ಲಂಚ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಿಲ್ಲಿಸದಂತೆ ಜನರಿಂದ ಒತ್ತಡ

0

  • ಓಟಿಗೆ ನಿಲ್ಲುವುದಿಲ್ಲ ಎಂದರೂ ನಿಲ್ಲಲು ಆಗ್ರಹ-ರಾಜಕೀಯ ನಾಯಕರೇ
  • `ಲಂಚ ಭ್ರಷ್ಟಾಚಾರ ಮುಕ್ತ ನಮ್ಮ ಊರು’ ಅಜೆಂಡಾ ಮಾಡಿಕೊಳ್ಳಿ .ಜನಮನ್ನಣೆಯ ಅವಕಾಶ ಕಳೆದುಕೊಳ್ಳಬೇಡಿ

 

ಂಚ ಭ್ರಷ್ಟಾಚಾರದ ವಿರುದ್ಧದ ಈ ಜನಾಂದೋಲನ ಪ್ರಾರಂಭವಾದಾಗ ಲಂಚ, ಭ್ರಷ್ಟಾಚಾರ ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದವರು ಇಂದು ಲಂಚ, ಭ್ರಷ್ಟಾಚಾರ ನಿಲ್ಲಲಿ ಬಿಡಲಿ, ನೀವು ಆಂದೋಲನ ನಿಲ್ಲಿಸಬೇಡಿ ಎಂದು ಆಗ್ರಹಿಸುತ್ತಿದ್ದಾರೆ. ಅವರಿಗೆ ಭ್ರಷ್ಟಾಚಾರದ ಕತ್ತಲಲ್ಲಿ ಬೆಳಕು ಕಾಣಲಾರಂಭಿಸಿದೆ. ಸುದ್ದಿಯ ಬಲಾತ್ಕಾರದ ಬಂದ್‌ನ ವಿರುದ್ಧದ ಮತ್ತು ಸಾಮಾಜಿಕ ಜಾಲತಾಣದ ದುರುಪಯೋಗದ ವಿರುದ್ಧದ ಆಂದೋಲನ ಯಶಸ್ವಿಯಾದದ್ದು ಅದಕ್ಕೆ ಪೂರಕ ಕಾರಣವಾಗಿರಲೂಬಹುದು. ಲಂಚ, ಭ್ರಷ್ಟಾಚಾರ ನಿಂತರೆ ಸಾರ್ವಜನಿಕ ಸ್ಥಳದಲ್ಲಿ ಗೌರವಪೂರ್ವಕವಾಗಿ ನಿಮ್ಮ ಕಾಲಿಗೆ ಅಡ್ಡ ಬೀಳುತ್ತೇವೆ. ಅದು ನಾಚಿಕೆಯ ವಿಷಯವಲ್ಲ. ಹೆಮ್ಮೆಯ ವಿಷಯವಾಗಿ ಪರಿಗಣಿಸುತ್ತೇವೆ ಎಂದು ಹೇಳಿದವರು ಇದ್ದಾರೆ. ಕೆಲವರು ಮುಂದುವರಿದು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಓಟಿಗೆ ನಿಂತಾದರೂ ಅದನ್ನು ಸರಿಪಡಿಸಿ ಎಂದು ಹೇಳುತ್ತಿದ್ದಾರೆ. ಅವರಿಗೆ ಲಂಚ, ಭ್ರಷ್ಟಾಚಾರ ಸೋಲಬೇಕು. ಅದರ ವಿರುದ್ಧ ಗೆಲುವು ಸಾಽಸಬೇಕು ಎಂದಿದೆ. ನಾನೇ ಗೆಲ್ಲಬೇಕು ಎಂದಲ್ಲ. ಅದು ಯಾರಿಂದ ಆದರೂ ಆವರಿಗೆ ಆಗಬಹುದು. ಆದರೆ ಈಗಿನ ಯಾವುದೇ ನಾಯಕರು, ಯಾವುದೇ ಪಕ್ಷದ ನಾಯಕರು ಆ ಧೈರ್ಯ ಮಾಡುವುದಿಲ್ಲ . ಯಾರಿಂದಲೂ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿರುವ ಹಲವರಿದ್ದಾರೆ. ಅವರಲ್ಲಿ ಕೆಲವರು ನನಗೆ ಧೈರ್ಯ ತುಂಬುತ್ತಿದ್ದಾರೆ. ಕೆಲವರು ಗಾಳಿ ತುಂಬುತ್ತಿದ್ದಾರೆ ಎಂದು ಹೇಳಬಹುದು. ನಮ್ಮ ಕಸುಬು ಮಾಧ್ಯಮ. ಓಟು ರಾಜಕೀಯ ನಾಯಕರ ಕಸುಬು. ಅವರು ಮುಂದೆ ಬಾರದೇ ಇದ್ದರೆ ಈಗಿನ ಕಾಲದ ಯಾವುದೇ ಯುವಕರು ಮುಂದೆ ಬಂದು ಲಂಚ, ಭ್ರಷ್ಟಾಚಾರ ನಿರ್ಮೂಲನೆಯನ್ನು ತಮ್ಮ ಜನ ಸೇವೆಯ ವಿಷಯವನ್ನಾಗಿ ಮಾಡಿದರೆ ಜನಬೆಂಬಲ ಮಾತ್ರವಲ್ಲ ಓಟಿನ ಬೆಂಬಲ ಖಂಡಿತ ಎಂಬ ನಂಬಿಕೆ ನನಗಿದೆ.

