ಉಪ್ಪಿನಂಗಡಿ: ಮನೆಯಲ್ಲಿ ಕಾಡಿದ ಬಡತನದ ನಡುವೆ, ಕಾಲೇಜಿನಲ್ಲಿ ದೊರೆತ ಪ್ರೋತ್ಸಾಹವನ್ನೇ ನೆಚ್ಚಿಕೊಂಡು ಸಾಧನೆ ತೋರಿದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಮಿತಾ ಎಂಬ ವಿದ್ಯಾರ್ಥಿನಿ ಬಿಎಸ್‌ಡಬ್ಲ್ಯೂ ಪದವಿ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಗಳಿಸುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.
ಬಜತ್ತೂರು ಗ್ರಾಮದ ಬೆದ್ರೋಡಿಯ ಭರತ್ ಮತ್ತು ವಿಮಲಾ ದಂಪತಿಯ ಮಗಳಾಗಿರುವ ಸ್ಮಿತಾ ತನ್ನ ಕಲಿಕೆ ಹಾಗೂ ಕಲಿಕೇತರ ಚಟುವಟಿಕೆಗಳ ಮೂಲಕ ಅಮೇರಿಕಾ ಸಂಸ್ಥೆಯ ಫೆಲೋಶಿಪ್‌ಗೆ ಈ ಮೊದಲು ಭಾಜನರಾಗಿದ್ದು, ಇದೀಗ ಬಿಎಸ್‌ಡಬ್ಲ್ಯೂ ಅಂತಿಮ ವರ್ಷದ ಫಲಿತಾಂಶದಲ್ಲಿ ದ್ವಿತೀಯ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಪ್ರಸಕ್ತ ತನಗೆ ದೊರೆತ ಅಮೇರಿಕಾ ಸಂಸ್ಥೆಯ ಫೆಲೋಶಿಫ್ ಸಹಕಾರದಿಂದ ಮೈಸೂರಿನಲ್ಲಿ ಎಂಎಸ್‌ಡಬ್ಲ್ಯೂ ಪದವಿಯನ್ನು ಮಾಡುತ್ತಿರುವ ಈಕೆ, ‘ತಾನು ರ‍್ಯಾಂಕ್ ನಿರೀಕ್ಷಿಸಿರಲಿಲ್ಲ. ಮುಖ್ಯವಾಗಿ ಎಸೆಸ್ಸೆಲ್ಸಿ ಯಿಂದ ನಾನು ಬರೆದ ಪರೀಕ್ಷೆಯಲ್ಲೆಲ್ಲಾ ಡಿಸ್ಟಿಂಕ್ಷನ್ ಮಟ್ಟವನ್ನು ಕಾಯ್ದುಕೊಂಡು ತೇರ್ಗಡೆಯಾಗುತ್ತಿದ್ದೆ. ಅಂಕದ ಬಗ್ಗೆ ನಾನು ಯಾವತ್ತೂ ಚಿಂತಿತಳಾಗಿಲ್ಲ. ಕಲಿಯುವ ಹಂಬಲವಿತ್ತು. ಕಾಲೇಜಿನಲ್ಲಿ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ನಂದೀಶ್ ವೈ.ಡಿ. ರವರ ಪ್ರೋತ್ಸಾಹ ಈ ರ‍್ಯಾಂಕ್ ನಲ್ಲಿ ತುಂಬಾ ಪ್ರಭಾವ ಬೀರಿದೆ. ನನಗೆ ರಾತ್ರಿ ವೇಳೆಯ ಪ್ರ್ರಶಾಂತತೆಯಲ್ಲಿ ಓದುವುದೆಂದರೆ ಬಲು ಇಷ್ಟ. ಹಾಗಾಗಿ ರಾತ್ರಿ ೨, ೩ ಗಂಟೆಯ ವರೆಗೆ ಓದುವುದು ನನ್ನ ಅಭ್ಯಾಸ. ಒಟ್ಟಾರೆ ನನಗೆ ದ್ವಿತೀಯ ರ‍್ಯಾಂಕ್ ಬಂದಿದೆ ಎಂಬ ಸಂದೇಶ ಕೇಳಿ ತುಂಬಾ ಖುಷಿಯಾಗಿದೆ’ ಎಂದು ಸ್ಮಿತಾರವರು ‘ಸುದ್ದಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪದವಿ ವಿಭಾಗದ ಮೊದಲ ರ‍್ಯಾಂಕ್: ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ : ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಹಿಂದೆ ಸ್ನಾತಕೋತರ ವಿಭಾಗದಲ್ಲಿ ಹಲವು ರ‍್ಯಾಂಕ್‌ಗಳು ಸಾಧಿಸಲ್ಪಟ್ಟಿದ್ದವು. ಸಂಸ್ಥೆಯ ೪೦ ವರ್ಷಗಳ ಇತಿಹಾಸದಲ್ಲಿ ಪದವಿ ವಿಭಾಗದಲ್ಲಿ ಈತನಕ ಯಾವುದೇ ರ‍್ಯಾಂಕ್ ದಾಖಲಿಸದಿರುವುದು ಕೊರತೆಯಾಗಿತ್ತು. ಇದೀಗ ಪ್ರತಿಭಾನ್ವಿತ ವಿದ್ಯಾರ್ಥಿನಿ ಸ್ಮಿತಾ ರವರು ಅವಿರತ ಶ್ರಮವಹಿಸಿ ಬಿ ಎಸ್ ಡಬ್ಲ್ಯೂ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆಯುವುದರೊಂದಿಗೆ ಪದವಿ ವಿಭಾಗಕ್ಕೆ ನಾಲ್ಕು ದಶಕಗಳ ಇತಿಹಾಸದಲ್ಲಿ ಮೊತ್ತ ಮೊದಲ ರ‍್ಯಾಂಕ್ ಗಳಿಸಿಕೊಟ್ಟಿದ್ದಾರೆ. ತನ್ನ ಆರ್ಥಿಕ ಬಡತನವನ್ನು ಲೆಕ್ಕಿಸದೇ ಕಲಿಕಾ ಶ್ರೀಮಂತಿಕೆ ಮೆರೆದ ಸ್ಮಿತಾ ರವರಿಗೆ ಕಾಲೇಜು ಅಬಿನಂದನಾ ಪೂರ್ವಕ ಋಣಿಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಹರ್ಷ ವ್ಯಕ್ತಪಡಿಸಿದ್ದಾರೆ.