`ಪರೀಕ್ಷಾ ಪೆ ಚರ್ಚಾ’ ಪ್ರಧಾನಿ ಮೋದಿ ಜೊತೆ ಸಂವಾದದಲ್ಲಿ ವಿವೇಕಾನಂದ ಆ.ಮಾ ಶಾಲೆಯ ತೇಜ ಚಿನ್ಮಯ ಹೊಳ್ಳ

0

ಪುತ್ತೂರು: ನವದೆಹಲಿಯ ಗಣರಾಜ್ಯೋತ್ಸವ ಮತ್ತು ಜ. 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಡೆದ ‘ಪರೀಕ್ಷಾ ಪೆ ಚರ್ಚಾ’ ಸಂವಾದ ಕಾರ್ಯಕ್ರಮದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ತೇಜ ಚಿನ್ಮಯ ಹೊಳ್ಳ ಅತಿಥಿಯಾಗಿ ಪಾಲ್ಗೊಂಡರು.


ಪ್ರಧಾನ ಮಂತ್ರಿಗಳೊಂದಿಗೆ ನಡೆದ ಪರೀಕ್ಷಾ ಪೇ ಚರ್ಚೆಯಲ್ಲಿ ಕರ್ನಾಟಕದಿಂದ ಒಟ್ಟು ನಾಲ್ವರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ದ.ಕ. ಜಿಲ್ಲೆಯಿಂದ ಆಯ್ಕೆಯಾದ ಈರ್ವರು ವಿದ್ಯಾರ್ಥಿಗಳಲ್ಲಿ ತೇಜ ಚಿನ್ಮಯ ಹೊಳ್ಳ ಮತ್ತು ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಹ್ಲಾದಮೂರ್ತಿ ಇದ್ದರು.

ಸಂವಾದದಲ್ಲಿ ಪಾಲ್ಗೊಂಡ ಬಳಿಕ ತೇಜ ಚಿನ್ಮಯರವರು ಪ್ರಧಾನಿ ಮೋದಿಯವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಇವರು ಜ. 26 ರಂದು ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಂಚೂಣಿ ಸಾಲಿನಲ್ಲಿ ಕುಳಿತು ಪರೇಡ್ ವೀಕ್ಷಿಸುವ ಅವಕಾಶ ಪಡೆದಿದ್ದರು. ಅಲ್ಲದೇ ಜ. 27 ರಂದು ಸಂಜೆ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ರವರ ಮನೆಯಲ್ಲಿ ನಡೆದ ‘ಸ್ನೇಹ ಕೂಟ’ ದಲ್ಲಿಯೂ ಪಾಲ್ಗೊಂಡರು. ಜ. 28 ಮತ್ತು 29 ರಂದು ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಕಡೆ ವಿಜ್ಞಾನ ಮ್ಯೂಸಿಯಂ ಹಾಗೂ ಇತರ ಕಡೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಜ. 29 ರಂದು ಸಂಜೆ ಗಣರಾಜ್ಯೋತ್ಸವದ ಸಮಾರೋಪದ ವೇಳೆ ರಕ್ಷಣಾ ಪಡೆಗಳಿಂದ ವಿಜಯ ಚೌಕಿಯಲ್ಲಿ ನಡೆದ ‘ಬೀಟಿಂಗ್ ರೀಟ್ರಿಟ್ಸ್’ ವೈವಿಧ್ಯಮಯ ಕವಾಯತು ಪ್ರದರ್ಶನ, ಪಥಸಂಚಲನ ಕಾರ್ಯಕ್ರಮವನ್ನೂ ವಿಶೇಷ ಆಹ್ವಾನಿತರಾಗಿ ವೀಕ್ಷಿಸಿದರು.

ಬಹುಮುಖ ಪ್ರತಿಭೆ ತೇಜ ಚಿನ್ಮಯ: ಕಲಿಕೆಯಲ್ಲಿಯೂ ತರಗತಿಗೆ ಟಾಪರ್ ಆಗಿರುವ ತೇಜರವರು ಈ ಬಾರಿ ಎಸ್‌ಎಸ್‌ಎಲ್‌ಸಿಯಾದರೂ ಸಹಪಠ್ಯ ಚಟುವಟಿಕೆಗಳಲ್ಲಿ ಅಷ್ಟೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶಾಸ್ತ್ರೀಯ ಸಂಗೀತದಲ್ಲಿ ಇತ್ತೀಚೆಗಷ್ಟೇ ಸೀನಿಯರ್ ಪರೀಕ್ಷೆ ಪೂರೈಸಿರುವ ಇವರು ಮೃದಂಗ, ವಾಯಲಿನ್ ನುಡಿಸುತ್ತಾರೆ. ಕೃಷಿಯಲ್ಲಿಯೂ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಇವರು ಎಸ್. ಹರೀಶ್ ಹೊಳ್ಳ ಮತ್ತು ಡಾ| ವಿದುಷಿ ಸುಚಿತ್ರಾ ಹೊಳ್ಳ ದಂಪತಿಯ ಪುತ್ರರಾಗಿದ್ದಾರೆ.

ಕರ್ನಾಟಕದ ನಾಲ್ವರಲ್ಲಿ ಓರ್ವ

ಒಡಿಶಾದಲ್ಲಿ ನಡೆದ ರಾಷ್ಟ್ರೀಯ ಕಲೋತ್ಸವದಲ್ಲಿ ಭಾಗವಹಿಸಿ ಮೊದಲ ಮೂರು ಪ್ರಶಸ್ತಿ ಪಡೆದ ಕರ್ನಾಟಕದ ಮೂವರನ್ನು ಮತ್ತು ಇನ್ನೋರ್ವ ವಿದ್ಯಾರ್ಥಿಯನ್ನು ‘ಪರೀಕ್ಷಾ ಪೆ ಚರ್ಚಾ’ ಗೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಓರ್ವರಾಗಿರುವ ತೇಜ ಚಿನ್ಮಯರವರು ಕಳೆದ ವರ್ಷ ನಡೆದ ರಾಜ್ಯಮಟ್ಟದ ಕಲೋತ್ಸವದಲ್ಲಿ ಪ್ರಶಸ್ತಿ ಗಳಿಸಿ ರಾಷ್ಟ್ರೀಯ ಕಲೋತ್ಸವದಲ್ಲಿ ಭಾಗವಹಿಸಿದ್ದರು. ಈ ಬಾರಿ ಇನ್ನೂ ಉತ್ತಮ ರೀತಿಯಲ್ಲಿ ತಯಾರಾಗಿದ್ದ ಇವರು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು ಪ್ರಧಾನಿ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದರು.

LEAVE A REPLY

Please enter your comment!
Please enter your name here