ಚರಂಡಿಗೆ ಮೋರಿ: ಮೈಂದಡ್ಕ ಮೈದಾನಕ್ಕೆ ದಾರಿ ಹೋರಾಟದ ಬಳಿಕ ಗ್ರಾ.ಪಂ.ನಿಂದ ಕಾಯಕಲ್ಪ

0

ಉಪ್ಪಿನಂಗಡಿ: ಹಲವು ಹೋರಾಟದ ಬಳಿಕ ಕೊನೆಗೂ ಮೈಂದಡ್ಕದಲ್ಲಿರುವ ಸಾರ್ವಜನಿಕ ಮೈದಾನಕ್ಕೆ ೩೪ ನೆಕ್ಕಿಲಾಡಿ ಗ್ರಾ.ಪಂ. ಮೋರಿ ಹಾಕಿ, ಮೈದಾನದ ಸುತ್ತ ರಾಶಿ ಹಾಕಿರುವ ಮಣ್ಣನ್ನು ತೆಗೆದಿದೆ.

ಮೈಂದಡ್ಕದಲ್ಲಿರುವ ೮೮/೧ ಸರ್ವೆ ನಂಬರ್‌ನಲ್ಲಿ ಸುಮಾರು ಎರಡು ಎಕ್ರೆಯಷ್ಟು ಸ್ಥಳವು ಅನಿಲ್ ಮಿನೇಜಸ್ ಎಂಬವರ ಖದೀಮ ವರ್ಗದ ಕುಮ್ಕಿಯಾಗಿದ್ದು, ಅದರಲ್ಲಿ ೦.೫೫ ಎಕ್ರೆ ಜಾಗವು ಮೈದಾನಕ್ಕೆ ಪ್ರಸಕ್ತವಾದ ಸ್ಥಳವಾಗಿತ್ತು. ಗ್ರಾಮಕ್ಕೊಂದು ಆಟದ ಮೈದಾನ ಬೇಕು. ಇದು ಸಾರ್ವಜನಿಕರ ಉಪಯೋಗಕ್ಕೆ ಬರಬೇಕೆಂಬ ಉದ್ದೇಶದಿಂದ ೨೦೧೫ರಲ್ಲಿ ಈ ಕುಮ್ಕಿ ಜಾಗದಲ್ಲಿ ೦.೫೫ ಎಕ್ರೆ ಸ್ಥಳವನ್ನು ಸಾರ್ವಜನಿಕ ಮೈದಾನಕ್ಕೆ ಬಿಟ್ಟುಕೊಡಬೇಕೆಂದು ಜತೀಂದ್ರ ಶೆಟ್ಟಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯದಲ್ಲಿ ಅನಿಲ್ ಮಿನೇಜಸ್ ಹಾಗೂ ಜತೀಂದ್ರ ಶೆಟ್ಟಿಯವರು ರಾಜಿ ಡಿಕ್ರಿಯ ಮೂಲಕ ಈ ಪ್ರಕರಣವನ್ನು ಬಗೆಹರಿಸಿದ್ದು, ನ್ಯಾಯಾಲಯವು ಮೈಂದಡ್ಕದಲ್ಲಿರುವ ಆ ಭೂಮಿಯನ್ನು ವಿಭಾಗಿಸಿ ಸರ್ವೆ ನಂಬರ್ ೮೮/೧ ರಲ್ಲಿ ಮೈದಾನಕ್ಕೆ ಪ್ರಸಕ್ತವಾದ ೦.೫೫ ಎಕ್ರೆ ಸ್ಥಳವನ್ನು ಸಾರ್ವಜನಿಕ ಮೈದಾನಕ್ಕೆಂದು ನೀಡಿ ಆದೇಶಿಸಿತ್ತಲ್ಲದೆ, ಮೈದಾನದ ಜಾಗವನ್ನು ನಕ್ಷೆಯಲ್ಲಿ ಸ.ನಂ.೮೮/೧ಪಿ೧ ಎಂದು ವಿಭಾಗಿಸಿ, ಅನಿಲ್ ಮಿನೇಜಸ್ ಅವರ ಕುಮ್ಕಿಯ ಜಾಗವನ್ನು ೮೮/೧ಪಿ೨ ಮುತ್ತು ೯೨/೧ಪಿ೧ಎಂದು ವಿಭಾಗಿಸಿ, ಈ ಜಾಗವನ್ನು ಅನಿಲ್ ಮಿನೇಜಸ್ ಅವರು ಕುಮ್ಕಿಯೆಂದು ಅನುಭವಿಸಲು ಆದೇಶ ನೀಡಿತ್ತು. ಬಳಿಕ ಮೈದಾನದ ಜಾಗವು ಕಂದಾಯ ಇಲಾಖೆಯ ಅಧೀನದಲ್ಲಿದ್ದರೂ, ಅದು ಮೈದಾನಕ್ಕಾಗಿಯೇ ಬಳಕೆಯಾಗುತ್ತಿತ್ತು. ಆದರೆ ೩೪ ನೆಕ್ಕಿಲಾಡಿ ಗ್ರಾ.ಪಂ.