ನಾಯಕರು ಲಂಚ, ಭ್ರಷ್ಟಾಚಾರದ ಕಡೆ ನಿಂತರೆ ಏನಾಗಬಹುದು!? :
ಬೆಂಗಳೂರಿನಲ್ಲಿ ಶಾಸಕರ ಅನುದಾನದಲ್ಲಿ ಬಿಜೆಪಿ ಶಾಸಕರಿಂದ 5% ಮತ್ತು ಇತರ ಶಾಸಕರಿಂದ ೧೦% ಕಮಿಷನನ್ನು ಸರಕಾರದ ಹಿರಿಯ ಸಚಿವರು ಪಡೆಯುತ್ತಿದ್ದಾರೆ ಎಂಬ ವರದಿ ಮಾಧ್ಯಮದಲ್ಲಿ ಬಂದಿದೆ. ಸಂತತಿ ನಕ್ಷೆಗೆ ರೂ.1000 ದಿಂದ ರೂ. 2,000. ಎಲ್ಲದಕ್ಕೂ ಇಂತಿಷ್ಟು ಎಂಬ ಪಟ್ಟಿ. ಲಂಚ ಕೊಟ್ಟರೆ ಕೆಲಸ. ಇಲ್ಲದಿದ್ದರೆ ಇನ್ನೊಮ್ಮೆ ಬನ್ನಿ. ನೇರವಾಗಿ ಹಣ ಕೇಳುವ ಪರಿಸ್ಥಿತಿ ಬಂದಿದೆ. ಇಂತಹ ಜನರ ಕಣ್ಣೀರಿನ ಕಥೆ ಎಲ್ಲಿ ಹೋದರೂ ಕೇಳ ಸಿಗುತ್ತದೆ. ಪಂಜಾಬಿನ ಆಪ್ ಪಕ್ಷದ ಮುಖ್ಯಮಂತ್ರಿ ಭಗವಂತ್ ಸಿಂಗ್‌ಮಾನ್ ಲಂಚ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ಮತ್ತು ದೂರಿಗೆ ತನ್ನ ಫೋನ್ ನಂಬ್ರವನ್ನು ನೀಡಿದ್ದಾರೆ. ಹೀಗಿರುವಾಗ ನೀವೇ ಆಲೋಚನೆ ಮಾಡಿ ಹೇಳಿ. ನಿಮ್ಮ ಜನಪ್ರತಿನಿಧಿ, ನಾಯಕರು, ಪಕ್ಷದವರು ಲಂಚ, ಭ್ರಷ್ಟಾಚಾರವನ್ನು ವಿರೋಧಿಸಬೇಕೇ, ಅವರಿಗೆ ಬೆಂಬಲ ನೀಡಬೇಕೇ? ಅಥವಾ ಮಾಡಿದರೆ ಮಾಡಿಕೊಳ್ಳಲಿ. ತನಗೆ ಏನೂ ಸಂಬಂಧ ಇಲ್ಲ ಎಂದು ಸುಮ್ಮನಿರಬೇಕೇ?. ಒಂದು ವೇಳೆ ಅವರು ಲಂಚ, ಭ್ರಷ್ಟಾಚಾರ ಮಾಡುವವರ ಕಡೆ ನಿಂತರೆ ಏನಾಗಬಹುದು?.ಜನಬೆಂಬಲ ಮತ್ತು ಜನರ ಓಟು ಸಿಗಬಹುದೇ?, ನಾಯಕನಾಗಬಹುದೇ?. ಖಂಡಿತಾ ಇಲ್ಲ. ಅದರ ಬದಲು `ಲಂಚ ಭ್ರಷ್ಟಾಚಾರ ಮುಕ್ತ ನಮ್ಮ ಊರು’ ಎಂಬ ವಿಷಯವನ್ನು ತಮ್ಮ ಚುನಾವಣಾ ಅಜೆಂಡಾವಾಗಿ ಮಾಡಿಕೊಂಡರೆ ಮತ್ತು ಲಂಚ, ಭ್ರಷ್ಟಾಚಾರವನ್ನು ವಿರೋಧಿಸಿ ಲಂಚ ಪಡೆದ ಅಧಿಕಾರಿಯಿಂದ ಅದನ್ನು ಜನರಿಗೆ ಹಿಂತಿರುಗಿಸಿ ಕೊಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರೆ, ಯಾವುದೇ ಚುನಾವಣೆಯಲ್ಲಿ ಗೆಲ್ಲಬಹುದು. ಗೆಲ್ಲದಿದ್ದರೂ ಠೇವಣಿ, ಗೌರವ ಕಳೆದುಕೊಳ್ಳಲಿಕ್ಕಿಲ್ಲ.

