ಹಾಡಿ, ನಲಿದು, ಸಂಭ್ರಮಿಸಿ ಕಲಿತ ಸರಕಾರಿ ಶಾಲಾ ಮಕ್ಕಳು
ಬೆಟ್ಟಂಪಾಡಿ: ಡಂ.. ಡಂ.. ತಾಲೂಕಿನ ಮೂಲೆಯಲ್ಲಿರುವ ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ನಿಡ್ಪಳ್ಳಿ ಗ್ರಾಮದ ಮುಂಡೂರು – 1 ಶಾಲೆಯಲ್ಲಿ ಜ. 30 ರಂದು ಡಂ ಡಂ ಡೋಲಿನ ಶಬ್ದ ಕೇಳಿಸಿತು.. ಹಕ್ಕಿಗಳ ಕಲರವ ಚಿಲಿಪಿಲಿಗಳ ಜೊತೆಗೆ ಮಕ್ಕಳ ಕಲರವ, ಪುಟಾಣಿಗಳ ಚಿಲಿಪಿಲಿ ಧ್ವನಿಗೂಡಿಸಿತ್ತು. ಬಣ್ಣ ಬಣ್ಣದ ತೋರಣಗಳ ಮಧ್ಯೆ ಚಿನ್ನ ರನ್ನರು ಹಾಡಿ, ಕುಣಿದು ಸಂಭ್ರಮಿಸಿ ಕಲಿತರು. ಮಕ್ಕಳ ಮೊಗದ ಸಂಭ್ರಮ ಕಾಣಲು ಬಂದ ಪೋಷಕರು ಮನದೊಳಗೆ ಹಿತಗೊಂಡರು.. ಆಟ, ಊಟ, ಪಾಠದ ಜಾತ್ರೆಯಲ್ಲಿ ಸರಕಾರಿ ಶಾಲೆಯ ಮಕ್ಕಳು ಸಡಗರದಿಂದ ಪಾಲ್ಗೊಂಡರು..
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬೆಟ್ಟಂಪಾಡಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು – 1 ಇದರ ಜಂಟಿ ಆಶ್ರಯದಲ್ಲಿ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ, ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ಜ. 30 ರಂದು ನಿಡ್ಪಳ್ಳಿಯ ಮುಂಡೂರು ಶಾಲೆಯಲ್ಲಿ ನಡೆಯಿತು.
ನೈಜ ಉದ್ದೇಶ ಈಡೇರಲಿ – ಗೀತಾ ಡಿ.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿದ ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಡಿ. ಯವರು ಮಾತನಾಡಿ ‘ಮಕ್ಕಳ ಕಲಿಕಾ ಹಬ್ಬದಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಬೇರೆ ಬೇರೆ ಆಯಾಮಗಳಲ್ಲಿರುವುದರಿಂದ ಇದು ಮಕ್ಕಳಲ್ಲಿ ಕಲಿಕಾ ಆಸಕ್ತಿ ಬರಿಸಿ, ಈ ಹಬ್ಬದ ಉದ್ದೇಶ ಈಡೇರಲಿ’ ಎಂದು ಹೇಳಿದರು.
ಎನ್‌ಇಪಿ ಸರಕಾರಿ ಶಾಲೆಗಳನ್ನು ಸದೃಢಗೊಳಿಸಲಿದೆ – ಲೋಕೇಶ್ ಎಸ್.ಆರ್.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ರವರು ಮಾತನಾಡಿ ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಮೇಲೆ ಸರಕಾರಿ ಶಾಲೆಯಲ್ಲಿಯೇ ಎಲ್‌ಕೆಜಿ, ಯುಕೆಜಿ ಸೇರಿದಂತೆ 5 ಹಂತದ ಫೌಂಡೇಶನ್ ಕಲಿಕೆ ಬರಲಿದೆ. ಎಲ್ಲಾ ರೀತಿಯ ಸೌಲಭ್ಯಗಳು ಸರಕಾರಿ ಶಾಲೆಗಳಿಗೆ ಬರುವುದರ ಮುಖೇನ ಸರಕಾರಿ ಶಾಲೆಗಳು ಸದೃಢವಾಗಲಿವೆ’ ಎಂದರು.
