ಕೆಯ್ಯೂರಿನಲ್ಲಿ ಭಾರತ ಸೇವಾದಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ 

0

ಶಿಸ್ತಿನ ಸಿಪಾಯಿಗಳ ನಿರ್ಮಾಣದಲ್ಲಿ ಭಾರತ್ ಸೇವಾದಳದ ಕಾರ್ಯ ಶ್ಲಾಘನೀಯ: ಸಂಜೀವ ಮಠಂದೂರು

ಕೆಯ್ಯೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ, ದ.ಕ ಭಾರತ ಸೇವಾದಳ ಸಮಿತಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಪುತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಜಂಟಿ ಆಶ್ರಯದಲ್ಲಿ 2022-23ರ ಭಾರತ ಸೇವಾದಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕೆಪಿಎಸ್ ಕೆಯ್ಯೂರಿನಲ್ಲಿ ಜ.8ರಂದು ನಡೆಯಿತು. ಕರ್ನಾಟಕ ಸರಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ರಾಷ್ಟ್ರ ದ್ವಜಾರೋಹಣ ಮಾಡಿ  ಶಿಸ್ತು, ಪ್ರಾಮಾಣಿಕತೆಯೊಂದಿಗೆ ಇಂದಿನ ಯುವ ಜನಾಂಗವನ್ನು ದೇಶದ ಸಂಪತ್ತಿಗಾಗಿ ಬೆಳೆಸುವಲ್ಲಿ ಭಾರತ್ ಸೇವಾ ದಳ ಸಹಕಾರಿಯಾಗಿದೆ. ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮುಂದಿಟ್ಟುಕೊಂಡು, ಧೈರ್ಯ, ಸಂಯಮ, ತ್ಯಾಗ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸವನ್ನು ಭಾರತ್ ಸೇವಾ ದಳ ಮಾಡುತ್ತಿದೆ. ಯುವ ಜನಾಂಗವನ್ನು ಈ ದೇಶದ ಸಂಪತ್ತಾಗಿ ಮಾಡುವಲ್ಲಿ ಸೇವಾ ದಳದ ಕಾರ್ಯ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಸ್ತಿಗೆ ಇಸ್ರೇಲ್, ಶ್ರಮಕ್ಕೆ ಜಪಾನ್ ದೇಶ ಹೇಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆಯೋ ಹಾಗೇ ಮುಂದಿನ ದಿನಗಳಲ್ಲಿ ಶಿಸ್ತು ಮತ್ತು ಶ್ರಮಕ್ಕೆ ಹೆಗ್ಗುರುತು ನಮ್ಮ ಭಾರತ ದೇಶವಾಗಬೇಕು. ಈ ನಿಟ್ಟಿನಲ್ಲಿ ಭಾರತ್ ಸೇವಾ ದಳವನ್ನು ಆರಂಭಿಸಿದ ನಾ.ಸು ಹರ್ಡಿಕರ್‌ರವರು ದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ. ಶಿಸ್ತಿನ ಸಿಪಾಯಿಗಳ ನಿರ್ಮಾಣವನ್ನು ಭಾರತ್ ಸೇವಾ ದಳ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ, ಸೇವೆಗಾಗಿ ಬಾಳು ಎಂಬ ಸಂದೇಶವನ್ನು ನೀಡುತ್ತಿರುವ ಭಾರತ್ ಸೇವಾ ದಳವು ನನ್ನ ಸೇವೆ ಈ ದೇಶಕ್ಕಾಗಿ ಎಂಬುದನ್ನು ಕಲಿಸಿಕೊಟ್ಟಿದೆ. ಭಾರತವನ್ನು ಜಗದ್ಗುರು ಮಾಡುವಲ್ಲಿ ನಾವೆಲ್ಲರೂ ಕಟಿಬದ್ಧರಾಗೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಬಿ.ಜಯರಾಮ ರೈ ಬಳಜ್ಜ ಮಾತನಾಡಿ ಹಿಂದೂಸ್ತಾನಿ ಸೇವಾ ದಳವನ್ನು ಭಾರತ್ ಸೇವಾ ದಳವನ್ನಾಗಿ ಪರಿವರ್ತಿಸಿದವರು ನಾ.ಸು ಹರ್ಡಿಕರ್‌ರವರಾಗಿದ್ದಾರೆ. ಸೇವಾ ಶಿಬಿರ, ಭಾವೈಕ್ಯತೆ ರ್‍ಯಾಲಿಗಳಂತಹ ಹಲವು ಸೇವಾ ಕಾರ್ಯಕ್ರಮಗಳನ್ನು ಭಾರತ್ ಸೇವಾ ದಳದ ಮೂಲಕ ಹಮ್ಮಿಕೊಂಡು ಮಕ್ಕಳಲ್ಲಿ ಶಿಸ್ತು, ಸಂಯಮ, ಆತ್ಮಸ್ಥೈರ್ಯ, ತ್ಯಾಗಮನೋಭಾವ, ಧೈರ್ಯದಂತಹ ಗುಣಗಳನ್ನು ಬೆಳೆಸುವ ಕೆಲಸ ಸೇವಾ ದಳದಿಂದ ಆಗುತ್ತಿದೆ. ನಾವೆಲ್ಲರೂ ದೇಶಕ್ಕಾಗಿ ಎಂಬ ಘೋಷಣೆಯೊಂದಿಗೆ ಭಾರತ್ ಸೇವಾ ದಳ ಇನ್ನಷ್ಟು ಎತ್ತರಕ್ಕೆ ಬೆಳೆಯುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

