ಕೊಳ್ತಿಗೆ: ಪೆರ್ಲಂಪಾಡಿ ಉದಯ ಕ್ಷೇತ್ರದಲ್ಲಿ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಪುತ್ತೂರು : ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಉದಯ ಕ್ಷೇತ್ರದಲ್ಲಿ ವಿಷ್ಣುಮೂರ್ತಿ ದೈವದ ವರ್ಷಾವಧಿ ಒತ್ತೆಕೋಲ ಕಾರ್ಯಕ್ರಮವು ಮಾ. 14ರಿಂದ ಪ್ರಾರಂಭಗೊಂಡು ಮಾ.15ರಂದು ಸಂಪನ್ನಗೊಂಡಿತು.


ಮಾ.14 ರಂದು ಪೂರ್ವಾಹ್ನ ಪೆರ್ಲಂಪಾಡಿ ಉದಯಗಿರಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಗಣಹೋಮ, ಕಲಶ ಪ್ರತಿಷ್ಠೆ ನಡೆದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಸಂಜೆ ಮಠತ್ತಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಆಗಮಿಸಿ, ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ, ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಸಾವಿರಾರು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು. ಅನ್ನಸಂತರ್ಪಣೆ ಬಳಿಕ ಕುಳಿಚಟ್ಟು ನಡೆದು ರಾತ್ರಿ ಗಂಟೆ 12 ರಿಂದ ಯಕ್ಷಗಾನ ಬಯಲಾಟ ಪ್ರಸಂಗ ‘ತ್ರಿಪುರ ಮಥನ’ ನಡೆಯಿತು. ಮಾ. 15ರ ಬೆಳಗಿನಜಾವ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಮಾರಿಕಲಕ್ಕೆ ಹೋಗುವುದು, ಪ್ರಸಾದ ವಿತರಣೆ ಹಾಗೂ ಗುಳಿಗ ನೇಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ತಾರಾಪ್ರಸಾದ್ ರಾಮಕಜೆ, ಪ್ರಧಾನ ಕಾರ್ಯದರ್ಶಿಯಾದ ಶ್ರೀ ಗಿರೀಶ್ ಪಾದೆಕಲ್ಲು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಗಿರೀಶ್ ಮಳಿ, ಆಡಳಿತ ಸಮಿತಿಯ, ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರುಗಳು, ದೈವದ ಪರಿಚಾರಕರು, ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here