ಫೆ.10-12: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೃಷಿಯಂತ್ರ ಮೇಳ-ಕನಸಿನ ಮನೆ

0

300ಕ್ಕೂ ಹೆಚ್ಚು ಕಂಪನಿಗಳ ಮಳಿಗೆಗಳು ಭಾಗಿ ಕೃಷಿಯಂತ್ರಗಳ ಪ್ರದರ್ಶನ, ಪ್ರಾತ್ಯಕ್ಷಿಕೆ

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾಹಿತಿ

  • ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮ: ಕೊಡ್ಗಿ
  • ಕಲ್ಪ ತೆಂಗಿನಎಣ್ಣೆ ಮಾರುಕಟ್ಟೆಗೆ -ಕೃಷ್ಣಕುಮಾರ್
  • ಕ್ಯಾಂಪ್ಕೋ ಪೂರ್ಣ ಪ್ರಮಾಣದಲ್ಲಿ ಸಹಯೋಗ ನೀಡಿದೆ -ರವಿಕೃಷ್ಣ ಕಲ್ಲಾಜೆ

ಪುತ್ತೂರು: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನಾ ಪ್ರತಿಷ್ಠಾನ ಮತ್ತು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ ಕಾರ್ಯಕ್ರಮ ಫೆ.10ರಿಂದ 12ರವರೆಗೆ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮದ ವಿವರ ನೀಡಿದರು.

ಮೂರು ದಿನದ ಕಾರ್ಯಕ್ರಮ; ಕ್ಯಾಂಪ್ಕೋದ ಸುವರ್ಣ ಮಹೋತ್ಸವದ ಅಂಗವಾಗಿ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆ.10ರಿಂದ 12ರವರೆಗೆ ಐದನೇ ವರ್ಷದ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ ನೆರವೇರಿಸಲಿದ್ದಾರೆ. ಕೃಷಿ ಯಂತ್ರ ಮೇಳ, ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ಹೊಸ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಿ ತಾಂತ್ರಿಕತೆಯ ಲಾಭವನ್ನು ರೈತರಿಗೆ ತಲುಪಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. 300ಕ್ಕೂ ಹೆಚ್ಚು ಕಂಪನಿಗಳು ಮಳಿಗೆಗಳನ್ನು ತೆರೆದು ವಿವಿಧ ಸ್ತರದ ಕೃಷಿ ಯಂತ್ರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲಿದೆ. ಅಡಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ ಹಾಗೂ ಕೃಷಿಗೆ ಸಂಬಂಧಿಸಿದ ವಿಚಾರಗೋಷ್ಠಿಗಳನ್ನು ಆಯೋಜಿಸಿ ರೈತರಿಗೆ ತಂತ್ರಜ್ಞಾನದ ಮಾಹಿತಿಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು. ಕನಸಿನ ಮನೆಯ ಪ್ರಾತ್ಯಕ್ಷಿಕೆ ಮೂಲಕ ಕಟ್ಟಡ ನಿರ್ಮಾಣ ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೂ ತಿಳಿಸುವ ಯೋಜನೆ ಮಾಡಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ವೆಚ್ಚದ ಸಲಕರಣೆಗಳನ್ನು ಉಪಯೋಗಿಸಿ ಗೃಹ ನಿರ್ಮಾಣ ಕೌಶಲ್ಯದ ಬಗ್ಗೆ ಮಾಹಿತಿ ನೀಡಲಾಗುವುದು. ಒಟ್ಟು 75 ಸ್ಟಾಲ್‌ಗಳು ಇದರಲ್ಲಿ ಇರಲಿವೆ. ಅಲ್ಲದೆ 20ಕ್ಕೂ ಅಧಿಕ ಸ್ಟಾಲ್‌ಗಳಲ್ಲಿ ಸಾವಯವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ವಿಶೇಷವಾಗಿ ಇಲೆಕ್ಟ್ರಿಕ್ ಯಂತ್ರಗಳಿಗೆ ಯಂತ್ರಮೇಳದಲ್ಲಿ ಆದ್ಯತೆ ನೀಡಲಾಗಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.

