ಕಾಣಿಯೂರು: ದೇವಸ್ಥಾನ ನಿರ್ಮಾಣ ಮಾಡಿ ಬ್ರಹ್ಮಕಲಶೋತ್ಸವ ಮಾಡಿದರೆ ನಮ್ಮ ಕೆಲಸ ಮುಗಿಯುವುದಿಲ್ಲ, ಕ್ಷೇತ್ರದಲ್ಲಿ ನಿತ್ಯ ನಿರಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಕಾರ್ಯ ಯೋಜನೆಗಳನ್ನು ರೂಪಿಸುವುದು ಕೂಡ ಅಷ್ಟೆ ಅನಿವಾರ್ಯವಾಗುತ್ತದೆ ಎಂದು ಸವಣೂರು ವಿದ್ಯಾರಶ್ಮೀ ಸಮೂಹ ವಿದ್ಯಾಸಂಸ್ಥೆಯ ಸಂಚಾಲಕರು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಸವಣೂರು ಕೆ. ಸೀತಾರಾಮ ರೈ ಹೇಳಿದರು.
ಅವರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.6ರಂದು ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯರ ನಾಯಕತ್ವದಲ್ಲಿ 2002ರಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದಿಂದ ನಡೆದಿತ್ತು. 20 ವರ್ಷದಲ್ಲಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿಗೊಂಡಿದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ ಮಾತನಾಡಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ಒಂದಷ್ಟು ಬೇರೆ ಊರಿನ ಜನರನ್ನು ಆಕರ್ಷಿಸುವ ದೇವಸ್ಥಾನವಾಗಿರುವುದು ಸಂತೋಷದ ವಿಚಾರ. ಗ್ರಾಮದ ಜನರಿಗೋಸ್ಕರ ಸುಸಜ್ಜಿತ ಕಲ್ಯಾಣ ಮಂಟಪಗಳು ನಿರ್ಮಾಣವಾಗಿರುವುದು ಗ್ರಾಮದ ಅಭಿವೃದ್ಧಿಗೆ ಪೂರಕ ಎಂದರು. ಕಡಬ ಪೊಲೀಸ್ ಠಾಣೆಯ ಸನ್‌ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ, ಸಮಾಜ ಸಂಕಷ್ಟದಲ್ಲಿದ್ದಾಗ ನಾವು ಕಟಿಬದ್ಧರಾಗಿ ಅವರ ಸೇವೆಯನ್ನು ಮಾಡಬೇಕಾಗುತ್ತದೆ. ನಾವು ಸಮಾಜದಿಂದ ಪಡೆದುಕೊಳ್ಳುವುದಕ್ಕಿಂತ ನಾವು ಸಮಾಜಕ್ಕೆ ಎಷ್ಟು ಕೊಟ್ಟಿದ್ದೇವೆ ಎನ್ನುವುದು ಕೂಡ ಅಷ್ಟೆ ಮುಖ್ಯವಾಗುತ್ತದೆ ಎಂದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಶಕ್ತಿ ಮತ್ತು ಭಕ್ತಿಯ ಕೂಡುವಿಕೆಯಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಭಯ, ಭಕ್ತಿ, ನಿಷ್ಠೆಯಿಂದ ಕೆಲಸ ಮಾಡಿದಾಗ ಶಕ್ತಿಯ ಸಾನಿಧ್ಯ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಪ್ರವೀಣ್‌ಕುಮಾರ್ ಕೆಡೆಂಜಿಗುತ್ತು, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಮದನ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಚಂದ್ರಶೇಖರ್ ಬರೆಪ್ಪಾಡಿ, ನಾಗೇಶ್ ಕೆ.ಕೆಡೆಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗೀಶ್ ಕೆಡೆಂಜಿ, ತಾರಾನಾಥ ರೈ ನಗ್ರಿ, ರಮೇಶ್ ನಡುಮನೆ, ತೇಜಸ್ ನಡುಮನೆ, ನಿಟ್ಟೋಣಿ ಕೆಡೆಂಜಿ, ಲೋಕನಾಥ್ ವಜ್ರಗಿರಿ, ರೋಹಿತ್ ಕೋಡಿಯಾಲುಮೂಲೆ, ಭರತ್ ನಡುಮನೆ ಅತಿಥಿಗಳನ್ನು ಗೌರವಿಸಿದರು. ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಯಶೋಧರ ಕೆಡೆಂಜಿ ವಂದಿಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮದಲ್ಲಿ ನಮ್ಮ ಕಲಾವಿದರು ಬೆದ್ರ ಇವರಿಂದ ಪಾಂಡುನ ಅಲಕ್ಕಪೋಂಡು ತುಳು ನಾಟಕ ನಡೆಯಿತು.
ದೇಣಿಗೆ ಹಸ್ತಾಂತರ: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಕುದ್ಮಾರು ಶ್ರೀ ವರಮಹಾಲಕ್ಷ್ಮೀ ಸಮಿತಿಯ ವತಿಯಿಂದ ದೇಣಿಗೆಯನ್ನು ಬ್ರಹ್ಮಕಲಶೋತ್ಸವ ಸಮಿತಿಗೆ ಹಸ್ತಾಂತರಿಸಲಾಯಿತು.
ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅಷ್ಠ ಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ನೇರ ಪ್ರಸಾರ ನಡೆದಿದ್ದು ಎ. 7ರಂದೂ ಸಂಜೆ ನೇರಪ್ರಸಾರ ನಡೆಯಲಿದೆ.