ಅಪಘಾತದಿಂದ ಗಾಯಗೊಂಡಿದ್ದ ಸಬ್ಬನಕೋಡಿ ಈಶ್ವರ ಭಟ್ಟ್ ರವರನ್ನು ದೈಗೋಳಿ ಸೇವಾಶ್ರಮಕ್ಕೆ ಸೇರಿಸಿದ ಕಬಕ ಗ್ರಾ.ಪಂ

0


ಪುತ್ತೂರು: ಇತ್ತೀಚೆಗೆ ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆದು ಕಬಕ ಗ್ರಾ.ಪಂ ಕಚೇರಿ ಬಳಿಯಿದ್ದ ಮಾನಸಿಕ ಅಸ್ವಸ್ಥ ಎಸ್.ಐ ಭಟ್ ಎಂದೇ ಚಿರಪರಿಚಿತರಾಗಿರುವ ಸುಮಾರು 75 ವರ್ಷದ ಸಬ್ಬನಕೋಡಿ ಈಶ್ವರ ಭಟ್ ಅವರನ್ನು ಕಬಕ ಗ್ರಾ.ಪಂ ವತಿಯಿಂದ ಮಂಜೇಶ್ವರ ಸಮೀಪದ ದೈಗೋಳಿ ಶ್ರೀ ಸಾಯಿ ಸೇವಾಶ್ರಮಕ್ಕೆ ಕಳುಹಿಸಿಕೊಡಲಾಯಿತು.
ಸಬ್ಬನಕೋಡಿ ಈಶ್ವರ ಭಟ್ ಅವರು ಯಕ್ಷಗಾನ ಕಲೆಯ ಪ್ರೇಮಿಯಾಗಿದ್ದು ಯಕ್ಷಗಾನ ಪ್ರದರ್ಶನ ಇರುವಲ್ಲಿಗೆ ಹೋಗುತ್ತಿದ್ದ ಅವರು ಮಾನಸಿಕ ಅಸ್ವಸ್ಥರಾಗಿ ಮನೆಗೆ ಹೋಗದೆ ಊರೂರು ಅಲೆದಾಡುತ್ತಿದ್ದರು. ಇತ್ತೀಚೆಗೆ ಅವರು ಕಬಕ ರೈಲ್ವೇ ಹಳಿಯಲ್ಲಿ ಬಿದ್ದು ಕೈ ಮೂಳೆ ಮುರಿತಕ್ಕೊಳಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಾಯವಾಸಿಯಾಗದೆ ಆಸ್ಪತ್ರೆಯಿಂದ ತೆರಳಿದ್ದರು. ಬಳಿಕ ಅವರು ಕಬಕ ಗ್ರಾ.ಪಂ ಕಚೇರಿ ಬಳಿಯಿರುವುದನ್ನು ಗಮನಿಸಿದ ಗ್ರಾ‌.ಪಂ ಪಿಡಿಒ ಆಶಾ ಅವರು ಹಿರಿಯರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸುವ ನಿಟ್ಟಿನಲ್ಲಿ ದೈಗೋಳಿ ಸೇವಾಶ್ರಮಕ್ಕೆ ಮಾಹಿತಿ ನೀಡಿದರು. ಜ.12 ರಂದು ಸಂಜೆ ಕಬಕಕ್ಕೆ ಆ್ಯಂಬುಲೆನ್ಸ್ ಸಹಿತ ಬಂದ ಸೇವಾಶ್ರಮದ ಡಾ.ಉದಯ ಭಟ್ ದಂಪತಿ ಅವರು ಸಬ್ಬನಕೋಡಿ ಈಶ್ವರ ಭಟ್ ಅವರನ್ನು ಸೇವಾಶ್ರಮಕ್ಕೆ ಕರೆದೊಯ್ದರು. ಈ ಸಂದರ್ಭದಲ್ಲಿ ಕಬಕ ಗ್ರಾ.ಪಂ ಪಿಡಿಒ ಆಶಾ, ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ರುಕ್ಮಯ್ಯ ಗೌಡ, ಸಿಬ್ಬಂದಿ ಅಣ್ಣು, ಗ್ರಾಮ ಸಹಾಯಕ ಮನೋಹರ್ ಮತ್ತು ಸಬ್ವನಕೋಡಿ ಅವರ ಸಹೋದರ ರಾಮಚಂದ್ರ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here