ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

0

  • ವಿದ್ಯಾರ್ಥಿಗಳು ಈ ಗಣರಾಜ್ಯೋತ್ಸವ ದಿನದ ಮಹತ್ವವನ್ನು ಓದಿ ತಿಳಿಯಬೇಕಾದ ಅವಶ್ಯಕತೆಯಿದೆ: ಡಾ.ಶ್ರೀಪತಿ ಕಲ್ಲೂರಾಯ


ಪುತ್ತೂರು:  ಭಾರತೀಯ ಸತ್ಪ್ರಜೆಗಳಾದ ನಮಗೆ ಇಂದು ವಿಶೇಷ ದಿನ. ವಿದ್ಯಾರ್ಥಿಗಳು ಈ ಗಣರಾಜ್ಯೋತ್ಸವ ದಿನದ ಮಹತ್ವವನ್ನು ಓದಿ ತಿಳಿಯಬೇಕಾದ ಅವಶ್ಯಕತೆಯಿದೆ. ನಮ್ಮನ್ನು ನಾವು ಆಳಿಕೊಳ್ಳುವುದಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ನಮ್ಮ ದೇಶದ ಆಡಳಿತ, ಸರ್ಕಾರ ಯಾವ ರೀತಿ ನಡೆಯಬೇಕು, ಯಾವ ರೀತಿಯ ರೀತಿ ನೀತಿ-ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದರ ರೂಪುರೇಷೆಯನ್ನು ಸಿದ್ದಪಡಿಸಲು ಪರಿಣಿತರ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡುಪ್ರತಿಯನ್ನು ಸಲ್ಲಿಸಿತು. ೧೯೫೦ರ ಜ.೨೬ರಂದು ಸಂವಿಧಾನವನ್ನು ಸಂಪೂರ್ಣವಾಗಿ ಅಂಗೀಕರಿಸಿಕೊಂಡು ನಮ್ಮ ದೇಶದ ಆಡಳಿತವನ್ನು ನಾವೇ ಮಾಡಿಕೊಳ್ಳುವ ಒಂದು ವ್ಯವಸ್ಥೆ ನಿರ್ಮಾಣವಾಯಿತು ಎಂದು ಇಲ್ಲಿನ ವಿವೇಕಾನಂದ ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಪದವಿ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಇ)ಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬುಧವಾರ ಮಾತನಾಡಿದರು.
ಪರಕೀಯರ ಆಳ್ವಿಕೆಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದ ನಮ್ಮ ದೇಶ, ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಂಡ ದಿನ ಗಣರಾಜ್ಯೋತ್ಸವ ದಿನ. ನಮ್ಮ ಸಂವಿಧಾನದಲ್ಲಿ ನಮ್ಮ ದೇಶದ ಆಡಳಿತವನ್ನು ನಡೆಸುವುದಕ್ಕೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ಬಹಳ ಸ್ಪಷ್ಟವಾದ, ನಿಖರವಾದ ನಿರ್ದಿಷ್ಟತೆ ಇದೆ. ಹಾಗೆಯೇ ಸಂವಿಧಾನದಲ್ಲಿ ನಮ್ಮ ದೇಶದ ಸರ್ಕಾರ ನಡೆಸಬೇಕಾದ ರೀತಿ-ನೀತಿಗಳ ಕುರಿತಾಗಿ ವಿಸ್ತೃತವಾದ ನಿರ್ದೇಶನಗಳಿವೆ. ಇದನ್ನು ನಾವೆಲ್ಲ ಓದಿಕೊಂಡು ಈ ದೇಶದ ಪ್ರಜೆಗಳಾದ ನಾವು ಹೇಗಿರಬೇಕು, ನಮ್ಮ ಹಕ್ಕುಗಳೇನು, ನಮ್ಮ ಕರ್ತವ್ಯಗಳೇನು ಎನ್ನುವುದುನ್ನು ತಿಳಿದುಕೊಂಡು, ಅನುಸರಿಸಬೇಕಾದ ಅವಶ್ಯಕತೆಯಿದೆ. ತನ್ಮೂಲಕ ನಮ್ಮ ದೇಶದ ಅಭಿವೃದ್ದಿಗಾಗಿ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.


