ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ ಎ.4ರಂದು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಬಿರವನ್ನು ಉದ್ಘಾಟಿಸಿದ ಮಾಣಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರೂ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರಹ್ಲಾದ ಜೆ ಶೆಟ್ಟಿರವರು ಮಾತನಾಡಿ ಸ್ಥಳೀಯ ಸಂಸ್ಥೆ ಉತ್ತಮ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದು ಆರ್ಥಿಕವಾಗಿ ಸದೃಢವಾಗಿದೆ. ಆರ್ಥಿಕವಾಗಿ ಹಿಂದುಳಿದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆಯು ಸಮವಸ್ತ್ರವನ್ನು ವಿತರಿಸುವಂತಹ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಶಾಲಾ ಆಡಿಳಿತಾಧಿಕಾರಿ ಸಿ.ಶ್ರೀಧರ್ ರವರು ಮಾತನಾಡಿ ಮುಂದಿನ ಬಾಲವಿಕಾಸದ ಪ್ರಗತಿಯನ್ನು ಇಲ್ಲಿಯೇ ಕಾಣಬಹುದು. ಇಂದು ಚಿಕ್ಕ ಸಂಖ್ಯೆಯಲ್ಲಿರುವ ದಳಗಳು ಮುಂದಕ್ಕೆ ಶಕ್ತಿಶಾಲಿ ದಳಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿ ಶುಭಹಾರೈಸಿದರು.
ಶಾಲಾ ಮುಖ್ಯ ಶೈಕ್ಷಣಿಕಾಧಿಕಾರಿ ರವೀಂದ್ರ ಡಿ. ರವರು ಮಾತನಾಡಿ ಸ್ಕೌಟ್ಸ್ & ಗೈಡ್ಸ್ ನಿಂದ ವಿದ್ಯಾರ್ಥಿಗಳು ಶಿಸ್ತು, ಜೀವನಕೌಶಲ್ಯ, ಸೇವಾ ಮನೋಭಾವವನ್ನು ಕಲಿಯಬಹುದು. ಅವರ ಜೀವನದಲ್ಲಿ ಅದನ್ನು ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಅವರು ಉತ್ತಮ ವ್ಯಕ್ತಿಗಳಾಗಲು ಸಾಧ್ಯ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬೇಸಿಗೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿ ರವರು ಮಾತನಾಡಿ ಸಂಸ್ಥೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರಂಭವಾದ ದಿನಗಳ ಬಗ್ಗೆ ತಿಳಿಸುತ್ತಾ ಶಿಬಿರದ ಸದುಪಯೋಗದಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವಂತಾಗಲಿ ಎಂದು ಶುಭಹಾರೈಸಿದರು.
ಗೈಡ್ಸ್ ಶಿಕ್ಷಕಿ ಯಶೋಧಾರವರು ನಾಲ್ಕು ದಿನ ನಡೆಯಲಿರುವ ಬೇಸಿಗೆ ಶಿಬಿರದ ಮುನ್ನೋಟವನ್ನು ವಿವರಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಕೋಶಾಧಿಕಾರಿ ಇಬ್ರಾಹಿಂ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ಕೌಟ್ ವಿದ್ಯಾರ್ಥಿ ನಿಶಾಂತ್ ಸ್ವಾಗತಿಸಿ , ಲಾವಣ್ಯ ಮತ್ತು ಸನಿಹ ಕಾರ್ಯಕ್ರಮ ನಿರೂಪಿಸಿದರು. ಗೈಡ್ಸ್ ವಿದ್ಯಾರ್ಥಿನಿ ದಿಶಾ ವಂದಿಸಿದರು.