ಎ.10ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಆರಂಭ

0

  • ಪುತ್ತೂರು ಜಾತ್ರೆಗೆ ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಬರುವ ನಿರೀಕ್ಷೆ -ಕೇಶವಪ್ರಸಾದ್ ಮುಳಿಯ
  • ಸ್ವಚ್ಛತೆ, ಭದ್ರತೆ, ಕುಡಿಯುವ ನೀರು, ಆರೋಗ್ಯಕ್ಕೆ ಆದ್ಯತೆ – ರಾಮದಾಸ್ ಗೌಡ
  • ಪುತ್ತೂರು ವ್ಯಾಪಾರಮೇಳ – ರವಿಂದ್ರನಾಥ ರೈ ಬಳ್ಳಮಜಲು
  • ವಿವಿಧ ಅಲಂಕಾರಕ್ಕೆ ಹೊಸತನ – ಡಾ. ಸುಧಾ ಎಸ್ ರಾವ್
  • 500ಕ್ಕೂ ಮಿಕ್ಕಿ ಸಂಘಟನೆ ಸ್ವಯಂ ಸೇವಕರಾಗಿ ನೋಂದಾವಣೆ – ರಾಮಚಂದ್ರ ಕಾಮತ್
  • ಜಾತ್ರ ಗದ್ದೆಯಲ್ಲಿ 19 ದಿನ ಸಾಂಸ್ಕೃತಿಕ ಕಾರ್ಯಕ್ರಮ – ಬಿ.ಐತ್ತಪ್ಪ ನಾಯ್ಕ್ 
  • ಸೇವಕರ್ತರಿಗೆ ಪ್ರಸಾದ ವಿತರಣೆ – ಬಿ.ಕೆ.ವೀಣಾ
  • ಪುತ್ತೂರು ಬೆಡಿ ವಿಶೇಷ – ಕೇಶವಪ್ರಸಾದ್ ಮುಳಿಯ

ಪುತ್ತೂರು: ಕಳೆದ 2 ವರ್ಷಗಳಿಂದ ಪೂರ್ಣ ಪ್ರಮಾಣದ ಜಾತ್ರೆ ನೋಡದ ಭಕ್ತರು ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದ್ದು, ಸುಮಾರು ಶೇ.20ರಷ್ಟು ಭಕ್ತರ ಸಂಖ್ಯೆ ಹೆಚ್ಚಳವಾಗಬಹುದು. ಇದಕ್ಕೆ ಪೂರಕವಾಗಿ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಹಲವು ಸಿದ್ಧತೆ ನಡೆಸಲಾಗಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.

 

ದೇವಳದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಾತ್ರೆಯ ಸಂದರ್ಭ ದೇವರಿಗೆ ವಿವಿಧ ಸೇವೆಗಳನ್ನು ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ. ಅನ್ನದಾನ, ಅಲಂಕಾರ, ಸಮಯ ಪರಿಪಾಲನೆಯ ತಯಾರಿ ಮಾಡಲಾಗಿದ್ದು, ಹಲವು ಉಪಸಮಿತಿಗಳ ಮೂಲಕ ಕಾರ್ಯಕ್ರಮ ಜೋಡಿಸಲಾಗಿದೆ ಎಂದರು. ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದಂತೆ ರುದ್ರ ಹವನ ಸೇವೆ ಮಾಡಲಿದ್ದೇವೆ. ಇದಕ್ಕಾಗಿ ಹೊಸದಾಗಿ ಯಾಗ ಶಾಲೆಯ ಸಿದ್ಧತೆ ನಡೆದಿದೆ. ಬ್ರಹ್ಮರಥ ಸಂದರ್ಭ ಬ್ರಹ್ಮರಥೋತ್ಸವ ಸೇವೆ, ಸಣ್ಣ ರಥೋತ್ಸವ ಸೇವೆ, ವಿಶೇಷ ಪಾಲಕಿ ಉತ್ಸವ ಸೇವೆ, ಪುಷ್ಪಕನ್ನಡಿ ಅಲಂಕಾರ ಸೇವೆ, ಬ್ರಹ್ಮರಥ ಅಲಂಕಾರ ಸೇವೆ, ದೇವರ ಗರ್ಭಗುಡಿ, ಪ್ರಾಕಾರಗುಡಿಗಳಿಗೆ ಅಲಂಕಾರ ಸೇವೆ ಕಲ್ಪಿಸಲಾಗಿದೆ. ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದಂತೆ ದೇವಳದ ಆಗ್ನೇಯ ಭಾಗದಲ್ಲಿ ಯಾಗಶಾಲೆ ಆರಂಭಿಸಿದ್ದು, ಜಾತ್ರೆಯ ಸಂದರ್ಭ ಅಲ್ಲಿ 11 ದಿನಗಳ ಕಾಲ ರುದ್ರ ಹವನ ನಡೆಯಲಿದೆ. ಎ.16ಕ್ಕೆ ಪ್ರಥಮ ಬಾರಿಗೆ ತುಲಾಭಾರ ಸೇವೆ ಆರಂಭಿಸಲಿದ್ದೇವೆ. ಎ.18ಕ್ಕೂ ತುಲಾಭಾರ ಸೇವೆ ನಡೆಯಲಿದೆ. ಬ್ರಹ್ಮರಥೋತ್ಸವ ಸೇವೆಯಲ್ಲಿ ವಿಶೇಷವಾಗಿ ನಡೆಯಲಿದ್ದು ಅದರಲ್ಲೂ ಎಲ್ಲಾ ಭಕ್ತರು ಬ್ರಹ್ಮರಥ ಅಲಂಕಾರ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ ಅವರು ಸೇವೆಯಲ್ಲಿ ಪಾಲ್ಗೊಂಡವರಿಗೆ ವಿಶೇಷ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತದೆ ಎಂದರು. ಒಟ್ಟಿನಲ್ಲಿ ಭಕ್ತರು ಶ್ರೀ ದೇವರ ಜಾತ್ರೆಯಲ್ಲಿ ಪಾಲ್ಗೊಂಡು ಕೃತಾರ್ಥರಾಗುವಂತೆ ಅವರು ವಿನಂತಿಸಿದ್ದಾರೆ.

ಸ್ವಚ್ಛತೆ, ಭದ್ರತೆ, ಕುಡಿಯು ನೀರು, ಆರೋಗ್ಯಕ್ಕೆ ಆದ್ಯತೆ:
ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರು ಮಾತನಾಡಿ ಸ್ವಚ್ಛತೆ, ನೀರು, ಭದ್ರತೆ ಅಗತ್ಯ. ಭದ್ರತೆಯ ದೃಷ್ಟಿಯಿಂದ ಎರಡು ಹಂತದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿದ್ದೇವೆ. ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ. ಮಫ್ತಿಯಲ್ಲೂ ಪೊಲೀಸರು ಇರುತ್ತಾರೆ. ಸಿಸಿ ಕ್ಯಾಮರ ಅಳವಡಿಸಲಾಗುತ್ತದೆ. ಸಂಚಾರ ವ್ಯವಸ್ಥೆಯಲ್ಲೂ ಉತ್ತಮ ಸಿದ್ದತೆ ನಡೆಸಲಾಗಿದೆ. ಕೊಂಬೆಟ್ಟು ಕಾಲೇಜು ಕ್ರೀಡಾಂಗಣ, ಎಪಿಎಂಸಿ ಯಾರ್ಡ್, ಕಿಲ್ಲೆ ಮೈದಾನ, ವಿವೇಕಾನಂದ ಶಾಲಾ ಮೈದಾನ ಸೇರಿದಂತೆ ಖಾಸಗಿ ಜಮೀನಲ್ಲೂ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ, ಸ್ವಚ್ಛತೆ ಮತ್ತು ಆರೋಗ್ಯ ದೃಷ್ಟಿಯಿಂದ ನಗರಸಭೆ ಮತ್ತು ಆರೋಗ್ಯ ಇಲಾಖೆ ನಮ್ಮೊಂದಿಗೆ ಕೈಜೋಡಿಸಿದ್ದು. ರೋಟರಿ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ಕೈಜೋಡಿಸಿಕೊಂಡು ಹಸಿ ಕಸ ಒಣ ಕಸಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಅವರು ಹೇಳಿದರು.

