ಫೆ.11 ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಪುತ್ತೂರಿಗೆ ಅಮಿತ್ ಶಾ ಭೇಟಿ, ಪಾರ್ಟಿ ವತಿಯಿಂದ ಅವರ ಸ್ವಾಗತಕ್ಕೆ ಎಲ್ಲಾ ತಯಾರಿ-ನಳಿನ್ ಕುಮಾರ್ ಕಟೀಲ್

0

  •  ಸಮಾವೇಶ ನಡೆಯಲಿರುವ ತೆಂಕಿಲ ವಿವೇಕಾನಂದ ಶಾಲಾ ಮೈದಾನಕ್ಕೆ ಕಟೀಲ್ ಭೇಟಿ, ಅಧಿಕಾರಿಗಳೊಂದಿಗೆ ಚರ್ಚೆ
  •  ಎಲ್ಲಿಯೂ ಕಾರ್ಯಕ್ರಮದಲ್ಲಿ ಸಣ್ಣ ಲೋಪವೂ ಆಗಬಾರದು
  •  ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯಲು ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ

ಪುತ್ತೂರು: ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಫೆ.11ರಂದು ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಆಗಮಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಪೂರಕ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ದ.ಕ.ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಮಾವೇಶ ನಡೆಯಲಿರುವ ಪುತ್ತೂರು ತೆಂಕಿಲ ವಿವೇಕಾನಂದ ಶಾಲೆಯ ಮೈದಾನದಲ್ಲಿ ಪರಿಶೀಲನೆ ನಡೆಸಿ ಉನ್ನತಮಟ್ಟದ ಅಧಿಕಾರಿಗಳನ್ನು ಕರೆಸಿ ಕಾರ್ಯಕ್ರಮದ ಕುರಿತು ಚರ್ಚಿಸಿದರು.

ವೇದಿಕೆಯ ಸಿದ್ಧತೆ ಮತ್ತು ಭದ್ರತೆಯ ದೃಷ್ಟಿಯಿಂದ ವೇದಿಕೆ ಮುಂದೆ ಸ್ಥಳಾವಕಾಶ ಹಾಗು ಸಾರ್ವಜನಿಕರು ಕುಳಿತುಕೊಳ್ಳಲು ಸ್ಥಳಾವಕಾಶವನ್ನು ಸುವ್ಯವಸ್ಥಿತ ರೀತಿಯಲ್ಲಿ ಮಾಡುವ ದೃಷ್ಟಿಯಿಂದ ಅಧಿಕಾರಿಗಳ ಜೊತೆ ಕಟೀಲ್ ಚರ್ಚಿಸಿದರು. ಮೈದಾನವನ್ನು ಸಮತಟ್ಟು ಮಾಡುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. ಅಮಿತ್ ಶಾ ಬರುವ ಹೆಲಿಕಾಪ್ಟರ್ ನಿಲ್ಲುವ ಸ್ಥಳಗಳು ಮತ್ತು ಹನುಮಗಿರಿಗೆ ಹೋಗಲಿರುವುದರಿಂದ ಅಲ್ಲಿಯೂ ಅಗತ್ಯ ವ್ಯವಸ್ಥೆಗಳಾಗಬೇಕು. ಎಲ್ಲಿಯೂ ಸಣ್ಣ ಲೋಪ ಕೂಡಾ ಆಗಬಾರದು. ಒಟ್ಟು ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯಬೇಕು. ಸಣ್ಣ ತೊಂದರೆ ಆದರೂ ರಾಷ್ಟ್ರಮಟ್ಟದ ನ್ಯೂಸ್ ಆಗಬಹುದು. ಇದರಿಂದ ನಮಗೂ ನಿಮಗೂ ಕಪ್ಪು ಚುಕ್ಕೆ ಎಂದು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಂಸದರು, ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. ಕಾರ್ಯಕ್ರಮ ಮುಗಿಯುವ ತನಕ ಇಲ್ಲಿನ ವ್ಯವಸ್ಥೆಗೆ ಅಧಿಕಾರಿಗಳು ಶಾಸಕರಿಗೆ ಸಹಕರಿಸಿ, ಅವರೊಂದಿಗೆ ಸಂಪರ್ಕದಲ್ಲಿರಬೇಕು ಎಂದೂ ಕಟೀಲ್ ಸೂಚನೆ ನೀಡಿದರು. ವೇದಿಕೆ ಸಮಿತಿಯ ಪ್ರಮುಖರಾದ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಒಟ್ಟು ಮೈದಾನದ ಉದ್ದಗಲದ ಲೆಕ್ಕಾಚಾರವನ್ನು ನಳಿನ್ ಕುಮಾರ್ ಕಟೀಲ್ ಅವರಿಗೆ ತಿಳಿಸಿದರು.ತೆಂಕಿಲದ ಮೈದಾನ ಪರಿಶೀಲನೆ ಬಳಿಕ ನಿರೀಕ್ಷಣಾ ಮಂದಿರದಲ್ಲಿ ಸಭೆ ನಡೆಸಿದ ಸಂಸದರು ಬಳಿಕ ಹನುಮಗಿರಿಗೆ ತೆರಳಿದರು. ಹನುಮಗಿರಿಯಲ್ಲಿಯೂ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಗಿರೀಶ್‌ನಂದನ್, ಡಿವೈಎಸ್ಪಿ ವೀರಯ್ಯ ಹಿರೇಮಠ್ ಮತ್ತಿತರರು ಸಂಸದರೊಂದಿಗೆ ಹನುಮಗಿರಿಗೆ ತೆರಳಿದರು.