ಪುತ್ತೂರು ತಾಲೂಕು ಸಮಿತಿ ಭಾ.ಸೇ.ದಳ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಮಾತನಾಡಿ ಪರಿಶ್ರಮ ಮತ್ತು ಪ್ರಯತ್ನ ನಮ್ಮ ಜೀವನದಲ್ಲಿ ಅತೀ ಮುಖ್ಯವಾದ ಸಂಗತಿಗಳಾಗಿವೆ, ಯಾರಲ್ಲಿ ಪರಿಶ್ರಮ ಮತ್ತು ಪ್ರಯತ್ನ ಇರುತ್ತದೋ ಅವರಿಗೆ ಅದೃಷ್ಟ ದೇವತೆ ಖಂಡಿತವಾಗಿಯೂ ಒಲಿಯುತ್ತಾಳೆ ಎಂದರು. ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ನಮ್ಮಲ್ಲಿ ಪರಿಶ್ರಮ ಮತ್ತು ಪ್ರಯತ್ನ ಇರಲೇಬೇಕು. ಈ ನಿಟ್ಟಿನಲ್ಲಿ ಭಾರತ್ ಸೇವಾ ದಳವು ನಮಗೆ ಶಿಸ್ತು, ಸಂಯಮ, ತ್ಯಾಗದೊಂದಿಗೆ ಪರಿಶ್ರಮ ಮತ್ತು ಪ್ರಯತ್ನವನ್ನು ಕಲಿಸುತ್ತದೆ ಎಂದರು. ಭಾರತ್ ಸೇವಾ ದಳದ ಪುತ್ತೂರು ತಾಲೂಕು ಅಧ್ಯಕ್ಷನಾಗಿ ನನ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ಸಹಕಾರ ಇಲಾಖಾ ಸಹಾಯಕ ನಿಬಂಧಕ ತ್ರಿವೇಣಿ ರಾವ್ ಮಾತನಾಡಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವಲ್ಲಿ ಭಾರತ್ ಸೇವಾದಳ ಅತೀ ಮುಖ್ಯ ಎಂದರು. ಭಾರತ್ ಸೇವಾ ದಳದಿಂದ ಕಲಿಯುವುದು ಬಹಳಷ್ಟಿದೆ ಎಂದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ   ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ಭಾವೈಕ್ಯತೆಯನ್ನು ಹುಟ್ಟು ಹಾಕುವ ಕೆಲಸವನ್ನು ಭಾರತ್ ಸೇವಾ ದಳ ಮಾಡುತ್ತಿದೆ. ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮವನ್ನು ಜೀವನದಲ್ಲಿ ಬೆಳೆಸಿಕೊಳ್ಳುವ ಮೂಲಕ ದೇಶಕ್ಕಾಗಿ ನಾನೇನು ಕೊಡ್ತೇನೆ ಎನ್ನುವುದು ಮುಖ್ಯವಾಗಬೇಕು ಎಂದು ಹೇಳಿ ಶುಭ ಹಾರೈಸಿದರು. 

