ಫೆ.10ರಿಂದ 3 ದಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ 5ನೇ ಬೃಹತ್ ಕೃಷಿಯಂತ್ರ ಮೇಳ -2023, ಕನಸಿನ ಮನೆ ಪ್ರದರ್ಶನ

0

ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆಬ್ರವರಿ 10 ರಿಂದ 12 ರ ತನಕ 3 ದಿನಗಳ ಕಾಲ ನಡೆಯಲಿರುವ 5 ನೇ ಬೃಹತ್ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನಕ್ಕೆ ಎಲ್ಲಾ ಸಿದ್ದತೆಗಳು ಮುಕ್ತಾಯದ ಹಂತದಲ್ಲಿವೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಫೆ. 10 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ನಿರ್ಮಿಸಲಾಗಿರುವ ಪಾರಂಪರಿಕ ಮಾದರಿ ಗ್ರಾಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಮಣ್ಯ ಯಡಪಡಿತ್ತಾಯ ಅವರು ನೆರವೇರಿಸುತ್ತಾರೆ. ಕೃಷಿಯಂತ್ರಗಳ ಮಳಿಗೆಗಳನ್ನು ಐಸಿಎಆರ್-ಸಿಪಿಸಿಆರ್‌ಐ ಕಾಸರಗೋಡು ಇದರ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಉದ್ಘಾಟಿಸುತ್ತಾರೆ. ಕನಸಿನ ಮನೆ ವಿಭಾಗದ ಮಳಿಗಳ ಉದ್ಘಾಟನೆಯನ್ನು ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್ ನೆರವೇರಿಸಲಿದ್ದಾರೆ ಎಂದರು.


ಗೋಷ್ಟಿಗಳು:


ಪ್ರಸಕ್ತ ಸನ್ನಿವೇಶಕ್ಕೆ ಆವಶ್ಯಕವಾಗುವ ರೀತಿಯಲ್ಲಿ ಎರಡು ಗೋಷ್ಟಿಗಳನ್ನು ನಡೆಸಲಾಗುತ್ತದೆ. ಫೆ. 11 ರಂದು ಪೂರ್ವಾಹ್ನ 11 ಗಂಟೆಗೆ ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ ಈ ವಿಷಯದ ಬಗ್ಗೆ ಐಸಿಎಆರ್-ಸಿಪಿಸಿಆರ್‌ಐ ಕಾಸರಗೋಡು ಇಲ್ಲಿನ ಬೆಳೆ ಸಂರಕ್ಷಣೆ ವಿಭಾಗ ಮುಖ್ಯಸ್ಥ ಡಾ.ವಿನಾಯಕ ಹೆಗ್ಡೆ ಮಾಹಿತಿಯನ್ನು ನೀಡಲಿದ್ದಾರೆ. ಫೆ. 12 ರಂದು ಪೂರ್ವಾಹ್ನ 11 ಗಂಟೆಗೆ ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳು ಈ ವಿಚಾರವಾಗಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕಾರ್ಕಳ ಇದರ ಸಂಚಾಲಕ ಡಾ.ಸತ್ಯನಾರಾಯಣ ಭಟ್ ಕಾರ್ಕಳ ಇವರು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಾರೆ ಎಂದು ಕಿಶೋರ್ ಕುಮಾರ್ ಕುಡ್ಗಿ ಹೇಳಿದರು.


ಸಾಂಸ್ಕೃತಿಕ ಕಾರ್ಯಕ್ರಮ:


ಫೆ. 10ರಂದು ಅಪರಾಹ್ನ 3 ಗಂಟೆಯಿಂದ ವಿವೇಕಾನಂದ ವಿದ್ಯಾ ಸಂಸ್ಥೆಗಳ ಉಪನ್ಯಾಸಕರಿಂದ ಯಕ್ಷಗಾನ, ಸಂಜೆ 5ಗಂಟೆಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು.ಇಶಾ ಸುಲೋಚನ ಇವರಿಂದ ನೃತ್ಯ ಹಾಗೂ ಸಂಜೆ 6 ರಿಂದ ವಿದುಷಿ ಶಾಲಿನಿ ಆತ್ಮಭೂಷಣ್ ಇವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.

ಫೆ. 11 ರಂದು ಸಂಜೆ 5ರಿಂದ ವಿವೇಕಾನಂದ ಸಿಬಿಎಸ್‌ಸಿ ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವೇಕ ವೈಭವ ಕಾರ್ಯಕ್ರಮ ನಡೆಯಲಿದೆ.

ಫೆ. 12 ರಂದು ಅಪರಾಹ್ನ 3.30ರಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ವಿವೇಕ ವೈಭವ ನಡೆಯಲಿದೆ. ಸಂಜೆ 6ರಿಂದ ಪೂರ್ಣಿಮಾ ರೈ ಮತ್ತು ಬಳಗದವರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಯಂತ್ರಮೇಳದ ಸಂಯೋಜಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.


