ಐತೂರು ಗ್ರಾಮ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಪ್ರಕರಣ

0

ನನ್ನ ಏಳಿಗೆಯನ್ನು ಸಹಿಸದ, ನನ್ನ ಸಮಾಜ ಭಾಂದವರ ಕುತಂತ್ರ-ಶ್ಯಾಮಲ

ಕಡಬ : ಐತ್ತೂರು ಗ್ರಾಮ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಗೊತ್ತುವಳಿ ಪ್ರಕರಣದ ಬಗ್ಗೆ ಮಾಜಿ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಅವರು ಲಿಖಿತ ಹೇಳಿಕೆ ನೀಡಿ, 2020 ನೇ ವರ್ಷದ ಪ್ರಾರಂಭದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಐತ್ತೂರು ಗ್ರಾಮ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ 5 ಸದಸ್ಯರು ಬಿಜೆಪಿ ಬೆಂಬಲಿತ 6 ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನದ ಮಿಸಲಾತಿ ಪಟ್ಟಿಯಲ್ಲಿ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷತೆಗೆ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿತ್ತು. ಬಹುಮತವಿದ್ದರೂ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಮಿಸಲಾತಿಯಲ್ಲಿ ಕಾಣಿಸಿರುವ ಸದಸ್ಯರು ಇಲ್ಲವಾದುದರಿಂದ ನನಗೆ ಅಧ್ಯಕ್ಷ ಸ್ಥಾನ ಒಲಿದು ಬಂತು. ಅಧಿಕಾರ ವಹಿಸಿದಂದಿನಿಂದ ಇಂದಿನವರೆಗೂ ಪಕ್ಷಪಾತವಿಲ್ಲದೆ ಸರ್ವರಿಗೂ ಸಮಾನ ನ್ಯಾಯ ಒದಗಿಸುತ್ತಾ ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೆನು. ಯಾವುದೇ ಆರ್ಥಿಕ ದುರುಪಯೋಗ ಆಗದಂತೆ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಕಾಲದಲ್ಲಿ ಕಛೇರಿ ಕೆಲಸಗಳನ್ನು ಮಾಡಿಕೊಡುತ್ತಿದ್ದೆ. ಇಂದಿನವರೆಗೂ ಯಾವುದೇ ಆರ್ಥಿಕ ಅವ್ಯವಹಾರದ ದೂರಗಳೂ ಬಂದಿಲ್ಲ. ಬಡವಳಾದ ಹಾಗೂ ಆರ್ಥಿಕವಾಗಿ , ಹಿಂದುಳಿದ ನನ್ನ ಏಳಿಗೆಯನ್ನು ಸಹಿಸಲಾಗದ ಆರ್ಥಿಕವಾಗಿ ಬಲಾಢ್ಯರಾದ ನನ್ನ ಸಮಾಜ ಬಾಂಧವರೇ ಆದ ಸದಸ್ಯರು ಅಧ್ಯಕ್ಷನೆಂಬಂತೆ ವರ್ತಿಸಲು ನಾನು ಒಪ್ಪದಿದ್ದುದರಿಂದ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮುಂದಾಳತ್ವ ವಹಿಸಿರುವುದು ಸಮಾಜ ದ್ರೋಹವೆಂದೇ ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಪಂಚಾಯತಿನ 11 ಜನ ಸದಸ್ಯರಲ್ಲಿ 5 ಜನ ಸದಸ್ಯರು ನನ್ನ ಸಮಾಜ ಬಾಂಧವರೇ ಆಗಿದ್ದಾರೆಂದು ಹೇಳಲೇಬೇಕಾಗಿದೆ. ಹಾಗಾಗಿ ನಮ್ಮ ಸಮಾಜದ ಏಳಿಗೆಗಾಗಿ ರಚಿಸಿಕೊಂಡಿರುವ ಸಂಘಟನೆಯ ನೇತಾರರಿಗೆ ನನಗಾಗುವ ಅನ್ಯಾಯದ ಕುರಿತು ಬರಹ ಮೂಲಕವೂ ಬಾಯ್ದೆರೆಯಾಗಿಯೂ ತಿಳಿಸಿರುತ್ತೇನೆ. ನನಗೆ ಬೆಂಬಲವಾಗಿ ನಿಂತು ಸಮಾಜದ ಮಹಿಳೆಯೊಬ್ಬಳಿಗೆ ನ್ಯಾಯ ಒದಗಿಸಿಕೊಡಬೇಕಾದ ನಾಯಕರು ದಿವ್ಯ ಮೌನ ವಹಿಸಿರುವುದು ನನಗೆ ಅನ್ಯಾಯ ಮಾಡಿದಂತೆಯೇ ಎಂದು ಭಾವಿಸುತ್ತೇನೆ. ಇದು ನನಗೆ ನೋವುಂಟು ಮಾಡಿದೆ ಎಂದು ಹೇಳಿದರು. ಮಿಸಲಾತಿಯಂತೆ 30 ತಿಂಗಳು ಅಧಿಕಾರವಧಿಯಲ್ಲಿ 26 ತಿಂಗಳು ಅಧಿಕಾರದಲ್ಲಿದ್ದೆನು. ಇನ್ನು ಕೇವಲ 6 ತಿಂಗಳು ಇರುವಾಗ ಈ ರೀತಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸುತ್ತಿರುವುದು ನಮ್ಮ ಸಮಾಜಕ್ಕೆ ನಾಚಿಕೆಗೇಡು ಇದೇ ರೀತಿ ಹಿಂದೊಮ್ಮೆ ನಮ್ಮದೇ ಸಮಾಜದ ಮಹಿಳೆಯೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕೆಳಗಿಳಿಸಿದ ಕೀರ್ತಿಯೂ ಇದೇ ಸನ್ಮಾನ್ಯ ಬಲಾಢ್ಯ ಸದಸ್ಯರ ಹೆಸರಲ್ಲಿದೆಯೆಂದು ಹೇಳಲು ನಾಚಿಕೆ ಪಡುತ್ತೇನೆ. ಒಬ್ಬರು ಮಹಿಳಾ ಅಧ್ಯಕ್ಷತೆಯನ್ನು ಕೇವಲ ತಿಂಗಳಿಗಾಗಿ ಪದಚ್ಯುತಿಗೊಳಿಸುವಂತಹ ಕೀಳು ಮಟ್ಟದ ರಾಜಕೀಯಕ್ಕೆ ಸಮಾಜವಾಗಲಿ, ಭಾರತೀಯ ಜನತಾ ಪಕ್ಷವಾಗಲಿ ಮುಂದಾಗಬಾರದಿತ್ತೆಂದು ಭಾವಿಸುತ್ತೇನೆ. ಅದಗ್ಯೂ ನಾನು ಅಧ್ಯಕ್ಷೆಯಾಗಿ ಮಾಡಿದ ಸೇವೆಯಿಂದ ಸಂತೋಷಗೊಂಡು ಆತ್ಮ ಸಂತೃಪ್ತಿಯಿಂದ ಕೆಳಗಿಳಿಯುತ್ತಿದ್ದೇನೆ. ಆದರೆ ಅಧ್ಯಕ್ಷೆಯಾಗಿ ಅಲ್ಲದಿದ್ದರೂ ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿ ಜನರ ಸೇವೆ ಮಾಡಲು ಕಟಿಬದ್ದಳಾಗಿದ್ದೇನೆ. ಕ್ಯಾನ್ಸರ್ ರೋಗಿಯಾಗಿದ್ದರೂ ಇಷ್ಟು ಸಮಯ ಗ್ರಾಮ ಪಂಚಾಯತ್ ಅಧ್ಯಕೆಯಾಗಿ ಸೇವೆ ಮಾಡಲು ಸಹಾಕರ ನೀಡಿದ ನನ್ನ ಪತಿಯವರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here