ಪುತ್ತೂರು: ಕೋಡಿಂಬಾಡಿಯ ಕಜೆ ಎಂಬಲ್ಲಿ ಜಾಗದ ವಿಚಾರವಾಗಿ ಸಂಬಂಧಿಕರೊಳಗೆ ಹಲ್ಲೆ ನಡೆದಿರುವ ಘಟನೆ ಫೆ. 6ರಂದು ನಡೆದಿದ್ದು, ಘಟನೆ ಕುರಿತು ಇತ್ತಂಡದ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿಂಬಾಡಿಯ ಕಜೆ ನಿವಾಸಿ ರೇವತಿ ಎಂಬವರು ನೀಡಿದ ದೂರಿನಂತೆ ನಾವು ಮನೆಗೆ ರಸ್ತೆ ಕೆಲಸ ಮಾಡುತ್ತಿದ್ದ ಸಂದರ್ಭ ಗಿರಿಯಪ್ಪ, ಗೀತಾ, ಶ್ವೇತಾ, ರಂಜಿತಾ, ರಂಜನ್ ಎಂಬವರು ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ. ಗಲಾಟೆಯನ್ನು ಬಿಡಿಸಲು ಬಂದ ಸುಂದರ ಪಾತಾಜೆ ಮತ್ತು ಪರಮೇಶ್ವರ ಅವರಿಗೂ ಗಿರಿಯಪ್ಪ ಮತ್ತು ರಂಜನ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ದೂರುದಾರರ ಅಕ್ಕ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮತ್ತೊಂದು ಕಡೆ ಗಿರಿಯಪ್ಪ ಎಂಬವರು ನೀಡಿದ ದೂರಿನಂತೆ ಅಣ್ಣನ ಮಕ್ಕಳು ಮತ್ತು ಇತರರು ಜೆಸಿಬಿಯನ್ನು ತಂದು ಸ್ವಾಧೀನದ ಜಾಗವಾದ ಕೋಡಿಂಬಾಡಿ ಗ್ರಾಮದ ಕಜೆ ಎಂಬಲ್ಲಿ ಮಾರ್ಗ ಮಾಡಲು ಬಂದಾಗ ನನ್ನ ಮಕ್ಕಳೆಲ್ಲಾ ಬಂದ ಮೇಲೆ ಮಾತನಾಡಿ ಕೆಲಸ ಮುಂದುವರಿಸಿ. ಈಗ ಕೆಲಸ ಮಾಡುವುದು ಬೇಡ ಎಂದು ತಿಳಿಸಿದ್ದರೂ ಸುಂದರ ಪಾಟಾಜೆ ಎಂಬವರು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಇತ್ತಂಡದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.