140 ಮಳಿಗೆಗಗಳು:


ಇಲ್ಲಿ ಯಂತ್ರ ಮೇಳಕ್ಕೆ ಸಂಬಂಧಿಸಿದಂತೆ 140 ಮಳಿಗೆಗಳು ಮತ್ತು ಕನಸಿನ ಮನೆಗೆ ಸಂಬಂಧಪಟ್ಟ 83 ಮಳಿಗೆಗಳಿರುತ್ತವೆ. ಇದಲ್ಲದೆ 10 ಅಟೋಮೊಬೈಲ್, 4 ನರ್ಸರಿ, 20 ಆಹಾರ ಮಳಿಗೆಗಳು ಮತ್ತು 20 ವ್ಯಾಪಾರ ಮಳಿಗೆಗಳಿರುತ್ತದೆ. ಕ್ಯಾಂಪ್ಕೋ ಸಂಸ್ಥೆಯು ನಡೆದು ಬಂದ ದಾರಿಯನ್ನು ಪ್ರತಿಬಿಂಬಿಸುವ ವಿಶೇಷ ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಕೃಷಿ ಇಲಾಖೆ ಹಾಗೂ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ಇದರ ಸಂಯುಕ್ತಾಶ್ರಯದಲ್ಲಿ 20 ಸಾವಯವ ಸಿರಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಮತ್ತು ವಿಚಾರ ಸಂಕಿರಣಗಳೂ ನಡೆಯುತ್ತವೆ. ಬ್ಯಾಂಕ್ ಸಾಲಸೌಲಭ್ಯಗಳ ಮಾಹಿತಿಗೆ ಬ್ಯಾಂಕಿಂಗ್ ಮಳಿಗೆಗಳನ್ನೂ ತೆರೆಯಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು ಇಲ್ಲಿರುತ್ತವೆ.. ವೀಕ್ಷಕರಿಗೆ ಅನುಕೂಲವಾಗುವಂತೆ ಮಳಿಗೆಗಳನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರಾತ್ಯಕ್ಷಿಕೆಗೆ ಬೇಕಾಗಿ ಕನಿಷ್ಟ 35 ಅಡಿ ಎತ್ತರದ ಅಡಿಕೆ ಮರಗಳನ್ನು ನೆಡಲಾಗುತ್ತದೆ ಎಂದು ಯಂತ್ರಮೇಳದ ಸಂಯೋಜಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.


ವಿಶೇಷ ಆಕರ್ಷಣೆ:


ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆ, ಸುಸಜ್ಜಿತ ಕಾರ್ಬನ್ ಫೈಬರ್ ದೋಟಿಗಳ ಪ್ರದರ್ಶನ, ಜಲಕೃಷಿ ವಿಧಾನದ ಸಮಗ್ರ ಪರಿಚಯ, ಸ್ಥಳದಲ್ಲೇ ಮಣ್ಣಿನ ಪಾತ್ರೆಗಳ ತಯಾರಿ ಮತ್ತು ಮಾರಾಟ, ಪಾರಂಪರಿಕ ಮಾದರಿ ಗ್ರಾಮ ವಿಶೇಷ ಆಕರ್ಷಣೆಗಳಾಗಿವೆ ಎಂದು ಎಂದು ಯಂತ್ರಮೇಳದ ಸಂಯೋಜಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.


ಪಾರ್ಕಿಂಗ್ ವ್ಯವಸ್ಥೆ:


ಪ್ರದರ್ಶನ ಪ್ರದೇಶದ ಸುತ್ತ ಮುತ್ತ ಒಟ್ಟು 8 ಮೈದಾನಗಳನ್ನು ವಾಹನ ನಿಲುಗಡೆಗಾಗಿ ಗುರುತಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲದೆ ಸುಮಾರು 800 ಚತುಶ್ಚಕ್ರ ಹಾಗೂ ದೊಡ್ಡ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆರಕ್ಷಕ ಇಲಾಖೆಯ ಜತೆಯಲ್ಲಿ ಸುಮಾರು 150 ವಿದ್ಯಾರ್ಥಿ ಸ್ವಯಂಸೇವಕರು ಮತ್ತು ಸಿಬ್ಬಂದಿಗಳು ಇದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ.
ಮೂರು ದಿನಗಳ ಈ ಬೃಹತ್ ಪ್ರದರ್ಶನದ ಸಂಪೂರ್ಣ ಪ್ರಯೋಜನವನ್ನು ಎಲ್ಲಾ ಕೃಷಿಕ ಬಂಧುಗಳು ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ ಎಂದು ಯಂತ್ರಮೇಳದ ಸಂಯೋಜಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್.ಎಮ್.ಕೃಷ್ಣಕುಮಾರ್, ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ದಯಾನಂದ ಹೆಗ್ಡೆ, ರಾಘವೇಂದ್ರ ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಯಂತ್ರಮೇಳದ ಸಂಯೋಜಕ ರವಿಕೃಷ್ಣ.ಡಿ.ಕಲ್ಲಾಜೆ ಉಪಸ್ಥಿತರಿದ್ದರು.


