ಪುತ್ತೂರು:ವ್ಯಕ್ತಿಯೊಬ್ಬರನ್ನು ಫೋನ್ ಮಾಡಿ ಕರೆಸಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪದಲ್ಲಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ನೆಟ್ಟಣಿಗೆಮುಡ್ನೂರು ಗ್ರಾಮದ ಕುದ್ರೋಳಿ ನಿವಾಸಿ ರಾಕೇಶ್(28ವ.)ರವರು ಚೂರಿಯಿಂದ ಇರಿತಕ್ಕೊಳಗಾಗಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.‘ನನಗೆ ಎ.೪ರಂದು ಲೋಕೇಶ್ ಪಾಟಾಳಿ ಎಂಬವರು ಕರೆ ಮಾಡಿದ್ದರು.ಬಳಿಕ ಎ.೬ರಂದು ಮೇನಾಲದ ಭಾಸ್ಕರ ಎಂಬವರು ಕರೆ ಮಾಡಿ ಮಾತನಾಡಲು ಇದೆ ಖುದ್ದಾಗಿ ಸಿಗಬೇಕೆಂದಿದ್ದರು.ನಾನು ಆ ಸಮಯ ಪುತ್ತೂರಿನಲ್ಲಿ ಇದ್ದದ್ದರಿಂದ ರಾತ್ರಿ ಸಿಗುತ್ತೇನೆ ಎಂದಿದ್ದೆ.ಅದೇ ರೀತಿ ರಾತ್ರಿ ಮೇನಾಲಕ್ಕೆ ತಲುಪಿ ಭಾಸ್ಕರ್ ಅವರಿಗೆ ಕರೆ ಮಾಡಿದಾಗ ಅವರು ಹೇಳಿದಂತೆ ಕುದ್ರೋಳಿ- ಮೇನಾಲ ರಸ್ತೆಯಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಬಂದ ಭಾಸ್ಕರ್ ಅವರು, ನನ್ನ ಅತ್ತೆಯ ಮಗಳ ಮನೆಗೆ ಪಂಚೋಡಿಯ ಲೋಕೇಶ ಪಾಟಾಳಿ ರಾತ್ರಿ ವೇಳೆ ಬರುತ್ತಿರುವುದಾಗಿ ನೀನು ಪ್ರಚಾರ ಮಾಡುತ್ತೀಯಾ ? ಎಂದು ಪ್ರಶ್ನಿಸಿ ಬೆದರಿಕೆಯೊಡ್ಡಿದ್ದು ಇದೇ ಸಂದರ್ಭದಲ್ಲಿ ಕಾರೊಂದರಲ್ಲಿ ಬಂದ ಪಂಚೋಡಿಯ ಲೋಕೇಶ ಪಾಟಾಳಿ ಮತ್ತು ಕೇಶವ ಪಾಟಾಳಿ ನನಗೆ ಅವಾಚ್ಯ ಶಬ್ದದಿಂದ ಬೈದು ಚೂರಿಯಿಂದ ಇರಿದಾಗ ನಾನು ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ನನ್ನ ಕೈಗೆ ಮತ್ತು ಕುತ್ತಿಗೆ ಬಳಿ ಗಾಯವಾಗಿದೆ.ಕೇಶವ ಪಾಟಾಳಿಯವರು ದೊಣ್ಣೆಯಿಂದ ನನ್ನ ತಲೆಗೆ ಹಲ್ಲೆ ನಡೆಸಿದ್ದಾರೆ.ಇದೇ ಸಂದರ್ಭ ವಾಹನವೊಂದು ಬರುತ್ತಿರುವುದುನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದಾರೆ.ಆ ಸಂದರ್ಭ ಅಲ್ಲಿಗೆ ಬಂದ ಮೈಯಾಳದ ಹರೀಶ್ ಎಂಬವರು ನನ್ನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾಸ್ಕರ್, ಲೋಕೇಶ ಪಾಟಾಳಿ ಮತ್ತು ಕೇಶವ ಪಾಟಾಳಿಯವರು ನನ್ನ ಕೊಲೆಗೆ ಯತ್ನಿಸಿದ್ದಾರೆ’ ಎಂದು ರಾಕೇಶ್‌ರವರು ಆರೋಪಿಸಿದ್ದಾರೆ.ಈ ಕುರಿತು ಅವರು ನೀಡಿರುವ ದೂರಿನ ಮೇರೆಗೆ ಸಂಪ್ಯ ಪೊಲೀಸರು ಭಾಸ್ಕರ್, ಲೋಕೇಶ ಪಾಟಾಳಿ ಮತ್ತು ಕೇಶವ ಪಾಟಾಳಿಯವರ ವಿರುದ್ಧ ಸೆಕ್ಷನ್ 504, 324, 307, 341, 506 ಜತೆಗೆ 34 ಭಾ.ದಂ.ಸಂ.ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.