- ಘನ ತ್ಯಾಜ್ಯ ಸಾಗಾಟ ವಾಹನ ‘ಸ್ವಚ್ಛ ವಾಹಿನಿ ಲೋಕಾರ್ಪಣೆ
ಪುತ್ತೂರು: ದೇಶದಲ್ಲಿ ಎಲ್ಲವೂ ಡಿಜಿಟಲೀಕರಣಗೊಳ್ಳುತ್ತಿದ್ದು ವೈಜ್ಞಾನಿಕತೆ ಹೆಚ್ಚಾದಾಗ ಜನರೂ ಕಾಲಕ್ಕೆ ತಕ್ಕ ಬದಲಾವಣೆಯಾಗಬೇಕಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಎ.೮ರಂದು ನರಿಮೊಗರು ಗ್ರಾ.ಪಂ ಅಧೀನದಲ್ಲಿ ನಿರ್ಮಿಸಲಾದ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಹಾಗೂ ಘನ ತ್ಯಾಜ್ಯ ಸಾಗಾಟದ ವಾಹನ ‘ಸ್ವಚ್ಛ ವಾಹಿನಿ’ಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚೆಚ್ಚು ಜ್ಞಾನ ಪಡೆಯಬೇಕಾದರೆ ಗ್ರಂಥಾಲಯ ಅವಶ್ಯಕ. ಸಾಮಾನ್ಯ ಜ್ಞಾನ ಪಡೆಯಬೇಕಾದರೆ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರು ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಿ-ರವಿಚಂದ್ರ: ನರಿಮೊಗರು ಗ್ರಾ.ಪಂ ಪಿಡಿಓ ರವಿಚಂದ್ರ ಮಾತನಾಡಿ ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯವಾಗಿದ್ದು ಹೆಚ್ಚಿನ ಜನರು ಗ್ರಂಥಾಲಯದತ್ತ ಆಕರ್ಷಿತರಾಗಲಿ ಎನ್ನುವ ಉzಶಕ್ಕೆ ಗ್ರಂಥಾಲಯವನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಮೊಬೈಲ್, ಕಂಪ್ಯೂಟರ್ ಓದಿಗಿಂತ ಪುಸ್ತಕದ ಓದು ಹೆಚ್ಚು ಪ್ರಭಾವ ಬೀರುತ್ತಿದ್ದು ಮಕ್ಕಳು, ಸಾರ್ವಜನಿಕರು ಸಮಯ ಸಿಕ್ಕಾಗಲೆಲ್ಲ ಗ್ರಂಥಾಲಯಕ್ಕೆ ಬಂದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ನರಿಮೊಗರು ಗ್ರಾಮದ ಬಿಂದು ಸಂಸ್ಥೆ ವತಿಯಿಂದ ರೂ.4 ಲಕ್ಷ, ಪುತ್ತೂರು ತಾ.ಪಂ.ನಿಂದ ರೂ.3 ಲಕ್ಷ ಹಾಗೂ ನರಿಮೊಗರು ಗ್ರಾ.ಪಂ.ನಿಂದ 15ನೇ ಹಣಕಾಸು ಯೋಜನೆ ಮುಖಾಂತರ ರೂ.2,68,000, ಉದ್ಯೋಗ ಖಾತರಿ ಯೋಜನೆ ಮೂಲಕ ರೂ.35,000 ಹೀಗೆ ಒಟ್ಟು 10,30,000 ರೂ ವೆಚ್ಚದಲ್ಲಿ ಸುಸಜ್ಜಿತ, ಆಕರ್ಷಕ ವಿನ್ಯಾಸದ ಗ್ರಂಥಾಲಯ ನಿರ್ಮಿಸಲಾಗಿದೆ ಎಂದು ಪಿಡಿಓ ರವಿಚಂದ್ರ ಮಾಹಿತಿ ನೀಡಿದರು. ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್‌ಮೆನ್ ರಾಮ್‌ದಾಸ್ ಗೌಡ ಸಮಯೋಚಿತವಾಗಿ ಮಾತನಾಡಿದರು.
ಸನ್ಮಾನ-ಗೌರವಾರ್ಪಣೆ: ನರಿಮೊಗರು ಗ್ರಾ.ಪಂ ವ್ಯಾಪ್ತಿಗೆ ಅತೀ ಹೆಚ್ಚು ಅನುದಾನ ಒದಗಿಸಿದ ಶಾಸಕ ಸಂಜೀವ ಮಠಂದೂರು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬಿಂದು ಸಂಸ್ಥೆಯ ಅಸಿಸ್ಟಂಟ್ ಮೆನೇಜರ್ ನಾಗರಾಜ್, ಗ್ರಂಥಾಲಯದ ಕಾಮಗಾರಿಯನ್ನು ವೇಗವಾಗಿ ಪೂರ್ತಿಗೊಳಿಸಿದ ಜಯಪ್ರಸಾದ್‌ರವರನ್ನು, ಗ್ರಂಥಾಲಯ ಪಾಲಕ ವರುಣ್ ಕುಮಾರ್ ಎಸ್ ಅವರನ್ನು ಸನ್ಮಾನಿಸಲಾಯಿತು. ನರಿಮೊಗರು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಗ್ರಂಥಾಲಯಕ್ಕೆ ಇನ್ವರ್ಟರ್ ಒದಗಿಸಿಕೊಡಲಾಗಿದ್ದು ಅದಕ್ಕಾಗಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗ್ರಂಥಾಲಯಕ್ಕೆ ಗೋಳ ನೀಡಿದ ಶಿಕ್ಷಕಿ ಹರಿಣಿ ವೀರಮಂಗಲ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ನರಿಮೊಗರು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಕಾರ್ಯದರ್ಶಿ ಶೇಕ್ ಕಲಂದರ್ ಅಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಜಯರಾಮ ಪೂಜಾರಿ, ಸುರೇಶ್ ಪ್ರಭು, ಹೊನ್ನಪ್ಪ ಪೂಜಾರಿ, ಹಾಗೂ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ನವೀನ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
ಸ್ವಚ್ಛತೆ ನಿರ್ಲಕ್ಷಿಸಿದರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ
ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಸ್ವಚ್ಛತೆ ನಮ್ಮ ಕರ್ತವ್ಯ ಎಂಬ ಭಾವನೆ ಜನರಲ್ಲಿ ಮೂಡಿದಾಗ ಮಾತ್ರ ಸ್ವಚ್ಛತೆಯ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ. ಸ್ವಚ್ಛತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳಾಗಲೀ, ಯಾರೇ ಆಗಲಿ ಅಂತವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದರು.