ಆಮೆ ಗತಿಯಲ್ಲಿ ನಡೆಯುತ್ತಿರುವ ಕೂಟೇಲು ಸೇತುವೆ ಕಾಮಗಾರಿ- ಆತಂಕದಲ್ಲಿ ಜನರು

0
  •  ಶೀಘ್ರ ಪೂರ್ಣಗೊಳಿಸಲು ಸಾರ್ವಜನಿಕರ ಆಗ್ರಹ. ಇಲ್ಲದಿದ್ದಲ್ಲಿ ಪ್ರತಿಭಟನೆಗೆ ಸಾರ್ವಜನಿಕರ  ನಿರ್ಧಾರ
   
ನಿಡ್ಪಳ್ಳಿ; ಇಲ್ಲಿಯ ಗ್ರಾಮದ ಕೂಟೇಲು ಎಂಬಲ್ಲಿ ಹಳೆ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದ್ದು ಕೆಲಸ ನಡೆಯುತ್ತಿರುವುದನ್ನು ಗಮನಿಸಿದರೆ ಮಳೆಗಾಲ ಆರಂಭಕ್ಕೆ ಮೊದಲು ಪೂರ್ತಿಯಾಗುವುದು ಕಷ್ಟ ಎಂದು ಮನಗಂಡ ಸಾರ್ವಜನಿಕರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ರೆಂಜ ಮುಡ್ಪಿನಡ್ಕ ಸುಳ್ಯಪದವು ಸಂಪರ್ಕಿಸುವ ರಸ್ತೆಯ ಕೂಟೇಲು ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಿಸಲು ರಸ್ತೆಯನ್ನು ಒಂದೂವರೆ ತಿಂಗಳಿಂದ ಪೂರ್ತಿ ಮುಚ್ಚಲ್ಪಟ್ಟಿದೆ.ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಜನರು ಓಡಾಡುವ ಏಕೈಕ ರಸ್ತೆಯಾಗಿದೆ.ಬೆಟ್ಟಂಪಾಡಿ ಪುತ್ತೂರು ಶಾಲಾ ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಬಸ್ಸಲ್ಲಿ  ಸಂಚರಿಸುವ ರಸ್ತೆಯಾಗಿದೆ.ದಿನದಲ್ಲಿ ಖಾಸಗಿ, ಸರಕಾರಿ ಬಸ್ಸುಗಳು 8 ರಿಂದ 10 ಟ್ರಿಪ್ ಓಡಾಡುವ ರಸ್ತೆಯಾಗಿದೆ. ರಸ್ತೆ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ್ದು  ಕಳೆದ ಒಂದೂವರೆ ತಿಂಗಳಿನಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಗೊಂಡಿದೆ‌.ಬೇರೆ ಪರ್ಯಾಯ ರಸ್ತೆ ಇದ್ದರೂ ಬಸ್ ಮತ್ತು ದೊಡ್ಡ ಗಾತ್ರದ ವಾಹನ ಸಂಚಾರಕ್ಕೆ ಅದು ಯೋಗ್ಯವಾಗಿಲ್ಲ.ಅದೂ ಕೂಡ ಮಳೆಗಾಲದಲ್ಲಿ ಸಂಚರಿಸುವ ರಸ್ತೆಯಾಗಿಲ್ಲ.