ಸಾಮಾಜಿಕ ಜಾಲತಾಣಗಳ ದುರುಪಯೋಗದ ಕಡಿವಾಣಕ್ಕೆ ಕ್ರಮ- ದೂರು ಮೇಲ್ಮನವಿಗೆ ಸಮಿತಿ ರಚನೆ ; ಮಾರ್ಚ್ 1ರಿಂದ ಜಾರಿಗೆ

0

ಪುತ್ತೂರು: ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳ ದುರುಪಯೋಗಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದೆ.


ಸಾಮಾಜಿಕ ಜಾಲತಾಣಗಳಿಂದ ಆಗುವ ಪ್ರಮಾದಗಳು, ತೊಂದರೆಗಳ ಬಗ್ಗೆ ಯಾರಿಗೆ ದೂರು ನೀಡಬೇಕೆಂದು ತಿಳಿಯದೆ ಜನರು ಗೊಂದಲಕ್ಕೆ ಸಿಲುಕುತ್ತಾರೆ. ಒಂದು ವೇಳೆ, ಸಂಬಂಧಪಟ್ಟ ಜಾಲತಾಣ ಕಂಪನಿಗೆ ಆನ್‌ಲೈನ್ ಮೂಲಕ ದೂರು ಕೊಟ್ಟರೂ ಅದು ಅರಣ್ಯರೋದನವಾಗುತ್ತಿರುವ ಪ್ರಸಂಗಗಳೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಇಂತಹ ಪರಿಸ್ಥಿತಿಯಿಂದ ಕಾಪಾಡಲು ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಬ್ಯಾಂಕ್‌ಗಳ ವಿರುದ್ಧ ಗ್ರಾಹಕರ ದೂರುಗಳ ಇತ್ಯರ್ಥಕ್ಕೆ ಇರುವ ‘ಒಂಬುಡ್ಸ್‌ಮನ್’ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಕಂಪನಿಗಳ ವಿರುದ್ಧ ದೂರು ವಿಚಾರಣೆಗೆ ಸರಕಾರ ‘ಗ್ರೀವಿಯನ್ಸ್ ಅಪೆಲೆಟ್ ಕಮಿಟಿ’ ಹೆಸರಿನ ಮೂರು ವಿಶೇಷ ಸಮಿತಿಗಳನ್ನು ರಚಿಸಿದೆ. 2023ರ ಮಾರ್ಚ್ 1ರಿಂದ ಈ ಸಮಿತಿಗಳು ಕಾರ್ಯಾರಂಭ ಮಾಡಲಿದೆ. ಸಾಮಾಜಿಕ ಮಾಧ್ಯಮಗಳು ಹಾಗೂ ಇಂಟರ್ನೆಟ್ ಆಧಾರಿತ ವೇದಿಕೆಗಳ ವಿರುದ್ಧ ಬಳಕೆದಾರರು ನೀಡುವ ದೂರುಗಳಿಗೆ ಮೇಲ್ಮನವಿ ಪ್ರಾಧಿಕಾರಗಳ ರೀತಿಯಲ್ಲಿ ಈ ಸಮಿತಿ ಕೆಲಸ ಮಾಡಲಿವೆ. ಆನ್‌ಲೈನ್ ಕಂಪನಿಗಳಿಂದ ದೊರೆತ ಪ್ರತಿಕ್ರಿಯೆಯಿಂದ ತೃಪ್ತರಾಗದ ಗ್ರಾಹಕರು ಜಿಎಸಿಗೆ ಮೇಲ್ಮನವಿ ಸಲ್ಲಿಸಬಹುದು. ‘ಜಿಎಸಿ’ ವರ್ಚುವಲ್ ವೇದಿಕೆಯಾಗಿದ್ದು ದೂರು ಸಲ್ಲಿಕೆ, ಸಮಿತಿಯ ತೀರ್ಮಾನ, ಅದನ್ನು ಗ್ರಾಹಕರಿಗೆ ತಲುಪಿಸುವ ವಿಧಾನ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯಲಿದೆ. ಬಳಕೆದಾರರ ದೂರುಗಳಿಗೆ 30 ದಿನದ ಒಳಗಾಗಿ ಉತ್ತರಿಸಲು ಅಥವಾ ಪರಿಹಾರ ದೊರಕಿಸಲು ಸಮಯ ಮಿತಿ ವಿಧಿಸಲಾಗಿದೆ.

ಸೋಶಿಯಲ್ ಮೀಡಿಯಾಗಳ ದುರುಪಯೋಗದ ವಿರುದ್ಧ ಆಂದೋಲನ ರೂಪಿಸಿದ್ದ ಸುದ್ದಿ ಬಳಗ

ಫೇಸ್‌ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸುತ್ತಿರುವವರ ವಿರುದ್ಧ ಸುದ್ದಿ ಬಿಡುಗಡೆ ಪತ್ರಿಕಾ ಬಳಗ ಈ ಹಿಂದೆ ಆಂದೋಲನ ರೂಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸೋಶಿಯಲ್ ಮೀಡಿಯಾಗಳನ್ನು ದುರುಪಯೋಗ ಮಾಡುತ್ತಿದ್ದ ಕೆಲವರು ಸಾಮಾಜಿಕ ಜಾಲತಾಣಗಳನ್ನು ಅಮಾಯಕರ ವಿರುದ್ಧ ಅಪಪ್ರಚಾರ ನಡೆಸಲು, ಬ್ಲ್ಯಾಕ್‌ಮೇಲ್ ಮಾಡಲು ಬಳಕೆ ಮಾಡುತ್ತಿದ್ದರು. ವಾಟ್ಸಾಪ್ ಗ್ರೂಪ್‌ಗಳಲ್ಲಿ ಮತ್ತು ಫೇಸ್‌ಬುಕ್ ಪೇಜ್‌ಗಳಲ್ಲಿ ತೇಜೋವಧೆ ನಡೆಸುತ್ತಿದ್ದ ಕೆಲವರು ಕಾನೂನು ಬಾಹಿರ ಕೃತ್ಯ ಎಸಗುತ್ತಿದ್ದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೂ ಸಾಧ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ಬಳಗ ನಿರಂತರವಾಗಿ ಆಂದೋಲನ ರೂಪಿಸಿತ್ತು. ಸಾಮಾಜಿಕ ಜಾಲತಾಣಗಳ ದುರುಪಯೋಗಕ್ಕೆ ಕಡಿವಾಣ ಹಾಕಬೇಕು ಎಂದು ಸುದ್ದಿ ಬಳಗ ಅಭಿಯಾನ ನಡೆಸಿತ್ತು. ಸಾಮಾಜಿಕ ಜಾಲತಾಣಗಳನ್ನೂ ಕಾನೂನಿನ ವ್ಯಾಪ್ತಿಗೆ ತರಬೇಕು ಎಂದು ಸುದ್ದಿ ಬಳಗ ನಡೆಸಿದ್ದ ಹೋರಾಟಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿತ್ತು. ನಂತರದ ದಿನಗಳಲ್ಲಿ ನ್ಯಾಯಾಲಯಗಳು, ಸರಕಾರಗಳು ಕೂಡ ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಧ್ವನಿ ಎತ್ತಿತ್ತು.

LEAVE A REPLY

Please enter your comment!
Please enter your name here