ಕೊನೆಯ ಶಾಲೆಯಾದರೂ ಸೌಕರ್ಯ ಎಲ್ಲವೂ ಇದೆ – ರಾಧಾಕೃಷ್ಣ ಬೋರ್ಕರ್
ತಾ.ಪಂ. ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ರವರು ಕಲ್ಪವೃಕ್ಷದ ಹಿಂಗಾರ ಅರಳಿಸಿ ಚಾಲನೆ ನೀಡಿ ಮಾತನಾಡಿ ‘ಕರ್ನಾಟಕದ ಬಾರ್ಡರ್ ಕೊನೆಯ ಶಾಲೆಯಲ್ಲಿ ಇವತ್ತು ಹಬ್ಬ ಉತ್ತಮ ರೀತಿಯಲ್ಲಿ ಆಯೋಜನೆಗೊಂಡಿದೆ. ನಮ್ಮ ಪೋಷಕರಲ್ಲಿ ನಮ್ಮ ಕಾರ್ಯಕ್ರಮ ಎಂಬ ಭಾವನೆ ಬಂದಿದೆ. ರಂಗಮಂದಿರ ನಿರ್ಮಿಸುವ ಯೋಜನೆ ಇದೆ. ಈಗಾಗಲೇ ಸ್ಮಾರ್ಟ್ ಕ್ಲಾಸ್, ಶುದ್ದ ಕುಡಿಯುವ ನೀರಿನ ಘಟಕ ದೊರೆತಿದೆ.
ಪುತ್ತೂರು ತಾಲೂಕಿನ ಶೈಕ್ಷಣಿಕ ಸಂಸ್ಥೆಗಳಿಗೆ 5 ಕೋಟಿ ರೂ. ಅನುದಾನ ನೀಡಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ತಾಲೂಕು ಪಂಚಾಯತ್ ಆಡಳಿತಾವಧಿಯಲ್ಲಿಯೂ ಈ ಶಾಲೆಗೆ ಅನೇಕ ಅನುದಾನಗಳನ್ನು ನೀಡಿರುವ ಬಗ್ಗೆ ಉಲ್ಲೇಖಿಸಿದರು.
ಮಕ್ಕಳ ಚಿಂತನೆಯ ದಿಕ್ಕು ಬದಲಿಸಬೇಕಿದೆ – ವೆಂಕಟ್ರಮಣ ಬೋರ್ಕರ್
ಮುಖ್ಯ ಅತಿಥಿಗಳಾಗಿದ್ದ ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರು ಮಾತನಾಡಿ ‘ ಮನದ ಕತ್ತಲು ನಿವಾರಿಸಿ ದೀಪ ಬೆಳಗುತ್ತದೆ. ಮೊಬೈಲ್ ಮಕ್ಕಳ ಶಿಕ್ಷಣ ಮೇಲೆ ಅಡ್ಡ ಪರಿಣಾಮ ಬೀರುತ್ತಿವೆ. ಮಕ್ಕಳ ಮಾನಸಿಕ ಚಿಂತನೆಯ ದಿಕ್ಕನ್ನು ಬದಲಿಸುವ ಹಬ್ಬವಾಗಿ ನಿರಂತರವಾಗಿ ಇಂತಹ ಹಬ್ಬ ಕಲಿಕೆಯಲ್ಲಿ ಮೂಡಿಬರಲಿ’ ಎಂದು ಆಶಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಸ್ವಾಗತಾರ್ಹ – ವಾರಿಜಾ
ನಿವೃತ್ತ ಮುಖ್ಯಶಿಕ್ಷಕಿ ವಾರಿಜಾ ರವರು ಮಾತನಾಡಿ ‘ಮಕ್ಕಳಲ್ಲಿ ದುಶ್ಚಟ, ವಿನಯತೆ, ವಿಧೇಯತೆ ಇಲ್ಲದಿರುವುದು, ಅತಿಯಾದ ಮೊಬೈಲ್ ಗೀಳು ಮಕ್ಕಳ ಭವಿಷ್ಯ ಹಾಳಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ‘ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿಗೆ ತಂದಿರುವುದು ಸಂತಸದ ವಿಚಾರ. ಕುಗ್ರಾಮವಾಗಿದ್ದ ಮುಂಡೂರು ಇಂದು ಇಷ್ಟೊಂದು ದೊಡ್ಡ ಹಬ್ಬ ನಡೆಸುವಲ್ಲಿಯವರೆಗೆ ಮುಂದುವರಿದಿದೆ ಎಂದರೆ ಅತ್ಯಂತ ಸಂತೋಷವಾಗುತ್ತಿದೆ’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಕುಮಾರ್ ರೈಯವರು ಮಾತನಾಡಿ ‘ಸಮಾಜದಲ್ಲಿ ದೊಡ್ಡ ಶಕ್ತಿಯಾಗಿ ಬಾಳಿ ಬದುಕಿ. ಉನ್ನತ ಸ್ಥಾನಗಳನ್ನು ಏರುವ ಕನಸಿನೊಂದಿಗೆ ಕಲಿತಾಗ ಆ ಕನಸು ನನಸಾಗಿ ಊರಿಗೆ ಕೀರ್ತಿ ತರುವ ಮಕ್ಕಳಾಗಿ ಬೆಳಗಿ’ ಎಂದು ಶುಭ ಹಾರೈಸಿದರು.
