ಗೋಳಿತ್ತಟ್ಟು: ಬಜತ್ತೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ಅನುಭವಾತ್ಮಕ ಕಲಿಕೆಯೇ ಕಲಿಕಾ ಹಬ್ಬದ ಉದ್ದೇಶ: ಲೋಕೇಶ್ ಎಸ್.ಆರ್.

ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬಜತ್ತೂರು ಹಾಗೂ ಸರಕಾರಿ ಉ.ಹಿ.ಪ್ರಾ.ಶಾಲೆ ಗೋಳಿತ್ತಟ್ಟು ಇದರ ಆಶ್ರಯದಲ್ಲಿ ಬಜತ್ತೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಜ.31 ಹಾಗೂ ಫೆ.1ರಂದು ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರು ಮಾತನಾಡಿ, ಕೋವಿಡ್‌ನಿಂದಾಗಿ ಎರಡು ವರ್ಷ ಚಟುವಟಿಕೆಗಳು ಸ್ಥಗಿತಗೊಂಡಿತ್ತು. ಕಲಿಕಾ ಚೇತರಿಕೆಯ ಮುಂದಿನ ಹಂತವೇ ಕಲಿಕಾ ಹಬ್ಬ, ಅನುಭವಾತ್ಮಕ ಕಲಿಕೆಯೇ ಇದರ ಮುಖ್ಯ ಉದ್ದೇಶವಾಗಿದೆ. ಒಟ್ಟು ನಾಲ್ಕು ಕಾರ್ನರ್‌ಗಳಲ್ಲಿ ಕಲಿಕಾ ಹಬ್ಬ ನಡೆಯಲಿದ್ದು ಮಕ್ಕಳು ಉತ್ಸಾಹಭರಿತರಾಗಿ ಪಾಲ್ಗೊಳ್ಳಬೇಕು. ಮುಂದಿನ ಜೀವನ ನಿರ್ವಹಣೆಗೂ ಇದು ಅವಶ್ಯಕ ಎಂದರು. ಗೋಳಿತ್ತಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಅವರು ತೆಂಗಿನ ಹಿಂಗಾರ ಅರಳಿಸುವ ಮೂಲಕ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್, ದಾನಿಗಳಾದ ಶೇಖರ ಗೌಡ ಅನಿಲಭಾಗ್, ವೆಂಕಪ್ಪ ಗೌಡ ಡೆಬ್ಬೇಲಿ, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಇಲಾಖೆಯ ಹರಿಪ್ರಸಾದ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ತೇಜಸ್ವಿ, ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:

ಮಕ್ಕಳಿಗೆ ಸಮವಸ್ತ್ರ ಕೊಡುಗೆಯಾಗಿ ನೀಡಿದ ದಾನಿಗಳಾದ ವೆಂಕಪ್ಪ ಗೌಡ ಡೆಬ್ಬೇಲಿ, ಶೇಖರ ಗೌಡ ಅನಿಲಭಾಗ್, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಆರೀಫ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಳಿತ್ತಟ್ಟು ಶಾಲಾ ಮುಖ್ಯಶಿಕ್ಷಕಿ ಜಯಂತಿ ಬಿ.ಎಂ.ವಂದಿಸಿದರು. ಶಿಕ್ಷಕಿ ಸಚಿತಾ ಕಾರ್ಯಕ್ರಮ ನಿರೂಪಿಸಿದರು.

ಆಕರ್ಷಕ ಮೆರವಣಿಗೆ:

ಕಾರ್ಯಕ್ರಮ ಆರಂಭಕ್ಕೂ ಮುನ್ನ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯ ತನಕ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಕೋಲಾಟ, ಹುಲಿ ಕುಣಿತ, ಗೊಂಬೆ ಕುಣಿತ ಸೇರಿದಂತೆ ರಾಷ್ಟ್ರ ನಾಯಕರ ವೇಷಭೂಷಣಗಳು ಮೆರವಣಿಗೆಗೆ ಮೆರುಗು ನೀಡಿತು. ಕಲಿಕಾ ಹಬ್ಬದ ಹಿನ್ನೆಲೆಯಲ್ಲಿ ಗೋಳಿತ್ತಟ್ಟು ಶಾಲೆಯನ್ನು ಶೃಂಗರಿಸಲಾಗಿತ್ತು.

120 ವಿದ್ಯಾರ್ಥಿಗಳು ಹಾಜರು:

ಜ.31 ಹಾಗೂ ಫೆ.1ರಂದು ನಡೆದ ಕಲಿಕಾ ಹಬ್ಬದಲ್ಲಿ ಬಜತ್ತೂರು ಕ್ಲಸ್ಟರ್‌ನ 11 ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಆಯ್ಕೆಯಾದ 120 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಾಡು, ಹರಟೆ, ಆಟ, ನಾಟಕ, ಕವನ ರಚನೆ, ಪ್ರಯೋಗ, ಕ್ರಾಫ್ಟ್, ವೀಕ್ಷಣೆ, ಸಂದರ್ಶನ, ಸಮೀಕ್ಷೆ, ಅನ್ವೇಷಣೆ ಹೀಗೆ ಅನುಭವಾತ್ಮಕ ಕಲಿಕೆಯ ವಿವಿಧ ಆಯಾಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡರು. ಜಿಲ್ಲಾ ಹಾಗೂ ತಾಲೂಕು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಉತ್ಸಾಹಭರಿತರಾಗಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here