ವಿಟ್ಲ: ಅಳಿಕೆ ಗ್ರಾಮದ ಕುದ್ದುಪದವು ಎಂಬಲ್ಲಿ ವ್ಯಕ್ತಿಯೋರ್ವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ. ಕುದ್ದುಪದವು ನಿವಾಸಿ ಆನಂದ ಪೂಜಾರಿ ತನ್ನ ಮನೆಯ ಪಕ್ಕದಲ್ಲಿರುವ ಅಡಿಕೆ ದಾಸ್ತಾನು ಕೊಠಡಿಯಲ್ಲಿ ಮದ್ಯದ ಬಾಟಲ್‌ಗಳನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣಾ ಪಿಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ರವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಆನಂದ ಪೂಜಾರಿಯವರು ಪರಾರಿಯಾಗಲು ಯತ್ನಿಸಿದ್ದು , ಆತನನ್ನು ಹಿಡಿದು ವಿಚಾರಿಸಿದಾಗ ಯಾವುದೇ ಪರವಾನಿಗೆ/ದಾಖಲಾತಿಗಳನ್ನು ಹೊಂದದೆ ಕೊಠಡಿಯೊಳಗೆ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ಮೈಸೂರು ಲ್ಯಾನ್ಸರ್ ಕಂಪೆನಿಯ 90 ಎಂ.ಎಲ್. ನ ಟೆಟ್ರಾ ಸ್ಯಾಚೆಟ್‌ಗಳು-61, ಒರಿಜಿನಲ್ ಚಾಯ್ಸ್ ಕಂಪೆನಿಯ 90 – ಎಂ.ಎಲ್. ನ ಟೆಟ್ರಾ ಸ್ಯಾಚೆಟ್ ಗಳು-19 ಅನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 2,800 ರೂ. ಆಗಬಹುದು. ಒಟ್ಟು ಮದ್ಯವು 7.200 ಲೀಟರ್ ಆಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.