ಮಾ.22 ರಿಂದ 27 : ಕಾಂಚನ-ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

0

  • ಭರದ ಸಿದ್ಧತೆ, ಪಾರಂಪರಿಕ ಶೈಲಿಯ ಉಗ್ರಾಣ ಹಾಗೂ ಅನ್ನ ಛತ್ರದ ನಿರ್ಮಾಣ

 

ಉಪ್ಪಿನಂಗಡಿ: ಪ್ರಕೃತಿಯ ಮಡಿಲಿನಲ್ಲಿ ನೆಲೆ ನಿಂತಿರುವ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ. 22 ರಿಂದ ಆರಂಭಗೊಂಡು27ರ ತನಕ ನಡೆಯಲಿದ್ದು, ಪೂರ್ವ ಭಾವಿ ಸಿದ್ದತೆಗಳು ಭರದಿಂದ ನಡೆಯುತ್ತಿದೆ. ಪಾರಂಪರಿಕ ಶೈಲಿಯ ಉಗ್ರಾಣ ಹಾಗೂ ಅನ್ನ ಛತ್ರದ ನಿರ್ಮಾಣ ಭಕ್ತರ ಶ್ರಮದಾನದ ಮೂಲಕ ಆಕರ್ಷಣೀಯವಾಗಿ ಮೂಡಿ ಬರುತ್ತಿದೆ ಎಂದು ಶ್ರೀ ದೇವಾಲಯದ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು ತಿಳಿಸಿದರು.

ಮಾ. 20ರಂದು ದೇವಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಡಬ ತಾಲೂಕಿನ ಆಲಂತಾಯ ಗ್ರಾಮದಲ್ಲಿ ಈ ದೇವಾಲಯವಿದ್ದು, ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಸುಮಾರು 250 ವರ್ಷಗಳ ಇತಿಹಾಸವಿದೆ. ಜೈನರಸರ ಕಾಲಾವಧಿಯಲ್ಲಿ ಸಂತತಿ ಪ್ರಾಪ್ತಿಗಾಗಿ ಪ್ರತಿದಿನ ಆರಾಧನೆಗಾಗಿ ಈ ದೇವಾಲಯವನ್ನು ಸ್ಥಾಪಿಸಲಾಗಿದ್ದು, ಶಿವಪುತ್ರ ಕುಮಾರಸ್ವಾಮಿಯು ಸಹೋದರ ಸಿದ್ಧಿವಿನಾಯಕನೊಂದಿಗೆ ಪರಿವಾರ ದೈವಗಳಾದ ಪಿಲಿಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಂದ
ಪರಿವೃತನಾಗಿದ್ದುಕೊಂಡು, ಷಣ್ಮುಖ ಎಂಬ ಹೆಸರಿನೊಂದಿಗೆ ಇಲ್ಲಿ ಕರೆಯಲ್ಪಡುತ್ತಿದ್ದಾರೆ.

ಕಳೆದ ಬ್ರಹ್ಮಕಲಶದ ಬಳಿಕ ಹದಿನಾಲ್ಕು ವರ್ಷಗಳ ನಂತರ ಇದೀಗ ಬ್ರಹ್ಮಕಲಶೋತ್ಸವವು ನಡೆಯುತ್ತಿದ್ದು, ದೇವಳದ ಅಭಿವೃದ್ಧಿ ಕಾರ್ಯಗಳೆಲ್ಲವೂ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ಬಾಕಿಯಾಗಿದೆ ಎಂದರು. ಬ್ರಹ್ಮಕಲಶೋತ್ಸವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವಜ್ರದೇಹಿ ಮಠಾಧೀಶ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಮಠಾಧೀಶ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಮಠಾಧೀಶ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕನ್ಯಾಡಿಯ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ಮತ್ತು ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ಮಾರ್ಚ್ 22 ರಂದು ಶ್ರೀ ಕ್ಷೇತ್ರಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆದು ಉಗ್ರಾಣ ಉದ್ಘಾಟನೆ ನಡೆಯಲಿದೆ. ಈವರೆಗೆ 900 ಮಾನವ ಶ್ರಮವು ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಸೇವಾ ರೂಪದಲ್ಲಿ ಲಭಿಸಿದ್ದು, 16000ಚದರ ಅಡಿ ವಿಸ್ತೀರ್ಣದ ಅನ್ನ ಛತ್ರದ ನಿರ್ಮಾಣವೂ ಅದರಲ್ಲಿ ಒಳಗೊಂಡಿದೆ. ಗ್ರಾಮದ ಬೀದಿ ಬೀದಿಗಳೆಲ್ಲವೂ ಅಲಂಕಾರಗೊಳ್ಳುತ್ತಿದ್ದು, ಇಡೀ ಊರಿಗೆ ಊರೇ ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಬ್ರಹ್ಮಕಲಶೋತ್ಸಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಮತ್ತು ರಾತ್ರಿಯ ಭೋಜನ ಸಹಿತ ಮೂರು ಹೊತ್ತು ಆತಿಥ್ಯ ಒದಗಿಸುವ ವ್ಯವಸ್ಥೆ ಸಿದ್ದವಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ರಮೇಶ್ ಬಿ.ಜಿ., ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಶ್ರೀ ದೇವಾಲಯದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ಗೌಡ ಪೆರ್ಲ, ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದುಮಾರುಗುತ್ತು, ಆಡಳಿತ ಮಂಡಳಿ ಸದಸ್ಯರಾದ ನಾರಾಯಣ ಪೂಜಾರಿ, ನೇಮಣ್ಣ ಪೂಜಾರಿ, ಮಾಧ್ಯಮ ಸಮಿತಿ ಸಂಚಾಲಕ ಮೂಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here