‘ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದರೂ ಬಿಜೆಪಿ ಕೋಮುಗಲಭೆಗೆ ಸಂಚು ನಡೆಸುತ್ತಿದೆ’ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಆರೋಪ

0

ಪುತ್ತೂರು:ನಿರಂತರ ಬೆಲೆ ಏರಿಕೆಯಿಂದ ಜನ ಮೂರು ಹೊತ್ತಿನ ಊಟಕ್ಕೂ ತತ್ವಾರ ಪಡುವಂತಹ ವಾತಾವರಣ ಸೃಷ್ಟಿಯಾಗಿದ್ದು ಯುವಕರಿಗೆ ಉದ್ಯೋಗವಿಲ್ಲ, ವಿದ್ಯಾವಂತರು ಕೆಲಸವಿಲ್ಲದೆ ಯಾತನೆ ಅನುಭವಿಸುತ್ತಿದ್ದರೂ ಓಟಿನ ರಾಜಕೀಯಕ್ಕಾಗಿ ಬಿಜೆಪಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮುಗಲಭೆ ನಡೆಸಲು ಸಂಚು ನಡೆಸುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಆರೋಪಿಸಿದ್ದಾರೆ.

 


ಅವರು ಎ.9ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪಂಚರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಇಂಧನ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿತ್ತು,ಮತ ಎಣಿಕೆಯ ಬಳಿಕ ಮತ್ತೆ ಬೆಲೆ ಏರಿಸಿದ್ದಾರೆ.ತಮ್ಮ ಕೆಲಸ ಆಗುವ ತನಕ ಅಥವಾ ಚುನಾವಣೆಯಲ್ಲಿ ಮತ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಇಂಧನ ಬೆಲೆ ಇಳಿಸಿ ಆ ಬಳಿಕ ಮತ್ತೆ ಏರಿಕೆ ಮಾಡಿದ್ದು ಬಿಜೆಪಿಗೆ ಜನರ ಹಿತ ಬೇಕಿಲ್ಲ ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದೇ ಉzಶವಾಗಿದ್ದು ಅದಕ್ಕಾಗಿ ಯಾವ ಕೆಲಸಕ್ಕೆ ಬೇಕಾದರೂ ಕೈ ಹಾಕುತ್ತಾರೆ,ಕೈ ಜೋಡಿಸುತ್ತಾರೆ ಎಂದ ಅವರು, ಬೆಲೆ ಏರಿಕೆಯಿಂದ ದೇಶದಲ್ಲಿ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಯುವಕರ ತಲೆಗೆ ಹುಳ ಬಿಟ್ಟಿದ್ದಾರೆ:
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.ಇದಕ್ಕಾಗಿ ಈಗಲೇ ಬಿಜೆಪಿ ಸಿದ್ದತೆ ಮಾಡಿಕೊಂಡಿದ್ದು ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡುವ ಕೆಲಸವನ್ನು ಮಾಡುತ್ತಿದೆ.ಹಿಜಾಬ್, ಆಝಾನ್, ವ್ಯಾಪಾರ ನಿರ್ಬಂಧ, ಹಲಾಲ್ ಕಟ್, ಜಟ್ಕಾ ಕಟ್ ಹೀಗೇ ಹಲವು ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಯುವಕರ ತಲೆಗೆ, ಧರ್ಮದ ಬಗ್ಗೆ ಕೆಟ್ಟಭಾವನೆಯನ್ನು ತುಂಬಿ ಅವರನ್ನು ರಸ್ತೆಗೆ ಇಳಿಸಿದ್ದಾರೆ.ಏನೂ ಗೊತ್ತಿಲ್ಲದ ಮುಗ್ದ ಮನಸ್ಸುಗಳಲ್ಲಿ ವಿಷ ಬೀಜವನ್ನು ಬಿತ್ತುವ ಮೂಲಕ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದರಿಂದ ಹಿಂದೂ ಧರ್ಮಕ್ಕೆ ಏನೂ ಲಾಭವಿಲ್ಲ.ಹಿಂದೂ ಧರ್ಮ ಎಲ್ಲರನ್ನೂ ಆದರದಿಂದ ಕಾಣುವ ಧರ್ಮವಾಗಿದೆ,ಬಿಜೆಪಿ ಧರ್ಮವನ್ನು ರಾಜಕೀಯಕ್ಕೆ ಬಳಸಿ ಕೋಮುಗಲಭೆ ನಡಸುತ್ತಿದೆ ಎಂದು ಅವರು ಆರೋಪಿಸಿದರು.

ಎಲ್ಲರಿಗೂ ಕಮಿಷನ್:
ಶಾಸಕರು, ಮಂತ್ರಿಗಳು ೪೦ ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದರೂ ಮೋದಿ ಕ್ರಮಕೈಗೊಂಡಿಲ್ಲ ಯಾಕೆ? ಎಂದು ಕೇಳಿದ ಎಂ.ಬಿ.,ಕಮಿಷನ್ ಎಲ್ಲರಿಗೂ ಹಂಚಲಾಗುತ್ತದೆ ಎಂದು ಆರೋಪಿಸಿದರು.

‘ಕಾಶ್ಮೀರ್ ಫೈಲ್ಸ್’ ಬಂಡಲ್ ಸಿನಿಮಾ:
‘ಕಾಶ್ಮೀರ್ ಫೈಲ್ಸ್’ ಸಿನಿಮಾ ತೋರಿಸಿ ಜನರನ್ನು ಮರಳು ಮಾಡಲು ಯತ್ನಿಸಿದ್ದಾರೆ.ಈ ಸಿನಿಮಾ ಬಿಜೆಪಿ ಕೃಪಾಪೋಷಿತ ಸಿನಿಮಾ ಆಗಿದೆ.ಇದರಿಂದ ಸಿನಿಮಾ ಮಾಡಿದವನಿಗೆ,ನಟ, ನಟಿಯರಿಗೆ ಹಣ ಮತ್ತು ಪ್ರಚಾರ ಸಿಕ್ಕಿದೆ, ಬಿಜೆಪಿ ಮೊಸಳೆ ಕಣ್ಣೀರು ಹಾಕಿ ಜನರನ್ನು ಉದ್ರೇಕಿಸಿದ್ದು ಬಿಟ್ಟರೆ ಸಿನಿಮಾ ಬರೇ ಬಂಡಲ್ ಎಂದು ಎಂ.ಬಿ.ವಿಶ್ವನಾಥ್ ರೈ ಹೇಳಿದರು.ಕಾಶ್ಮೀರದಲ್ಲಿ ಪಂಡಿತರಿಗೆ ತೊಂದರೆಯಾದಾಗ ಕೇಂದ್ರದಲ್ಲಿ ಬಿಜೆಪಿ ಸಮ್ಮಿಶ್ರ ಸರಕಾರವೇ ಇತ್ತು.ಆದರೂ ಯಾಕೆ ಕಾನೂನು ಕ್ರಮಕ್ಕೆ ಮುಂದಾಗಿಲ್ಲ ಎಂದು ಅವರು ಪ್ರಶ್ನಿಸಿದರು.

30 ಸೀಟು ಬರುತ್ತದೆ ಎಂದು ಗೊತ್ತಾಗಿ ಬಿಜೆಪಿ ರೋಡಿಗಿಳಿದಿದೆ:ಅಮಲ
ಸಂಘ ಪರಿವಾರ ನಡೆಸಿದ ಗುಪ್ತಚರ ವರದಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 30 ಸೀಟಿ ಪಡೆಯಲಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಮುಗ್ದ ಯುವಕರನ್ನು ಬಳಸಿ ಕೋಮುಗಲಭೆ ನಡೆಸುತ್ತಿದೆ.ಇವರಿಗೆ ಎಸ್‌ಡಿಪಿಐ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ.ಹಿಂಸೆಗೆ ಪ್ರಚೋದನೆ ನೀಡುವುದೇ ಬಿಜೆಪಿಯ ಉzಶವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಹೇಳಿದರು.ತಮ್ಮ ನ್ಯೂನತೆಯನ್ನು ಮುಚ್ಚಿ ಹಾಕಲು ಬಿಜೆಪಿ ರಾಜ್ಯದ ನಾಲ್ಕು ಚಾನೆಲ್‌ಗಳಿಗೆ ಗುತ್ತಿಗೆ ನೀಡಿದ್ದು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್ ಆರೋಪಿಸಿದರು.

LEAVE A REPLY

Please enter your comment!
Please enter your name here