ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ

0

  • ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ದುಪ್ಪಟ್ಟು ದಂಡ ವಿಧಿಸಲು ನಿರ್ಣಯ

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿಗೆ ಸಂದಾಯ ಮಾಡಬೇಕಾದ ತೆರಿಗೆಯನ್ನು ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ದುಪ್ಪಟ್ಟು ದಂಡದೊಂದಿಗೆ ವಸೂಲಿ ಮಾಡುವ ಬಗ್ಗೆ ನಿರ್ಣಯ ಅಂಗೀಕರವಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಎ. 7ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಮಾತನಾಡಿ ಹಲವರು ಪ್ರತಿ ವರ್ಷ ಪಾವತಿಸಬೇಕಾದ ತೆರಿಗೆಯನ್ನು ಬಹಳ ವರ್ಷದಿಂದ ಬಾಕಿ ಉಳಿಸಿಕೊಂಡಿದ್ದಾರೆ. ಇದರ ವಸೂಲಾತಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಸರ್ಕಾರಿ ನಿಯಮದಂತೆ ಸಭೆಯ ಅನುಮೋದನೆ ಅಗತ್ಯ ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯರು ದೀರ್ಘಕಾಲ ಉಳಿಸಿಕೊಂಡವರಿಗೆ ದುಪ್ಪಟ್ಟು ವಿಧಿಸಿ, ಕೆಲವೊಂದು ಕಾರಣದಿಂದ ಅರಿವಿಲ್ಲದೆ ಕೇವಲ ಒಂದು ವರ್ಷದ ಬಾಕಿ ಇದ್ದವರಿಗೆ ಕೊಂಚ ರಿಯಾಯಿತಿ ಮಾಡಿ ದಂಡ ವಿಧಿಸಿ ವಸೂಲಾತಿಗೆ ಕ್ರಮಕೈಗೊಳ್ಳಬಹುದು ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಬಾಗಿಲು ಸಂಖ್ಯೆ ಕೊಡುವಾಗ ದಾಖಲೆ ಪರಿಶೀಲಿಸಿ ಕೊಡಿ:
ಸದಸ್ಯ ಸಣ್ಣಣ್ಣ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣಗಳಿಗೆ ಬಾಗಿಲ ಸಂಖ್ಯೆ ನೀಡುವ ಮುನ್ನ ಸಭೆಯ ಗಮನ ತರಬೇಕು ಮತ್ತು ಅದಕ್ಕೂ ಮುನ್ನ ದಾಖಲೆ ಪರಿಶೀಲಿಸಬೇಕು, ಒಟ್ಟಾರೆಯಾಗಿ ಬಾಗಿಲು ಸಂಖ್ಯೆ ಕೊಟ್ಟು ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಹಾದಿ ಮಾಡಿಕೊಳ್ಳದ ಹಾಗೆ ಆಗಲಿ ಎಂದರು.

ಸದಸ್ಯೆ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ ಕಳೆದ ಹಲವು ಸಾಮಾನ್ಯ ಸಭೆಗಳಲ್ಲಿ ಹಳೇ ಬಸ್ ನಿಲ್ದಾಣದಲ್ಲಿ ನೆಲಸಮಗೊಂಡ ಶೌಚಾಲಯ ಜಾಗದಲ್ಲಿ ಮತ್ತೆ ಶೌಚಾಲಯ ನಿರ್ಮಿಸಲು ನಿರ್ಣಯ ಕೈಗೊಂಡರೂ ಕಾರ್ಯರೂಪಕ್ಕೆ ಬರುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿ, ಇಲ್ಲಿ ನಿರ್ಣಯ ಆಗುತ್ತದೆ ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ರೀತಿಯಾಗಿ ಪುನರಾವರ್ತನೆ ಆಗುತ್ತಲೇ ಇದ್ದರೆ ಇಂತಹ ಸಭೆಗಳ ಔಚಿತ್ಯವೇನು ಎಂದ ಅವರು ಅಲ್ಲದೆ ಹಳೇ ಬಸ್ ನಿಲ್ದಾಣದಿಂದ ನಟ್ಟಿಬೈಲಿಗೆ ತೆರಳುವ ಕಾಲು ದಾರಿ ಊರ್ಜಿತವಾಗಿರಿಸಬೇಕು ಹೊರತು ಬಹುಮಹಡಿ ಕಟ್ಟಡದವರ ಅತಿಕ್ರಮಣಕ್ಕೆ ಆಸ್ಪದ ಕೊಡಬೇಡಿ ಎಂದರು.