ಮಕ್ಕಳು ದೇವರಿಗೆ ಸಮಾನ – ಶಿವಪ್ಪ ಪೂಜಾರಿ
ತಾ.ಪಂ. ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲುರವರು ಮಾತನಾಡಿ ‘ಮಕ್ಕಳು ದೇವರಿಗೆ ಸಮಾನ. ನನ್ನ ಅವಧಿಯಲ್ಲಿಯೂ ಇಲ್ಲಿನ ಅಂಗನವಾಡಿ, ಶಾಲೆಗೆ ಅನೇಕ ಅಭಿವೃದ್ಧಿ ಅನುದಾನ ಕೊಟ್ಟಿದ್ದೇವೆ. ಊರಿನ ಶಾಲೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಇರುವುದರಿಂದ ಮುಂದಿನ ದಿನಗಳಲ್ಲಿ ಶಾಲೆ ಅತ್ಯುತ್ತಮವಾಗಿ ಪ್ರಗತಿ ಹೊಂದಲಿ’ ಎಂದು ಶುಭಾಶಿಸಿದರು.
ನಿಡ್ಪಳ್ಳಿ ಪಂಚಾಯತ್ ಸದಸ್ಯೆ ನಂದಿನಿ ಆರ್. ರೈ ಉಪಸ್ಥಿತರಿದ್ದರು.
ದಾನಿಗಳಿಗೆ ಸನ್ಮಾನ
ಶಾಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಉದಾರವಾಗಿ ದೇಣಿಗೆ ನೀಡಿರುವ ಮುಂಬೈಯ ಉದ್ಯಮಿ ನುಳಿಯಾಲು ಚಿತ್ತರಂಜನ್ ಶೆಟ್ಟಿ, ಸಂತೋಷ್ ಯು. ಬೇರಿಕೆ ಪರವಾಗಿ ಅವರ ತಾಯಿ ಸೀತಮ್ಮ, ಅನುಷಾ ಯು.ಜಿ. ಯವರ ತಾಯಿ, ಶಾಲಾ ಮುಖ್ಯಗುರು ಆಶಾ ರವರು ಸನ್ಮಾನ ಸ್ವೀಕರಿಸಿದರು.
ಸಮಾನತೆಗೆ ಇನ್ನೊಂದು ಹೆಸರು ಗುರು- ಚಿತ್ತರಂಜನ್ ಶೆಟ್ಟಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ತರಂಜನ್ ಶೆಟ್ಟಿಯವರು ಮಾತನಾಡಿ ‘ದೈಹಿಕ ಮತ್ತು ಮಾನಸಿಕ ಆರೋಗ್ಯ ನೀಡುವ ಕಬಡ್ಡಿಯಂತಹ ಆಟಗಳನ್ನು ಮಕ್ಕಳಲ್ಲಿ ಮತ್ತೆ ಆಡಿಸಬೇಕಾಗಿದೆ. ನಾವು ಕಲಿಯುತ್ತಿದ್ದ ಸಂದರ್ಭದಲ್ಲಿನ ಶಿಕ್ಷಣಗಳು ಈಗಿಲ್ಲ. ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುವ ಗುರು ಸಮಾನತೆಗೆ ಇನ್ನೊಂದು ಹೆಸರು. ಶಾಲೆಯ ಕೀರ್ತಿ ಬೆಳಗಲಿ. ನಮ್ಮ ಬದುಕಿಗೆ ದಾರಿ ತೋರಿಸುವ ಶಿಕ್ಷಕರಿಗೆ ನಾವು ಸದಾ ಗೌರವ ಸಲ್ಲಿಸೋಣ’ ಎಂದು ಹೇಳಿ ಮುಂಡೂರು ಶಾಲೆಯಲ್ಲಿನ ತಮ್ಮ ವಿದ್ಯಾಭ್ಯಾಸ ಅವಧಿಯನ್ನು ಮೆಲುಕು ಹಾಕಿದರು.
