ಪುತ್ತೂರು: ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಸಂಸ್ಥೆ ಭಾರತ ಸೇವಾದಳ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪುತ್ತೂರು ಉಮೇಶ್ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೆ ಸಂದರ್ಭದಲ್ಲಿ ಅವರ ಪದಸ್ವೀಕಾರ ಕಾರ್ಯಕ್ರಮ ಮತ್ತು ಜಿಲ್ಲಾ ಭಾವೈಕ್ಯತಾ ರ‍್ಯಾಲಿಯು ಫೆ.8ರಂದು ಕೆಯ್ಯೂರಿನ ಸರಕಾರಿ ಕೆ.ಪಿ.ಎಸ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಭಾರತ ಸೇವಾದಳದ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಜ.17ರಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷನಾಗಿರುವ ನನ್ನ ಅಧ್ಯಕ್ಷತೆಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಧಾನ ಶಾಖೆಯ ಸಭಾಂಗಣದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಉಮೇಶ್ ನಾಯಕ್ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ಪದಗ್ರಹಣ ಸಮಾರಂಭ ಮತ್ತು ಜಿಲ್ಲಾ ಭಾವೈಕ್ಯತಾ ರ‍್ಯಾಲಿಯನ್ನು ಫೆ. 8ರಂದು ಕೆಯ್ಯೂರಿನ ಸರಕಾರಿ ಕೆ.ಪಿ.ಎಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಬೆಳಗ್ಗಿನಿಂದ ಸಂಜೆಯ ತನಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಂಟೆ 9ಕ್ಕೆ ಧ್ವಜಾರೋಹಣ, ಉದ್ಘಾಟನೆ ಬಳಿಕ ಮೆರವಣಿಗೆ ನಡೆಯಲಿದೆ. ಅದಾದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪದಗ್ರಹಣ ಕಾರ್ಯಕ್ರಮ ಮಧ್ಯಾಹ್ನ ವಿದ್ಯಾರ್ಥಿಗಳಿಂದ ಕವಾಯತು ಪ್ರದರ್ಶನ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಸುಮಾರು ಜಿಲ್ಲೆಯಿಂದ 800 ಮಂದಿ ಭಾರತ ಸೇವಾದಳದ ಸದಸ್ಯರು, ಉಳಿದಂತೆ ವಿದ್ಯಾರ್ಥಿಗಳು ಸಹಿತ ಒಟ್ಟು 2ಸಾವಿರ ಮಂದಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಗುರಿ:
ಭಾರತ ಸೇವಾ ದಳದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ಈಗಾಗಲೇ ಕಳೆದ ಒಂದು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದ ಪ್ರದೀಪ್ ಕಲ್ಕೂರ ಅವರು ಕೂಡಾ ಭಾರತ ಸೇವಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅದರಂತೆ ಹಿರಿಯರ ಮಾರ್ಗದರ್ಶನ ಪಡೆದು ಮುಂದಿನ 5 ವರ್ಷದ ಅವಧಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಗುರಿ ಹೊಂದಿದ್ದೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಭಾರತ ಸೇವಾದಳ ಜಿಲ್ಲಾ ಕೋಶಾಧ್ಯಕ್ಷ ಸದಾಶಿವ ಭಟ್, ಕೆಯ್ಯೂರು ಕೆಪಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಬಾಬು ಉಪಸ್ಥಿತರಿದ್ದರು.