- ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ
- ಗ್ರಾಮೀಣ ಭಾಗದಲ್ಲಿ ಪ್ರಧಾನಿಯವರ ಆಶಯ ಈಡೇರುತ್ತಿದೆ – ಮಠಂದೂರು
ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮದ ಗ್ರಾಮಕರಣಿಕರ ನೂತನ ಕಚೇರಿ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1.3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಏ. 9 ರಂದು ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು ನೆರವೇರಿಸಿದರು.
ಬೆಳಿಗ್ಗೆ ಗುಮ್ಮಟೆಗದ್ದೆಯಲ್ಲಿ ರಸ್ತೆ ಉದ್ಘಾಟನೆ, ಬಾಲ್ಯೊಟ್ಟು – ಕೆಲ್ಲಾಡಿ ರಸ್ತೆ ಶಂಕುಸ್ಥಾಪನೆ, ಬಾಳೆಗುಳಿ ರಸ್ತೆ ಶಂಕುಸ್ಥಾಪನೆ, ಪಾರ ಅಂಗನವಾಡಿ ಕೇಂದ್ರ ಉದ್ಘಾಟನೆ, ಕಕ್ಕೂರು – ನಾಕಪ್ಪಾಡಿ ರಸ್ತೆ ಶಂಕುಸ್ಥಾಪನೆ, ಮಿತ್ತಡ್ಕ ತರವಾಡು ರಸ್ತೆ ಉದ್ಘಾಟನೆ, ಗ್ರಾಮ ಪಂಚಾಯತ್ ಬಳಿ ಬಸ್ ತಂಗುದಾಣದಲ್ಲಿ ಪುಸ್ತಕ ಗೂಡು ಉದ್ಘಾಟನೆ, ನರೇಗಾ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಪಂಚಾಯತ್ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ ಬಳಿಕ ಗ್ರಾಮಕರಣಿಕರ ನೂತನ ಕಚೇರಿಯ ಉದ್ಘಾಟನೆ ನಡೆಯಿತು. ನಂತರ ನಡೆದ ಸಮಾರಂಭವನ್ನು ಶಾಸಕರು ದೀಪ ಬೆಳಗಿಸಿ ಮಾತನಾಡಿ ‘ಸ್ವಾಭಿಮಾನಿ ಮತ್ತು ಸ್ವಾವಲಂಬಿ ಜೀವನ ನಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಕಿಕೊಂಡಿರುವ ಹತ್ತಾರು ಅಭಿವೃದ್ಧಿ ಕಾರ್ಯಗಳು ಇಂದು ಗ್ರಾಮೀಣ ಭಾಗದ ಜನರಲ್ಲಿ ಹೊಸ ಚೈತನ್ಯ ತರುವಂತಾಗಿದೆ. ಮೂಲಭೂತ ಅವಶ್ಯಕತೆಗಳಿಗೆ ಎಲ್ಲಿಯೂ ಕೊರತೆ ಬಾರದಂತೆ ಕಾರ್ಯಕ್ರಮಗಳನ್ನು ಹಾಕಿಕೊಂಡ ಅನ್ವಯ ಇವತ್ತು ಬೆಟ್ಟಂಪಾಡಿಯಲ್ಲಿಯೂ ಒಂದಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ’ ಎಂದರು.
ಮುಖ್ಯ ಅತಿಥಿಗಳಾಗಿ ತಹಶಿಲ್ದಾರ್ ರಮೇಶ್ ಬಾಬು ರವರು ಮಾತನಾಡಿ ‘ತಾಲೂಕಿನಲ್ಲಿಯೇ ಹೈಟೆಕ್ ಗ್ರಾಮಕರಣಿಕರ ಕಚೇರಿ ಬೆಟ್ಟಂಪಾಡಿ ಯಲ್ಲಿ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪಂಚಾಯತ್ ಕಚೇರಿ ಕಟ್ಟಡದಲ್ಲಿಯೇ ಕಚೇರಿಗೆ ಸ್ಥಳಾವಕಾಶ ನೀಡಿರುವ ಪಂಚಾಯತ್ ಗೆ ಅಭಿನಂದನೆ ಸಲ್ಲಿಸಿದರು.
