ಆಧುನಿಕತೆಯಲ್ಲೂ ಮಕ್ಕಳಿಗೆ ಮಣ್ಣಿನ ಸೊಗಡನ್ನು ಪರಿಚಯಿಸುವ ಪ್ರಯತ್ನ

0

  • ಜಡೆಕಲ್ಲು ಶಾಲೆಯಲ್ಲಿ ನಡೆಯಿತು ದೇಸಿ ವೈಭವ’ ಜನಪದ ಕುಣಿತ ಅನಾವರಣ

 

ಪುತ್ತೂರು: ಆಧುನಿಕ ಯುಗದಲ್ಲಿ ಎಲ್ಲರ ಮನಸ್ಸು ವೇಗದ ಜೀವನದ ದಾವಂತಕ್ಕೆ ಹೋಗುವ ಸಂದರ್ಭದಲ್ಲಿ ತಮ್ಮ ಹಿಂದಿನ ಸಮುದಾಯ, ಸಂಪ್ರದಾಯದ ನೆನಪು ಮತ್ತು ಅದರ ವೈಶಿಷ್ಟ್ಯತೆ ಹಾಗು ಅದರಿಂದ ಸಿಗುವ ನೆಮ್ಮದಿಯ ಕುರಿತು ಚಿಂತನೆ ನಡೆಸಿದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮಾರ್ಗದರ್ಶನದಲ್ಲಿ ಪ್ರತಿಭಾನ್ವಿತ 11 ಶಿಕ್ಷಕರು ಮಕ್ಕಳಿಗೆ ಮಣ್ಣಿನ ಸೊಗಡಿನ ಪರಿಚಯ ಮಾಡುವ ಪ್ರಯತ್ನ ಮಾಡಿದ್ದು, ಇದರ ಒಂದು ಭಾಗವಾಗಿ ಎ.೭ರಂದು ರಾತ್ರಿ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಶಾಲೆಯಲ್ಲಿ ’ದೇಸಿ ವೈಭವ’ ಜನಪದ ಕುಣಿತ ಅನಾವರಣಗೊಂಡಿತ್ತು.

ತಾಲೂಕಿನ ೧೧ ಜನ ಪ್ರತಿಭಾವನ್ವಿತ ಶಿಕ್ಷಕರನ್ನು ಬಳಸಿಕೊಂಡು ಊರಿನಲ್ಲಿರುವ ಎಲ್ಲಾ ವಿಶೇಷತೆಗಳ ಕುರಿತು ಸುಮಾರು ೧ ವರ್ಷದಿಂದ ಪಟ್ಟಿ ಮಾಡಿ ಪುತ್ತೂರಿನ ಸಾವಿರಾರು ವಿಶೇಷತೆಯನ್ನು ತೋರಿಸುವ ಪ್ರಯತ್ನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರು ಮಾಡುತ್ತಿದ್ದಾರೆ. ಈಗಾಗಲೇ ಸುಮಾರು ೪೦ ಶಾಲೆಯಲ್ಲಿ ಈ ಕೆಲಸ ನಡೆಯುತ್ತಿದೆ.


ನಮ್ಮ ಸಂಪ್ರದಾಯ ಆಚಾರಕ್ಕೆ ತಕ್ಕಂತೆ ಪ್ರತಿಯೊಂದು ತಿಂಗಳಿಗೂ ಒಂದೊಂದು ಕುಣಿತ ಇರುವುದನ್ನು ಸಂಶೋಧನೆ ಮಾಡಿದ ಜಿಡೆಕಲ್ಲು ಸ.ಹಿ.ಪ್ರಾ.ಶಾಲೆಯ ಮುಖ್ಯಗುರು ತಾರನಾಥ ಸವಣೂರು ಅವರು ಸುಮಾರು ೬೦ ಜನಪದ ಕುಣಿತಗಳನ್ನು ಕಲೆ ಹಾಕಿದ್ದು, ಅದರ ಸಣ್ಣ ಪ್ರದರ್ಶನವನ್ನು ಜಿಡೆಕಲ್ಲು ಶಾಲೆಯ ೧ರಿಂದ ೭ನೇ ತರಗತಿಯ ವಿದ್ಯಾರ್ಥಿಗಳು ಒಂದು ವಾರದೊಳಗೆ ತರಬೇತಿ ಪಡೆದು ಶಾಲಾ ಬಯಲು ಮೈದಾನದಲ್ಲಿ ತಾತ್ಕಾಲಿಕ ಗುಡಿಸಲು ಮನೆ, ದನದ ಹಟ್ಟಿ, ಬಾವಿ, ಗದ್ದೆಗಳನ್ನು ನಿರ್ಮಾಣ ಮಾಡಿ ಪ್ರದರ್ಶನ ಮಾಡಿದ್ದಾರೆ. ಕಾರ್ಯಕ್ರಮವನ್ನು ಜಿಡೆಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯೋಜನೆ ಮಾಡಿತ್ತು. ಕಳೆದ ೫ ದಿನಗಳಿಂದ ಬೇಸಿಗೆ ಶಿಬಿರದಲ್ಲಿ ದೇಸಿ ವೈಭವ ಕಲ್ಪನೆ ಗೆ ಪೂರಕವಾಗಿ ಜನಪದ ಕುಣಿತಗಳನ್ನು ಅಳವಡಿಸಲಾಗಿತ್ತು.