ವಾರಣಾಸಿ ಸುಬ್ರಾಯ ಭಟ್ ಅವರ ಕನಸಿನ ಸಂಸ್ಥೆ ಅವರ ಆಶೋತ್ತರಗಳಿಗೆ ಸರಿಯಾಗಿ ಕ್ಯಾಂಪ್ಕೋದ ಆಡಳಿತ ಮಂಡಳಿ ಈಗ ಕೆಲಸ ಮಾಡುತ್ತಿದೆ. ರೈತ ಸ್ನೇಹಿಯಾಗಿ ರೈತರಿಗೆ ಉಪಕಾರ ಮಾಡುವಂತಹ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿದೆ.ಸ್ಥಿರವಾದ ದರ ಕ್ಯಾಂಪ್ಕೋದ ಮೂಲ ಉದ್ದೇಶ. ಸುವರ್ಣ ಮಹೋತ್ಸವದ ಅಂಗವಾಗಿ ಸದಸ್ಯರಿಗೆ ಆಕರ್ಷಕವಾದ ಶೇ.9 ಬಡ್ಡಿ ಕೊಡುವಂತೆ ಆಡಳಿತ ಮಂಡಳಿ ನಿರ್ಣಯಿಸಿದೆ. ಎಂ.ಟಿ.ರಸ್ತೆಯಲ್ಲಿರುವ ಕ್ಯಾಂಪ್ಕೋದ ಹಳೆ ಕಟ್ಟಡವನ್ನು ತೆರವು ಮಾಡಿ ಅಲ್ಲಿ ಅಂದಾಜು ಸುಮಾರು ರೂ. 25 ಕೋಟಿ ವೆಚ್ಚದ ಎಗ್ರಿಮಾಲ್ ಅನ್ನು ನಿರ್ಮಾಣಕ್ಕೆ ಶಿಲಾನ್ಯಾಸ, ಭದ್ರಾವತಿಯಲ್ಲಿ ಈಗಾಗಲೇ ನಿರ್ಮಾಣಗೊಂಡ ಗೋದಾಮಿನ ಉದ್ಘಾಟನೆ ಸಹಿತ ಕೆಲವೊಂದು ಯೋಜನೆಗಳನ್ನು ಅಡಳಿತ ಮಂಡಳಿ ಹಾಕಿಕಕೊಂಡಂತೆ ಅದರ ಉದ್ಘಾಟನಾ ಕಾರ್ಯಕ್ರಮ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಜಿಟಲ್ ಮಾದರಿಯಲ್ಲಿ ನೆರವೇರಿಸಲಿದ್ದಾರೆ.

ಕಿಶೋರ್ ಕುಮಾರ್ ಕುಡ್ಗಿ, ಕ್ಯಾಂಪ್ಕೋ ಅಧ್ಯಕ್ಷರು


ರೈತರು ಸ್ವಾಭಿಮಾನಿಗಳು. ಯಾರಲ್ಲೂ ಬೇಡುವುದಿಲ್ಲ. ವಾರಣಾಸಿ ಸುಬ್ರಾಯ ಭಟ್ ಸ್ಥಾಪಕರಾಗಿರುವ ಕ್ಯಾಂಪ್ಕೋ ಬೆಳವಣಿಗೆಯಲ್ಲಿ ಸರಕಾರದ ಶೇರುಗಳನ್ನು ಹಿಂದಿರುಗಿಸಿ ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಆಡಳಿತವಾಗಿದೆ. ಈ ನಿಟ್ಟಿನಲ್ಲಿ ಕ್ಯಾಂಪ್ಕೋ ಕುರಿತು ಕಪೊಲಕಲ್ಪಿತ ಏನೋ ಕತೆ ಹೇಳುತ್ತಾರೆ ಯಾವುದೇ ಗುಜರಾತಿ ಬಿಡಿ ಯರಿಗೂ ಕ್ಯಾಂಪ್ಕೋ ಮುಟ್ಟಲು ಸಾಧ್ಯವಿಲ್ಲ. ಯಾಕೆಂದರೆ ಕ್ಯಾಂಪ್ಕೋದ ಆರ್ಥಿಕ ಪರಿಸ್ಥಿತಿ, ವ್ಯವಸ್ಥೆ ಸದೃಢವಾಗಿದೆ. ನಮ್ಮದೇ ಆದ ಪ್ರಜಾಸತ್ಮಾಕದಲ್ಲಿ ಕೆಲಸ ನಡೆಯುತ್ತದೆ. ನಮಗೆ ಯಾರ ಮೂಲಾಜಿಯು ಇಲ್ಲ.


ಕಿಶೋರ್ ಕುಮಾರ್ ಕುಡ್ಗಿ, ಅಧ್ಯಕ್ಷರು ಕ್ಯಾಂಪ್ಕೋ

LEAVE A REPLY

Please enter your comment!
Please enter your name here