ಪುತ್ತೂರು ತಾ.ಪಂ.ನ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್ ಮಾತನಾಡಿ ‘ಬೆಟ್ಟಂಪಾಡಿ ಪಂಚಾಯತ್ ನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿರುವುದರಿಂದ ಪಂಚಾಯತ್ ಬಗ್ಗೆ ಅಭಿಮಾನ ಮತ್ತು ಹೆಮ್ಮೆಯಿದೆ. ಅನೇಕ ಅಭಿವೃದ್ಧಿ ವಿಚಾರಗಳಲ್ಲಿ ಬೆಟ್ಟಂಪಾಡಿ ಪಂಚಾಯತ್ ಮುಂಚೂಣಿ ಸ್ಥಾನದಲ್ಲಿದೆ. ಅದೇ ರೀತಿ ಬಯಲು ಕಸ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವಲ್ಲಿಯೂ ಗ್ರಾಮದ ಮಂದಿ ಗಮನ ಹರಿಸಬೇಕಾಗಿದೆ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ.ಯವರು ಮಾತನಾಡಿ ‘ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಲು ಬಾಕಿ ಇವೆ. ಈ ಬಗ್ಗೆ ಶಾಸಕರು ಗಮನರಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ಕಂದಾಯ ನಿರೀಕ್ಷಕ ಗೋಪಾಲ್ ಕೆ.ಟಿ., ಪಂಚಾಯತ್ ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಉಪಸ್ಥಿತರಿದ್ದರು.
ಸನ್ಮಾನ
ಇದೇ ವೇಳೆ ಈ ಹಿಂದೆ ಬೆಟ್ಟಂಪಾಡಿ ಯಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಕನಕರಾಜ್ ಮತ್ತು ಪಂಚಾಯತ್ ಯುವ ಗುತ್ತಿಗೆದಾರ ನವೀನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ತಾ.ಪಂ. ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ, ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಗಂಗಾಧರ ಎಂ.ಎಸ್., ಮಹೇಶ್ ಕೋರ್ಮಂಡ, ಗೋಪಾಲ್, ಉಮಾವತಿ, ಪಾರ್ವತಿ ಲಿಂಗಪ್ಪ ಗೌಡ, ಬೇಬಿ ಜಯರಾಮ, ಲಲಿತ ಗೋಳಿಪದವು, ಬಿಜೆಪಿ ಗ್ರಾಮ ಸಮಿತಿ ಪದಾಧಿಕಾರಿಗಳು, ಬೂತ್ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡರು.
ಪಂಚಾಯತ್ ಸದಸ್ಯೆ ಶ್ರೀಮತಿ ವಿದ್ಯಾಶ್ರೀ ಪ್ರಾರ್ಥಿಸಿದರು. ಸದಸ್ಯ ಚಂದ್ರಶೇಖರ ರೈ ಬಾಲ್ಯೊಟ್ಟು ಸ್ವಾಗತಿಸಿ, ಪಂ. ಅಭಿವೃದ್ಧಿ ಅಧಿಕಾರಿ ಸಂದೇಶ್ ವಂದಿಸಿದರು. ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಅಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಗ್ರಾಮೀಣ ಭಾಗದಲ್ಲಿ ಹತ್ತಾರು ಅಭಿವೃದ್ಧಿ ಕಾರ್ಯಗಳಿಗೆ ಹೊಸ ರೂಪ ನೀಡಲಾಗಿದೆ. ವಸತಿ ರಹಿತರಿಗೆ ವಸತಿ ಯೋಜನೆಯನ್ನು 30 ರಿಂದ 50 ಕ್ಕೆ ಏರಿಸಲಾಗಿದೆ. ಸರ್ಕಾರಿ ಸವಲತ್ತುಗಳನ್ನು ವೇಗವಾಗಿ ಪಡೆದುಕೊಳ್ಳಲು ಉಪ್ಪಿನಂಗಡಿ ಮತ್ತು ವಿಟ್ಲದಲ್ಲಿ ನಾಡಕಚೇರಿ ನಿರ್ಮಾಣ, 94ಸಿ, 52,53 ಮತ್ತು 57 ಅರ್ಜಿಗಳ ಕ್ಷಿಪ್ರ ವಿಲೇವಾರಿ, ಅಲ್ಲಲ್ಲಿ ವಿದ್ಯುತ್ ಪರಿವರ್ತಕಗಳ ಅಳವಡಿಕೆ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪರಿವರ್ತಕ ಬದಲಾವಣೆ, ಅಪಾಯಕಾರಿ ವಿದ್ಯುತ್ ತಂತಿ ಬದಲಾವಣೆ ಇತ್ಯಾದಿ ಯೋಜನೆಗಳು ಜನರಿಗೆ ನೇರವಾಗಿ ತಲುಪುವ ವ್ಯವಸ್ಥೆ ಆಗುತ್ತಿದೆ.
– ಮಠಂದೂರು