 


ದೇಸಿ ವೈಭವದ ಜನಪದ ಕುಣಿತಗಳ ಪರಿಕಲ್ಪನೆ ಮತ್ತು ನಿರ್ದೇಶನ ವನ್ನು ಜಿಡೆಕಲ್ಲು ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರು ಮಾಡಿದ್ದು, ರೂಪಕದ ಸಂಯೋಜನೆಯನ್ನು ಜನಪದ ಕಲಾವಿದ ಸುಭಾಷ್ ಪಂಜ ಮಾಡಿದ್ದರು. ಹಿನ್ನಲೆ ಸಂಗೀತದಲ್ಲಿ ಸುಬ್ರಹ್ಮಣ್ಯ ಕಾರಂತ, ಶಿವಪ್ರಸಾದ್ ಅಬ್ಬಡ, ಶಶಿಧರ ಮಾವಿನಕಟ್ಟೆ ಸಹಕರಿಸಿದರು.

ಇವತ್ತಿಗೂ ನಮ್ಮ ಪದ್ಧತಿ ಉಳಿಯಲು ದೇಸಿ ಮಣ್ಣಿನ ಸೊಗಡು:
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ದೇಸಿ ವೈಭವ ಪ್ರದರ್ಶನ ವೀಕ್ಷಣೆ ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಇವತ್ತು ನಮ್ಮ ಮಕ್ಕಳು ಇವತ್ತು ಮೊಬೈಲ್, ಟಿವಿಯಲ್ಲಿದ್ದಾರೆ. ಆದರೆ ಹುಟ್ಟಿ ಬಂದ ಹಿಂದಿನ ದಿನಗಳಲ್ಲಿ ನಮ್ಮ ಸಂಪ್ರದಾಯ ಆಚರಣೆಗಳು, ಪದ್ದತಿಗಳು ಎಲ್ಲವನ್ನು ಮರೆಯುತ್ತಿದ್ದಾರೆ. ಇದನ್ನು ಮತ್ತೊಮ್ಮೆ ಮಕ್ಕಳಿಗೆ ತೋರಿಸುವ ನಿಟ್ಟಿನಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಈ ಮಣ್ಣಿನಲ್ಲಿ ಅತ್ಯಂತ ಶ್ರೇಷ್ಠವಾದ ಕಲೆ, ಸಂಪ್ರದಾಯವಿದೆ. ಇವತ್ತಿಗೂ ನಮ್ಮ ಪದ್ಧತಿಗಳು ಉಳಿದು ಕೊಂಡಿವೆ ಎಂದಾದರೆ ಅದು ಈ ಮಣ್ಣಿನ ಸಗಡಿನಿಂದ ಎಂದರು. ಇವತ್ತು ಎಷ್ಟೋ ಮಕ್ಕಳಿಗೆ ಅವಿಭಕ್ತ ಕುಟುಂಬ ಗೊತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಹಿಂದಿನ ಜನಾಂಗದ ಸಂಪ್ರದಾಯ ಉಳಿಸಲು ನನಗೆ ಹೊಳೆದದ್ದು ದೇಸಿ ವೈಭವ ಎಂದ ಅವರು ನನ್ನ ಈ ಕನಸಿಗೆ ತಾರನಾಥ ಸವಣೂರು, ರಮೇಶ್ ಉಳಯ ಮತ್ತು ಜಗನ್ನಾಥ ಅರಿಯಡ್ಕರವರು ಸೇರಿದಂತೆ ಹಲವು ಶಿಕ್ಷಕರು ಜೀವ ತುಂಬಿದ್ದಾರೆ.

ಕಲೆ ನಾಶವಾಗಬಾರದು:
ಕಾರ್ಯಕ್ರಮದ ಸಂಯೋಜಕ ತಾರನಾಥ ಸವಣೂರು ಅವರು ಮಾತನಾಡಿ ಓದು ಕಲಿತ ಮಕ್ಕಳಿಗೆ ಇವತ್ತು ಕಲೆಯ ಬಗ್ಗೆಯೂ ಆಸಕ್ತಿ ಮೂಡಬೇಕು. ಕಲೆ ನಾಶ ಆಗಬಾರದು ಎಂಬ ನಿಟ್ಟಿನಲ್ಲಿ ಮಕ್ಕಳಲ್ಲಿ ಒಂದು ವಾರದೊಳಗೆ ಅದಷ್ಟು ತರಬೇತಿ ನೀಡಿದ್ದೇವೆ. ಉತ್ತಮ ರೀತಿಯಲ್ಲಿ ಕಲೆಯ ಪ್ರದರ್ಶನ ಮಾಡಿದ್ದಾರೆ ಎಂದರು. ವೇದಿಕೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ರೈ, ಎಸ್‌ಡಿಎಂಸಿ ಅಧ್ಯಕ್ಷ ತೀರ್ಥರಾಮ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ರಮೇಶ್ ಉಳಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here