ಕೋವಿಡ್ ನಂತರದ ಕಂದಕ ನಿವಾರಣೆಗೆ ‘ಕಲಿಕಾ ಹಬ್ಬ’ – ವಿಜಯ ಕುಮಾರ್
ಕಲಿಕಾ ಹಬ್ಬದ ನೋಡಲ್ ಅಧಿಕಾರಿ ವಿಜಯಕುಮಾರ್ ಪ್ರಸ್ತಾವನೆಗೈದು ಮಾತನಾಡಿ ‘ ಕೋವಿಡ್ ನಂತರದ ಅವಧಿಯಲ್ಲಿ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಸವಾಲಾಗಿತ್ತು. ಕಲಿಕಾ ಚೇತರಿಕೆಯ ಮೂಲಕ ಕಲಿಕಾ ಕಂದಕವನ್ನು ನಿವಾರಿಸಲು ಪ್ರಯತ್ನ. ಇದರ ಕೊನೆಯ ಕಾರ್ಯಕ್ರಮವಾಗಿ ಕಲಿಕಾ ಹಬ್ಬ ರಾಜ್ಯದಾದ್ಯಂತ ಸಂಯೋಜನೆಗೊಂಡಿದೆ. ಶೈಕ್ಷಣಿಕವಾಗಿ ವಿನೂತನ ಪ್ರಯೋಗಗಳ ಮೂಲಕ ಸಂತಸದಾಯಕ, ಚೈತನ್ಯದಾಯಕ ಕಲಿಕೆ ನಡೆಯುತ್ತಿದೆ. ಊರಿನವರು, ಪೋಷಕರು, ಎಸ್‌ಡಿಎಂಸಿಯವರು ನಿರಂತರ ಈ ಹಬ್ಬದ ಯಶಸ್ಸಿನ ಹಿಂದೆ ಶ್ರಮವಹಿಸಿದ್ದಾರೆ ‘ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಕರ್ಕೇರರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ಬಾಬು, ವೆಂಕಪ್ಪ ನಾಯ್ಕ, ಗುರುವ, ಚಂದ್ರಶೇಖರ, ಸತೀಶ್, ಶ್ರೀಧರ ಭಟ್, ಸೀತಮ್ಮ ರವರು ಅತಿಥಿಗಳನ್ನು ಶಾಲು, ತಾಂಬೂಲ ನೀಡಿ ಗೌರವಿಸಿದರು. ಅತಿಥಿಗಳಿಗೆ ಬ್ಯಾಡ್ಜ್ ಹಾಗೂ ಕಲಿಕಾ ಹಬ್ಬದ ವಿಶೇಷ ಪೇಟ ತೊಡಿಸಲಾಯಿತು.
ಮುಂಡೂರು ಶಾಲಾ ವಿದ್ಯಾರ್ಥಿಗಳಾದ ಗಗನ, ರಕ್ಷಿತ ಮಧುಶ್ರೀ ಶ್ರೀಜಾ ಪ್ರಾರ್ಥಿಸಿದರು. ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ ಸ್ವಾಗತಿಸಿ, ಮುಖ್ಯಗುರು ಆಶಾ ವಂದಿಸಿದರು. ಸೂರಂಬೈಲು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಾಗೇಶ್ ಪಾಟಾಳಿ ಕೆ. ನಿರೂಪಿಸಿದರು.