ಪುತ್ತೂರು ವ್ಯಾಪಾರಮೇಳ:
ವ್ಯವಹಾರದ ಮೇಳ ಕುರಿತಂತೆ ಸದಸ್ಯ ರವಿಂದ್ರನಾಥ ರೈ ಬಳ್ಳಮಜಲು ಅವರು ಮಾತನಾಡಿ ಈ ಭಾರಿ ಪ್ರಥಮವಾಗಿ ಪುತ್ತೂರು ವ್ಯಾಪಾರ ಮೇಳ ಎಂಬ ಚಿಂತನೆಯನ್ನು ಹಾಕಿಕೊಂಡು ದೇವಳದ ಸಭಾಭವನದ ಮೇಲಿನ ಹಾಲ್‌ನ್ನು ಸಂಪೂರ್ಣವಾಗಿ ಜಾತ್ರೆಗೆ ವಿನಿಯೋಗಿಸಿದ್ದೇವೆ. ಇದರಲ್ಲಿ ಈಗಾಗಲೇ ವಿವಿಧ ಕಂಪೆನಿಗಳು, ಕಾರು, ಬ್ಯಾಂಕಿಂಗ್, ಶಿಕ್ಷಣ ಸಂಸ್ಥೆಗಳು, ಗೃಹನಿರ್ಮಾಣ ಮಳಿಗೆಗಳು, ಆಹಾರ ಮಳಿಗೆಗಳು, ಕೃಷಿ ಸಲಕರಣೆ ಸಂಸ್ಥೆಗಳು ಸೇರಿಕೊಂಡಿದೆ.
ಈ ಹಿಂದೆ ಬ್ರಹ್ಮಕಲಶೋತ್ಸವಕ್ಕೆ ಅನ್ನಪ್ರಸಾದ ವಿತರಣೆ ಮಾಡಿದ ಸ್ಥಳದಲ್ಲಿ ಈ ಬಾರಿ ಜಾತ್ರೆಗೆ ಭಕ್ತರಿಗೆ ಮಧ್ಯಾಹ್ನ ಅನ್ನಪ್ರಸಾದ ವಿತರಣೆ ನಡೆಯಲಿದೆ.

ವಿವಿಧ ಅಲಂಕಾರಕ್ಕೆ ಹೊಸತನ:
ಸದಸ್ಯೆ ಡಾ. ಸುಧಾ ಎಸ್ ರಾವ್ ಅವರು ಮಾತನಾಡಿ ಹೊಸದಾಗಿ ಈ ಭಾರಿ ರುದ್ರಯಾಗ ಪ್ರಾರಂಭಗೊಂಡಿದೆ. ಇಲ್ಲಿ ಪ್ರತಿ ದಿನಕ್ಕೆ ಯಾಗ ಕತೃ ಆಗಿಯೂ ಸೇವೆ ನೀಡಬಹುದು. ಗರ್ಭ ಗುಡಿ ಅಲಂಕಾರ ಸೇವೆ ಈ ಭಾರಿ ಹೊಸದು. ಎ.15ರ ಬಿಸುವಿನ ದಿನ ಹಿಂಗಾರ, ಬೇವು, ತುಳಸಿಯಲ್ಲಿ ದೇವಸ್ಥಾನವನ್ನು ಅಲಂಕಾರಗೊಳಿಸುವ ಯೋಜನೆ ಹಾಕಿಕೊಂಡಿದ್ದು. ಇದಕ್ಕಾಗಿ ಭಕ್ತರು ತಂದೊಪ್ಪಿಸಿದ ಸುವಸ್ತುಗಳನ್ನು ಅಲಂಕಾರ ಮಾಡವುದು ಎಂಬುದು ನಮ್ಮ ಚಿಂತನೆ ಎಂದ ಅವರು ಎ.14ರಂದು ಸಂಜೆ ಹಿಂಗಾರವನ್ನು ಭಕ್ತರು ತಂದೊಪ್ಪಿಸುವ ಸಂದರ್ಭದಲ್ಲಿ ಅವರು ಮನೆಯಲ್ಲಿ ಬೆಳೆದ ತರಕಾರಿಗಳನ್ನು ತಂದಲ್ಲಿ ಅದನ್ನು ದೇವಳದ ಸುತ್ತು ಕಟ್ಟುವ ವ್ಯವಸ್ಥೆ ಮಾಡಲಿದ್ದೇವೆ. ಉತ್ಸವ ಪ್ರಾರಂಭ ಆಗುವ ಸಮಯಕ್ಕೆ ನಿಗದಿ ಪಡಿಸಲಾಗಿದೆ. ಪ್ರತಿ ದಿನ ಗಂಟೆ ೫ಕ್ಕೆ ದೀವಡಿಗೆ ಪ್ರಣಾಮ್ ಆದ ಬಳಿಕ ಗಂಟೆ 5.30ರ ಒಳಗೆ ದೇವರು ಹೊರಗೆ ಬರಲಿದ್ದಾರೆ ಬಳಿಕ ಉತ್ಸವಾದಿಗಳು ಆರಂಭಗೊಳ್ಳಲಿದೆ ಎಂದರು.

