ಪುತ್ತೂರು ತಾ.ಪಂ.ನಲ್ಲಿ ಜಿಲ್ಲಾ ಅಂತರ್ಜಲ ಇಲಾಖೆಯಿಂದ ಅಂತರ್ಜಲ ಕಾರ್ಯಾಗಾರ

0

ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ – ಹಿರಿಯ ಭೂವಿಜ್ಞಾನಿ ದಾವೂದ್

ಪುತ್ತೂರು: ನೀರು ಎಲ್ಲರಿಗೂ ಅತ್ಯಗತ್ಯ. ಭೂಮಿಯ ಮೇಲಿರುವ ಎಲ್ಲಾ ಜೀವ ಸಂಕುಲಗಳಿಗೆ ನೀರೇ ಜೀವಾಳ. ಆದರೆ ಈ ಬಗ್ಗೆ ನಾವು ಎಚ್ಚೆತ್ತುಕೊಂಡು ಮುಂದೆ ಎದುರಾಗುವ ಜಲ ಕ್ಷಾಮವನ್ನು ಮತ್ತಷ್ಟು ದೂರ ಮಾಡುವ ಕಾರ್ಯ ನಮ್ಮಿಂದಲೇ ನಡೆಯಬೇಕು. ಅದಕ್ಕಾಗಿ ಎಲ್ಲರೂ ತಮ್ಮ ಭೂ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಶೇಕ್ ದಾವೂದ್ ಅಭಿಪ್ರಾಯಪಟ್ಟರು.

ತಾ.ಪಂ. ಸಭಾಂಗದಲ್ಲಿ ಜ.23 ರಂದು ನಡೆದ ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾ ಅಂತರ್ಜಲ ಕಛೇರಿ ಮಂಗಳೂರು ಮಳೆ ನೀರಿನ ಸಂಗ್ರಹಣೆ ಮತ್ತು ಮರುಬಳಕೆ, ಅಂತರ್ಜಲ ಸಂರಕ್ಷಣೆ, ಕಲುಷಿತತೆ ತಡೆಗಟ್ಟುವಿಕೆ, ತೆರೆದ/ ತ್ಯಕ್ತ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಹಾಗೂ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ ಕುರಿತು ಅತಿ ಬಳಕೆಯಿಂದ ಸುರಕ್ಷತೆ ಬಳಕೆಯಾಗಿ ಗುರುತಿಸಿದ ಪುತ್ತೂರು ತಾಲೂಕಿನಲ್ಲಿ 2022-23ನೇ ಸಾಲಿನ ’ಅಂತರ್ಜಲ ಕಾರ್ಯಾಗಾರ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಜಿಲ್ಲೆಯಲ್ಲಿ ಎಷ್ಟೇ ನೀರಿನ ಮಿತ ಬಳಕೆ ಮಾಡಿ ಎಂದು ಹೇಳಿದರೂ ಇಲ್ಲಿನ ಭೌಗೋಳಿಕ ವೈವಿಧ್ಯತೆಯಿಂದ ಜಲ ಸಂರಕ್ಷಣೆ ಕಷ್ಟ ಸಾಧ್ಯವಾಗಿದೆ. ಏಕೆಂದರೆ ಅತಿ ವೃಷ್ಟಿಯಾದರೂ ಅದೇ ಬೇಸಿಗೆಯಲ್ಲಿ ಜಲ ಕ್ಷಾಮ ಉಂಟಾಗಲು ಕಾರಣ ಮಳೆ ನೀರು ಇಂಗದೇ ನೇರವಾಗಿ ಹಳ್ಳ-ನದಿ ಸೇರಿ ಸಮುದ್ರಕ್ಕೆ ಸೇರುತ್ತಿದೆ. ಇದನ್ನು ತಡೆದು ಅಲ್ಲಲ್ಲೇ ಭೂಮಿಗೆ ಇಂಗಿಸುವ ಕೆಲಸವನ್ನು ಮಾಡಬೇಕಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದೆ ನೀರಿಗಾಗಿ ಯುದ್ಧವಾಗುವ ಪ್ರಮೇಯ ಎದುರಾಗಬಹುದು ಎಂದು ಹೇಳಿದರು.