`ಮೌನಂ ಸಮ್ಮತಿ ಲಕ್ಷಣ’ ಎಂದು ಸುಮ್ಮನಿರದೆ ನೀವು ಲಂಚ, ಭ್ರಷ್ಟಾಚಾರದ ವಿರುದ್ಧ ಇದ್ದೀರಿ ಎಂದು ತೋರಿಸಿಕೊಡಿ :
ನೀವು ಓಟಿಗೆ ನಿಲ್ಲುವುದಿಲ್ಲವಾದರೂ ಪರವಾಗಿಲ್ಲ. ಜನಸೇವೆ, ದೇಶಸೇವೆ ಮಾಡುವವರಾಗಿದ್ದರೆ ಅಥವಾ ನಿಮಗೆ ಏನಾದರೂ ಸೇವೆ ಮಾಡಬೇಕೆಂದಿದ್ದರೆ ಲಂಚ, ಭ್ರಷ್ಟಾಚಾರದ ನಿರ್ಮೂಲನೆಗೆ ಪ್ರಯತ್ನಿಸಿ. ಅಧಿಕಾರಿಗಳ ಕ್ರೂರತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿರಿ. ಆ ರೀತಿ ಜನಸೇವೆ ಮತ್ತು ದೇಶಸೇವೆ ಮಾಡಿ ಜನರ ಕಣ್ಣೀರನ್ನು ಒರೆಸಿರಿ. ತಾವು ಲಂಚ, ಭ್ರಷ್ಟಾಚಾರದ ವಿರುದ್ಧ ಇದ್ದೀರಿ ಎಂದು ಅಧಿಕಾರಿಗಳಿಗೆ ಮತ್ತು ಊರಿನ ಜನರಿಗೆ ಗೊತ್ತಾದರೆ ಅದು ಊರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಅದಕ್ಕಾಗಿ ಮನೆ-ಮನೆಗಳಲ್ಲಿ, ಅಂಗಡಿಗಳಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಫಲಕಗಳನ್ನು, ಊರು-ಊರುಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿರಿ. ಘೋಷಣೆಗಳನ್ನು ಕೂಗಿ ಎಲ್ಲರ ಜನಾಂದೋಲನವನ್ನಾಗಿ ಪರಿವರ್ತಿಸಿರಿ. ಆ ಮೂಲಕ ನೀವು ಮತ್ತು ನಿಮ್ಮ ಊರು ಲಂಚ, ಭ್ರಷ್ಟಾಚಾರದ ವಿರುದ್ಧ ಇದೆ ಎಂದು ತೋರಿಸಿ ಲಂಚಕೋರ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿರಿ. ಉತ್ತಮ ಸೇವೆಗೆ ಪುರಸ್ಕಾರ ಮಾಡಿ, ಪ್ರೀತಿ ಹುಟ್ಟಿಸಿರಿ. (ನಿಮಗೆ ಸಾಮರ್ಥ್ಯ ಇದ್ದರೂ ಲಂಚ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತದೆ ಸುಮ್ಮನಿದ್ದರೆ `ಮೌನಂ ಸಮ್ಮತಿ ಲಕ್ಷಣ’ ಎಂಬಂತೆ ನೀವು ಅದರ ಪರ ಎಂಬ ಭಾವನೆ ಉಂಟಾಗಬಹುದು. ಆ ರೀತಿ ಆಗದಂತೆ ಜಾಗ್ರತೆ ವಹಿಸಿರಿ.) ಆಂದೋಲನಕ್ಕೆ ನೀವು ನೀಡುವ ಬೆಂಬಲದಿಂದ ನಮ್ಮ ಊರು, ತಾಲೂಕಿನಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆಯಾಗಿ, (ಇನ್ನು 65 ದಿವಸಗಳಲ್ಲಿ) ಲಂಚ ಕೊಟ್ಟರೂ ತೆಗೆದುಕೊಳ್ಳದೆ ಉತ್ತಮ ಸೇವೆ ನೀಡುವಂತೆ ಆಗಲಿದೆ. ಸುದ್ದಿ ಜನಾಂದೋಲನದ ಆಶಯ ಗುರಿ ಮುಟ್ಟಲಿದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ.