500ಕ್ಕೂ ಮಿಕ್ಕಿ ಸಂಘಟನೆ ಸ್ವಯಂ ಸೇವಕರಾಗಿ ನೋಂದಾವಣೆ:
ಸದಸ್ಯ ರಾಮಚಂದ್ರ ಕಾಮತ್ ಅವರು ಮಾತನಾಡಿ ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಇತರ ಕಾರ್ಯಗಳಿಗೆ ಸ್ವಯಂ ಸೇವಕರು ಅಗತ್ಯವಾಗಿ ಬೇಕಾಗುವುದರಿಂದ ಈಗಾಗಲೇ ಸುಮಾರು ೫೦೦ಕ್ಕೂ ಮಿಕ್ಕಿ ಸಂಘಟನೆಗಳು, ಸಂಸ್ಥೆಗಳು ಸ್ವಯಂ ಸೇವಕರಾಗಿ ಹೆಸರು ನೋಂದಾವಣೆ ಮಾಡಿಕೊಂಡಿದ್ದಾರೆ. ಇದರಲ್ಲೂ ಮುಖ್ಯವಾಗಿ ಈ ಭಾರಿ ಹಸಿರು ಯೋಧರು ಎಂಬ ಹೊಸ ಚಿಂತನೆ ಮಾಡಿಕೊಂಡು ಸ್ವಚ್ಛತೆಯನ್ನು ಪರಿಶೀಲನೆ ನಡೆಸಲಿದ್ದಾರೆ. ಸಂತೆ ವ್ಯಾಪಾರದ ಪ್ರತಿ ಅಂಗಡಿಗಳಲ್ಲಿ ಕಸದ ಬುಟ್ಟಿ ಇಡಲಾಗುತ್ತದೆ. ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಕಸದ ಬುಟ್ಟಿ ನೀಡಲಾಗುತ್ತದೆ. ಹಸಿ ಕಸವನ್ನು ದೇವಸ್ಥಾನದ ಗದ್ದೆಯ ಒಂದು ಭಾಗದಲ್ಲಿ ಹಾಕಿ ಸಂಸ್ಕರಣೆ ಮಾಡಲಾಗುತ್ತದೆ. ಒಣ ಕಸವನ್ನು ನಗರಸಭೆ ವಾಹನದ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಎ.8ಕ್ಕೆ ಸ್ವಯಂ ಸೇವಕರ ಸಭೆ ನಡೆಯಲಿದೆ. ವ್ಯಯುಕ್ತಿಕವಾಗಿ ಸ್ವಯಂ ಸೇವಕರಾಗಿ ಭಾಗವಹಿಸುವವರು ಜಾತ್ರೆಯ ಸಂದರ್ಭ ಬೆಳಿಗ್ಗೆ ಗಂಟೆ 10ಕ್ಕೆ ದೇವಳದ ಕಚೇರಿಗೆ ಬಂದು ಮಾಹಿತಿ ನೀಡಬೇಕೆಂದರು. 240ರಷ್ಟು ಸ್ಟಾಲ್‌ಗಳು ಭರ್ತಿ ಆಗಿದೆ. ಜಾಯಿಂಟ್ ವೀಲ್ಹ್‌ಗಳು, ಇತರ ಮನೋರಂಜನ ಕಾರ್ಯಕ್ರಮ ಜಾತ್ರಾ ಗದ್ದೆಯಲ್ಲಿ ಬರಲಿದೆ.

ಜಾತ್ರ ಗದ್ದೆಯಲ್ಲಿ 19 ದಿನ ಸಾಂಸ್ಕೃತಿಕ ಕಾರ್ಯಕ್ರಮ:
ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ಮಾತನಾಡಿ ಜಾತ್ರೆಗೆ ಸಂಬಂಧಿಸಿ ಭಕ್ತರಿಗೆ ಮನೋರಂಜನೆ ನೀಡಲು ಎ.೧೦ರಿಂದ ೨೦ರ ತನಕ ಜಾತ್ರ ಗದ್ದೆಯ ಹಿಮಗಿರಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಎ.೧೭ರಂದು ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ ಎಂದ ಅವರು ಎ.೧೦ರಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಬಳಿಕ ಕುಣಿತ ಭಜನೆ, ಜನಪದ ನೃತ್ಯ, ಜಾನಪದ ಕುಣಿ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ವಿಶೇಷವಾಗಿ ಎ.೧೩ರಂದು ಸುರತ್ಕಲ್‌ನ ವೇದಾಂತ ವಿದ್ವಾನ್ ರಘುಪತಿ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಎ.೧೧ಕ್ಕೆ ಸಂಸ್ಕಾರ ಭಾರತಿ ವತಿಯಿಂದ ಜಾಗೋ ಹಿಂದೂಸ್ತಾನಿ ಕಾರ್ಯಕ್ರಮ ಎ.೧೬ಕ್ಕೆ ಶಾಸಕರ ನೇತೃತ್ವದಲ್ಲಿ ಸ್ವರಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳು ಸೇವಾ ರೂಪದಲ್ಲಿ ನಡೆಯಲಿದೆ.

ಸೇವಕರ್ತರಿಗೆ ಪ್ರಸಾದ ವಿತರಣೆ:
ಸದಸ್ಯೆ ವೀಣಾ ಬಿ.ಕೆ ಅವರು ಮಾತನಾಡಿ ಜಾತ್ರೆಗೆ ಸಂಬಂಧಿಸಿ ವಿಶೇಷ ಸೇವೆ ಮಾಡಲು ಭಕ್ತರಿಗೆ ಅವಕಾಶವಿದೆ. ಅದರಲ್ಲಿ ಗರ್ಭಗುಡಿಯ ಅಲಂಕಾರ ಸೇವೆ, ಇತರ ಗುಡಿಗಳಿಗೆ ಅಲಂಕಾರ ಸೇವೆ ಮಾಡಿದವರಿಗೆ ಪ್ರಸಾದ ವಿತರಣೆ ನಡೆಯಲಿದೆ. ಅದೇ ರೀತಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವವರಿಗೂ ಶ್ರೀ ದೇವರ ಪ್ರಸಾದ ವಿತರಣೆ ನಡೆಯಲಿದೆ.