ಕೆಯ್ಯೂರು ಗ್ರಾ.ಪಂ.ಅಧ್ಯಕ್ಷೆ  ಜಯಂತಿ ಎಸ್ ಭಂಡಾರಿ, ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ವಿ.ರೈ ಮಾಡಾವು, ವಿಮಲ್ ಕುಮಾರ್, ಮಂಗಳೂರು ಭಾ.ಸೇ.ದಳ ಕೇಂದ್ರ ಸಮಿತಿ ರಾಜ್ಯಸದಸ್ಯ ಬಶೀರ್ ಬೈಕಂಪಾಡಿ, ದ.ಕ ಭಾ.ಸೇ.ದಳ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುಧೀರ್ ಟಿ,  ಕೆಪಿಎಸ್ ಕೆಯ್ಯೂರು  ಎಸ್.ಡಿ.ಎಂಸಿ ಉಪಾಧ್ಯಕ್ಷ ಚರಣ್ ಕುಮಾರ್ ಸಣಂಗಳ, ಪುತ್ತೂರು ಭಾ.ಸೇ.ದಳ ನೋಡೆಲ್ ಅಧಿಕಾರಿ ಸುಂದರ ಗೌಡ ಎನ್, ದ.ಕ. ಮಂಗಳೂರು  ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಜೆ, ದ.ಕ.ಮಂಗಳೂರು ಭಾ.ಸೇ.ದಳ ಜಿಲ್ಲಾ ಸಂಘಟಕ ಟಿ.ಎಸ್ ಮಂಜೇಗೌಡ, ಕೆ.ಪಿ.ಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯಗುರು ಬಾಬು.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನೂತನ ಪಧಾಧಿಕಾರಿಗಳ ಆಯ್ಕೆ:

ಭಾ.ಸೇ.ದಳ ಪುತ್ತೂರು ತಾಲೂಕು ಸಮಿತಿಗೆ ನೂತನ ಅಧ್ಯಕ್ಷರಾಗಿ ಉಮೇಶ್ ನಾಯಕ್ ಪುತ್ತೂರು, ಉಪಾಧ್ಯಕ್ಷ ಚಂದ್ರಹಾಸ ರೈ ಬಿ, ಕಾರ್ಯದರ್ಶಿ ದಿನೇಶ್ ಕೆ.ಎಸ್, ಖಜಾಂಚಿ ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ಸದಸ್ಯರಾಗಿ, ವಿಶ್ವೇಶ್ವರ ಪಿ, ಹರಿಣಾಕ್ಷಿ ಜೆ ಶೆಟ್ಟಿ, ಮಮತಾ ಕುಮಾರಿ ಎಸ್, ನವೀನ್ ರೈ , ಡಾ.ಚಾಂದಿನಿಯವರನ್ನು  ಆಯ್ಕೆ ಮಾಡಲಾಯಿತು. ಎಲ್ಲಾ ಪದಾಧಿಕಾರಿಗಳಿಗೆ ಟೋಪಿ ಹಾಗೂ ಶಾಲು ಹಾಕಿ ಗೌರವಿಸಲಾಯಿತು.