ಲಂಚ, ಭ್ರಷ್ಟಾಚಾರ ವಿರುದ್ಧದ ಪ್ರಥಮ ಪಂದ್ಯಕ್ಕೆ ಸಬ್‌ರಿಜಿಸ್ಟ್ರರ್ ಕಛೇರಿ ಆಯ್ಕೆಯಾದರೆ ಹೇಗೆ?

ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರಥಮ ಪಂದ್ಯಕ್ಕೆ ಟೆಸ್ಟ್ ಆಗಿ ಸಬ್ ರಿಜಿಸ್ಟ್ರರ್ ಕಛೇರಿಯನ್ನು ಆಯ್ಕೆ ಮಾಡಿದರೆ ಹೇಗೆ ಎಂಬುವುದನ್ನು ಜನರ ಮುಂದೆ ಇಡುತ್ತಿದ್ದೇನೆ. ಅದರ ಗೆಲುವಿಗೆ, ಮಾಹಿತಿಗಾಗಿ ದಸಾ ವೇಜು ಬರಹಗಾರರು, ವಕೀಲರೊಡನೆ, ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನೆ ಸಭೆ ನಡೆಸಲಿದ್ದೇನೆ. ಯಾವ್ಯಾವ ಕೆಲಸಕ್ಕೆ ಎಷ್ಟೆಷ್ಟು ಹಣ ಕೊಡಬೇಕು, ಕೊಡದಿದ್ದರೆ ತೊಂದರೆ ಏನು? ಎಂಬ ಮಾಹಿತಿಯನ್ನು ಜನರಿಂದ ಪಡೆಯಲಿದ್ದೇವೆ. ಜನರು ಮಾಹಿತಿ, ಸಲಹೆ ನೀಡಬೇಕಾಗಿ, ಬೇರೆ ಬೇರೆ ಇಲಾಖೆಯ ಆಯ್ಕೆಗಳಿದ್ದರೆ ತಿಳಿಸಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here