ಪಾರ್ಟಿ ವತಿಯಿಂದ ಅಮಿತ್ ಶಾರವರನ್ನು ಸ್ವಾಗತಿಸುವ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ: ಫೆ.11ರಂದು ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಶದ ಗೃಹಸಚಿವರು ಜೊತೆಗೆ ದೇಶದ ಮೊದಲ ಸಹಕಾರಿ ಸಚಿವರಾದ ಅಮಿತ್ ಶಾ ಅವರು ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಕ್ಯಾಂಪ್ಕೋ ಕಡೆಯಿಂದ ಸಂಪೂರ್ಣ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಕ್ಯಾಂಪ್ಕೊದ 50ನೇ ವರ್ಷಾಚರಣೆ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಕೃಷಿಕರನ್ನು ಸೇರಿಸಬೇಕೆನ್ನುವ ಉದ್ದೇಶದಿಂದ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿ ಮೀಡಿಯಾ ಜೊತೆ ಮಾತನಾಡುತ್ತಾ ಹೇಳಿದರು.

ಅಮಿತ್ ಶಾ ಅವರು ಭಾರತೀಯ ಜನತಾ ಪಕ್ಷದ ನಿಕಟಪೂರ್ವ ರಾಷ್ಟ್ರಾಧ್ಯಕ್ಷರಾಗಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಪಾರ್ಟಿಯ ವತಿಯಿಂದ ಅವರನ್ನು ಸ್ವಾಗತಿಸಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಎಲ್ಲಾ ಮತಗಟ್ಟೆಗಳಿಂದ ಕಾರ್ಯಕರ್ತರು ಬರುತ್ತಾರೆ. ಕಾರ್ಯಕ್ರಮಕ್ಕೆ ಬೇಕಾದ ವೇದಿಕೆ, ಸಭಾಂಗಣ ಎಲ್ಲಾ ವ್ಯವಸ್ಥೆಗಳನ್ನು ಕ್ಯಾಂಪ್ಕೋ ನೋಡಿಕೊಳ್ಳುತ್ತದೆ. ಹೊರಗಿನ ಎಲ್ಲಾ ವ್ಯವಸ್ಥೆಗಳನ್ನು ಭಾರತೀಯ ಜನತಾ ಪಕ್ಷವು ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದರು.

ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಬರುತ್ತಿಲ್ಲ: ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಅಮಿತ್ ಶಾ ಪುತ್ತೂರಿಗೆ ಬರುತ್ತಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಧಾನಮಂತ್ರಿಗಳು ಮಂಗಳೂರಿಗೆ ಆಗಮಿಸಿದ್ದರು. ಕೇಂದ್ರ ಸರಕಾರವು ಹೊಸಹೊಸ ಯೋಜನೆಗಳ ಮೂಲಕ ಜಿಲ್ಲೆಗೆ ಸುಮಾರು 23-24 ಸಾವಿರ ಕೋಟಿ ರೂ.ಅನುದಾನ ನೀಡಿದೆ. ದೇಶದ ಸಹಕಾರ ಸಂಸ್ಥೆಗಳಲ್ಲಿ 50 ವರ್ಷಗಳ ಹಿಂದೆ ನಿರ್ಮಾಣವಾಗಿರುವ, 30 ವರ್ಷಗಳ ಹಿಂದೆ ಚಾಕೊಲೇಟ್ ಫ್ಯಾಕ್ಟರಿಯನ್ನು ನಿರ್ಮಿಸಿರುವ ಅತೀದೊಡ್ಡ ಸಂಸ್ಥೆ ಕ್ಯಾಂಪ್ಕೋ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರೇ ಸುವರ್ಣ ಮಹೋತ್ಸವಕ್ಕೆ ಬರ್ತಿದ್ದಾರೆ ಎಂದು ಕಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸಹಾಯಕ ಕಮಿಷನರ್ ಗಿರೀಶ್‌ನಂದನ್, ತಹಸೀಲ್ದಾರ್ ನಿಸರ್ಗಪ್ರಿಯ, ಡಿವೈಎಸ್ಪಿ ವೀರಯ್ಯ ಹಿರೇಮಠ್, ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಜಗದೀಶ್ ಅಧಿಕಾರಿ, ಅರುಣ್ ವಿಟ್ಲ, ಗೌರಿ ಬನ್ನೂರು, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಹಜ್ ಜೆ.ರೈ ಬಳೆಜ್ಜ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಯಶವಂತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಮ್, ಮುಗೆರೋಡಿ ಕನ್‌ಸ್ಟ್ರಕ್ಷನ್‌ನ ಇಂಜಿನಿಯರ್ ದಾಮೋದರ್, ವಿವೇಕಾನಂದ ಶಾಲೆಯ ರವಿನಾರಾಯಣ್, ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಸತೀಶ್ ರೈ, ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಶ್ರೀನಾಥ್ ರೆಡ್ಡಿ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ್ ಕುಲಾಲ್, ನಿತೀಶ್ ಕಲ್ಲೇಗ, ಪ್ರಸಾದ್ ಮಯ್ಯ ಸಹಿತ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಜೊತೆ ಸಭೆ: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪುತ್ತೂರಿಗೆ ಬರುವ ಮೊದಲು ಮಂಗಳೂರಿನಲ್ಲೂ, ಅಮಿತ್‌ಶಾ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಎಲ್ಲಾ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪುತ್ತೂರಿನಿಂದ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಡಿವೈಎಸ್ಪಿ ವೀರಯ್ಯ ಹಿರೇಮಠ್ ಸಹಿತ ಹಲವಾರು ಮಂದಿ ಭಾಗವಹಿಸಿದ್ದರು.