ಸನ್ಮಾನ ಕಾರ್ಯಕ್ರಮ:

ದ.ಕ ಭಾ.ಸೇ.ದಳ ಜಿಲ್ಲಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಮತ್ತು ಭಾ.ಸೇ.ದಳ.ಪುತ್ತೂರು ತಾಲೂಕು ಸಮಿತಿ ನೂತನ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಇವರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಶಾಲು, ಪೇಟ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸುದ್ದಿ ಬಿಡುಗಡೆ ಪ್ರತಿಕೆಯ ಪ್ರಧಾನ ಸಂಪಾದಕ‌ ಡಾ. ಯು.ಪಿ.ಶಿವಾನಂದರವರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ವಿದ್ಯಾರ್ಥಿಗಳಿಂದ ಪುರಮೆರವಣಿಗೆ:

 ಕೆಪಿಎಸ್ ಕೆಯ್ಯೂರು ಶಾಲಾ ಮೈದಾನದಿಂದ ಕೆಯ್ಯೂರು ದೇವಾಲಯದ ದ್ವಾರದ ತನಕ ಜಿಲ್ಲಾ ಮಟ್ಟದ 100ಕ್ಕೂ ಅಧಿಕ ಶಿಕ್ಷಕರಿಂದ 45 ಶಾಲೆಯ 1000ಕ್ಕೂ ಅಧಿಕ ಮಕ್ಕಳಿಂದ ಭಾ.ಸೇ.ದಳದ ಪುರಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಕೆಯ್ಯೂರು, ಮಾಡಾವು ವರ್ತಕ ಸಂಘದಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಕೆಪಿಎಸ್ ಕೆಯ್ಯೂರು ಉಪ ಪ್ರಾಂಶುಪಾಲ‌ ವಿನೋದ್ ಕುಮಾರ್ ಕೆ.ಎಸ್ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಶಾಲೆಯ ಶಿಕ್ಷಕ ವೃಂದ, ಸಂಘ ಸಂಸ್ಥೆಯ ಪದಾಧಿಕಾರಿಗಳು, ಎಸ್.ಡಿ.ಎಂ.ಸಿ ಸದಸ್ಯರುಗಳು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 

ಯೂನಿಫಾರಂ ಇಲ್ಲದಿದ್ದರೆ ತಿಳಿಸಿ
ಈಗಾಗಲೇ ಭಾರತ್ ಸೇವಾ ದಳದ ವಿದ್ಯಾರ್ಥಿಗಳಿಗೆ ಯೂನಿಫಾರಂನ ಕೊರತೆ ಇದೆ ಎಂಬುದು ತಿಳಿದು ಬಂದಿದೆ. ಯಾವ ಶಾಲೆಗಳಲ್ಲಿ ಮಕ್ಕಳಿಗೆ ಯೂನಿಫಾರಂನ ಕೊರತೆ ಇದೆ ಎಂಬುದನ್ನು ಶಾಲಾ ಶಿಕ್ಷಕರು ತಿಳಿಸಿದರೆ ದಾನಿಗಳ ಮುಖಾಂತರ ಅಥವಾ ಇಲಾಖೆಯ ಮೂಲಕ ಯೂನಿಫಾರಂ ಕೊಡಿಸುವ ಕೆಲಸವನ್ನು ಮಾಡುತ್ತೇವೆ  -ಎಸ್.ಬಿ.ಜಯರಾಮ ರೈ ಬಳಜ್ಜ 

ಅಚ್ಚುಕಟ್ಟಾದ ವ್ಯವಸ್ಥೆ
ಕೆಯ್ಯೂರು ಕೆಪಿಎಸ್‌ನ ಪ್ರಾಥಮಿಕ ವಿಭಾಗದ ಶಾಲಾ ವಠಾರದಲ್ಲಿ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿತ್ತು. ಆಟದ ಮೈದಾನಕ್ಕೆ ಸಂಪೂರ್ಣ ಶಾಮಿಯಾನ ಹಾಕಿದ್ದು ಮಕ್ಕಳಿಗೆ ಬಿಸಿಲಿನ ತಾಪ ಬೀಳದಂತೆ ನೋಡಿಕೊಳ್ಳಲಾಗಿದೆ. ಬಾಯಾರಿಕೆಯನ್ನು ನೀಗಿಸಲು ಕೆಎಂಎಫ್‌ನ ವತಿಯಿಂದ ಸುಮಾರು 2 ಸಾವಿರ ಲೀಟರ್ ಮಜ್ಜಿಗೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಟ, ಉಪಹಾರದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿತ್ತು.

LEAVE A REPLY

Please enter your comment!
Please enter your name here