭಾಗದಲ್ಲಿ ಚಿತ್ರೀಕರಣ ಮಾಡಿ ಬಿಡುಗಡೆಗೆ ಸಿದ್ಧವಾಗಿರುವ ದೂರದರ್ಶನ ಚಿತ್ರದ ಉಗ್ರಂ ಮಂಜು ಅವರು ಮಾತನಾಡಿ ಕಂಬಳ ಸಂಸ್ಕೃತಿಗೆ ಧನ್ಯವಾದ ಹೇಳಿದರು. ಫೆಬ್ರವರಿ ತಿಂಗಳಲ್ಲಿ ದೂರದರ್ಶನ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಪುತ್ತೂರಿಗೆ ಭರತನಾಟ್ಯ ಕಲಿಯಲು ಬರುತ್ತಿದ್ದೆ:
777 ಚಾರ್ಲಿ ಚಿತ್ರದ ನಟಿ ಸಂಗೀತ ಶೃಂಗೇರಿ ಅವರು ಮಾತನಾಡಿ ಪುತ್ತೂರಿನ ಪರಿಚಯ ಇದೆ. ನಾನು ಇಲ್ಲಿಗೆ ಭರತನಾಟ್ಯ ಕಲಿಯಲು ಬರುತ್ತಿದ್ದೆ. ಕಂಬಳ ನೋಡುತ್ತಿರುವುದು ಇದೇ ಮೊದಲು ಎಂದರು.


ಕಂಬಳ ಭಾವನಾತ್ಮಕ ಕಲೆ ಕಲಿಸಿಕೊಡುತ್ತದೆ:
ಬಿಗ್ ಬಾಸ್ ಖ್ಯಾತಿಯ ಚಿತ್ರ ನಟಿ ಸಾನಿಯ ಅಯ್ಯರ್ ಅವರು ಮಾತನಾಡಿ ಕಂಬಳ ಜೀವನ ಶೈಲಿಯನ್ನು ಕಲಿಸಿಕೊಡುತ್ತದೆ. ಕಾಲದ ಜೊತೆಗೆ ಜೀವನ ಮತ್ತ ಕಂಬಳ ಓಟ ಇವೆರಡು ಜೀವನ ಕಲೆ ಕಲಿಸುವ ಕ್ರೀಡೆಯಾಗಿದೆ. ತುಳುನಾಡಿನ ಸಂಸ್ಕೃತಿ ಹಲವು ಪಾಠ ಕಲಿಸಿಕೊಡುತ್ತಿದೆ ಎಂದರು.

ಮಕ್ಕಳಿಗೆ ತಾಯಿ ಹೊಡೆಯುವುದು ಸಾಮಾನ್ಯ:
ಕಾಂತಾರ ಚಿತ್ರದ ನಟ ದೀಪಕ್ ರೈ ಪಾಣಾಜೆ ಅವರು ಮಾತನಾಡಿ ಕೋಣಗಳಿಗೆ ಹಿಂಸೆ ಎಂಬ ಪದಕ್ಕಿಂತ ಮಕ್ಕಳಿಗೆ ತಾಯಿ ಪ್ರೀತಿಯಿಂದ ಹೊಡೆಯುವುದು ಸಾಮಾನ್ಯ ಎಂದು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದ ಅವರು ಕಾಂತಾರ ಚಿತ್ರದಲ್ಲಿ ಬರುವ ಸೊಪ್ಪು ಡಯಲಾಗ್ ಪಂಚ್ ನೀಡಿ ಪ್ರೇಕ್ಷಕರ ಮನಗೆದ್ದರು.

ಪುತ್ತೂರಿನಲ್ಲಿ ಮಾತ್ರ ಅತೀ ಹೆಚ್ಚು ಜನಸೇರುವುದು:
ಕಾಂತರ ಚಿತ್ರದ ಇನ್ನೋರ್ವ ನಟ ಪ್ರಕಾಶ್ ತುಮಿನಾಡು ಅವರು ಮಾತನಾಡಿ ಯಾವುದೇ ಕಾರ್ಯಕ್ರಮವಾದರೂ ಪುತ್ತೂರಿನಲ್ಲಿ ಮಾತ್ರ ಅತೀ ಹೆಚ್ಚು ಜನಸಂಖ್ಯೆ ಸೇರುತ್ತಾರೆ. ಮೊನ್ನೆ ಮೊನ್ನೆ ಅರುಣಾದಲ್ಲಿ ಕಾಂತಾರ ಚಿತ್ರದ ಟಿಕೆಟ್ ಕೂಡಾ ಸಿಗುತ್ತಿರಲಿಲ್ಲ ಎಂದು ಕೇಳಿದ್ದೆ.ಎಲ್ಲರಿಗೂ ಧನ್ಯವಾದ ಎಂದು ಹೇಳಿದರು. ಕೊನೆಗೆ ಕಾಂತಾರ ಚಿತ್ರದ ಹಂದಿ ಬೇಟೆಯ ಸೀನ್‌ನಲ್ಲಿ ಗುಂಡು ಪಿಚ್ ಆಗಿ ಹುಲಿಗೆ ಬಿದ್ದಿರುವ ಡಯಲಾಗ್ ಹೇಳಿ ಪ್ರೇಕ್ಷಕರ ಮನಗೆದ್ದರು.



ವಿಕ್ರಾಂತ್ ರೋಣ ಖ್ಯಾತಿಯ ನಟ ವಜ್ರದೀರ್ ಜೈನ್ ಅವರು ವಿಕ್ರಾಂತ್ ರೋಣದ ಡಯಲಾಗ್ ಹೇಳಿದರು. ದೂರದರ್ಶನ ಚಿತ್ರದ ನಿರ್ದೇಶಕ ಸುರೇಶ್ ಮಾತನಾಡಿದರು.

           

LEAVE A REPLY

Please enter your comment!
Please enter your name here