ನಮ್ಮ ದೇಶ ಪ್ರಜಾಪ್ರಭುತ್ವ ದೇಶ. ನಮ್ಮ ಸಂವಿಧಾನದಲ್ಲಿ ಹೇಳುವಂತೆ ಜಾತ್ಯಾತೀತವಾದ, ಸಮಾಜವಾದಿ ಮತ್ತು ಗಣತಂತ್ರವನ್ನು ಈ ದೇಶ ಹೊಂದಿದೆ. ಇಲ್ಲಿ ಕೇಂದ್ರೀಕೃತವಾದ ಮತ್ತು ವಿಕೇಂದ್ರೀಕೃತವಾದ ಆಡಳಿತ ವ್ಯವಸ್ಥೆಯನ್ನು ನಮ್ಮ ದೇಶ ಹೊಂದಿದೆ. ವಿಶ್ವದಲ್ಲಿಯೇ ಇಷ್ಟು ವಿಸ್ತಾರವಾದ ಆಡಳಿತ ನಿರ್ದೇಶನಗಳನ್ನು ಹೊಂದಿದ ಸಂವಿಧಾನವನ್ನು ಹೊಂದಿದ ದೇಶ ಇನ್ನೊಂದಿಲ್ಲ ಎಂದರು.

ಸಂವಿಧಾನವು ರಚನೆಯಾದ ಕಾಲಘಟ್ಟವು ನಮ್ಮ ದೇಶದ ಇತಿಹಾಸದಲ್ಲಿ ರೋಮಾನಂಚನವನ್ನು ಉಂಟುಮಾಡುವ ಸಂದರ್ಭಗಳಲ್ಲಿ ಒಂದು. ಈ ದೇಶವನ್ನು ಕಟ್ಟುವುದಕ್ಕೆ ನಮ್ಮ ದೇಶದ ಅಭಿವೃದ್ದಿಗೆ, ನಮ್ಮ ದೇಶದ ಜನರ ಯೋಗಕ್ಷೇಮಕ್ಕೆ ಏನು ಮಾಡಬೇಕು ನಮ್ಮ ಕರ್ತವ್ಯ, ನಮ್ಮ ಹಕ್ಕುಗಳ ಕುರಿತಾಗಿ ಅರಿತುಕೊಂಡು ದೇಶದ ಏಳಿಗೆಗೆ ಶ್ರಮಿಸಬೇಕು. ಈ ಎಲ್ಲಾ ವಿಚಾರಗಳೊಂದಿಗೆ ಇವತ್ತಿನ ದಿವಸ ನಮ್ಮ ದೇಶವನ್ನು ಸಾರ್ವಭೌಮತ್ವದಿಂದ ನಮ್ಮನ್ನು ನಾವೇ ಆಳ್ವಿಕೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿದಂತಹ ಎಲ್ಲಾ ಮಹನೀಯರನ್ನು ಸ್ಮರಿಸಿಕೊಂಡು, ಸಂವಿಧಾನವನ್ನು ಗೌರವಿಸೋಣ ಎಂದು ನುಡಿದರು.

ಈ ಸಂದರ್ಭದಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಥಮ ಬಿಎಸ್ಸಿ(ಬಿಝೆಡ್‌ಸಿ) ವಿದ್ಯಾರ್ಥಿನಿ, ಎನ್‌ಸಿಸಿ ಜೂನಿಯರ್ ಅಂಡರ್ ಆಫೀಸರ್ ಹೇಮಸ್ವಾತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಮಹಾವಿದ್ಯಾಲಯ, ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಇ)ಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಕೋಶಾಧಿಕಾರಿಗಳು, ಸದಸ್ಯರು, ಪ್ರಾಚಾರ್ಯರು, ಮುಖ್ಯಗುರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿವೇಕಾನಂದ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್., ಎನ್.ಸಿ.ಸಿ., ರೇಂಜರ್ಸ್ ಮತ್ತು ರೋವರ್ಸ್ ಹಾಗೂ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್‌ಪ್ರಕಾಶ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಡಾ, ಮನಮೋಹನ ವಂದಿಸಿದರು. ಆಂಗ್ಲಭಾಷಾ ವಿಭಾಗದ ಉಪನ್ಯಾಸಕಿ ಅಂಬಿಕಾ ಎನ್. ಆರ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here