ಪುತ್ತೂರು: ಪುತ್ತೂರಿನ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನವು ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ವಾದನ ಕ್ಷೇತ್ರದ ಸಾಧಕ ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಚಂದ್ರಶೇಖರ ದೇವಾಡಿಗರು ಆಯ್ಕೆಯಾಗಿದ್ದಾರೆ. ಎ.12ರಂದು ಪರ್ಲಡ್ಕ ಅಗಸ್ತ್ಯ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದಿ. ಬಾಬು ಸೇರಿಗಾರ ಅವರ ಪುತ್ರ ಚಂದ್ರಶೇಖರ ದೇವಾಡಿಗರು ಸ್ಯಾಕ್ಸೋಫೋನ್ ಹಾಗೂ ನಾಗಸ್ವರ ವಾದನದಲ್ಲಿ ಪ್ರಸಿದ್ಧರು. ತಂದೆಯಿಂದಲೇ ಸಂಗೀತದ ಮೊದಲಾಕ್ಷರ ಕಲಿಕೆ. ಮುಂದೆ ಪಕ್ರು ಸೇರಿಗಾರ, ಮಲ್ಪೆಯ ಜೋನಿ, ಕಾಂತು ಸೇರಿಗಾರ ಸುಬ್ರಹ್ಮಣ್ಯ, ಪುತ್ತೂರು ವೆಂಕಟಪ್ಪ ಡೋಗ್ರ, ಪುತ್ತೂರು ಹರಿಶ್ಚಂದ್ರ, ಮಣ್ಣಗುಡ್ಡೆ ಗೋಪಾಲಕೃಷ್ಣ ಅಯ್ಯರ್ ಹಾಗೂ ತಂಜಾವೂರು ರಾಮ್‌ದಾಸರಿಂದ ಸಂಗೀತ ಅಭ್ಯಾಸ ನಡೆಸಿ ಈ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರು. ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಇವರ ವಾದನ ಸೇವೆಯು ಹತ್ತೂರಲ್ಲೂ ಜನಪ್ರಿಯ.
ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರತಿವರುಷ ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ. ಇದುವರೆಗೆ – ಬ್ರಹ್ಮಶ್ರೀ ದಿ.ಕೆಮ್ಮಿಂಜೆ ಕೇಶವ ತಂತ್ರಿ, ದಿ.ಡಾ.ಶೇಣಿ ಗೋಪಾಲಕೃಷ್ಣ ಭಟ್, ದಿ.ರಾಮದಾಸ ಸಾಮಗ, ದಿ.ಬಾರ್ಯ ಜಯಕೀರ್ತಿ ಬುಣ್ಣು, ದಿ.ಚಂದು ಮೇಸ್ತ್ರಿ, ದಿ.ನಾಟಿವೈದ್ಯೆ ಅಕ್ಕು ಹೆಂಗ್ಸು, ಪಾಕಶಾಸ್ತ್ರಜ್ಞ ದಿ.ಶ್ರೀನಿವಾಸ ಭಟ್, ಸರಾಫ್ ರಾಮಚಂದ್ರ ಆಚಾರ್ಯ, ಸಂಗೀತ ಸಾಧಕ ಕುದ್ಮಾರು ವೆಂಕಟ್ರಮಣ ಭಟ್, ಅಧ್ಯಾಪಕ ವಾಸುದೇವ ಮಯ್ಯ, ವೈದ್ಯ ಡಾ.ಜೆ.ಸಿ.ಅಡಿಗ, ಬರೆಪ್ಪಾಡಿ ಅನಂತಕೃಷ್ಣ ಭಟ್, ಉಮೇಶ ಶೆಣೈ, ಸಹಕಾರಿ ನಿರಂಜನ ಕುಮಾರ್, ಪ್ರೊ.ವೇದವ್ಯಾಸ, ಕೆಯ್ಯೂರು ನಾರಾಯಣ ಭಟ್, ಫಿಲೋಮಿನಾ ಇ. ಬ್ರೆಗ್ಸ್, ವೇ.ಮೂ.ಹರೀಶ್ ಉಪಾಧ್ಯಾಯ, ಪೂಕಳ ಲಕ್ಷ್ಮೀನಾರಾಯಣ ಭಟ್ ಹಾಗೂ ರಾಮಕೃಷ್ಣ ಮಿತ್ಯಾಂತರು ಪ್ರಶಸ್ತಿ ಸ್ವೀಕರಿಸಿದ್ದಾರೆ.