ಮಳೆಗಾಲ ಮೊದಲು ಈ ಸೇತುವೆ ಪೂರ್ತಿಗೊಂಡು ರಸ್ತೆ ಸಂಚಾರಕ್ಕೆ ಮುಕ್ತವಾಗದೆ ಇದ್ದರೆ ಇಲ್ಲಿಯ ಕೃಷಿ ಜಮೀನು ನಾಶವಾಗುವುದಲ್ಲದೆ ಪ್ರದೇಶ ದ್ವೀಪದಂತಾಗಿ ಜನರು ಕಷ್ಟ ಪಡುವುದರಲ್ಲಿ ಸಂಶಯವಿಲ್ಲ.ಈ ಭಾಗದ ಜನರು ನರಕ ಯಾತನೆ ಪಡ ಬೇಕಾದಿತು.ವಿದ್ಯಾರ್ಥಿಗಳು ಈಗ ಸುಮಾರು10 ರಿಂದ 15 ಕಿ.ಮೀ ಸುತ್ತು ಬಳಸಿ ದುಪ್ಪಟ್ಟು ಬಾಡಿಗೆ ನೀಡಿ ರಿಕ್ಷಾದಲ್ಲಿ ಸಂಚರಿಸುತ್ತಿದ್ದು ಕೆಲವರು ನಡೆಯುವ ಪರಿಸ್ಥಿತಿ ಇದೆ.ಕಾಮಗಾರಿ ಆರಂಭವಾಗಿ ಮೂರು ತಿಂಗಳಲ್ಲಿ ಪೂರ್ತಿ ಗೊಳಿಸಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು  ಕಾಮಗಾರಿಯ ಹೊಣೆ ಹೊತ್ತವರು ತಿಳಿಸಿದ್ದರು.ಆದರೆ ಒಂದೂವರೆ ತಿಂಗಳು ಕಳೆದಿದ್ದು ಇನ್ನೂ 80% ಕಾಮಗಾರಿ ಬಾಕಿಯಿದೆ.ಮಳೆಗಾಲಕ್ಕೆ ಇನ್ನು ಕೆಲವೆ ಸಮಯ ಬಾಕಿಯಿದ್ದು ಕಾಮಗಾರಿ ಪೂರ್ತಿಯಾಗುವ ಲಕ್ಷಣ ಕಾಣುತ್ತಿಲ್ಲ.ಈ ರಸ್ತೆ  ಮಳೆಗಾಲದ ಮೊದಲು ಸಂಚಾರಕ್ಕೆ ಮುಕ್ತವಾಗದೆ ಇದ್ದರೆ ಪರ್ಯಾಯ ರಸ್ತೆಗಳು ಮಳೆಗಾಲದಲ್ಲಿ ಸಂಪೂರ್ಣ ಮುಚ್ಚಲ್ಪಡುವುದರಿಂದ ವಿದ್ಯಾರ್ಥಿಗಳು, ಜನ ಸಾಮಾನ್ಯರು ಸುಮಾರು 30 ಕಿ.ಮೀ ಸುತ್ತು ಬಳಸಿ ಬರ ಬೇಕಾಗುತ್ತದೆ.ಈಗ ಕೇವಲ ಬೆರಳೆಣಿಕೆಯಷ್ಟು ಕಾರ್ಮಿಕರು ಮಾತ್ರ ದುಡಿಯುತ್ತಿದ್ದು ಕಾಮಗಾರಿ ನೋಡಿದರೆ ಮಳೆಗಾಲದ ಮೊದಲು  ರಸ್ತೆ ಸಂಚಾರಕ್ಕೆ ಮುಕ್ತವಾಗುವುದು ಬಹಳ ಕಷ್ಟವಾಗಿದೆ.
 
ವಿಳಂಬಕ್ಕೆ ಯಾರು ಹೊಣೆ- ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿದರೆ ಇದಕ್ಕೆ ಸಂಬಂಧ ಪಟ್ಟ ಇಂಜಿನಿಯರ್ ಇಲಾಖೆ ಕಾರಣವೇ,ಟೆಂಡರ್ ಪಡೆದ ಗುತ್ತಿಗೆದಾರ ಕಾರಣವೇ, ಅಥವಾ ಜನಪ್ರತಿನಿಧಿಗಳಿಗೆ ಇಚ್ಚಾ ಶಕ್ತಿ ಕೊರತೆಯ ಕಾರಣವೋ. ಯಾವುದೂ ಆರ್ಥವಾಗುತ್ತಿಲ್ಲ ಎಂದು ಸಾರ್ವಜನಿಕರು ಮಾತಾಡುತ್ತಿದ್ದಾರೆ.