ದಿ.ವಾರಣಾಶಿ ಸುಬ್ರಾಯ ಭಟ್‌ರವರ ಪ್ರಯತ್ನದಿಂದ ಇವತ್ತು ದೇಶದಾದ್ಯಂತ ಶಾಖೆಗಳನ್ನು ಹೊಂದಿರುವ ಕ್ಯಾಂಪ್ಕೋ ಸಂಸ್ಥೆ ರೈತರಿಗೆ ಉತ್ತಮ ದರ ನೀಡುವಲ್ಲಿ ಶ್ರಮ ವಹಿಸುತ್ತಿದೆ. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಚಾಕಲೇಟು ಕಾರ್ಖಾನೆಯಾಗಿದೆ. ರಬ್ಬರ್, ಕಾಳುಮೆಣಸು ಖರೀದಿಯೊಂದಿಗೆ ತೆಂಗಿನಕಾಯಿ ಖರೀದಿಗೆ ನಿರ್ಣಯ ಮಾಡಿದ್ದೇವೆ. ತೆಂಗಿನ ಕಾಯಿಯಿಂದ ತೆಂಗಿನ ಎಣ್ಣೆ, ತೆಂಗಿನಕಾಯಿಯ ಉತ್ಪಾದನೆ ಮಾಡುತ್ತೇವೆ ಎಂದು ಹೇಳಿದ ಕಿಶೋರ್ ಕುಮಾರ್ ಕೊಡ್ಗಿ ಅವರು ಕ್ಯಾಂಪ್ಕೋ 3000 ಕೋಟಿ ರೂ. ಟರ್ನ್ ಓವರ್, 58 ಕೋಟಿ ರೂ ಶೇರು ಬಂಡವಾಳ ಹೊಂದಿದೆ. ಕ್ಯಾಂಪ್ಕೋ ಸದಸ್ಯರಿಗೆ ವಿವಿಧ ವ್ಯವಸ್ಥೆ ಕಲ್ಪಿಸಿದೆ. ಒಂದೇ ಸೂರಿನಡಿಯಲ್ಲಿ ಕೃಷಿಗೆ ಬೇಕಾದ ಎಲ್ಲವೂ ಸಿಗಬೇಕಾದ ವ್ಯವಸ್ಥೆ ಇದೆ. ಕೃಷಿಕರು, ಉದ್ದಿಮೆದಾರರಿಂದ ಅಡಿಕೆಯಲ್ಲಿ ಬೇರೆ ಬೇರೆ ಪ್ರಯೋಗಗಳು ನಡೆಯುತ್ತಿದೆ ಎಂದು ತಿಳಿಸಿದರು.

ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಮಹೇಶ್ ಚೌಟ, ದಯಾನಂದ ಹೆಗ್ಡೆ, ರಾಘವೇಂದ್ರ ಭಟ್ ಕೆದಿಲ, ಪದ್ಮರಾಜ ಪಟ್ಟಾಜೆ, ಜಯಪ್ರಕಾಶ್ ನಾರಾಯಣ ಟಿ.ಕೆ., ಡಾ.ದೇವಿಪ್ರಕಾಶ್, ಅಡಕೆ ಸಂಶೋಧನಾ ಪ್ರತಿಷ್ಠಾನದ ಕೇಶವ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ಕ್ಯಾಂಪ್ಕೋ ಜಿ.ಎಂ. ರೇಶ್ಯಾ ಮಲ್ಯ, ಮಾರುಕಟ್ಟೆ ವಿಭಾಗದ ಗೋವಿಂದ ಭಟ್ ಮತ್ತು ಉದಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮ: ಕೊಡ್ಗಿ

ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಅಭಿವೃದ್ಧಿಯ ನವ ಮನ್ವಂತರಕ್ಕೆ ನಾಂದಿ ಹಾಡಲು ಫೆ.11ರಂದು ಪುತ್ತೂರಿನಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಗುವುದು. ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಆಗಮಿಸುವ ನಿರೀಕ್ಷೆ ಇದೆ. ಕ್ಯಾಂಪ್ಕೋ ವತಿಯಿಂದ ಪುತ್ತೂರಿನ ಮಹಮ್ಮಾಯಿ ದೇವಾಲಯದ ಬಳಿ ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಗ್ರಿ ಮಾಲ್‌ಗೆ ಶಿಲಾನ್ಯಾಸ, ಪುತ್ತೂರಿನ ಚಾಕಲೇಟ್ ಕಾರ್ಖಾನೆ ಆವರಣದಲ್ಲಿ ನೂತನ ತೆಂಗಿನ ಎಣ್ಣೆ ಘಟಕ ಮತ್ತು ಭದ್ರಾವತಿಯಲ್ಲಿ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹು ಉದ್ದೇಶಿತ ಗೋದಾಮನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಇದೇ ಸಂದರ್ಭ ಉದ್ಘಾಟಿಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಕಲ್ಪ ತೆಂಗಿನಎಣ್ಣೆ ಮಾರುಕಟ್ಟೆಗೆ -ಕೃಷ್ಣಕುಮಾರ್

ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್ ಮಾತನಾಡಿ ಕ್ಯಾಂಪ್ಕೋ ತನ್ನ ಸುವರ್ಣ ಮಹೋತ್ಸವದ ಸಂದರ್ಭ ಕ್ಯಾಂಪ್ಕೋ ಕಲ್ಪ ತೆಂಗಿನೆಣ್ಣೆಯ ಉತ್ಪಾದನೆಯನ್ನು ಆರಂಭಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಪ್ರಸ್ತುತ ದಿನವೊಂದಕ್ಕೆ 10 ಸಾವಿರ ತೆಂಗಿನ ಕಾಯಿಗಳಿಂದ ಎಣ್ಣೆ ತೆಗೆಯುವ ಘಟಕ ಕಾರ್ಯಾರಂಭಿಸಿದೆ. ಮುಂದೆ ಡ್ರೈಯರ್ ಘಟಕ ಸ್ಥಾಪನೆ ಮಾಡಲಾಗುವುದು, ಯಾವುದೇ ಕಲಬೆರಕೆ ಇಲ್ಲದ ಶುದ್ಧ ತೆಂಗಿನ ಎಣ್ಣೆ ಇದಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ರೈತರಿಂದ ತೆಂಗಿನಕಾಯಿ ಖರೀದಿಸುವ ಉದ್ದೇಶ ಇದೆ ಎಂದು ಹೇಳಿದರು. ಕ್ಯಾಂಪ್ಕೋ ದ ವತಿಯಿಂದ ನಡೆಯುತ್ತಿರುವ ಮತ್ತು ನಡೆಯಲಿರುವ ವಿವಿಧ ಯೋಜನೆಗಳ ಕುರಿತು ಅವರು ಮಾಹಿತಿ ನೀಡಿದರು.

ಕ್ಯಾಂಪ್ಕೋ ಪೂರ್ಣ ಪ್ರಮಾಣದಲ್ಲಿ ಸಹಯೋಗ ನೀಡಿದೆ -ರವಿಕೃಷ್ಣ ಕಲ್ಲಾಜೆ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರವಿಕೃಷ್ಣ ಡಿ.ಕಲ್ಲಾಜೆ ಮಾತನಾಡಿ ಕೃಷಿಯಂತ್ರ ಮೇಳದಲ್ಲಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಬೇರೆ ಬೇರೆ ತರಹದ ಮೆಷಿನ್‌ಗಳನ್ನು ಒಂದೇ ಮೇಳಕ್ಕೆ ತರಿಸಲಾಗುತ್ತದೆ. ಕನಸಿನ ಮನೆಯಲ್ಲಿ 75 ಸ್ಟಾಲ್‌ಗಳು ಇರುತ್ತದೆ. ಮನೆಗಳನ್ನು ಸುಲಭದಲ್ಲಿ ಹೇಗೆ ನಿರ್ಮಾಣ ಮಾಡಬಹುದು ಮತ್ತು ಮನೆ ನಿರ್ಮಾಣದಲ್ಲಿ ತಾಂತ್ರಿಕತೆಯನ್ನು ಹೇಗೆ ಬಳಕೆ ಮಾಡಬಹುದು ಎಂಬುದರ ಕುರಿತು ಮಾಹಿತಿ ನೀಡಲಾಗುವುದು, ಅಲ್ಲದೆ, 20 ಸಾವಯವ ಸ್ಟಾಲ್‌ಗಳ ವ್ಯವಸ್ಥೆ ಇರುತ್ತದೆ. ಇಲೆಕ್ಟ್ರಿಕಲ್ ಯಂತ್ರಗಳಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಇದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ 5ನೇ ಯಂತ್ರಮೇಳವಾಗಿದೆ. ಕ್ಯಾಂಪ್ಕೋ ಪೂರ್ಣ ಪ್ರಮಾಣದಲ್ಲಿ ಈ ಕಾರ್ಯಕ್ರಮಕ್ಕೆ ಸಹಯೋಗ ಕೊಟ್ಟಿದೆ ಎಂದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅವಿಷ್ಕರಿಸಿದ ಯಂತ್ರಗಳ ಸ್ಟಾಲ್‌ಗಳು ಕೂಡ ಇರಲಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ. ಪ್ರಾಜೆಕ್ಟ್ ಗಳನ್ನು ಕಾಲೇಜಿನಲ್ಲಿ ಪ್ರದರ್ಶನ ಮಾಡಬಹುದು. ಜೊತೆಗೆ ಯಂತ್ರಮೇಳದಲ್ಲಿ ಕೂಡ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಹೇಳಿದರು.