ಪುತ್ತೂರು ಬೆಡಿ ವಿಶೇಷ:
ಸದಸ್ಯ ಶೇಖರ್ ನಾರಾವಿ ಅವರು ಮಾತನಾಡಿ 151 ಕಟ್ಟೆಗಳಲ್ಲೂ ಶ್ರೀ ದೇವರ ಬರ ಮಾಡಿಕೊಳ್ಳುವಿಕೆ ಅತ್ಯಂತ ಅಚ್ಚುಕಟ್ಟಾಗಿ ಅಲ್ಲಿನ ಭಕ್ತರು ಮಾಡುತ್ತಾ ಬಂದಿದ್ದಾರೆ. ಕಟ್ಟೆಗಳಲ್ಲಿನ ವ್ಯವಸ್ಥೆಯ ಕುರಿತು ಉಪಸಮಿತಿ ಮಾಡಲಾಗಿದ್ದು, ಈಗಾಗಲೇ ಎಲ್ಲಾ ಕಟ್ಟೆಗಳಿಗೆ ಭೇಟಿ ನೀಡಲಾಗಿದೆ. ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸುವುದು ಪುತ್ತೂರು ಜಾತ್ರೆಯಲ್ಲಿ ಮಾತ್ರ ಕಂಡು ಬರುತ್ತದೆ. ಅದೇ ರೀತಿ ಪುತ್ತೂರು ಜಾತ್ರೆಗೆ ಪುತ್ತೂರು ಬೆಡಿ ವಿಶೇಷ. ಇದನ್ನು ನೋಡಲು ಬರುವವರು ಅನೇಕರಿದ್ದಾರೆ. ಈ ಭಾರಿ ಕಾರ್ಕಳದ ಪ್ರೇಮಾನಂದ ಅವರು ಸಿಡಿಮದ್ದು ಪ್ರದರ್ಶನ ಮಾಡಲಿದ್ದಾರೆ. ರೂ. ೬ಲಕ್ಷಕ್ಕೂ ಮಿಕ್ಕಿ ಸಿಡಿ ಮದ್ದು ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಜಾತ್ರೆಗೆ ಮಹಾರುದ್ರ ಹವನ ಸೇವೆ
ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವಳದ ಆಗ್ನೇಯದಲ್ಲಿ ಯಾಗಶಾಲೆ ಆರಂಭಿಸಲಾಗಿದೆ. ಪುತ್ತೂರು ಜಾತ್ರೆಯಲ್ಲಿ ಎ.೧೦ ರಿಂದ ಪ್ರತಿ ದಿನ ದೇವಳದ ನೂತನವಾಗಿ ನಿರ್ಮಾಣಗೊಂಡ ಯಾಗ ಶಾಲೆಯಲ್ಲಿ ರುದ್ರಹವನ ಸೇವೆ ನಡೆಯಲಿದೆ. ೧೧ ದಿನ ನಡೆಯುವ ರುದ್ರ ಹವನ ನಡೆದಾಗ ಅದು ಮಹಾರುದ್ರ ಹವನವಾಗಿ ಸಂಪನ್ನಗೊಳ್ಳಲಿದೆ. ಭಕ್ತರಿಗೆ ರುದ್ರ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವೆ ಮಾಡಿಸುವುದರಿಂದ ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆಕೇಶವಪ್ರಸಾದ್ ಮುಳಿಯ ಅಧ್ಯಕ್ಷರು

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರುಗಂಗಾವತಾರಣ, ಕಾಮದಹನ ಸುಡುಮದ್ದು ವಿಶೇಷ
ವಿಶೇಷ ಸುಡುಮದ್ದು ಈ ವರ್ಷ ಆರಂಭದಲ್ಲಿ ಗಂಗಾವತಾರಣ ನಡೆಯುತ್ತದೆ. ಶಿವನ ಜಡೆಯಿಂದ ಗಂಗೆ ಬಂದ ಇಳಿಯುವ ಚಿತ್ರಣವನ್ನು ಸುಡುಮದ್ದು ಪ್ರದರ್ಶನದಲ್ಲಿ ತೋರಿಸಲಾಗುತ್ತದೆ. ಅದೇ ರೀತಿ ಸುಡುಮದ್ದು ಕೊನೆಗೊಳ್ಳುವುದು ಕಾಮದಹನದ ಮೂಲಕ. ಅಲ್ಲಿಯೂ ಶಿವನಿಗೆ ಹೂವಿನ ಬಾಣ ಬಿಡುವ ಸಂದರ್ಭ ಶಿವ ತನ್ನ ಮೂರನೆ ಕಣ್ಣಿನಿಂದ ಕಾಮದಹನ ಮಾಡುವ ಚಿತ್ರವನ್ನು ಸುಡುಮದ್ದಿನ ಮೂಲಕ ತೋರಿಸಲಾಗುತ್ತದೆ. ಈ ವಿಶೇಷ ಸುಡುಮದ್ದು ಪ್ರದರ್ಶನಲ್ಲಿ ಶಿವನ ಲೀಲೆಯಲ್ಲಿ ವಿಶೇಷ ಕಾಮನೆಗಳಿಂದ ಜನತೆ ದುಖಃಕ್ಕೆ ಕಾರಣವಾಗುವ ವಿಚಾರವನ್ನು ತೋರಿಸಲಾಗುತ್ತದೆ.- ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

LEAVE A REPLY

Please enter your comment!
Please enter your name here