ಕಡಬ: ಐತ್ತೂರು ಗ್ರಾ.ಪಂ.ನ ಅಧ್ಯಕ್ಷೆ ಶ್ಯಾಮಲಾ ಅವರ ವಿರುದ್ಧ ಉಪಾಧ್ಯಕ್ಷರ ಸಹಿತ 9 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದು, ಆ ಹಿನ್ನಲೆಯಲ್ಲಿ ಫೆ.8ರಂದು ಪುತ್ತೂರು ಸಹಾಯಕ ಕಮೀಷನರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗೊತ್ತುವಳಿ ಸಭೆಯಲ್ಲಿ ಹಾಲಿ ಅದ್ಯಕ್ಷೆ ಶ್ಯಾಮಲ ಅವರಿಗೆ ಸೋಲಾಗಿದ್ದು, ಅವರನ್ನು ಪದಚ್ಯುತಿಗೊಳಿಸಲಾಗಿದೆ.
ಪುತ್ತೂರು ಎ.ಸಿ. ಗಿರೀಶ್ ನಂದನ್ ಅವರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯನ್ನು ಗ್ರಾ.ಪಂ. ಸಭಾಂಗಣದಲ್ಲಿ ನಡೆಸಲಾಯಿತು. 2022ನೇ ಅ.8ರಂದು ಅವಿಶ್ವಾಸ ಗೊತ್ತುವಳಿ ನಡೆದಿದ್ದರೂ ಅಂದು ಅಧ್ಯಕ್ಷರು ಅವಿಶ್ವಾಸ ಗೊತ್ತುವಳಿಯ ವಿರುದ್ಧ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಈ ಹಿನ್ನಲೆಯಲ್ಲಿ ಅಂದಿನ ಗೊತ್ತುವಳಿ ಸಭೆ ರದ್ದಾಗಿ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಇದೀಗ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನಲೆಯಲ್ಲಿ ಫೆ.8ಕ್ಕೆ ಅವಿಶ್ವಾಸ ಗೊತ್ತುವಳಿ ಸಭೆ ನಿಗದಿಯಾಗಿತ್ತು.
ಗೊತ್ತುವಳಿ ಸಭೆಯಲ್ಲಿ ಬಿಜೆಪಿ ಬೆಂಬಲಿತ ಉಪಾಧ್ಯಕ್ಷ ರೋಹಿತ್, ಸದಸ್ಯರಾದ ವತ್ಸಲಾ, ಜಯಲಕ್ಷ್ಮಿ, ಧನಲಕ್ಷ್ಮಿ, ಉಷಾ, ನಾಗೇಶ್ ಗೌಡ, ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಈರೇಶ್ ಗೌಡ, ಮನಮೋಹನ ಗೊಳ್ಯಾಡಿ, ಪ್ರೇಮಾ ರವರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಈ ಹಿನ್ನಲೆಯಲ್ಲಿ ಅಧ್ಯಕ್ಷರ ಪದಚ್ಯುತಿ ನಡೆದಿದೆ.
ಐತ್ತೂರು ಗ್ರಾ.ಪಂ.ನ ಒಟ್ಟು 11 ಮಂದಿ ಸದಸ್ಯರ ಪೈಕಿ 6 ಮಂದಿ ಬಿಜೆಪಿ ಬೆಂಬಲಿತರು ಹಾಗೂ 5 ಮಂದಿ ಕಾಂಗ್ರೆಸ್ ಬೆಂಬಲಿತರು. ಇಲ್ಲಿ ಗ್ರಾ.ಪಂ. ಅಧ್ಯಕ್ಷ ಸ್ಥಾನ ಹಿಂದುಳಿದ ಮಹಿಳೆ ಬಿ ಸ್ಥಾನಕ್ಕೆ ಮೀಸಲಾತಿ ಪ್ರಕಾರ ನಿಗದಿಯಾಗಿತ್ತು. ಆದರೆ ಇಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯಾ ಬಲ ಹೆಚ್ಚಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಮಹಿಳೆ ಬಿ ವರ್ಗದ ಅಭ್ಯರ್ಥಿ ಬಿಜೆಪಿಯಲ್ಲಿ ಇರಲಿಲ್ಲ. ಅದರಿಂದಾಗಿ ಕಾಂಗ್ರೆಸ್ ಬೆಂಬಲಿತೆ ಶ್ಯಾಮಲಾ ಅವರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿದಿತ್ತು. ಆದರೆ ಬಳಿಕದ ದಿನಗಳಲ್ಲಿ ಹಲವಾರು ವಿಚಾರಗಳಿಗೆ ಸಂಬಂಧಿಸಿ ಅಧ್ಯಕ್ಷರ ವಿರುದ್ದ ಹಲವು ಸದಸ್ಯರಿಗೆ ಅವಿಶ್ವಾಸ ಉಂಟಾದ ಕಾರಣದಿಂದಾಗಿ ಸಾಮಾನ್ಯ ಸಭೆ ಹಾಗೂ ಗ್ರಾಮಸಭೆ ನಡೆಸಲು ತೊಡಕುಂಟಾಗಿತ್ತು.
ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದುದರಿಂದ, ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ-ವಾಡ್ಯಪ್ಪ ಗೌಡ
ಐತ್ತೂರು ಗ್ರಾ.ಪಂ.ನಲ್ಲಿ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸೇರಿ ಸರ್ವಾಧಿಕಾರಿ ಧೋರಣೆ ಮಾಡುತ್ತಾ ಚುನಾಯಿತ ಸದಸ್ಯರನ್ನು ಕಡೆಗಣನೆ ಮಾಡಿರುವುದರಿಂದ ಅನಿವಾರ್ಯವಾಗಿ ಅಧ್ಯಕ್ಷರ ಪದಚ್ಯುತಿ ಮಾಡಬೇಕಾಯಿತು. ಅಧ್ಯಕ್ಷೆಯಾಗಿದ್ದ ಶ್ಯಾಮಲ ಅವರ ಮೇಲೆ 9 ಮಂದಿ ಸದಸ್ಯರಿಗೆ ವಿಶ್ವಾಸ ಇಲ್ಲದಿರುವುದರಿಂದ ಗ್ರಾಮದ ಅಭಿವೃದ್ದಿಗೂ ತೊಡಕುಂಟಾಗಿತ್ತು. ನಾವು ಪಂಚಾಯತ್ ವ್ಯವಸ್ಥೆಯಲ್ಲಿ ರಾಜಕೀಯ ಮಾಡಿಲ್ಲ, ಗ್ರಾಮದ ಅಭಿವೃದ್ದಿಯೇ ನಮ್ಮ ಧ್ಯೇಯವಾಗಿತ್ತು. ಈ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು 6 ಮಂದಿ ಇದ್ದರೂ ಮೀಸಲಾತಿ ಪ್ರಕಾರ ಅಧಿಕಾರ ಅವರಿಗೆ ಹೋಗಿತ್ತು. ಬಳಿಕ ಅವರು ಎಲ್ಲ ಸದಸ್ಯರನ್ನು ಒಮ್ಮತದಿಂದ ಸೇರಿಸಿಕೊಂಡು ಹೋಗುತ್ತಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಸಂಪರ್ಕಕ್ಕೆ ಅಲಭ್ಯ:
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗ್ರಾ.ಪಂ. ಅಧ್ಯಕ್ಷೆಯಾಗಿದ್ದ ಶ್ಯಾಮಲರವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.