ನ ಈಗಿನ ಆಡಳಿತ ಕೆಲವು ತಿಂಗಳ ಹಿಂದೆ ಇಲ್ಲಿ ಜೆಸಿಬಿ ಮೂಲಕ ತೋಡಿನಂತಹ ಚರಂಡಿಯನ್ನು ನಿರ್ಮಿಸಿ ಮೈದಾನಕ್ಕೆ ಈ ಮೊದಲಿನಿಂದಲೇ ಊರ್ಜಿತದಲ್ಲಿದ್ದ ದಾರಿಯನ್ನು ಮುಚ್ಚಿ ಹಾಕಿತ್ತಲ್ಲದೆ, ಮಣ್ಣನ್ನು ಮೈದಾನದ ಸುತ್ತಲೂ ಅಗಲು (ಅಗರಿ)ನಂತೆ ರಾಶಿ ಹಾಕಿತ್ತು. ಇನ್ನೊಂದು ಬದಿ ಅರಣ್ಯ ಇಲಾಖೆಯ ಜಾಗವನ್ನು ಇಳಿಜಾರುಗೊಳಿಸಿ ಅದರ ಮಣ್ಣನ್ನು ಮೈದಾನಕ್ಕೆ ತಂದು ಅಗಲು ಕಾಮಗಾರಿಯಂತೆ ರಾಶಿ ಹಾಕಿತ್ತು. ಇಲ್ಲಿ ನೀರು ಹೋಗಲು ದಾರಿಯಿಲ್ಲದಂತಾಗಿ ಈ ಜಾಗವು ಮಳೆಗಾಲದಲ್ಲಿ ನೀರು ಶೇಖರಣೆಗೊಂಡು ಕೆರೆಯಂತಾಯಿತ್ತಲ್ಲದೆ, ಈ ನೀರು ಹೋಗಲು ಜಾಗವಿಲ್ಲದೆ, ಮೈದಾನದೊಳಗೆ ರಾಶಿ ಹಾಕಿರುವ ಮಣ್ಣನ್ನು ಕೊಚ್ಚಿಕೊಂಡು ಮೈದಾನದ ಮೂಲಕ ಹರಿಯಿತು. ಇದರಿಂದ ಮೈದಾನ ಹಾಳಾಗುವಂತಾಯಿತು. ಮೈದಾನದ ಸುತ್ತಲೂ ಗ್ರಾ.ಪಂ. ಅವೈಜ್ಞಾನಿಕ ಕಾಮಗಾರಿ ನಡೆಸಿರುವುದು ಹಾಗೂ ಮೈದಾನದೊಳಗೆ ಮಣ್ಣು ರಾಶಿ ಹಾಕಿ ಮೈದಾನವನ್ನು ಹಾಳುಗೆಡವಿರುವುದು, ಊರ್ಜಿತವಿದ್ದ ದಾರಿಯನ್ನು ಮುಚ್ಚಿರುವ ವಿರುದ್ಧ `ನಮ್ಮೂರು- ನೆಕ್ಕಿಲಾಡಿ’ ಅಧ್ಯಕ್ಷ ಜತೀಂದ್ರ ಶೆಟ್ಟಿಯವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ಆ ಬಳಿಕ ಈ ಆಟದ ಮೈದಾನವನ್ನು ೩೪ ನೆಕ್ಕಿಲಾಡಿ ಗ್ರಾ.ಪಂ.ಗೆ ಕಂದಾಯ ಇಲಾಖೆ ಹಸ್ತಾಂತರಿಸಿತ್ತು. ಇದರೊಂದಿಗೆ ಈ ಜಮೀನಿನಲ್ಲಿ ಊರ್ಜಿತವಿರುವ ರಸ್ತೆಯನ್ನು ಆತಂಕಿಸಬಾರದು, ಯಾವುದೇ ಕಾರಣಕ್ಕೂ ಅತಿಕ್ರಮಣಕ್ಕೆ ಎಡೆ ಮಾಡಿಕೊಡಬಾರದು, ಯಾವುದೇ ಸಂದರ್ಭದಲ್ಲಿ ಸರಕಾರಕ್ಕೆ ಅಗತ್ಯವೆನಿಸಿದರೆ ಸೂಚನೆ ನೀಡದೇ ಈ ಜಮೀನನ್ನು ವಾಪನ್ನು ಪಡೆದುಕೊಳ್ಳುವ ಷರತ್ತನ್ನು ಕಾಯ್ದಿರಿಸಿರುವುದು ಸೇರಿದಂತೆ ಹಲವು ಷರತ್ತುಗಳನ್ನು ಆದೇಶದಲ್ಲಿ ಉಲ್ಲೇಖಿಸಿತ್ತು. ಈ ನಡುವೆ ಗ್ರಾ.ಪಂ. ಮೈದಾನದ ಅಳತೆ ಕಾರ್ಯ ನಡೆಸಿದ್ದು, ಈಗಿರುವ ಮೈದಾನದೊಳಗೆ ಅದರ ಗಡಿ ರೇಖೆಗಳು ಬರುವುದರಿಂದ ಇದರ ಸುತ್ತಲೂ ರಕ್ಷಣಾ ಬೇಲಿ ಹಾಕುವ ನಿರ್ಣಯ ಕೈಗೊಂಡಿತ್ತು. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಚಾಲ್ತಿಯಲ್ಲಿರುವಾಗಲೇ ಜ.೨೩ರಂದು ಗ್ರಾ.ಪಂ. ಮೈದಾನದ ಚರಂಡಿಗೆ ಮೋರಿಗಳನ್ನು ಅಳವಡಿಸಿದ್ದು, ಮೈದಾನಕ್ಕೆ ಹೋಗಲು ದಾರಿ ಮಾಡಿಕೊಟ್ಟಿದೆ. ಅಲ್ಲದೇ, ಮೈದಾನದೊಳಗೆ ರಾಶಿ ಹಾಕಿರುವ ಮಣ್ಣನ್ನು ತೆರವುಗೊಳಿಸಿದೆ.

