ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾ|ಘಟಕದ ಅಧ್ಯಕ್ಷರಾಗಿ ಉಮೇಶ್ ನಾಯಕ್ ಆಯ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಂಡಿದ್ದು, ಪುತ್ತೂರು ಘಟಕದ ಅಧ್ಯಕ್ಷರಾಗಿ ಉಮೇಶ್ ನಾಯಕ್‌ರವರು ನೇಮಕಗೊಂಡಿದ್ದಾರೆ ಮಾತ್ರವಲ್ಲದೆ ಕಳೆದ ಐದು ವರ್ಷಗಳಿಂದ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಜಿಲ್ಲಾಧ್ಯಕ್ಷರಾಗಿ ಡಾ|ಎಂ.ಪಿ ಶ್ರೀನಾಥ್ ಉಜಿರೆ, ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷರಾಗಿ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಗೌರವ ಕಾರ್ಯದರ್ಶಿಗಳಾಗಿ ರಾಜೇಶ್ವರಿ ಎಂ.ಬೆಳ್ತಂಗಡಿ, ಎಚ್.ವಿನಯ ಆಚಾರ್ಯ ಮಂಗಳೂರು, ಗೌರವ ಕೋಶಾಧ್ಯಕ್ಷರಾಗಿ ಬಿ.ಐತ್ತಪ್ಪ ನಾಯ್ಕ್ ಪುತ್ತೂರು, ಸದಸ್ಯರುಗಳ ಪೈಕಿ ಕೆ.ಸುಂದರ ನಾಯ್ಕ ಪುತ್ತೂರುರವರು ಆಯ್ಕೆಯಾಗಿದ್ದಾರೆ.


ಉಮೇಶ್ ನಾಯಕ್‌ರವರು ಉದ್ಯಮ ಕ್ಷೇತ್ರವನ್ನು ಆರಿಸಿಕೊಂಡು ದರ್ಬೆಯಲ್ಲಿರುವ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದ ಮಾಲಕರಾಗಿ, ಕಳೆದ ೨೮ ವರ್ಷದಿಂದ ಶ್ರೀರಾಮ್ ಶೇರ್ ಅಂಡ್ ಫೈನಾನ್ಸಿಯಲ್ ಕನ್ಸಲ್ಟೆಂಟ್ ಎಂಬ ಶೇರು ಉದ್ಯಮವನ್ನು ನಡೆಸುತ್ತಿದ್ದಾರೆ. ಜೊತೆಗೆ ಪುತ್ತೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಕಾರ್ಯಕಾರಿಣಿ ಸಮಿತಿಯ ಸಕ್ರಿಯ ಸದಸ್ಯರಾಗಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಇದರ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿ ಕೇಂದ್ರ ಯಶಸ್ ಇದರ ಸಂಚಾಲಕರಾಗಿ, ರೋಟರಿ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್-ಬುದ್ಧಿಮಾಂದ್ಯ ಮಕ್ಕಳ ತರಬೇತಿ ಕೇಂದ್ರ ಇದರ ಸಂಚಾಲಕರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಇದರ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಇತರ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿ ಪ್ರಸ್ತುತ ಝೋನಲ್ ಲೆಫ್ಟಿನೆಂಟ್ ಆಗಿರುತ್ತಾರೆ. ಇವರು ೨೦೨೦-೨೧ರಲ್ಲಿ ೧೪ ಮಂದಿ ಅನಾಥ ನಿರ್ಗತಿಕರನ್ನು ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಮೂವರು ಎಚ್.ಐ.ವಿ ಪೀಡಿತ ಮಕ್ಕಳನ್ನು ಎಚ್.ಐ.ವಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ವಿದ್ಯಾಭ್ಯಾಸದ ವ್ಯವಸ್ಥೆಯನ್ನೂ ಮಾಡಿರುತ್ತಾರೆ.

ಮಣಿಪಾಲದ ಪ್ಯಾರಾ ಒಲಂಪಿಕ್ ಅಂತರಾಷ್ಟ್ರೀಯ ಈಜುಗಾರ್ತಿ ಅರ್ಚನ ಜೈ ವಿಟ್ಟಲ್, ಮೈಸೂರಿನ ಕೀಪ್ಯಾಡ್ ಕಲಾವಿದ ಗಣೇಶ್ ಭಟ್ ಹಾಗೂ ಸಹೋದರ ಲಿಮ್ಕಾ ದಾಖಲೆ ಸುರೇಶ್ ನಾಯಕ್ ಸೇರಿದಂತೆ ಮೂವರು ವಿಕಲಚೇತನ ಪ್ರತಿಭೆಗಳನ್ನು ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಸಹೋದರ ಸುರೇಶ್ ನಾಯಕ್ ಜೊತೆ ದೇಶದಾದ್ಯಂತ ೫೦೦ಕ್ಕೂ ಅಧಿಕ ಉಚಿತ ಜಾದು ಪ್ರದರ್ಶನ ನೀಡಿ ಬುದ್ಧಿಮಾಂದ್ಯತೆ ಹಾಗೂ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಮೂಡಿಸಿದ್ದಾರೆ. ಇವರ ಈ ಸೇವೆಗಾಗಿ ʼ2021ರೋಟರಿ ಅನ್ಸಂಗ್‌ ಹೀರೋʼ ಎಂಬ ಪ್ರಶಸ್ತಿಗೆ ಉಮೇಶ್ ನಾಯಕ್‌ರವರು ಭಾಜನರಾಗಿದ್ದಾರೆ.