ಫೆ.11:ಅಮಿತ್ ಶಾ ಪುತ್ತೂರಿಗೆ ; ತೆಂಕಿಲದಲ್ಲಿ ಬೃಹತ್ ಸಮಾವೇಶ

ಕೇಂದ್ರ ಗೃಹ ಸಚಿವ, ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಫೆ.11ರಂದು ಪುತ್ತೂರುಗೆ ಆಗಮಿಸಲಿದ್ದಾರೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಸಂಬಂಧ ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ಅಪರಾಹ್ನ 2ರಿಂದ 4.30ರ ತನಕ ಬೃಹತ್ ಸಮಾವೇಶ ನಡೆಯಲಿದೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಬಂಧ ವಿವಿಧ ಯೋಜನೆಗಳು ಹಾಗೂ ಇತರ ಕಾರ್ಯಕ್ರಮಗಳಿಗೆ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಅಮಿತ್ ಶಾ ಅವರ ಪುತ್ತೂರು ಭೇಟಿ ಬಹುತೇಕ ಖಚಿತವಾಗಿದ್ದು ರಾಜ್ಯದ ಮುಖ್ಯಮಂತ್ರಿ ಸಹಿತ ಹಲವು ಸಚಿವರು, ಬಿಜೆಪಿ ನಾಯಕರು, ಮುಂಬರುವ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಬಿಜೆಪಿ ನಾಯಕರ ದಂಡೇ ಸಮಾವೇಶಕ್ಕೆ ಆಗಮಿಸಲಿದೆ. ಜೊತೆಗೆ ದ.ಕ.ಮತ್ತು ಹೊರಜಿಲ್ಲೆಯಿಂದಲೂ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರೂ ಹೊಸ ಹುರುಪಿನೊಂದಿಗೆ ಈ ಸಮಾವೇಶದಲ್ಲಿ ಭಾಗವಹಿಸಲಿದ್ದು ಜಿಲ್ಲೆ ಮತ್ತು ರಾಜ್ಯದ ರಾಜಕೀಯ ಚಿತ್ರಣವೇ ಅಮಿತ್ ಶಾ ಭೇಟಿಯಿಂದ ಬದಲಾಗುವ ನಿರೀಕ್ಷೆಯಲ್ಲಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜು ಮೈದಾನದಲ್ಲಿ ಫೆ.10ರಿಂದ 12ರ ತನಕ ನಡೆಯಲಿರುವ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ ಕಾರ್ಯಕ್ರಮಕ್ಕೆ ಫೆ.11ರಂದು ಅಮಿತ್ ಶಾ ಅವರು ಆಗಮಿಸಿ, ಕ್ಯಾಂಪ್ರೋ ಯೋಜನೆಗಳಿಗೂ ಡಿಜಿಟಲ್ ಮಾದರಿಯಲ್ಲಿ ಕೃಷಿ ಯಂತ್ರಮೇಳದಲ್ಲಿಯೇ ಚಾಲನೆ ನೀಡುವುದು ಎಂದು ಆರಂಭದಲ್ಲಿ ತೀರ್ಮಾನವಾಗಿತ್ತು. ಆದರೆ ಇದೀಗ, ಅಮಿತ್ ಶಾ ಅವರ ಕಾರ್ಯಕ್ರಮ ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.ಕೃಷಿ ಯಂತ್ರ ಮೇಳಕ್ಕೂ ಅವರು ಭೇಟಿ ನೀಡುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here