ಪ್ರತಿಭಟನೆಯ ಮಾಡುವ ಬಗ್ಗೆ ಮಾತು- ಸರಕಾರಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದ್ದರೂ ಆಮೆಗತಿಯ ಕಾಮಗಾರಿಗೆ ಇಂಜಿನಿಯರಿಂಗ್ ಇಲಾಖೆ ಮತ್ತು ಗುತ್ತಿಗೆದಾರರು ನೇರ ಹೊಣೆಗಾರರು ಎಂದು ಜನರ ಅಭಿಪ್ರಾಯ. ಕಾಮಗಾರಿ ಬೇಗ ಮುಗಿಯದಿದ್ದರೆ ಕೆಲವು ಸ್ಥಳೀಯ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ಒಂದು ಪ್ರತಿಭಟನೆ ಮಾಡುವ ಹಂತದಲ್ಲಿದ್ದಾರೆ.
ಆದುದರಿಂದ ಆದಷ್ಟು ಬೇಗ ಇಲ್ಲಿಯ ಜನಪ್ರತಿನಿಧಿಗಳು, ಇಲಾಖೆ ಕೂಡಲೇ ಗಮನ ಹರಿಸಿ ಸೇತುವೆ ಆದಷ್ಟು ಬೇಗ ಪೂರ್ತಿ ಗೊಳಿಸಿ ಜನರ ಸಂಕಷ್ಟ ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಸಮಯಕ್ಕೆ ಸರಿಯಾಗಿ ಪೂರ್ತಿ ಮಾಡುತ್ತಾರೆ 
ಸೇತುವೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದನ್ನು ಮನಗಂಡ ಪಂಚಾಯತ್ ಗುತ್ತಿಗೆದಾರಲ್ಲಿ ತಕ್ಷಣ ಕೆಲಸ ಮುಗಿಸಲು ಮಾತನಾಡಿದ್ದೇವೆ. ಮೊದ ಮೊದಲು ಅಡಿಪಾಯ ಹಾಕಲು ಅಲ್ಲಿ ನೀರಿನಿಂದ ಸಮಸ್ಯೆಯಾಗಿದ್ದು ಈಗ ಕೆಲಸಕ್ಕೆ ವೇಗ ನೀಡಿದ್ದು ಮಳೆಗಾಲ ಆರಂಭವಾಗುವ ಮೊದಲು ಪೂರ್ತಿ ಮಾಡಲಾಗುವುದು ಎಂದು ಒಪ್ಪಿ ಕೊಂಡಿದ್ದಾರೆ.ಆದುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಲಾಗುವುದು. ಮತ್ತೊಮ್ಮೆ ಅವರಲ್ಲಿ ಮಾತನಾಡಲಾಗುವುದು. ಅಲ್ಲದೆ ಕುಕ್ಕುಪುಣಿಯಿಂದ ಎಂಪೆಕಲ್ಲು ನವೋದಯ ಶಾಲಾ ಬಳಿಯಿಂದ ಸಾಗುವ ರಸ್ತೆಗೆ ಎಂಪೆಕಲ್ಲು ಎಂಬಲ್ಲಿ ಕಿಂಡಿಅಣೆಕಟ್ಟು ನಿರ್ಮಾಣ ಕಾಮಗಾರಿ ಈಗ ತಕ್ಷಣ ಆರಂಭವಾಗಲಿದ್ದು ವಾರದೊಳಗೆ ಆ ರಸ್ತೆಯು ಬಂದ್ ಆಗಲಿದ್ದು ಸಾರ್ವಜನಿಕರು ಸಹಕರಿಸ ಬೇಕು.ಅದನ್ನು ನಿಲ್ಲಿಸಿದರೆ ಬಂದ ಅನುದಾನ ನಮಗೆ ಮತ್ತೆ ಸಿಗುವುದಿಲ್ಲ –  ವೆಂಕಟ್ರಮಣ ಬೋರ್ಕರ್, ಉಪಾಧ್ಯಕ್ಷರು ನಿಡ್ಪಳ್ಳಿ ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here