ಬೀರಮಲೆಯಲ್ಲಿರುವ ಪ್ರಜ್ಞಾಶ್ರಮ ಇದರ ವಿಶ್ವಸ್ತ ಮಂಡಳಿಯಲ್ಲಿ ಗೌರವ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಯುವನಾಯಕ ಸಹಜ್ ರೈ ನೇತೃತ್ವದ ವಿಜಯ ಸಾಮ್ರಾಟ್ ಸೇವಾಸಂಸ್ಥೆ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರು ಉದಯೋನ್ಮುಖ ಯುವ ಕವಿಯಾಗಿದ್ದು, ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣ ಸಂಗ್ರಹದ ಸ್ವಯಂಭೂ ಮಹಾಲಿಂಗೇಶ್ವರ ಎಂಬ ಕೃತಿಯನ್ನು ರಚಿಸಿದ್ದು, ಕರ್ನಾಟಕ ರಾಜ್ಯ ಧಾರ್ಮಿಕ ಧತ್ತಿ ಇಲಾಖೆಯಿಂದ ಇದು ಪ್ರಕಟಗೊಂಡಿರುತ್ತದೆ. ಕನಸಿನ ಕವನಾಮೃತ ಮತ್ತು ಮನಸ್ಸಿನ ಭಾವಾಮೃತ ಎಂಬ ಎರಡು ಕವನ ಸಂಕಲನಗಳನ್ನು ರಚಿಸಿರುತ್ತಾರೆ.

ಭಕ್ತಿಗೀತೆಗಳ ೩ ಧ್ವನಿ ಸುರುಳಿಗಳನ್ನು ರಚಿಸಿದ್ದು, ಇವುಗಲ್ಲಿ ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದಲ್ಲಿ ಲಿಂಗರೂಪಿ ಎಂಬ ಭಕ್ತಿಗೀತೆಗಳ ಧ್ವನಿ ಸುರುಳಿ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಕುರಿತಾದ ಸ್ವಯಂಭೂ ಮಹಾಲಿಂಗೇಶ್ವರ ಎಂಬ ಭಕ್ತಿಗೀತೆಗಳ ಧ್ವನಿಸುರಳಿ, ಡಾ|ಹರ್ಷಕುಮಾರ್ ರೈ ನಿರ್ದೇಶನದಲ್ಲಿ ಅಷ್ಟ ಕ್ಷೇತ್ರ ಗಾನವೈಭವ ಎಂಬ ಭಕ್ತಿಗೀತೆಗಳ ಧ್ವನಿಸುರಳಿ ರಚನೆಯಾಗಿ ಇದು ಭಾರತ, ಸಿಂಗಾಪುರ್, ಅಮೆರಿಕ, ಆಸ್ಟ್ರೇಲಿಯಾ, ಯುಎಇ, ದುಬೈ ಮುಂತಾದ ದೇಶಗಳಲ್ಲಿ ಬಿಡುಗಡೆಗೊಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿರುತ್ತದೆ.

ಶ್ರೀಮತಿ ಜಯಾ ಮತ್ತು ಜಗನ್ನಾಥ ನಾಯಕ್‌ರವರ ೪ನೇ ಪುತ್ರನಾಗಿ ಜನಿಸಿದ ಉಮೇಶ್ ನಾಯಕ್‌ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್ ಶಾಲೆ, ಪ್ರೌಢಶಿಕ್ಷಣವನ್ನು ಕೊಂಬೆಟ್ಟು ಸರ್ಕಾರಿ ಕಾಲೇಜು, ಬಳಿಕ ವಿವೇಕಾನಂದ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಪೂರೈಸಿರುತ್ತಾರೆ. ಪ್ರಸ್ತುತ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, ಇಲ್ಲಿ ಕನ್ನಡ ಎಂ.ಎ ವಿದ್ಯಾರ್ಥಿಯಾಗಿದ್ದು, ಪತ್ನಿ ರೂಪಶ್ರೀ ನಾಯಕ್, ಪುತ್ರ ಸಾತ್ವಿಕ್ ನಾಯಕ್ ಜೊತೆ ದರ್ಬೆಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here