ಅಮಿತ್ ಶಾ, ಮೋದಿ ಹೋದಲ್ಲೆಲ್ಲಾ ಪಾರ್ಟಿ ಗೆದ್ದಿದೆ

ಕ್ಯಾಂಪ್ಕೋದ ಸುವರ್ಣ ಮಹೋತ್ಸವಕ್ಕೆ ಅಮಿತ್ ಶಾ ಬರುತ್ತಿದ್ದಾರೆ.ಇದರೊಂದಿಗೆ 2023ರಲ್ಲಿ ಚುನಾವಣೆಯೂ ಇರುವುದರಿಂದ ಅಮಿತ್ ಶಾ ಭೇಟಿಯ ಲಾಭ ಪಡೆದುಕೊಳ್ಳಲು ಎಲ್ಲಾ ಪ್ರಯತ್ನ ಮಾಡಲಿದ್ದೇವೆ. ಶಾ ಭೇಟಿಯಿಂದ ಮುಂದಿನ ಚುನಾವಣೆಯಲ್ಲಿ ನಮಗೆ ಅತಿ ಹೆಚ್ಚು ಬಲ ಬರುತ್ತದೆ. ಅಮಿತ್ ಶಾ, ಮೋದಿ ಹೋದಲ್ಲೆಲ್ಲಾ ಪಾರ್ಟಿ ಗೆದ್ದಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಕ್ಷೇತ್ರಗಳನ್ನೂ ನಮಗೆ ಗೆಲ್ಲಲು ಇದರಿಂದ ಲಾಭವಾಗಲಿದೆ

ನಳಿನ್ ಕುಮಾರ್ ಕಟೀಲ್,
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರು

ಹೈದರಾಬಾದ್-ಕಣ್ಣೂರು-ಈಶ್ವರಮಂಗಲ ಅಮಿತ್ ಶಾ ಕಾರ್ಯಕ್ರಮದ ವಿವರ

ಕೇಂದ್ರ ಸಚಿವರಾದ ಅಮಿತ್ ಶಾ ಅವರು ಫೆ.11ರಂದು ಪುತ್ತೂರು ಭೇಟಿ ವೇಳೆ ನಾಲ್ಕು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇ ಸಂಬಂಧಿತ ಕಾಮಗಾರಿ ನಡೆಯುತ್ತಿರುವುದರಿಂದ ಅವರು ಹೈದರಾಬಾದ್‌ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು 1.10 ಗಂಟೆಗೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ 1.25ಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೊರಟು 1.50ಕ್ಕೆ ಈಶ್ವರಮಂಗಲ ಹೆಲಿಪ್ಯಾಡ್‌ನಲ್ಲಿ ಇಳಿಯುವರು. 1.30ರಿಂದ 2.30ರವರೆಗೆ ಈಶ್ವರಮಂಗಲದಲ್ಲಿ ಇದ್ದು, ಹನುಮಗಿರಿ ಅಮರಗಿರಿಯಲ್ಲಿ ಭಾರತ್ ಮಾತಾ ಮಂದಿರ ಉದ್ಘಾಟನೆ, ಪಂಚಮುಖಿ ಆಂಜನೇಯ ದೇವಸ್ಥಾನ ಸಂದರ್ಶಿಸುವರು. ಅಲ್ಲಿಂದ 2.35ಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟು 2.45ಕ್ಕೆ ಪುತ್ತೂರು ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಮಾಡಲಾಗುವ ಹೆಲಿಪ್ಯಾಡ್‌ಗೆ ಆಗಮಿಸುವರು. ಅಲ್ಲಿಂದ ರಸ್ತೆ ಮೂಲಕ ತೆಂಕಿಲ ಬೈಪಾಸ್ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ತೆರಳುವರು. ಪುತ್ತೂರಿನಲ್ಲಿ ಸಂಜೆ 3 ಗಂಟೆಯಿಂದ 5.30ರ ವರೆಗೆ ಅಮಿತ್ ಶಾ ಅವರು ಇರಲಿದ್ದು, ಈ ವೇಳೆ ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಚಾಲನೆ, ವಿವಿಧ ಉತ್ಪನ್ನಗಳ ಉದ್ಘಾಟನೆ, ಕಾಮಗಾರಿ ಶಿಲಾನ್ಯಾಸ, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೆ ಭೇಟಿ ನೀಡುವರು. 5.30ಕ್ಕೆ ಹೆಲಿಕಾಪ್ಟರ್ ಮೂಲಕ ಕಣ್ಣೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ನಿರ್ಗಮಿಸುವರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here