‘ಕೊನೆಯ ಶಾಲೆ’ ಯಲ್ಲಿ ಜಾತ್ರೆಯ ಸಂಭ್ರಮ
ಕಲಿಕಾ ಹಬ್ಬವು ವಾರ್ಷಿಕೋತ್ಸವ ಸಂಭ್ರಮಕ್ಕಿಂತಲೂ ಮಿಗಿಲು ಎಂಬುದನ್ನು ಇಲ್ಲಿನ ವಾತಾವರಣ ಕಲ್ಪಿಸಿಕೊಟ್ಟಿತ್ತು. ಕೇರಳ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ತಾಲೂಕಿನ ಕೊನೆಯ ಶಾಲೆಯಾಗಿರುವ ಇಲ್ಲಿ ಮಕ್ಕಳ ನೈಜ ಸಂಭ್ರಮಕ್ಕೆ ಸಾಕ್ಷಿಯಾಗಿ ಬಣ್ಣ ಬಣ್ಣರ ತೋರಣ, ಆಕರ್ಷಕ ಬರಹಗಳಿಂದ ಕೂಡಿದ ಭಿತ್ತಿಪತ್ರಗಳು, ವಿನ್ಯಾಸಪೂರಿತ ಚಿತ್ರ, ಚಿತ್ತಾರಗಳಿಂದ ಶಾಲೆಯನ್ನು ಶೃಂಗಾಯಮವಾಗಿ ಮಾಡಲಾಗಿತ್ತು. ಬೆಟ್ಟಂಪಾಡಿ ಕ್ಲಸ್ಟರ್ ನ 12 ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 120 ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಪರಿಣಾಮ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.
4 ಕಾರ್ನರ್ ಗಳಲ್ಲಿ ಕಲಿಕೆ
ಏಕಾಗ್ರತೆ ಕಲಿಯಲು ‘ಕಾಗದ – ಕತ್ತರಿ’ ಕಾರ್ನರ್, ವಿಜ್ಞಾನದ ಆಟಿಕೆಗಳೊಂದಿಗೆ ಪ್ರಶ್ನೆಯನ್ನು ಪ್ರಜ್ಞೆಯನ್ನಾಗಿಸುವ ‘ಮಾಡು – ಹಾಡು’ ಕಾರ್ನರ್,
ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಪ್ರದರ್ಶಿಸುವ, ಅಭಿನಯ ಸಂವಾದ ‘ಹಾಡು – ಹಾಡು’ ಕಾರ್ನರ್, ಮರದ ಅಧ್ಯಯನ, ಮರದ ಎತ್ತರ ಅಳತೆ, ಪರಿಸರ ಸಂದರ್ಶನ, ಜೀವ ಭಾವ ವಿಚಾರಗಳ ಕಲಿಯುವ ‘ಊರು ತಿಳಿಯೋಣ’ ಕಾರ್ನರ್ ಮೂಲಕ ಕಲಿಕಾ ಹಬ್ಬ ಎರಡು ದಿನಗಳ ಕಾಲ ಮೂಡಿ ಬರಲಿದೆ.
ಉಚಿತ ಬಿಪಿ ಶುಗರ್ ಟೆಸ್ಟ್
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳ ಪೋಷಕರು 35 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಇಲಾಖೆ ವತಿಯಿಂದ ಉಚಿತ ಬಿಪಿ ಶುಗರ್ ಪರೀಕ್ಷೆ ನಡೆಸಲಾಗಿತ್ತು. ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣ ಆರೋಗ್ಯ ಕಾಳಜಿ ಇದರ ಉದ್ದೇಶವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಗೀತಾ ಹೇಳಿದರು.
ಹಬ್ಬದ ಮೆರವಣಿಗೆ
ಕಾರ್ಯಕ್ರಮಕ್ಕೆ ಮೊದಲು ಮುಂಡೂರು ಶಾಲಾ ದ್ವಾರದ ಬಳಿಯಿಂದ ಆಕರ್ಷಕ ಮೆರವಣಿಗೆ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಕರ್ಕೇರ ರವರು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಿಕಾ ಫಲಕಗಳನ್ನು ಹಿಡಿದುಕೊಂಡ ಮಕ್ಕಳು ಬ್ಯಾಂಡ್ ನಾದಕ್ಕೆ ಹೆಜ್ಜೆ ಹಾಕಿದರು.