ಹಾಲಿನ ಸೊಸೈಟಿಗಳಲ್ಲಿ ಹಾಲಿನ ಉತ್ಪನ್ನಗಳ ಮಾರಾಟವೂ ಆಗಬೇಕು; ಸಂಜೀವ ಮಠಂದೂರು
ನೆಲ್ಯಾಡಿ: ಬಜತ್ತೂರು ಗ್ರಾಮದ ವಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ ಮತ್ತು ನಾಮಫಲಕ ಅನಾವರಣ ಜ.30ರಂದು ಸಂಘದ ವಠಾರದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಅವರು ಬಿಎಂಸಿ ಕಟ್ಟಡ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಹಾಲು ಉತ್ಪಾದಕರ ಸಹಕಾರಿ ಸಂಘಗಳು ಹಾಲು ಸಂಗ್ರಹಕ್ಕೆ ಮಾತ್ರ ಸೀಮಿತಗೊಳ್ಳದೇ ಕೆಎಂಎಫ್ ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರವೂ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕೆಂದು ಹೇಳಿದರು. ರಾಜ್ಯದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ನಿಟ್ಟಿನಲ್ಲಿ ಕೇಂದ್ರ ಸಹಕಾರ ಸಚಿವರ ಗಮನಕ್ಕೆ ತರಲಾಗಿದೆ. ಕೃಷಿ ಉತ್ಪನ್ನಗಳ ಧಾರಣೆ ಕುಸಿತಗೊಂಡ ಸಂದರ್ಭದಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ’ಸೆಕೆಂಡರಿ ನಿರ್ದೇಶನಾಲಯ’ ಜಾರಿಗೆ ತರಲಾಗಿದೆ. ಯಶಸ್ವಿನಿ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತರಲಾಗಿದೆ. ಪಶುವೈದ್ಯರ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಮುಗೇರಡ್ಕ ತೂಗುಸೇತುವೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು:
ಮುಗೇರಡ್ಕ ತೂಗು ಸೇತುವೆ ಮಳೆಗೆ ಕೊಚ್ಚಿ ಹೋದ ಸಂದರ್ಭದಲ್ಲಿ ಆ ಭಾಗದ ಹೈನುಗಾರರು, ಶಾಲಾ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿ ಮತ್ತೆ ತೂಗು ಸೇತುವೆ ನಿರ್ಮಾಣಕ್ಕೆ 3 ಕೋಟಿ ರೂಪಾಯಿಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಬೆಳ್ತಂಗಡಿ ಶಾಸಕರು ಅಲ್ಲಿಗೆ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತೂಗು ಸೇತುವೆ ನಿರ್ಮಾಣ ಕೈ ಬಿಡಲಾಯಿತು ಎಂದು ಸಂಜೀವ ಮಠಂದೂರು ಹೇಳಿದರು.
ಪಾರದರ್ಶಕ ಆಡಳಿತ-ಸುಚರಿತ ಶೆಟ್ಟಿ:
ಸಾಂದ್ರ ಶೀತಲೀಕರಣ ಘಟಕ ಉದ್ಘಾಟಿಸಿದ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ಸದೃಢ, ಸಶಕ್ತ ಭಾರತ ನಿರ್ಮಾಣಕ್ಕೆ ಹಳ್ಳಿಗಳಲ್ಲಿನ ಕೃಷಿ, ಹೈನುಗಾರಿಕೆಯೂ ಪೂರಕವಾಗಿದೆ. ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ಗುಣಮಟ್ಟದ ಒಕ್ಕೂಟವಾಗಿ ಪಾರದರ್ಶಕ ಆಡಳಿತ ಮಾಡುತ್ತಿದೆ. ಇದಕ್ಕೆಲ್ಲಾ ಒಕ್ಕೂಟದ ನಿರ್ದೇಶಕರು, ಅಧಿಕಾರಿಗಳು ಹಾಗೂ ಹೈನುಗಾರರೇ ಕಾರಣರಾಗಿದ್ದಾರೆ. ನಂದಿನಿ ಬ್ರಾಂಡ್ ಉತ್ಪನ್ನಗಳು ಅಮೂಲ್ ಬ್ರಾಂಡ್‌ಗೆ ಸರಿಸಮಾನವಾಗಿ ಬೆಳೆದಿದೆ ಎಂದರು. ಹಾಲಿಗೆ ಈಗ ಪ್ರತಿಕೂಲ ಪರಿಸ್ಥಿತಿ ಇದ್ದರೂ ಇದನ್ನು ಮೆಟ್ಟಿ ನಿಂತು ಹಾಲು ಉತ್ಪಾದಕರು ಸ್ವಾವಲಂಬಿಯಾಗಿ ಬೆಳೆದು ನಿಲ್ಲಬೇಕು. ಈ ನಿಟ್ಟಿನಲ್ಲಿ ಯುವ ಜನಾಂಗವೂ ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕಾಗಿದೆ ಎಂದು ಸುಚರಿತ ಶೆಟ್ಟಿ ಹೇಳಿದರು.