ಈ ಮೈದಾನಕ್ಕೆ ರಕ್ಷಣಾ ಬೇಲಿ ಹಾಕಬೇಕು. ಇದಕ್ಕೆ ಹೋಗಲು ಮೋರಿ ಅಳವಡಿಸಬೇಕು ಎಂದು ಗ್ರಾ.ಪಂ. ನಿರ್ಣಯ ಕೈಗೊಂಡಿತ್ತು. ಈಗ ಇಲ್ಲಿಗೆ ಮೋರಿ ಅಳವಡಿಸಿ, ಮೈದಾನದೊಳಗೆ ಹಾಕಿರುವ ಮಣ್ಣು ತೆಗೆಯುವ ಕೆಲಸ ಮಾಡಲಾಗಿದೆ. ಇಲ್ಲಿಗೊಂದು ಗೇಟ್ ಅಳವಡಿಸಲಾಗುವುದು. ಮೈದಾನದ ಸುತ್ತಲೂ ರಕ್ಷಣಾ ಬೇಲಿ ಹಾಕುವ ಕೆಲಸ ಈ ಬಾರಿಯಿಲ್ಲ ಕುಮಾರಯ್ಯ ಪಿಡಿಒ, ೩೪ ನೆಕ್ಕಿಲಾಡಿ

ಮೈದಾನವನ್ನು ಮೊದಲಿದ್ದ ಹಾಗೆ ಸುಸ್ಥಿತಿಗೆ ತರಬೇಕೆಂದು ನಾನು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದೇನೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮೈದಾನಕ್ಕೆ ಹೋಗಲು ದಾರಿ ಮಾಡಿಕೊಡಬೇಕು. ಮೈದಾನದಲ್ಲಿ ರಾಶಿ ಹಾಕಿರುವ ಮಣ್ಣನ್ನು ತೆಗೆಯಬೇಕೆಂಬುದೇ ನನ್ನ ಬೇಡಿಕೆ. ನಿನ್ನೆ ಇಲ್ಲಿ ಗ್ರಾ.ಪಂ.ನವರು ನಡೆಸಿದ ಕಾಮಗಾರಿಯ ಬಗ್ಗೆ, ಆ ಬಳಿಕದ ಮೈದಾನದ ವಾಸ್ತವ ಸ್ಥಿತಿಯ ಬಗ್ಗೆ ನನ್ನ ವಕೀಲರಿಗೆ ತಿಳಿಸಿದ್ದೇನೆ. ಕಾನೂನಿಗೆ ನಾನು ಬದ್ಧವಾಗಿದ್ದು, ನ್ಯಾಯಾಲಯ ಏನು ಹೇಳುತ್ತೋ, ಅದರಂತೆ ನಡೆಯುತ್ತೇನೆ. ಈ ವಿಷಯ ಹೈಕೋರ್ಟ್‌ನಲ್ಲಿರುವುದರಿಂದ ಈ ಬಗ್ಗೆ ಜಾಸ್ತಿ ಮಾತನಾಡಲ್ಲ ಜತೀಂದ್ರ ಶೆಟ್ಟಿ ಅಧ್ಯಕ್ಷರು, ನಮ್ಮೂರು- ನೆಕ್ಕಿಲಾಡಿ

LEAVE A REPLY

Please enter your comment!
Please enter your name here