ಜಲ ಸಂರಕ್ಷಣೆ ಕಾರ್ಯದ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ:

ಕಾರ್ಯಕ್ರಮವನ್ನು ಉದ್ಘಾಟಿಸಿ ನಗರ ಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಅವರು ಮಾತನಾಡಿ ಬರಗಾಲ ಎಂದಾಕ್ಷಣ ದ.ಕ. ಜಿಲ್ಲೆಯವರು ಬಯಲು ಸೀಮೆಗಳಲ್ಲಿ ಬರಗಾಲ ಎಂದು ಹೇಳುತ್ತಿದ್ದ ಕಾಲ ಒಂದಿತ್ತು. ಈ ರೀತಿಯ ಸಮಸ್ಯೆ ದ.ಕ. ಜಿಲ್ಲೆಗೂ ಬರಬಾರದೆಂದರೆ ಎಲ್ಲರೂ ಜಲ ಸಂರಕ್ಷಣೆಯ ಕಾರ್ಯದ ಕಡೆ ಹೆಚ್ಚು ಗಮನ ಹರಿಸುವ ಪ್ರಮೇಯ ಉಂಟಾಗಿದೆ ಎಂದು ಹೇಳಿದರು.

ಕಟ್ಟಡಗಳಿಗೆ ಪರವಾನಿಗೆ ಕೊಡುವಾಗ ಮಳೆ ನೀರು ಕೊಯ್ಲು ಕಡ್ಡಾಯ:

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಾಗಾರದಲ್ಲಿ ಮುಖ್ಯವಾಗಿ ಜಲ ಕ್ಷಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ತಿಳಿಸಲಾಗುತ್ತದೆ. ಏಕೆಂದರೆ ಅಂತರ್ಜಲ ಮಟ್ಟ ನಮ್ಮ ತಾಲೂಕಿನಲ್ಲಿ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಸಾಧ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಮಹಾತ್ಮ ಗಾಂಧಿ ನರೇಗಾ ಯೋಜನೆ ಮೂಲಕ ಗುಡ್ಡ-ಬೆಟ್ಟ, ಇಳಿಜಾರಿನಲ್ಲಿ ಇಂಗು ಗುಂಡಿ ನಿರ್ಮಿಸುವುದರಿಂದ ಹಾಗೂ ಪ್ರತಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಮಾಡುವ ಮೂಲಕ ಇಂಗಿಸುವ ಕೆಲಸವನ್ನೂ ಮಾಡಬೇಕಿದೆ. ಮುಂದಕ್ಕೆ ಪ್ರತಿ ಕಟ್ಟಡಕ್ಕೆ ಪರವಾನಿಗೆ ನೀಡುವಾಗ ಮಳೆ ನೀರ ಕೊಯ್ಲು ಕಡ್ಡಾಯವಾಗಿ ಮಾಡಿಯೇ ಪರವಾನಿಗೆ ನೀಡುವ ಕೆಲಸಗಳು ಕ್ಷೇತ್ರಮಟ್ಟದ ಅಧಿಕಾರಿಗಳು ನಡೆಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ಮಾತನಾಡಿ, ದಕ ಜಿಲ್ಲೆಯಲ್ಲಿ ಹೆಚ್ಚು ಮಳೆ ಬಿದ್ದರೂ ಅವೆಲ್ಲವೂ ಜಲಾನಯನವನ್ನು ಸೇರಿ ಸಮುದ್ರ ಸೇರುತ್ತಿದೆ. ಆದರೆ ಮಳೆ ನೀರನ್ನು ಇಂಗಿಸುವ ಕೆಲಸವಾಗುತ್ತಿಲ್ಲ. ಇದಷ್ಟೇ ಅಲ್ಲದೆ ದಕ. ಜಿಲ್ಲೆಯಲ್ಲಿ ಕೃಷಿಗಾಗಿ ಭೂ/ ಅರಣ್ಯ ಪ್ರದೇಶ ಒತ್ತುವರಿಯಾಗುತ್ತಿದೆ. ಇದರಿಂದ ಪ್ರಕೃತಿ ಕಾಡಿನ ನಾಶ ಹೆಚ್ಚಾಗುತ್ತಿದೆ. ಹಾಗಾಗಿ ಮಳೆ ನೀರಿನ ಸಂರಕ್ಷಣೆ ಕ್ಷೀಣಿಸುತ್ತಿದೆ. ವಿಶೇಷವಾಗಿ ಜಿಲ್ಲೆಯ ಭೂಪ್ರದೇಶ ಹೆಚ್ಚಾಗಿ ಕೆಂಪು ಕಲ್ಲಿನಿಂದ ಆವೃತವಾಗಿರುವುದರಿಂದ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಇದೆ. ಈ ನಿಟ್ಟಿನಲ್ಲಿ ನೀರನ್ನು ಇಂಗಿಸುವ ಕೆಲಸವನ್ನು ಮಾಡಬೇಕಿದೆ.

ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಮಾತನಾಡಿ, ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ಇಂಗಿಸುವ ಕೆಲಸಕ್ಕೆ ಗಿಡ-ಮರಗಳನ್ನು ನೆಡುವುದು ಬಹು ಮುಖ್ಯ. ಮಳೆ ನೀರು ನೇರವಾಗಿ ಭೂಮಿಗೆ ಬೀಳುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ. ಇದನ್ನು ತಪ್ಪಿಸಲು ಜಲ ಸಂರಕ್ಷಣಾ ಕಾರ್ಯ ಅತಿ ಮುಖ್ಯ ಎಂದರು.

ಅಂತರ್ಜಲ ಕಾರ್ಯಾಗಾರ

ಸಂಪನ್ಮೂಲ ವ್ಯಕ್ತಿಯಾದ ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಶೇಕ್ ದಾವೂದ್ ಮಾತನಾಡಿ, ಭೌಗೋಳಿಕ ಚಿತ್ರಣ ಮತ್ತು ಅಂತರ್ಜಲ ಎಂದರೇನು. ಮಳೆ ನೀರು ಇಂಗುವ ಪ್ರಕ್ರಿಯೆ, ಕುಡಿಯುವ ನೀರು ಮೌಲ್ಯವನ್ನು ತಿಳಿಸುವ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಮಂಡಿಸಿದರು. ಮಳೆ ನೀರನ್ನು ಇಂಗಿಸಲು ಅಗತ್ಯ ಮಳೆ ನೀರ ಕೊಯ್ಲು, ಕಿಂಡಿ ಅಣೆಕಟ್ಟು, ಕೊಳವೆ ಬಾವಿ ಮರುಪೂರಣೆ, ನೀರಿನ ಶುದ್ಧೀಕರಣ, ಹೀಗೆ ನೀರನ್ನು ಭೂಮಿಗೆ ಇಂಗುವಂತೆ ಮಾಡಲು ಉಪಚರಿಸಬೇಕಾದ ವಿಧಾನಗಳನ್ನು ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ರಾಸಾಯನಿಕ ತಜ್ಞರಾದ ವಿಜಯಲಕ್ಷ್ಮಿ ಮಾತನಾಡಿ, ನೀರಿನ ವಿಧ, ಕುಡಿಯಲು ಯೋಗ್ಯವಾದ ನೀರೆಂದರೇನು, ಕುಡಿಯುವ ನೀರಿನಲ್ಲಿರಬೇಕಾದ ಖನಿಜಾಂಶಗಳು, ಅಶುದ್ಧ ನೀರನ್ನು ಕುಡಿಯುವುದರಿಂದ ಕಂಡುಬರುವ ರೋಗಗಳು, ಗುಣಲಕ್ಷಣಗಳು, ನೀರಿನ ಪರೀಕ್ಷೆಯ ಅವಶ್ಯಕತೆಯ ಕುರಿತು ವಿಸ್ತಾರವಾಗಿ ತಿಳಿಸಿದರು. ಕಾರ್ಯಾಗಾರದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಅನುಷ್ಟಾನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಅಂತರ್ಜಲ ಇಲಾಖೆಯ ಭೂ ವಿಜ್ಞಾನಿ ಸಿದ್ದೇಶ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಜಿಲ್ಲಾ ಅಂತರ್ಜಲ ಇಲಾಖೆಯ ಸಿಬ್ಬಂದಿ ಪ್ರಸಾದ್ ವಂದಿಸಿದರು. ಪುತ್ತೂರು ತಾ.ಪಂ. ಐಇಸಿ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here