ನಾಮಫಲಕ ಅನಾವರಣಗೊಳಿಸಿದ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಅವರು ಮಾತನಾಡಿ, ಹಾಲು ಉತ್ಪಾದಕರ ಒಕ್ಕೂಟ ಆರಂಭಗೊಂಡ ಬಳಿಕ ಹಾಲಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಈಗ ಜಿಲ್ಲೆಯಲ್ಲಿ 4.60 ಲಕ್ಷ ಲೀ.ಹಾಲು ಉತ್ಪಾದನೆಯಾಗುತ್ತಿದ್ದರೂ 50 ಸಾವಿರ ಲೀ.ಹಾಲು ಕೊರತೆ ಇದೆ. ಒಕ್ಕೂಟದಿಂದ ಸಿಗುವ ಸವಲತ್ತು ಪಡೆದುಕೊಂಡು ಹೈನುಗಾರರು ಹಾಲು ಉತ್ಪಾದನೆ ಹೆಚ್ಚಳ ಮಾಡಬೇಕು. ಹೈನುಗಾರರಿಗೆ ಶೂನ್ಯ ಬಡ್ಡಿ ಸಾಲ, ಶೇ.3ರ ಬಡ್ಡಿಯಲ್ಲಿ ಸಾಲ ಸಿಗುವಂತಾಗಬೇಕು. ಶಾಸಕರ ಮುತುವರ್ಜಿಯಿಂದ ಪುತ್ತೂರಿನಲ್ಲಿ ಕೆಎಂಎಫ್ ಘಟಕ ಸ್ಥಾಪನೆ ಆಗಬೇಕೆಂದು ಹೇಳಿದರು. ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್ ಅವರು ಮಾತನಾಡಿ, ಸಾಂದ್ರ ಶೀತಲೀಕರಣ ಘಟಕ ಸ್ಥಾಪನೆಯಿಂದ ಹಾಲಿನ ಗುಣಮಟ್ಟ ಹೆಚ್ಚಳ, ಸಾಗಾಣಿಕೆ ವೆಚ್ಚ ಕಡಿತ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ. ವಳಾಲಿನಲ್ಲಿ ಆರಂಭಗೊಂಡಿರುವುದು 150ನೇ ಬಿಎಂಸಿ ಆಗಿದೆ. ಪುತ್ತೂರು ತಾಲೂಕಿನಲ್ಲಿ 91 ಸಂಘಗಳಿದ್ದು ಈ ಪೈಕಿ 17 ಸಂಘಗಳಲ್ಲಿ ಬಿಎಂಸಿ ಆಗಿದೆ. ಜೂನ್ ವೇಳೆಗೆ ’ಕ್ಯಾನ್‌ಲೆಸ್ ರೂಟ್’ ಆಗಲಿದೆ. ರೈತರಿಗೆ ಪೂರಕವಾದ ಯೋಜನೆಗಳ ಜಾರಿಗೆ ಒಕ್ಕೂಟ ಬದ್ಧವಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ವಸಂತ ಗೌಡ ಅವರು ಮಾತನಾಡಿ, ಮಾಜಿ ಅಧ್ಯಕ್ಷರ, ಹಿರಿಯ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಂಘವೂ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಈಗ ಬಿಎಂಸಿ ಕಟ್ಟಡ ಮಾಡಲಾಗಿದ್ದು ಶಾಸಕರ 5 ಲಕ್ಷ ರೂ. ಅನುದಾನದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದೆ. ಮುಂದೆ ಮೇಲ್ಛಾವಣಿ ಆಗಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು. ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್ ಕೆ., ಸವಿತಾ ಎನ್.ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.
ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ., ದ.ಕ.ಜಿ.ಸ.ಹಾ.ಉ.ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಡಿ.ಆರ್. ಸತೀಶ್ ರಾವ್, ಬಿಎಂಸಿ ಉಪವ್ಯವಸ್ಥಾಪಕ ಡಾ.ಕೇಶವ ಸುಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಓ.ಉಮೇಶ, ಎಸ್.ಹೊನ್ನಪ್ಪ ಗೌಡ, ದಾಮೋದರ ಗೌಡ ಎಸ್., ಡಿ.ಕುಶಾಲಪ್ಪ ಗೌಡ, ಅಣ್ಣಿ ಪೂಜಾರಿ, ರಾಮಪ್ಪ ಪೂಜಾರಿ, ಸದಾನಂದ ಗೌಡ, ಪಿ.ಸುಲೋಚನಾ, ಸುಶೀಲ ಪಿ., ಕಮಲ, ಯಮುನಾರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಪದ್ಮಾವತಿ ಅವರು ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಸುಧಾಕರ ಎನ್. ಸ್ವಾಗತಿಸಿದರು. ವಿಸ್ತರಣಾಧಿಕಾರಿ ಮಾಲತಿ ಪಿ ಕಾರ್ಯಕ್ರಮ ನಿರೂಪಿಸಿದರು. ಮಾಲಿನಿ ಪ್ರಾರ್ಥಿಸಿದರು.
ಹಾಲು ಪರೀಕ್ಷಕ ಶಬೀರ್, ಸಹಾಯಕ ಸಿದ್ಧಾರ್ಥ್ ಟಿ.ಜಿ., ಕೃ.ಗ.ಕಾರ್ಯಕರ್ತ ಎ.ಕಿಶೋರ್ ಮಾಡ್ತಾ ಸಹಕರಿಸಿದರು. ನೆರೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ಸದಸ್ಯರು, ಸಂಘದ ಸದಸ್ಯರು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಸಿಹಿಭೋಜನ ನೀಡಲಾಯಿತು.
ಮಾಜಿ ಅಧ್ಯಕ್ಷರಿಗೆ ಸ್ಮರಣಿಕೆ:
ಸಂಘದ ಮಾಜಿ ಅಧ್ಯಕ್ಷರಾದ ಶ್ರೀಧರ ರಾವ್ ಮಣಿಕ್ಕಳ, ಪೌಲ್ ಯೂಜಿನ್ ಡಿ.ಸೋಜ, ದಿ.ಮಾಣಿಕ್ಯರಾಜ್ ಪಡಿವಾಳ್‌ರವರ ಪರವಾಗಿ ಅವರ ಪತ್ನಿ ಸ್ವರ್ಣಲತಾ ಪಡಿವಾಳ್, ರವಿಶಂಕರ ಭಟ್, ಸುಧಾಕರ ಎನ್.,ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಧ್ಯಕ್ಷರಿಗೆ ಸನ್ಮಾನ:
ಸಂಘದ ಅಧ್ಯಕ್ಷ ಪಿ.ವಸಂತ ಗೌಡ ಅವರನ್ನು ನಿರ್ದೇಶಕರು ಹಾಗೂ ಸದಸ್ಯರ ಪರವಾಗಿ ಶಾಲು, ಹಾರಾರ್ಪಣೆ, ಫಲತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು