ಬಾಕಿ ಬಿಲ್ ಪಾವತಿಸಿರುವುದರಿಂದ ಜಾಮೀನು ನೀಡುವುದಕ್ಕೆ ಆಕ್ಷೇಪವಿಲ್ಲ – ಕೋರ್ಟ್‌ಗೆ ಹೇಳಿಕೆ ನೀಡಿದ್ದ ಹೋಟೇಲ್ ಮ್ಯಾನೇಜರ್
ಪುತ್ತೂರು: ಯುಎಇ ಸರಕಾರದ ನಿಕಟವರ್ತಿ ಎಂದು ಹೇಳಿಕೊಂಡು ದೆಹಲಿಯ ಐಶಾರಾಮಿ ಲೀಲಾ ಪ್ಯಾಲೇಸ್ ಹೋಟೇಲ್‌ನಲ್ಲಿ ತಂಗಿ ಹೋಟೇಲ್‌ಗೆ 23.46 ಲಕ್ಷ ರೂ.ಬಿಲ್ ಪಾವತಿಸದೇ ವಂಚಿಸಿರುವ ಆರೋಪದಲ್ಲಿ ದೆಹಲಿ ಪೊಲೀಸರಿಂದ ಬಂಧಿತನಾಗಿರುವ ಪುತ್ತೂರು ನಿವಾಸಿಗೆ ದಿಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇಲ್ಲಿನ ದರ್ಬೆ ನಿವಾಸಿಯಾಗಿರುವ ಮಹಮ್ಮದ್ ಶರೀಫ್(41 ವ.),ತಾನು ಯುಎಇ ಸರಕಾರದ ನಿಕಟವರ್ತಿ ಎಂದು ಹೇಳಿಕೊಂಡು ಕೆಲವೊಂದು ದಾಖಲೆಗಳನ್ನು ಸಲ್ಲಿಸಿ ಕಳೆದ ಆಗಸ್ಟ್ 1 ರಿಂದ ನವೆಂಬರ್ 20ರವರೆಗೆ ದೆಹಲಿಯ ಐಶಾರಾಮಿ ಲೀಲಾ ಪ್ಯಾಲೇಸ್ ಹೋಟೇಲ್‌ನಲ್ಲಿ ರೂಂ ನಂ.427ರಲ್ಲಿ ತಂಗಿದ್ದರು.ಆರಂಭದಲ್ಲಿ ಹೋಟೇಲ್‌ನವರಿಗೆ 11.5 ಲಕ್ಷ ಹಣ ಪಾವತಿಸಿದ್ದ ಮಹಮ್ಮದ್ ಶರೀಫ್ 23,46,413 ರೂ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರು.
ರೂಂ ಖಾಲಿ ಮಾಡುವ ವೇಳೆ ಅವರು ರೂ.20 ಲಕ್ಷಕ್ಕೆ ಚೆಕ್ ನೀಡಿದ್ದರು.ಆದರೆ ಚೆಕ್ ಅಮಾನ್ಯಗೊಂಡಿತ್ತು. ದೆಹಲಿಯ ಸರೋಜಿನಿ ನಗರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೇಲ್‌ಗೆ ಇವರು ರೂ.23,46,413 ಬಿಲ್ ಅನ್ನು ಪಾವತಿಸದೇ ವಂಚಿಸಿದ್ದಲ್ಲದೆ, ಹೋಟೇಲ್‌ನಿಂದ ರೂಂ ಖಾಲಿ ಮಾಡಿ ಹೋಗುವ ವೇಳೆ ಅಲ್ಲಿದ್ದ ಬೆಳ್ಳಿತಟ್ಟೆಗಳ ಸಹಿತ ಅಮೂಲ್ಯ ವಸ್ತುಗಳನ್ನೂ ಕೊಂಡೊಯ್ದಿರುವುದಾಗಿ ಆರೋಪಿಸಿ ಲೀಲಾ ಪ್ಯಾಲೇಸ್ ಹೋಟೇಲ್ ಮ್ಯಾನೇಜರ್ ಅನುಪಮದಾಸ್ ಗುಪ್ತಾ ಅವರು ನೀಡಿದ್ದ ದೂರಿನ ಮೇರೆಗೆ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 420, 380ರಡಿ ಪ್ರಕರಣ ದಾಖಲಾಗಿತ್ತು.
ಮಹಮ್ಮದ್ ಶರೀಫ್ ಯುಎಇ ಸುಲ್ತಾನ್ ಶೇಕ್ ಫಲ್ಹಾ ಬಿನ್ ಜಾಯೇದ್ ಅಲ್ ನಹ್ಯಾನ್ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಜ.14ರಂದು ದೂರು ದಾಖಲಿಸಲಾಗಿತ್ತು.ಸರೋಜಿನಿನಗರ ಪೊಲೀಸರು ಆರೋಪಿ ಮಹಮ್ಮದ್ ಶರೀಫ್ ಅವರನ್ನು ಜ.19 ರಂದು ಮಂಗಳೂರಿನಲ್ಲಿ ಬಂಧಿಸಿ ದೆಹಲಿಗೆ ಕರೆದೊಯ್ದಿದ್ದರು.ಆರೋಪಿಗೆ ದಿಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿಯು ಬಾಕಿ ಮೊತ್ತ 23 ಲಕ್ಷ ರೂ.ಗಳನ್ನು ತೀರಿಸಿದ್ದಾರೆ.ಹೀಗಾಗಿ ಆತನಿಗೆ ಜಾಮೀನು ನೀಡಲು ಆಕ್ಷೇಪ ಇಲ್ಲ ಎಂದು ಹೊಟೇಲ್ ಮ್ಯಾನೇಜರ್ ನ್ಯಾಯಾಲಯಕ್ಕೆ ತಿಳಿಸಿದ್ದರು.ಅದರಂತೆ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.