ಗ್ರಂಥಾಲಯ ನಿರ್ಮಾಣಕ್ಕೆ 20 ಲಕ್ಷ ಮಂಜೂರಾತಿ ಬಂದಿದೆ ಎಂದು ಪಿಡಿಒ. ಸಭೆಯ ಗಮನಕ್ಕೆ ತಂದರು. ಅಲ್ಲದೆ ವಸತಿ ರಹಿತರ ಪಟ್ಟಿ ಪ್ರತೀ ವಾರ್ಡ್ ಮಟ್ಟದಲ್ಲಿ ತಯಾರಿಸಿ ತಕ್ಷಣ ಕೊಡಬೇಕು ಎಂದರು. ಪಂಚಾಯಿತಿ ಸಿಬ್ಬಂದಿ ಶ್ರೀನಿವಾಸ ಅವರ ಉತ್ತಮ ಸಾಧನೆಯಿಂದಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಬಹಳಷ್ಟು ಕೆಲಸ ಸಾಧ್ಯವಾಗಿದೆ ಎಂದರು. ಇದಕ್ಕಾಗಿ ಅವರನ್ನು ಅಭಿನಂದಿಸಲಾಯಿತು.

ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಸುರೇಶ ಅತ್ರಮಜಲು, ಕೆ. ಅಬ್ದುಲ್ ರಹಿಮಾನ್, ಯು.ಟಿ. ಮಹಮ್ಮದ್ ತೌಸೀಫ್, ಯು.ಕೆ. ಇಬ್ರಾಹಿಂ, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್ ಮಾತನಾಡಿ ಸಲಹೆ ಸೂಚನೆ ನೀಡಿದರು. ಅಬ್ದುಲ್ ರಶೀದ್, ಮೈಸಿದಿ ಇಬ್ರಾಹಿಂ, ಜಯಂತಿ, ಶೋಭಾ, ರುಕ್ಮಿಣಿ, ಸೌಧ, ನೆಬಿಸಾ, ಉಷಾ ನಾಯ್ಕ, ವನಿತಾ, ಲಲಿತಾ ಉಪಸ್ಥಿತರಿದ್ದರು. ಪಿಡಿಒ. ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ದಿನೇಶ ವಂದಿಸಿದರು.

ಪೊಲೀಸರಿಗೆ ಕೊಟ್ಟಿದ್ದ ಡಿವಿಡಿಆರ್. ಉಪಯೋಗಕ್ಕೆ ಬಾರದ ರೀತಿಯಲ್ಲಿದೆ…!!
ಕೆಲ ತಿಂಗಳ ಹಿಂದೆ ಪೊಲೀಸ್ ಠಾಣೆ ಎದುರು ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ತನಿಖಾ ದೃಷ್ಠಿಯಿಂದ ಗ್ರಾಮ ಪಂಚಾಯಿತಿ ಸಿಸಿ. ಕ್ಯಾಮರಾದಲ್ಲಿ ಅಡಕವಾದ ದೃಶ್ಯಾವಳಿಗಳನ್ನು ನೋಡುವ ಸಲುವಾಗಿ ಉಪ್ಪಿನಂಗಡಿ ಪೊಲೀಸರು ಪಡೆದುಕೊಂಡಿದ್ದ ಪಂಚಾಯಿತಿ ಕಚೇರಿಯ ಡಿವಿಡಿಆರ್.ನ್ನು ಹಿಂತಿರುಗಿಸಿದ್ದಾರೆ. ಆದರೆ ಅದು ಉಪಯೋಗಕ್ಕೆ ಬಾರದ ರೀತಿಯಲ್ಲಿ ಕೆಟ್ಟು ಹೋಗಿರುತ್ತದೆ ಎಂದು ಪಿಡಿಒ. ಸಭೆಯ ಗಮನಕ್ಕೆ ತಂದು ಈ ನಷ್ಟಕ್ಕೆ ಯಾರು ಹೊಣೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು ಸಂಬಂಧಪಟ್ಟ ಇಲಾಖೆಯವರೇ ಸರಿಪಡಿಸಿಕೊಡುವಂತೆ ಕೇಳಿಕೊಳ್ಳುವುದು ಸೂಕ್ತ ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

LEAVE A REPLY

Please enter your comment!
Please enter your name here